Tuesday, July 24, 2018

ಬೇಡುವ ಓಣಿಗೆ ವಾರಸುದಾರ ಬೇಕೇ.....?


ಕಳೆದ ವಾರ ಮೈಸೂರಿನ ಚಾಮುಂಡೀ ಬೆಟ್ಟದ ತುದಿಯ ಜನ ಜಂಗುಲಿಯಲ್ಲಿ  ಏನೂ ತಿಳಿಯದವನಂತೆ ಹೆಜ್ಜೆ ಹಾಕುತಿದ್ದೆ. ಸುತ್ತಲೂ ಅವರವರ ಕಾರ್ಯ ನಿಮಿತ್ತ ತೊಡಗಿಸಿಕೊಂಡು ಯಾರಿಗೆ ಯಾರೂ ನಮ್ಮವರಲ್ಲದವರಂತೆ  ಸುತ್ತುತ್ತಿದ್ದರು. ನನ್ನ ಕಣ್ಣು ಮಾತ್ರ ಎಲ್ಲವನ್ನೂ ಕಂಡೂ ಕಾಣದವರಂತೆ, ಇನ್ನೂ ಎನನ್ನೋ ಹುಡುಕುತ್ತಿದ್ದದ್ದು ಗಮನಕ್ಕೆ ಬಂದರೂ ಮನಸು ಮಾತ್ರ ಕಟ್ಟೆಯಂಚಲ್ಲಿ ಕರಿಗನ್ನಡಕ ಹಾಕಿ ಅಸ್ವಸ್ಥಳಂತೆ ಕುಳಿತ ಬೊಚ್ಚು ಬಾಯಿ ಅಜ್ಜಿಯತ್ತ ವಾಲಿತ್ತು.

ಅವಳು ಅಸಹಾಯಕಳೇ....?.....ಗೊತ್ತಿಲ್ಲ....!

ಅನಾಥಳೇ....? ಗೊತ್ತಿಲ್ಲ....!

ಅಸ್ವಸ್ಥಳೇ‌..‌?....ಅದೂ ಗೊತ್ತಿಲ್ಲ...!

ಕುತೂಹಲ ಒಂಚೂರು ಚಿಗುರಿದಂತಾಗಿ ಅವಳತ್ತ ಹೆಜ್ಜೆ ಹಾಕಿದೆ. ಕೈಲಿ ಕ್ಯಾಮೆರಾ, ಮೈ ತುಂಬಿದ ಬಟ್ಟೆ, ಬೆನ್ನಿಗಂಟಿದ ಚೀಲ. ಒಟ್ನಲ್ಲಿ ಒಂದ್‌ ಥರಾ ಕಾಣ್ತಿದ್ದೆ. ಅವಳಿಗೇನನ್ನಿಸಿತೋ.... ತಟ್ಟೆ ಮುಂದಕ್ಕಿಟ್ಟಳು.

ಕೈಲಿದ್ದ ಕ್ಯಾಮರಾದಲ್ಲೊಮ್ಮೆ ಕ್ಲಿಕ್ಕಿಸಿದೆ. ದುರುಗುಟ್ಟುತ್ತಿದ್ದಳು. ನೆನಪಿರಲಿ, ಆಕೆ ದೃಷ್ಟಿ ಹೀನಳು...! ಕಣ್ಣು ಕಾಣಿಸದು.

ನಾನೂ ಒಮ್ಮೆ ದುರುಗುಟ್ಟಿದೆ. ಎರಡು ಹೆಜ್ಜೆ ಮುಂದಕ್ಕಿಟ್ಟೆ. ಅವಳ ನೋಟ ಹೆಜ್ಜೆಯನ್ನು ಹಿಂಬಾಲಿಸುತಿತ್ತು. ನಾನು ಹಿಂತಿರುಗಿ ಅವಳನ್ನೇ ನೋಡುತ್ತಿದ್ದೆ.

