ಅದು
ಸರಿಸುಮಾರು ಮಧ್ಯಾಹ್ನ ಎರಡರ ಸಮಯ. ಕೊತಕೊತನೇ ಕುದಿಯುತಿಹ ಸುಡು ಬಿಸಿಲು. ಕೆಲಸ ಮುಗಿಸಿ ಮನೆಗೆ ಬಂದು
ಉಂಡು ಮಲಗಿದ್ದೆ. ಸುಯ್ಯನೆ ಬೀಸುತಿಹ ಪ್ಯಾನ್ ಗಾಳಿ, ತೆರೆದ ಕಿಟಕಿ, ಏನನ್ನೋ ಬಯಸಿ ಚಿಂತಿಸುತಿರುವ
ಮನ. ಮನದಲ್ಲೇನೋ ತಳಮಳ, ಕಳವಳ. ಬಾರದ ನಿದ್ರೆಗೆ ಬಾ ಎಂದು ಕರೆವ ಬಳಲಿದ ದೇಹ. ಹೀಗೇ ಸಾಗುತ್ತಲಿತ್ತು
ಆ ಸಮಯ.
ಇದ್ದಕ್ಕಿದ್ದಂತೆ
ಯಾರೋ ಕಿಟಕಿಯ ಹಾದು ಹೋದಂತೆ ಭಾಸವಾಯಿತು. ಯಾರೂ ... ಅಂದೆ. ನಿಶ್ಶಬ್ಧ. ಭ್ರಮೆಯೆನಿಸಿ ಮಗ್ಗಲು ತಿರುಗಿಸಿ
ಮತ್ತೆ ಮಲಗಿದೆ. ಕ್ಷಣ ಹೊತ್ತು ಕಳೆಯಿತು. ಇನ್ನೇನು ನಿದ್ರಾದೇವತೆ ನನ್ನನ್ನಾವರಿಸುವಳು ಎಂಬುದರಲ್ಲಿ
ಮತ್ತದೇ ಭಾವನೆ. ಯಾರೋ ಮನದ ಬಾಗಿಲ ತಟ್ಟಿದಂತಿತ್ತು. ಕನಸೋ ಎಂಬ ಭ್ರಾಂತಿ ಮೂಡಿತ್ತು. ಇಲ್ಲ ಏನೋ
ಬದಲಾವಣೆ ಕಂಡಂತಿದೆ. ವಾಸ್ತವಕ್ಕೆ ಜಾರಿದಾಗ ಅರಿವಾಯಿತು, ತಟ್ಟಿದ್ದು ಮನದ ಬಾಗಿಲಲ್ಲ. ಮನೆಯ ಬಾಗಿಲೂ
ಎಂದು. ಅದೇ ಮಬ್ಬುಗಣ್ಣಿನಲ್ಲಿ ಎದ್ದು ಮನೆಯ ಬಾಗಿಲತ್ತ
ನಡೆದೆ.
ಅಂದು
ನಮ್ಮ ಬಂಧು ವರ್ಗದಲ್ಲಿ ಶುಭ ಕಾರ್ಯ ಇರುವ ಕಾರಣ ಮನೆಯವರೆಲ್ಲ ಅಲ್ಲಿ ಹೋಗಿದ್ದರು. ಕೆಲಸ ಕಾರ್ಯದ
ನಿಮಿತ್ತ, ನಾನೊಬ್ಬನೇ ಮನೆಯಲ್ಲಿ ಉಳಿದುಕೊಂಡಿದ್ದೆ. ಹೇಗೋ ಬಂದ ಅಡುಗೆ ಮಾಡಿ ಉದರ ಪೂಜೆ ಮಾಡಿದ್ದೆ.
ಬೆಳಿಗ್ಗೆ ಅಮ್ಮ ಅಡುಗೆ ಮಾಡಿಟ್ಟಿರುತ್ತೇನೆ ಎಂದರೂ ಈ ಹಾಳಾದ ಸ್ವಾಭಿಮಾನ, ಅವಳನ್ನು ತಡೆದಿತ್ತು.
