Thursday, May 15, 2014

ಹೆಣ್ಣು



"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ", ಎಂಬ ಮಾತಿನಂತೆ ಎಲ್ಲಿ ಸ್ತ್ರೀಯು ಪೂಜಿಸಲ್ಪಡುತಾಳೋ (ಗೌರವಿಸಲ್ಪಡುತ್ತಾಳೋ) ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದು ಹಿಂದಿನವರ ನಂಬಿಕೆ. ಈ ಮಾತು ಇಂದು ಯಾರು ನಂಬುವರೋ ಅವರಿಗೆಲ್ಲ ಸತ್ಯವಾಗಿದ್ದು, ಹೆಣ್ಣು ಅಂದರೆ ಆಕೆ ತಾಳ್ಮೆಯ ಪ್ರತೀಕ. ಅವಳು ಹುಟ್ಟಿದ ದಿನದಿಂದ ತನ್ನ ಕೊನೆಯುಸಿರಿನವರೆಗೂ ಜೀವನದ ನಾನಾ ಮಜಲುಗಳನ್ನು ನಾನಾ ವಿಧಗಳಿಂದ ಅನುಭವಿಸಿ, ಅನುಸರಿಸಿ ನಡೆವಳು. ಹೆಣ್ಣು ಸೃಷ್ಠಿಯ ಮೂಲ ಸ್ವರೂಪ ಉಳಿದವರೆಲ್ಲ (ಗಂಡು) ನಿಮಿತ್ತ ಮಾತ್ರ.
ಸರ್ವಜ್ಞನ ನುಡಿ:
''ಹೆಣ್ಣಿನಿಂದಲೆ ಇಹವು,
ಹೆಣ್ಣಿನಿಂದಲೆ ಪರವು,
ಹೆಣ್ಣಿನಿಂದಲೆ ಸರ್ವ ಸಂಪದವು,
ಹೆಣ್ಣನೊಲ್ಲದಣ್ಣಗಳು ಯಾರು ಸರ್ವಜ್ಞ''.

ಇದು ಹೆಣ್ಣಿನ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಅಂತೆಯೇ, ನಾವು ನೋಡುವ ದೃಷ್ಟಿಕೋನ ಬದಲಾದಂತೆ ಹೆಣ್ಣಿನ ಸ್ಥಾನಮಾನ ಬದಲಾಗುತ್ತಾ ಹೋಗುತ್ತದೆ. ತಂದೆತಾಯಿಗೆ ಮುದ್ದಿನ ಮಗಳಾಗಿ, ಅಣ್ಣ ತಮ್ಮಂದಿರಿಗೆ ಅಕ್ಕರೆಯ ಅಕ್ಕ / ತಂಗಿಯಾಗಿ, ಗಂಡನಿಗೆ ಪ್ರೀತಿಯ ಮಡದಿಯಾಗಿ, ಸ್ನೇಹಿತರಿಗೆ ನೆಚ್ಚಿನ ನಂಟಾಗಿ, ಹೀಗೆ ನಾನಾ ಪಾತ್ರಗಳನ್ನು ತನ್ನ ಜೀವನದಲ್ಲಿ ನಿಭಾಯಿಸುವಳು. ಇಂತಹ ಪೋಜಿತಳಾದ ಹೆಣ್ಣನ್ನು ಈಗಿನ ಹೊಸ ಪ್ರಪಂಚದಲ್ಲಿ ಭೋಗದ ವಸ್ತುವನ್ನಾಗಿ ಮಾರ್ಪಡಿಸಿರುವುದು ನಮ್ಮೆಲ್ಲರಿಗೆ ನಾಚಿಗೆ ಪಡುವಂತಹ ವಿಷಯ. ಅವಳು ಕೇವಲ ಮುಸುರೆ ತಿಕ್ಕುವ ಕೆಲಸಕ್ಕೆ ನೇಮಿಸಿದಂತಹ ಆಳಲ್ಲ. ಅವಳಿಗೂ ಅವಳದೇ ಆದ ವ್ಯಕ್ತಿತ್ವವಿದೆ. ಅವಳದೇ ಆದ ಅಸ್ತಿತ್ವವಿದೆ. ಅದನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅವಳ ಸಾಮರ್ಥ್ಯಕ್ಕೆ ಕೊಂಕು ಮಾತುಗಳಿಂದ ಮಣ್ಣೆರೆಚುವ ದುಷ್ಕಾರ್ಯ ನಮ್ಮಿಂದಾಗದಂತೆ ಇನ್ನಾದರೂ ಎಚ್ಚೆತ್ತುಕೊಳ್ಳೋಣ. ನಮ್ಮೊಂದಿಗೆ ಬೆಳೆದು ನಮ್ಮನ್ನೂ ಬೆಳೆಸಿದಂತಹ ಈ ಹೆಣ್ಣು ನಮಗಾಗಿ ಅದೆಷ್ಟೋ ಕಾರ್ಯಗಳನ್ನು ಮಾಡಿರುತ್ತಾಳೆ. ಮಾಡಿರುವಂತಹ ಕಾರ್ಯಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿರುತ್ತದೆ. ಅದನ್ನು ಗುರುತಿಸುವ ಸಣ್ಣ ಪ್ರಯತ್ನವನ್ನು ನಾನು ಈ ಮೂಲಕ ಮಾಡ ಬಯಸುತ್ತೇನೆ. ಈ ಹೆಣ್ಣು ಮುಖ್ಯವಾಗಿ ನಿಭಾಯಿಸುವಂತಹ ನಾಲ್ಕು ಪಾತ್ರಗಳನ್ನು ನಿಮ್ಮ ಮುಂದಿಡ ಬಯಸುತ್ತೇನೆ.