ಮತ್ತೆ ಮರು ಮಾತನಾಡದೇ ಮುನ್ನಡೆದೆ. ಸರೀ.... ಆದದ್ದೇನೋ ಆಯಿತು. ಅವಲೋಕನ......?

ಒಳಗೊಳಗೇ ಅಂಡು ಸುಟ್ಟ ಮೋಳ(ಗಂಡು ಬೆಕ್ಕು)ನಂತೆ ತಲೆ ಸುತ್ತುತ್ತಿರುವ/ಸುಡುತ್ತಿರುವ ವಿಷಯಗಳನ್ನು ಮೆಲುಕು ಹಾಕದೇ ಇರಲಾಗಲೇ ಇಲ್ಲ.

ನಾನು ಮಾಡಿದ್ದು ಕಂಡವರಿಗೆ ಅವಳ ಅಣುಕಿಸಿದಂತಿರಬಹುದೇ......?

ನಾನು ಮಾಡಿದ್ದು ಸರಿಯೇ...?

ಅವಳ ಜೀವನ ಅವಳಿಗೆ.... ನನಗೇಕೆ ಬೇಕಿತ್ತು ಚಿತ್ರ ತೆಗೆವ ಚಟ...?

ಅಷ್ಟಕ್ಕೂ ತೆಗೆವ ಚಿತ್ರಕ್ಕೆ ಅವಳೇ ಬೇಕಿತ್ತೇ..?

ಹೌದು. ತಪ್ಪು ನಂದೇ...!

ಹಾಗಾದರೆ ಅವಳು ಮಾಡುತ್ತಿರುವುದು..?

ಅದು ಅವಳ ಇಷ್ಟ.... ಕಷ್ಟವೂ ಇದ್ದಿರಲಿಕ್ಕೆ ಸಾಕು....! ಹಾಗೆಂದು ಸುಮ್ಮನಿರಲಾದೀತೇ...?

ಯೋಚಿಸ ತೊಡಗಿದೆ....

ಸಾಲು ಸಾಲಾಗಿ ಹರೆವ ಇರುವೆಯೂ ಜೀವನಕೊಂದು ಪಾಠವಿದ್ದಂತೆ. ಹಾಗಂದ ಮೇಲೆ ಸಶಕ್ತಳಾದ ಅವಳು ಕಣ್ಣಿಗೆ ಕರಿಗನ್ನಡಕ ಅಡ್ಡ ಇಟ್ಟು ಇರುವ ಕಣ್ಣಿಗೂ ಕತ್ತಲ ಬೆಳಕು ಹರಿಸಿದರೆ ನೋಡುವ ಆಲಸಿಗೆ ಇದು ತೆರೆದಿಟ್ಟ ವಾಮ ಮಾರ್ಗ ಆಗಬಲ್ಲದಲ್ಲವೇ...? ಇವಳಿಗಿಂತ ಅಶಕ್ತರು ಸ್ವಾಭಿಮಾನದಿಂದ ಜೀವನ ಕಟ್ಟುವುದ ಕಂಡರಿತ ನನಗೆ ಈಕೆ ಮಾಡಿದ್ದು ತಪ್ಪು ಎನ್ನಿಸದೇ ಇದ್ದರೆ ನನ್ನಲ್ಲೇನೋ ಕೊರತೆ ಇದೆ ಎಂದು ಮುಂದೊಂದು ದಿನ ನನಗೇ ಅನಿಸೀತು...!

ಹಾಗೆಂದ ಮೇಲೆ ಈಕೆ ಮಾಡುವ ನಾಟಕ ತಪ್ಪೆನಿಸುವುದೇ ಸರಿಯಲ್ಲವೇ...?