ನಾವೇ ಅಡುಗೆ ಮಾಡಿ ಉಂಬ ಕಷ್ಟ ಉದರ ಪೂಜೆಯ ಸಂದರ್ಭದಲ್ಲಿ ಅರಿವಾಗಿತ್ತು. ಆ ಕ್ಷಣಕ್ಕೆ ಅಮ್ಮನಿಗೊಂದು
ಚಂದದ ಸೊಸೆಯಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದೆನಿಸಿತ್ತು.
ಓಲಾಡುತ್ತಾ
ನಡೆದು ಬಾಗಿಲು ತೆರೆದೆ. ಕ್ಷಣ ಹೊತ್ತು ಎನೂ ಅರಿಯದವನಾಗಿ ಹಾಗೆಯೇ ನಿಂತುಬಿಟ್ಟಿದ್ದೆ. ಸೌಂದರ್ಯ
ರಾಶಿ ಹೊತ್ತ ಅಪ್ಸರೆಯೇ ನಮ್ಮ ಮನೆಯ ಬಾಗಿಲಲ್ಲಿ ನಿಂತಂತಿತ್ತು, ನನ್ನ ಮನದ ಬಾಗಿಲ ತಟ್ಟಿದಂತಿತ್ತು.
ನಿಂತ ಸ್ಥಿತಿಯಲ್ಲೆ ಅವಳನ್ನು ಕೇಳಿದ್ದೆ, ಯಾರೂ ಎಂದು. ಅವಳು ಮಾರುದ್ದ ಸಂಬಂಧದ ಸರಪಳಿಯನ್ನು ನನ್ನ
ಮುಂದಿಟ್ಟಿದ್ದಳು. ನಿಜವಾಗಿಯೂ ಆ ಸಮಯದಲ್ಲಿ ಏನೂ ಅರಿಯದವನಾಗಿದ್ದೆ. ಅವಳ ಬರುವಿಕೆ ಮೊದಲೇ ನಿಗಧಿಯಾಗಿದ್ದು
ನನಗೆ ಕೊನೆಯಲ್ಲಿ ತಿಳಿದಿತ್ತು. ಅಮ್ಮ ನನಗೆ ಹೇಳಲು ಮರೆತಿದ್ದಳು ಅನಿಸುತ್ತೆ. ಇರಲಿ.
ಅವಳ
ಹೆಸರು ಭವ್ಯ. ಚಂದಿರಗೆ ಹೋಲುವ ಮುಖ, ಸೂರ್ಯನ ಕಾಂತಿ, ಅರಳಿದ ಕಣ್ಗಮಲಗಳು, ಏನನ್ನೋ ಹೇಳಲು ತವಕಿಸುತ್ತಿರುವ
ಕೆಂದುಟಿ, ಶಂಖದಾಕೃತಿಯ ಕಿವಿ, ಆಲದೆಲೆಗೆ ಹೋಲುವ ಕೆನ್ನೆ, ಆಡುವ ಮಾತಿನಲ್ಲಿ ಅದೇನೋ ಮಾಧುರ್ಯ, ಹಸಿರುಸಿರು
ತುಂಬಿದ ಹಾವ, ಭಾವ..... .........ಒಟ್ಟಿನಲ್ಲಿ ಹೆಸರಿಗೆ ತಕ್ಕ ಸೌಂದರ್ಯ. ಗುಣದಲ್ಲಿ ಅಮ್ಮನಿಗೂ ಒಂದು ಕೈ ಮೇಲೆಂದರೆ ತಪ್ಪಿಲ್ಲ. ಉಡುಗೆ
ತೊಡುಗೆಯಲ್ಲಿಯೂ ಅಷ್ಟೆ. ಸುಸಂಸ್ಕೃತ ಮನೆತನದವಳು. ನನಗೆಂದೇ ಹುಟ್ಟಿದವಳೋ ಎಂದೆನಿಸಿತ್ತು. ನಾನು
ಮೌನಕ್ಕೆ ಶರಣಾಗಿದ್ದೆ. ಸ್ತಬ್ಧ ಚಿತ್ರದಂತೆ ನಿಂತಿದ್ದೆ.