ತಾಯಿ: ಸಂಸ್ಕೃತದಲ್ಲೊಂದು ಮಾತಿದೆ. “ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನಭವತಿ”, ಎಂಬುದಾಗಿ. ಅಂದರೆ, ಕೆಟ್ಟ ಮಗನಾದರು ಇರ(ಹುಟ್ಟ)ಬಲ್ಲ, ಆದರೆ ಕೆಟ್ಟ ತಾಯಿ ಇರಲಾರಳು. ‘ಹೆತ್ತ ಅಮ್ಮನಿಗೆ ಹೆಗ್ಗಣವಾದರೂ ಮುದ್ದೇ....’ ಎಂಬ ಮಾತಿದೆ. ತಾ  ಹೆತ್ತ ಮಕ್ಕಳು ಮಗನಾಗಿರಲಿ/ ಮಗಳಾಗಿರಲಿ, ಕುಂಟನಾಗಿರಲಿ, ಕುರುಡನಾಗಿರಲಿ ಅವರನ್ನು ತನ್ನ ಪ್ರಾಣದಷ್ಟೇ ಪ್ರೀತಿಸುವಳು ಅವಳು.
                       ದಿನದ ಪ್ರಾರಂಭದಿಂದ ಹಿಡಿದು, ರಾತ್ರಿ ಎಣ್ಣೆ ಎಳಗಿ(ಹಚ್ಚಿ) ಮಲಗಿಸುವವರೆಗೂ ತನ್ನ ಆಯಾಸ ಎಂಬ ಶತ್ರುವನ್ನು ದ್ವೇಷಿಸಿ ದಿನದ ಎಲ್ಲ ಸಮಯವನ್ನು ತನ್ನ ಮಕ್ಕಳಿಗೆ ಮೀಸಲಿಡುವಳು. ಉಣ ಬಡಿಸುವ ಹೊತ್ತಲ್ಲಿ ಪಾತ್ರೆಯಲ್ಲಿ ತನಗಾಗಿ ಉಳಿಸಿಕೊಳ್ಳದೇ, ಕೇಳಿ ಕೇಳಿ ಬಡಿಸುವಳು. ಕೊನೆಗೆ ತನಗೆ ಹಸಿವೇ ಇಲ್ಲ, ಖರ್ಚಾದ ಪದಾರ್ಥ ತನಗೆ ಹಿಡಿಸುವುದಿಲ್ಲ ಎಂಬುದಾಗಿ ಸುಳ್ಳು ಹೇಳಿ, ಹೊಟ್ಟೆಗೆ ತೊಟ್ಟು ನೀರು ಕೊಟ್ಟು ಮಲಗುವಳು. ಅಮ್ಮ ಹೇಳಿದ ಆ ಸುಳ್ಳಿನಲ್ಲಿ ನಮಗಾಗಿ ಅದೆಂತಹ ತ್ಯಾಗದ ಚಿಲುಮೆ ಅಡಗಿದೆ ಅಲ್ಲವೇ...? ಮಕ್ಕಳು ಸುಸ್ತಾಗಿ ಬಂದಾಗ ಅಮ್ಮನ ಮಡೀಲೇ ಆಸರೆ. ಅದೇಷ್ಟೋ ಆಯಾಸ ಕ್ಷಣಮಾತ್ರದಲ್ಲಿ ಹೋಗಲಾಡೀಸುವ ಶಕ್ತಿ ಆ ಮಡಿಲೆಂಬ ಸೂರಿಗಿದೆ.  ಇದೆಲ್ಲದರ ಅರಿವು ನಮಗೆ ಇಲ್ಲದೇ ತಾಯಿ ಎಂಬುವವಳು ನಮ್ಮ ಇಷ್ಟಾರ್ಥಗಳನ್ನು ಪೂರೈಸಲು ಇರುವ ಕೆಲಸದಾಳು ಎಂಬುದಾಗಿ ತಿಳಿದುಕೊಂಡಿರುತ್ತೇವೆ. ಸ್ನೇಹಿತರೇ, ದಿನದಿ ಒಮ್ಮೆಯಾದರೂ ತಾಯಿಯೊಂದಿಗೆ ತಾಳ್ಮೆಯಿಂದ ವರ್ತಿಸುವುದಲ್ಲದೇ, ಪ್ರೀತಿಯ ನಾಲ್ಕು ನುಡಿ ನುಡಿದರೆ ಸಾಕವಳಿಗೆ. ಸಂತೋಷದ ಸಾಗರ ಅವಳ ಮಡಿಲು ಸೇರುವುದು.