ಅದೆಷ್ಟೋ ಸಲ ಊರೂರು ತಿರುಗುವಾಗ ಜೀವನ ಏನೂಂತ ತಿಳಿಯದ ಹಸುಗೂಸುಗಳು ಕೈಯೊಡ್ಡಿ ಹಾದಿ ನಡುವೆ ನಿಂತದ್ದು ಕಂಡಾಗ ಕರುಳು ಚುರ್ರ್ ಎನ್ನುತ್ತೆ. ತೀರದ ಬಯಕೆಗೆ ಸೆರಗು ಹಾಸಿ/ಗಂಡಸ್ತನ ಮೆರೆದು ಬೀದಿಗೊಂದು ಜೀವ ಮುದ್ದೆಯನ್ನು ಉರುಳಿ ಬಿಟ್ಟರಲ್ಲಾ ಎಂದು....!

ಹುಟ್ಟಿದ ತಪ್ಪು ಆ ಮಗುವಿನದ್ದೇ....? ಖಂಡಿತಾ ಅಲ್ಲ.

ತಮ್ಮ ಜೀವನವೇ ಮಹಡಿ ಮನೆಯ ಹಳಸಿದನ್ನವ ಅರಸುವಾಗ, ಬೇಡುವ ಓಣಿಗೆ ವಾರಸುದಾರ ಬೇಕಿತ್ತೇ...?

ಮಗುವಿಗೋ ಬೆಳೆದ ಮೇಲೆ ಹೊಸತು ಯೋಚಿಸುವ ಅವಕಾಶವೇ ಇಲ್ಲ. ಕಾರಣ, ಹುಟ್ಟಿನಿಂದಲೇ ಕಾಣುವ ಕಣ್ಣಿಗೆ ಬಟ್ಟೆ ಕಟ್ಟಿ ಜಗತ್ತು ಕತ್ತಲಿನಿಂದಲೇ ಆದದ್ದು, ನಾವು ಹೀಗೇ ಜೀವಿಸಬೇಕು ಎಂಬಂತೆ ಅವರ ಮುಂದೆ ತೆರೆದಿಟ್ಟ ಇವರ ಜೀವನ...!

ನಮ್ಮ ಆಲಸ್ಯತನಕ್ಕೋ, ಸುಲಭ ಎನಿಸಿ ಹಿಡಿದ ವಾಮ ಮಾರ್ಗ ಇನ್ನೊಬ್ಬರಿಗೆ ಪ್ರೇರಣೆ ಅಂತಾದಲ್ಲಿ ಅದು ತಪ್ಪೆಂದು ತೋರಿಸುವುದರಲ್ಲಿ ನನ್ನ ಲಾಭವೇನಿಲ್ಲ ಅನ್ನುವುದು ಸತ್ಯವೇ...!

ದಿನವಿಡೀ ನಿಂತು/ನಡೆದು ಬೇಡಲು ಸಶಕ್ತ ಇರುವಂತವರಿಗೆ ದುಡಿದು ತಿನ್ನಲು ಉದಾಸೀನವೇಕೆ....? ದುಡಿದು ತಿಂಬ ಶಕ್ತಿ ಇದೇ ಎಂದಾದಲ್ಲಿ ಕೈಯೊಡ್ಡುವ ದರಿದ್ರತನದ ಜೀವನ ಬೇಕಿತ್ತೇ..?

ಅಂದೊಂದು ದಿನ ಬೇಡತ್ತ ಬಂದವಳಿಗೆ ಅಂಗಡಿಯವ(ಹೋಳಿಗೆ ಅಂಗಡಿ) ಹೋಳಿಗೆ ಕೊಟ್ಟ,  ಮುಂದಿನ ಅಂಗಡಿಯವ ಬಿಸ್ಕತ್ತಿನ ಪೊಟ್ಟಣ ಇತ್ತ. ನಾನು ನೋಡುತ್ತಲೇ ಇದ್ದೆ. (ಒಳಗೊಳಗೇ ಖುಷಿಯಾಯಿತು, ಈ ದೃಷ್ಟಿಯಲ್ಲಿ ವಿವೇಚಿಸುವವರು ಹಲವರಿದ್ದಾರೆ ಎಂದೆನಿಸಿ). ಮುಂದೆ ನಡೆದ ಆಕೆ, ಅವೆರಡನ್ನೂ ಇನ್ನೊಬ್ಬರ ಮನೆಯ ಕಟ್ಟೆಯ ಮೇಲಿಟ್ಟು ಏನೂ ತಿಳಿಯದವರಂತೆ ಹೆಜ್ಜೆ ಇಟ್ಟಳು... ಅಬ್ಬಾ ಸೊಕ್ಕೇ....!