ಇದೆಲ್ಲ
ನಡೆದದ್ದು ಮನೆಯ ಹೊಸ್ತಿಲಲ್ಲಿ. ಒಳಗೆ ಬನ್ನಿ, ಕೂತುಕೊಳ್ಳಿ, ಬಾಯಾರಿಕೆಗೆ ಏನು ಕೊಡಲಿ ಎಂದು ಕೇಳುವ
ಸೌಜನ್ಯವನ್ನೂ ಮರೆತು ನಿಂತಿದ್ದೆ. ಒಳಗೆ ಬರಬಹುದೇ ಎಂದು ಕೇಳಿ ಅವಳೇ ಇದಕ್ಕೆಲ್ಲ ಪೂರ್ಣಬಿಂಧುವನ್ನಿಟ್ಟಿದ್ದಳು.
ವಾಸ್ತವಕ್ಕೆ ತಿರುಗಿದ
ನಾನು ಅತಿಥಿ ಸತ್ಕಾರಕ್ಕೆ ಅಣಿಯಾಗಿದ್ದೆ. ಹೀಗೇ ಕುಷಲೋಪರಿ ಮಾತನಾಡುವುದರಲ್ಲಿ ಸಂಜೆಯಾಗಿತ್ತು.
ಮನೆಯವರೆಲ್ಲರೂ
ಶುಭಕಾರ್ಯ ಮುಗಿಸಿ ಹಿಂತಿರುಗಿದ್ದರು. ಅಮ್ಮ ಬಂದೊಡನೆ ಅವಳಲ್ಲಿ ಇವಳ ಪೂರ್ತಿ ಬಯೋ-ಡೆಟಾ ತೆಗೆದುಕೊಂಡಿದ್ದೆ.
ಅವಳಲ್ಲಿ ಮನಸೋತ ವಿಷಯವನ್ನೂ ಅಮ್ಮನಲ್ಲಿ ಅರುಹಿದ್ದೆ. ಮನೆಗೆ ಬಂದವರನ್ನು ಆ ದೃಷ್ಠಿಯಲ್ಲಿ ನೋಡಕೂಡದು
ಎಂಬ ಅಮ್ಮನ ಕಟ್ಟಪ್ಪಣೆಯಾಗಿತ್ತು. ಆದರೂ ಹುಚ್ಚು ಮನಸ್ಸು. ನನ್ನ ಮಾತೇ ಕೇಳಲ್ಲ. ಅಮ್ಮನ ಮಾತನ್ನೂ
ಕೇಳಬೇಕು ಅಂದರೆ....????
ಅವಳು ನಮ್ಮ ಮಾವನವರ ಹೆಂಡತಿಯ ತಂಗಿಯಂತೆ. ಊರು, ದೂರದ ಯಲ್ಲಾಪುರವಂತೆ.
ಮದ್ಯಮ ವರ್ಗದ ಕುಟುಂಬವಂತೆ. ನಮಗೆ ತಕ್ಕ ನೆಂಟಸ್ತರೇ. ಕೇಳಿದರೆ ಇಲ್ಲ ಎಂದಾರು ಎಂಬ ಭಯವಿಲ್ಲ. ಕೆಳಲು
ಕಳವಳವಿದೆಯಷ್ಟೇ. ಅವಳು ಇದೇ ಊರಿನಲ್ಲಿ ಎಮ್.ಬಿ.ಎ ಮಾಡಲು ಬಂದಿದ್ದಳು. ಹಾಸ್ಟೇಲ್ ವ್ಯವಸ್ಥೆಯಾಗುವವರೆಗೆ
ನಮ್ಮ ಮನೆಯಲ್ಲೇ ಉಳಿದುಕೊಳ್ಳುವುದು ಎಂಬುದಾಗಿ ಹಿರಿಯರ ಮಾತಾಗಿತ್ತು.
ನನಗೇನೋ
ಎಲ್ಲಿಲ್ಲದ ಸಂತಸ. ನಾನು ಅವಳನ್ನು ಮೆಚ್ಚಿದ್ದೇನೋ ಆಯಿತು. ಈಗ ಅವಳು ಎನ್ನ ಮೆಚ್ಚಬೇಕು. ಅಂಥದ್ದೇನಾದರೂ
ಮಾಡಬೇಕು ಎಂಬ ಹುಮ್ಮಸ್ಸು. ದಿನವೂ ಸೂರ್ಯ ನೆತ್ತಿಗೆ ಬರಲು ಕಾಯುತ್ತಿದ್ದ ನಾನು ಈ ದಿನಗಳಲ್ಲಿ ಬೆಳಕು
ಹರಿವುದರೊಳಗೇ ಎದ್ದು ನನ್ನ ದೈನಂದಿನ ಕಾರ್ಯಗಳ ಮುಗಿಸಿ ಅಮ್ಮನಿಗೆ ನೆರವಾಗುತ್ತಿದ್ದೆ. ಅಪ್ಪನ ಮುಂದೆ
ಜವಾಬ್ದಾರಿ ಹೊತ್ತವನಂತೆ ಎದೆಯೆತ್ತಿ ನಿಲ್ಲುತ್ತಿದ್ದೆ. ಕೆಲಸ ಮುಗಿಯುವುದೇ ತಡ ಮನೆಯಲ್ಲಿ ಹಾಜರ್.