ಮಡದಿ: ಮಡದಿಯ ಪಾತ್ರವೂ ಅಷ್ಟೇ ಪ್ರಮುಖವಾಗಿದ್ದು, ಅದನ್ನು ಗೌರವಿಸುವ ಕೆಲಸ ಪ್ರತಿಯೋರ್ವ ಗಂಡನದ್ದಾಗಿರುತ್ತದೆ. ಬೆವೆತು ಬೆಂಡಾಗಿ ಮನೆಗೆ ಬಂದಾಗ ಮುತ್ತಿನಂತಹ ಮಾತಿನಲ್ಲೇ ಆಯಾಸವನ್ನು ಓಡಿಸುವ ವಿದ್ಯೆ ಅವಳಿಗಿರುತ್ತದೆ. ಅವಳು ಕೇವಲ ಮನೆ ಕೆಲಸಕ್ಕೆ ಸೀಮಿತಳಲ್ಲ. ಗಂಡನ ಪ್ರತಿ ಹೆಜ್ಜೆಯಲ್ಲೂ ಆಕೆ ತನ್ನದೊಂದು ಹೆಜ್ಜೆಯನ್ನು ಜೋಡಿಸುತ್ತಾಳೆ. ಆಕೆಗೂ ಅವಳದೇ ಆದ ವ್ಯಕ್ತಿತ್ವವಿದೆ, ಭಾವನೆಗಳಿದೆ, ಆಸೆಗಳಿದೆ ಎಂಬುದನ್ನು ಗಂಡನಾದವನು ಅರಿತರೆ ಅವರ ಬಾಳು ಹಸನಾಗುವುದು ಖಚಿತ. ಅವಳು ಹೇಳಿದ್ದಕ್ಕೆಲ್ಲ ತಾಳ ಹಾಕಬೇಕು ಎಂದಲ್ಲ. ಆದರೆ, ಅವಳ ಅಹವಾಲನ್ನು ತಿರಸ್ಕರಿಸುವಾಗಲೂ ಅವಳ ಮನಕ್ಕೆ ನೋವಾಗದ ರೀತಿಯಲಿ ನಡೆದುಕೊಳ್ಳುವುದು ಗಂಡನ ಕರ್ಥವ್ಯವಾಗಿರುತ್ತದೆ. ಅಂತೆಯೇ, ಅವಳು ಮಾಡುವ ಎಲ್ಲ  ಕೆಲಸದಲ್ಲಿ ಭಾಗಿಯಾಗಲೇ ಬೇಕು ಎಂದೇನಿಲ್ಲ, ಆದರೆ, ಭಾಗಿ ಆಗುವ ಇಚ್ಛೆಯನ್ನು ಅವಳಲ್ಲಿ ವ್ಯಕ್ತಪಡಿಸಿದರೂ ಸಾಕು, ಆಕೆಗೆ ಅದೇ ಖುಷಿ ತಂದುಕೊಡುತ್ತದೆ.

