Wednesday, September 27, 2017

ಕುರಿ ಕಾಯೋನು

(ಹಂಪಿ ಪುಟ)


ಚಿಕ್ಕಂದಿಲಿನಿಂದ ಕುರಿ ಮಂದೆ ಕಂಡಾಗಲೆಲ್ಲ ಅದೇನೋ ಖುಷಿ. ಕಿರಿ ಕುರಿ ತಪ್ಪಿಸಿಕೊಂಡಾಗ ಹಿರಿಕುರಿ ಕೂಗಿ ತನ್ನ ಬಣ ಸೇರಿಸಿಕೊಂಬ ಪರಿ ಮಜವಾಗಿ ಕಾಣ್ತಿತ್ತು. ಆ ದಿನಗಳೇ ಹಂಗೆ, ಚಿಕ್ಕ ಪುಟ್ಟ ವಿಷಯದಲ್ಲೂ ಸಂತಸ ಕಾಣುವ ಆ ಮೃದು ಮನಸು ಈಗ ಇಲ್ಲವೇಕೆ...? ಅಂತ ಅನಿಸುವುದುಂಟು. ಇರಲಿ ಬಿಡಿ.

ಕುರಿ ಮರಿಯ ಹೆಸರಿನಲ್ಲಿ ನಾಲಿಗೆ ತಿರುವು ಆಟವೊಂದಿದೆ. ''ತರಿ ಕೆರೆ ಏರಿ ಮೇಲೆ ಮೂರ್ ಕರಿ ಕುರಿ ಮರಿ ಮೇಯ್ತಿತ್ತು", ಅಂತ ಜೋರಾಗಿ ಹೇಳೋದು. ನಿಲ್ಲಿಸುವಂತಿಲ್ಲ. ಅಕ್ಷರ ತಪ್ಪುವಂತಿಲ್ಲ. ಮಜವಾಗಿರುತ್ತೆ. ಆಡಿ ನೋಡಿ.

ಕುರಿ ಮಂದೆಯಲ್ಲಿ ನಾ ಕಂಡಂತೆ ಕೆಲವೊಂದು ಸೂಕ್ಷ್ಮ ವಿಷಯಗಳಿವೆ. ಅವು ಸಂಖ್ಯೆಯಲ್ಲಿ ನೂರಿರಲಿ, ಸಾವಿರ ಇರಲಿ, ಅವರೊಳಗೆ ಗುಂಪು ಕಾಯುವ ಟಗರು ತನ್ನ ಬಣದ ಹತೋಟಿ ಸಾಧಿಸಿ ಕಾವಲುಗಾರನ ಹಿಂದೆಯೇ ಯಾವ ಕುರಿಯೂ ಬಣ ತಪ್ಪಿ ನಡೆಯದಂತೆ ನಿಗಾ ವಹಿಸುತ್ತೆ. ಉಳಿದ ಕುರಿಗಳೂ ಹಾಗೇ, ತನ್ನ ಒಡೆಯನ ಸನ್ನೆಯ ಮೀರದೇ ಅವನು ನಡೆವ ಹಾದಿಯಲ್ಲಿ ಪುಟಪುಟನೇ ಹೆಜ್ಜೆ ಹಾಕುತ್ತವೆ. ವಿಶೇಷ ಅಂದರೆ, ಮುಂದೆ ನಡೆವ ಕಾವಲುಗಾರ ಏನೂ ಸನ್ನೆ ಕೊಡದೆ ನಿಂತಲ್ಲಿ, ನಡೆಯುತ್ತಿದ್ದ ಎಲ್ಲ ಕುರಿಗಳು ತಕ್ಷಣ ನಿಲ್ಲುತ್ತವೆ. ಅವನು ಮುಂದಾದಲ್ಲಿ ಮತ್ತೆ ಹೆಜ್ಜೆ ಹಾಕುತ್ತವೆ.

ಇವೆಲ್ಲದರ ಮಧ್ಯೆ ಒಂದೋ ಎರಡೋ ಕಾವಲು ನಾಯಿಗಳೂ ಈ ಗುಂಪಿನ ಸದಸ್ಯರುಗಳು. ಕುರಿ ಮಂದೆಗೆ ಏನೂ ತೋಂದರೆ ಆಗದಂತೆ ಕಾವಲು ಕಾಯೋದು ಅವುಗಳ ಕೆಲಸ. ಯಜಮಾನನ ಪ್ರತಿ ಹೆಜ್ಜೆ ಮತ್ತು ಸನ್ನೆಗೆ ಪ್ರತಿಕ್ರಿಯಿಸುವ ಅವು ಅತಿ ಸೂಕ್ಷ್ಮ.

ಇಲ್ಲಿ ಹೇಳ ಹೊರಟಿರುವ ವಿಷಯ ಇಷ್ಟೇ, ಈ ಮೇಲಿನ ಸಾಲುಗಳ ಇನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಮನುಷ್ಯ, ಕುರಿ, ಟಗರು, ನಾಯಿ ನಾಲ್ಕು ಜೀವ ವರ್ಗ. ಒಂದಕ್ಕೊಂದು ಹೊಂದಿಕೊಂಡು/ಅವಲಂಬಿಸಿಗೊಂಡು, ಎಂತ ಅದ್ಭುತ ಜೀವನ ಸಾಗಿಸುತ್ತ್ವೆ‌...!!! ಯಜಮಾನನಿಗೆ ಕುರಿ ಮಂದೆಯೇ ಜೀವನ. ಕುರಿಗಳಿಗೆ ಯಜಮಾನನೇ ವಿಶ್ವ. ಟಗರಿಗೆ, ಕಾಯುವುದು ಕಾಯಕ, ನಾಯಿಗೂ ಅದೇ ಜವಾಬ್ದಾರಿ. ಹೊರಗಿನ ಯಾವುದೇ ಕಂಠಕಗಳಿಗೆ ಆಸ್ಪದ ಕೊಡದೇ ತಮ್ಮ ಗುಂಪನ್ನು ಕಾಯುವ ಅವುಗಳು ಗಡಿಯಂಚಿನ ಸೈನಿಕರಿದ್ದಂತೆ. ಬರಿ ರೆಪ್ಪೆ ತೆರೆದ ಕಣ್ಣಿಗೆ ಇದು ಕುರಿಮಂದೆ. ಆದರೆ, ಮನಸು ತೆರೆದ ಕಣ್ಣಿಗೆ......ಸಹಬಾಳ್ವೆ.

ಬದುಕು ಎಂತ ಅದ್ಭುತ ಅಲ್ವೇ.......? ಅನುಭವಿಸಲೇಬೇಕು ಅರ್ಥವಾಗುವವರೆಗೆ.....!!!

ಕೃಷ್ಣ ಗುಮ್ಮಾನಿ.
ಚಿತ್ರಕೃಪೆ : ವಿನಾಯಕ ಗುಮ್ಮಾನಿ.