ಮಾತಿನಲ್ಲಿ ಗಾಂಭೀರ್ಯ ಬಂದಾಗಿತ್ತು. ಮುಖದಲ್ಲೇನೋ ಹೊಸ ಕಳೆ ತುಂಬಿತ್ತು. ನವ ಚೈತನ್ಯ ಉಸಿರು ಮನದಾಳದಲ್ಲಿ
ನಾಟಿದಂತಿತ್ತು. ಅವಳಿಗೆ ಒಳ್ಳೆಯ ಗೆಳೆಯನಾಗಿದ್ದೆ. ಸಮಯ ನೋಡಿ ಅವಳನ್ನೇ ನೇರವಾಗಿ ಕೇಳುವ ಪ್ಲಾನ್
ಮಾಡಿದ್ದೆ.
ಕೊನೆಗೊಂದು
ದಿನ ಆ ಸಮಯ ಬಂದೇ ಬಿಟ್ಟಿತು. ಮತ್ತದೇ ಶುಭಕಾರ್ಯ. ಮನೆಯವರೆಲ್ಲರೂ ಹೊರಟು ನಿಂತಿದ್ದರು. ನನ್ನನ್ನೂ
ಬಾ ಎಂದಿದ್ದರು. ಅನಾರೋಗ್ಯದ ಕುಂಟು ನೆಪವೊಡ್ಡಿ ಮನೆಯಲ್ಲೇ ಕೂತಿದ್ದೆ. ಯಾವುದೇ ಕಾರಣಕ್ಕೆ ಅವಳು
ಹೋಗುವುದಿಲ್ಲವೆಂಬುದ ಮೊದಲೇ ಖಚಿತಪಡಿಸಿಕೊಂಡವನಾಗಿದ್ದೆ. ಈ ಚಾಕಚಕ್ಯತೆ ನನ್ನ ಕೆಲಸದಲ್ಲಿ ತೋರಿದ್ದರೆ
ಇಷ್ಟೊತ್ತಿಗಾಗಲೇ ಎರಡು ಪ್ರಮೋಶನ್ ಬಂದಿರೋದು. ಹ್ಹುಂ..! ಆ ವಿಷಯ ಬಿಡಿ. ಮುಂದೆ ನಡೆದದ್ದನ್ನು ಕೇಳಿ.
ನನ್ನ
ಮನಸನ್ನು ಬಲಪಡಿಸಿಕೊಂಡು ಭವ್ಯ ಎಂದು ಜೋರಾಗಿ ಕೂಗಿದ್ದೆ. ಅವಳೂ ರೂಮಿನಿಂದಲೇ ಓ ಎಂದಿದ್ದಳು. ತುಂಬಾ
ಬೋರ್ ಎನ್ನಿಸುತ್ತಿದೆ. ಹೊರಗಡೆ ಸುತ್ತಾಡಿಕೊಂಡು ಬರೋಣವೇ ಎಂದೆ. ಆಕೆ ಕಾಶ್ಯುವಲ್ ಆಗಿ. ಹ್ಹಂ. ಓಕೆ
ಎಂದಿದ್ದಳು. ಮನೆಯ ಸನಿಹವಿರುವ ಪಾರ್ಕ್ ನತ್ತ ಮಾತನಾಡುತ್ತಾ ನಡೆದಿದ್ದೆವು. ಹೇಗೆ ಕೇಳುವುದು ಎಂದು
ಮನದೊಳಗೇ ತವಕ. ಅವಳಿಗಾದರೋ ಇದಾವುದರ ಅರಿವಿಲ್ಲ. ನನ್ನನ್ನು ಒಳ್ಳೆಯ ಮಿತ್ರನಂತೆ ಕಂಡಿದ್ದಳು. ಕೊನೆಗೂ
ಧೈರ್ಯ ಮಾಡಿ ಕೇಳಿಯೇ ಬಿಟ್ಟೆ. ನಿನಗೆ ಅಭ್ಯಂತರವಿಲ್ಲದಿದ್ದರೆ,“ನ್ನನ್ನ ಮನದ ದೀಪಕೆ ಬತ್ತಿಯ ರೂಪದಲ್ಲಿ
ನಿನ್ನ ಕಾಣುವ ಆಸೆ, ನಿನ್ನ ಕೂಸನ್ನು ನಮ್ಮ ಮನೆಯ ತೊಟ್ಟಿಲಲ್ಲಿ ಕಾಣುವ ಆಸೆ, ನನ್ನಮ್ಮಗೆ ಸೊಸೆಯಾಗಿ,
ತಮ್ಮನಿಗೆ ಅತ್ತಿಗೆಯಾಗಿ, ನನ್ನಗೆ ಪ್ರೀತಿಯ ಮಡದಿಯಾಗಿ ಮನೆಗೆ ಬೆಳಕಾಗಿ ಬರುವೆಯಾ ಎಂದು”.