ಅದಕ್ಕೆ ಮಹಾತ್ಮರು ಹೇಳಿದ್ದು, “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ, ಹೆಂಡತಿಯೊಬ್ಬಳು ಬಳಿಯಲಿ ಇದ್ದರೆ ನಾನೂ ಒಬ್ಬ ಸಿಪಾಯಿ”, ಎಂಬುದಾಗಿ. ಹೆಂಡತಿಯ ಮೌಲ್ಯ ಕೋಟಿಗಿಂತಲೂ ಮಿಗಿಲು. ಅವಳೊಬ್ಬಳು ಬಳಿಯಲ್ಲಿದ್ದರೆ ಸಿಪಾಯಿಯ ಧೈರ್ಯ ನಮ್ಮ ಹೃದಯಾಳದ ಮೆಟ್ಟಿಲೇರುತ್ತದೆ.

ಅಕ್ಕ/ತಂಗಿ: ಈಕೆಯೂ ಸಹ ನಮ್ಮ ಪ್ರತೀ ಹೆಜ್ಜೆಯಲ್ಲಿ ತಾನೂ ಒಬ್ಬಳಾಗ ನಮ್ಮೊಂದಿಗೆ ನಿಲ್ಲುವಳು. ಚಂಡಿಯೆದ್ದು ನಿಂತರೆ ಈಕೆ ಮಹಾಕಾಳಿಯೇ ಸರಿ. ಆದರೂ ಈಕೆ ನಮಗೆಲ್ಲ ಅಚ್ಚು ಮೆಚ್ಚು. ಈಕೆಯಿಂದ ನಾವು ಅದೆಷ್ಟೋ ಜೀವನ ಮೌಲ್ಯಗಳನ್ನು ನಮಗೆ ಗೊತ್ತಿಲ್ಲದೆಯೇ ಕಲಿತು ಅಳವಡಿಸಿಕೊಂಡಿರುತ್ತೇವೆ. ಒಮ್ಮೆ ಯೋಚಿಸಿ ಗೆಳೆಯರೆ...... ಹಂಚಿ ತಿನ್ನುವ ಗುಣ ನಮ್ಮಲ್ಲಿ ಮೊಳಕೆಯೊಡೆದದ್ದು ಹೇಗೆ? ಬೆರೆತು ಬಾಳುವ ಗುಣ ನಮ್ಮಲ್ಲಿ ಬೆರೆತದ್ದು ಹೇಗೆ..? ನಮ್ಮವರೂ ಎಂಬ ಭಾವನೆ ಬೆಳೆದದ್ದು....? ಹುಡುಕುತ್ತ ಹೋದರೆ ಹಲವು ಕಾರಣಗಳೆದೆಷ್ಟೋ........! ಅಪ್ಪ ತಂದ ಎಂಟಾಣೆ ಚಾಕಲೇಟ್ ಎರಡು ಹೋಳಾಗುತ್ತೆ ನಿಜ... ಆದರೆ, ಸಂಬಂಧಗಳ ಕೊಂಡಿ ಬೆಸೆಯುತ್ತೆ ಗೆಳೆಯರೆ. ಇದ್ದುದರಲ್ಲಿ ಹಂಚಿ ತಿನ್ನುವ ಗುಣ ಚಿಗುರುತ್ತೆ. ಒಟ್ಟಿನಲ್ಲಿ ನಮ್ಮನ್ನು ರೂಪಿಸಿದ ಕೀರ್ತಿ ಒಡಹುಟ್ಟಿದ ತಂಗಿ/ಅಕ್ಕನಿಗೆ ಸೇರತಕ್ಕದ್ದು.