ಹಸಿದಿದ್ದರೆ ಆಕೆ ಸಿಕ್ಕ ಹೋಳಿಗೆಯನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದಳು. ನಾಳೆಗೆ ಬೇಕೆನೀಸಿದ್ದರೆ ಬಿಸ್ಕತ್ತು ಮಡಿಲ ಕಟ್ಟುತ್ತಿದ್ದಳು. ಆದರೆ ಆಕೆಗೆ ಕೊಟ್ಟರೆ ಹಣವೇ ಬೇಕಿತ್ತು. ಹಣವೇ ಬೇಕೆಂದಿದ್ದಲ್ಲಿ ದುಡಿದು ತಿನ್ನುವುದಕ್ಕೇನು ದಾಡಿ...?

ಬದುಕಲು ಬೇಡುವುದೇ ಮಾರ್ಗವೇ...?

ಮೊದಲಿನಿಂದಲೂ ನಾನೊಂಚೂರು ವ್ಯತಿರಿಕ್ತ. ಬದುಕನ್ನು ಬೇರೆಯದಾಗಿಯೇ ಕಂಡವನು. ಹಾಗೆಯೇ ಅನುಭವಿಸಿದ್ದೇನೆ ಕೂಡ. ಸ್ವಾಭಿಮಾನವನ್ನೇ ಜೀವನ ಅಂದುಕೊಂಡ ಹುಂಬ ಜೀವಿ.

ಅದಕ್ಕಾಗಿಯೇ ಇರಬೇಕು ಸಶಕ್ತರಾಗಿಯೂ ಕೈಯೊಡ್ಡುವವರೆಲ್ಲ ತಪ್ಪು ಅನಿಸೋದು. ಕೊಡುವವರೂ ಸಹ...!

ಹಸಿವೂ ಎಂದು ಕೈಯೊಡ್ಡಿದಾಗ ಖರ್ಚು ಲೆಕ್ಕಿಸದೇ ಅನ್ನ ನೀಡುತ್ತೀರೋ, ಇಲ್ಲಾ, ಇಷ್ಟಕ್ಕೇ ಹೋಯಿತಲ್ಲಾ ಎಂದು ಚಿಲ್ಲರೆ ಎಣಿಸಿ ಕೈಗಿಡುತ್ತೀರೋ ನಿಮಗೆ ಬಿಟ್ಟ ವಿಚಾರ.

ಅಶಕ್ತರಿಗೆ ಅನ್ನ ನೀಡಿ, ದುಡ್ಡಲ್ಲ....! ಸಶಕ್ತರಿಗೆ ವ್ಯತರಿಕ್ತರಾಗಿಯೇ ಇರಿ, ಪರವಾಗಿಲ್ಲ...!

ಏನಾದರಾಗಲೀ....ಅವರ ಜೀವನ ಅವರಿಗೆ... ನನ್ನ ಜೀವನ ನನಗೆ...!

ಆದರೂ ಹೇಳಬೇಕೆನಿಸಿತು‌... ಹೇಳಿದೆ.

ಅಕ್ಷರ ಪೊಣಿಸಿದ್ದು : ಕೃಷ್ಣ ಗುಮ್ಮಾನಿ.
ಚಿತ್ರ ಪೋಷಿಸಿದ್ದು : ವಿನಾಯಕ ಗುಮ್ಮಾನಿ.