ಆಹಾ..! ಎಂತಹ ಪ್ರೋಪೋಸಲ್... ನನ್ನ ಮೇಲೆ ನನಗೇ ಹೆಮ್ಮೆ
ಎನಿಸಿತ್ತು. ಗರ್ವ ಪಟ್ಟುಕೊಂಡಿದ್ದೆ. ಆದರೆ ಮರು ಕ್ಷಣದ ಅವರಳ ತೀರ್ಪು ಬರುವುದರಲ್ಲಿಯೇ ಭಯದಿ ಬೆಂಡಾಗಿದ್ದೆ.
ಹಾಗೆಂದು ನಾನೇನು ಮಹಾಪರಾಧ ಎಸಗಿದ್ದೆನೇ? ಇಲ್ಲ. ಖಂಡಿತಾ ಇಲ್ಲ. ಮನಸಿಗನಿಸಿದ್ದನ್ನು ಅವಳಲ್ಲಿ ಹೇಳಿಕೋಂಡವನಾಗಿದ್ದೆ.
ಅಷ್ಟೇ. ಆದರೂ ಕಳವಳ. ಎಲ್ಲಿ ಇಲ್ಲವೆನ್ನುವಳೋ, ನಾನವಳಿಗೆ ತಕ್ಕವನಲ್ಲವೆಂಬಳೋ ಎಂದು. ಅಷ್ಟರಲ್ಲಿಯೇ
ಯಾರೋ ಹಿಂದಿನಿಂದ ಮೈ ತಟ್ಟಿದಂತಾಯಿತು. ಎನೂ ಎತ್ತ ಎಂದು ತಿಳಿಯದವನಾಗಿದ್ದೆ. ಬೆವರು ಇಳಿದಿತ್ತು.
ಬೆಳಕು ಹರಿದಿತ್ತು. ವಾಸ್ತವ ಜಗತ್ತಿಗೆ ನಾನಾಗಲೇ ಬಂದಿದ್ದೆ. ಅಮ್ಮ ಎಳಪ್ಪ ಬೆಳಗಾಯಿತು ಎಂದು ಮುಸುಕು
ಎಳೆದಿದ್ದಳು. ಎಲ್ಲದರ ಅರಿವಾಯಿತು. ಇಷ್ಟೊತ್ತು ಕಂಡದ್ದೆಲ್ಲ ಕನಸು ಎಂದು ಅರಿತಾಗ, ಇದು ನನಸಾದರೆ
ಎಷ್ಟು ಚೆನ್ನಾಗಿತ್ತೋ ಎಂದು ಮನದಲ್ಲೇ ಅಂದುಕೊಂಡಿದ್ದೆ. ಮತ್ತೆ ಆ ಕನಸು ನಾಳೆಯ ದಿನ ಬೀಳಲಿ ಎಂದು
ದೇವರಲ್ಲಿ ಪ್ರಾರ್ಥಿಸುತ್ತ ಹಾಸಿಗೆಯಲ್ಲೇ ಎದ್ದು ಕೂತಿದ್ದೆ.