ಗೆಳತಿ: ಭಾವನಾ ಲೋಕದಲ್ಲಿ ವಿಹರಿಸಿದಾಗ ಈಕೆಯ ನಿಜವಾದ ಮೌಲ್ಯ ನಮಗೆ ಅರಿವುದು. ಹೆಗಲಿಗೆ ಹೆಗಲು ಕೊಟ್ಟು ನಮ್ಮೊಂದಿಗೆ ನಡೆವ ಸಾಮರ್ಥ್ಯ ಇವಳದು. ನಾವು ಅದೆಷ್ಟೇ ದುಃಖದಲ್ಲಿರಲಿ, ಮನಸ್ಸು ಖಿನ್ನವಗಿರಲಿ, ನೆರವಾಗುವವಳು ಈಕೆ ಮಾತ್ರ. ನಮ್ಮ ಅದೆಷ್ಟೋ ದುಃಖ ದುಮ್ಮಾನಗಳನ್ನು ನಾವು ಈಕೆಯಲ್ಲಿ ಹೇಳಿಕೊಳ್ಳುತ್ತೇವೆ. ಹೆತ್ತ ತಂದೆ ತಾಯಿಗೆ ತಿಳಿಯದ ಅದೆಷ್ಟೋ ವಿಷಯಗಳು ಈಕೆಯ ಬತ್ತಳಿಕೆಯಲ್ಲಿರುತ್ತದೆ.  ಒಂದೇ ಒಡಲ ಬಳ್ಳಿಯ ಕಾಯಿಗಳಲ್ಲ ನಿಜ. ಆದರೂ ಒಂದೇ ಬುಡದ ಎರಡು ಕೊಂಬೆಗಳಿದ್ದಂತೆ. ಸಂತೋಷವಿರಲಿ ದುಃಖವಿರಲಿ ಸಮಪಾಲು ಸಮಬಾಳ್ವೆಗೆ ಈಕೆ ಸದಾ ಸಿದ್ದ. ಬೆನ್ನೆಲುಬು ಅವಳು. ಭವ್ಯ ಭವಿಷ್ಯದ ಹೊನಲು ಅವಳು. ರಾಮಾಯಣದಲ್ಲಿ ಬರುವ ಜಾಂಬುವಂತನ ಪಾತ್ರ ನಮ್ಮ ಜೀವನದಲ್ಲಿ ಗೆಳತಿ ವಹಿಸುವಳು. ನಮ್ಮ ಸಾಮರ್ಥ್ಯ ನಮಗಿಂತ ಅವಳಿಗೆ ಹೆಚ್ಚು ಗೊತ್ತಿರುವುದುಂಟು. ಸಂದರ್ಭ ನೋಡಿ ಅದನ್ನು ನಮಗೆ ನೆನಪಿಸುವಳು. ಜೀವಕ್ಕೆ ಜೀವವಾಗಿ ಶ್ರೀನಿಧಿಯಾಗಿ ಬಾಳಿನ ಬೆಂಗಾವಲಾಗಿ ಈಕೆ ನಮ್ಮೊಂದಿಗೆ ಸದಾ ಇರುವಳು.

ಅಂತಹ ಹೆಣ್ಣಿಗೆ ನಮ್ಮದಾದ/ನಮ್ಮಿಂದಾದ ಗೌರವ ಸಲ್ಲಿಸುವುದು ನಮ್ಮ ಕರ್ಥವ್ಯ. ಅವಳ ಗೌರವ ಕಸಿದುಕೊಳ್ಳುವ ಹಕ್ಕು ನಮಗಾರಿಗೂ ಇಲ್ಲ. ಕೊನೆಯ ಪಕ್ಷ ಹೊಗಳಿ ಅಟ್ಟಕ್ಕೇರಿಸಲಾಗದಿದ್ದರೂ ತೆಗಳಿ ಪಾತಾಳಕ್ಕಿಳಿಸುವ ಯತ್ನ ನಮ್ಮದಾಗುವುದು ಬೇಡ.