Friday, June 3, 2016

ಭೂತಾಯಿಯ ಮಡಿಲು


ಅಂದು :-

ತಾಯಿಯಾದೆ ತಾಳ್ಮೆಯಿಂದ
ಜನರ ಪ್ರೀತಿ ಮಡಿಲಲಿ.
ಹಸಿರ ಬೀಜ ಬಿತ್ತಿ ಅವರು
ತಾಯಿ ಮಮತೆ ಒಡಲಲಿ.

ಹೆಂಟೆ ಒಡೆದು ಕಟ್ಟೆ ಕಟ್ಟಿ
ಕನಸ ತುಂಬಿ ಬಸಿರಲಿ.
ಬಸಿರು ತುಂಬಿ ಹಸಿರು ಬೆಳೆಯೆ
ಕಣ್ಣು ತಂಪು ಸಸಿಯಲಿ.

ಪೂಜೆಗೈದು ಫಸಲು ಕಂಡು
ಕುಣಿದರಂದು ಖುಷಿಯಲಿ.
ನೀರನುಣಿಸಿ ಮನದಿ ನಮಿಸಿ
ಶೃಮದ ಫಲವು ಭುವಿಯಲಿ.

ಇಂದು :-

ಅದು ಎನ್ನದು ಇದು ಎನ್ನದು
ಎಂದು ಬಗೆದು ಒಡೆದರು.
ಮನೆಯ ಮೇಲೆ ಮನೆಯ ಕಟ್ಟಿ
ಮುಡಿಯ ಸವರಿ ನಿಂತರು.

ಕಸದ ರಸವ ಮೇಲೆ ಎರಚಿ
ತಾವು ಶುಚಿಯ ಕಂಡರು.
ಹಸಿರ ಹರಿದು ಪೆಸರ ಬರೆದು
ಸಿರಿತನವನು ಉಂಡರು.

ಚಿನ್ನಕಾಗಿ ಉದರ ಅಗೆದು
ಎನ್ನ ಉಸಿರು ಕಟ್ಟಿರೆ.
ನೀರಿಲ್ಲದೆ ದಾಹವಾಗಿ
ಬಸಿರು ಬಿರುಕ ಬಿಟ್ಟಿದೆ.

ಊಳುವವಗೆ ಉಳಿವೆ ಇಲ್ಲ
ಎಲ್ಲ ಉಗುಳುವವರಿಗೆ.
ರೈತ ಎನಗೆ ಮುದ್ದು ಕಂದ

ಮರಳಿ ಬಾ ತವರಿಗೆ.

''ಓಲವಿನಾಟ''


ಮಿಂದ ಹಸಿ ಮೈಯಲ್ಲಿ ಒದ್ದೆ ಅರಿವೆ ಸುತ್ತಿದ ಅವಳು ತಲೆಯ ಒರೆಸುತ್ತಾ ವಾರೆ ನೋಟವ ಬಿತ್ತಿ ಒಳ ನಡೆದಿದ್ದಳು. ನನ್ನ ಕಣ್ಣುಗಳು ಅವಳ ಬೆನ್ನತ್ತಿ ಓಡಿದ್ದವು. ತವಕವ ತಡೆಯದ ಮನವು ಕದ ತಟ್ಟಿ ಅವಳ ಕೆಣಕಿತ್ತು. ಹದ ತಪ್ಪಿದ ಎನ್ನ ಅವಸರವರಿತ ಅವಳು ಕದ ತೆರೆದರೂ ಎದಗವುಚಲು ಇದಿರಾದ ಎನ್ನ ಮೊಣ ದೂರದಲ್ಲಿ ಕಣ್ನೋಟದಲ್ಲೇ ತಡೆದು ನಿಲ್ಲಿಸಿದ್ದಳು. ಈ ಹೆಣ್ಣಿನ ಶಕ್ತಿಯೇ ಅದು. ಬೇಡವೆನಿಸಿದರೆ ನೋಟದ ಆಯುಧವೇ ಸಾಕು. ಗಂಡು ತಾ ಸೋತು ಮೂಲೆ ಸೇರುವುದು ಖಚಿತ.
ಆದರೂ ತಡೆಯಲೊಲ್ಲದೇ ಅಡುಗೆ ಮನೆಯ ಕದ ಸಂಧಿಯಿಂದಲೇ ಅರೆಗಣ್ಣ ಒಳಗಿಟ್ಟು ಅವಳ ಬಂಧಿಸಿದ್ದೆ. ಆಕೆ ಏನೋ ಅಡುಗೆ ಕೆಲಸದಲ್ಲಿ ಮಗ್ನಳಾಗಿದ್ದಳು. ಬೆಕ್ಕಿನ ನಡಿಗೆ ಅದೆಂದು ಕಲಿತಿದ್ದೆನೋ.... ನನಗೇ ಅರಿವಾಗದೆ ಹಿಂಬದಿಯಿಂದಲೇ ನಡು ಬಳಸಿ ತಬ್ಬಿ ಹಿಡಿದಿದ್ದೆ. ನಿಶ್ಶಬ್ಧದ ಮಡಿಲಲ್ಲಿ ಬಿಸಿಯುಸಿರು, ಎದೆ ಬಡಿತವೆರಡೂ ಪೈಪೋಟಿಗಿಳಿದಿದ್ದವು. ಕಣ್ಮುಚ್ಚಿ ಆಕೆಯೂ ತನ್ನನ್ನೇ ಎನಗರ್ಪಿಸಿದ್ದಳು....

ಕೊನೆಯಲ್ಲಿ ಕೊಸರಾಡಿದ ಅನುಭವ.... ದ್ದೋಪ್ಪೆಂಬ ಶಬ್ಧ.... ಬೆವರಿಳಿಯುತ್ತಿತ್ತು.... ಕಣ್ಣು ಕಟ್ಟಿತ್ತು... ಆಸೆಗಳು ಉತ್ತುಂಗದಲ್ಲಿದ್ದವು.... ಕತ್ತಲು ಕಿರಿಕಿರಿಯೆನಿಸಿತು..... ಏನಾಯಿತೆಂದು ಅವಲೋಕಿಸುತ್ತ ಅತ್ತಿತ್ತ ಕಣ್ಣಿಟ್ಟೆ.... ನಾನು ಮಂಚದ ಕೆಳಗಿದ್ದೆ... ಮತ್ತೆ ಎದ್ದು ಹೊದಿಕೆ ಎಳೆದು ಮಲಗಿದೆ...ಮತ್ತೇರಿ ಮತ್ತೆ ಬೀಳುವ ತವಕದಲ್ಲಿ.....

ಹೆಣ್ಣೇ...... ನೀನೇಕೆ ಅಷ್ಟು ಸುಂದರ...?


ಬಿಸಿಲ ಬೇಗೆಗೆ ಬಸವಳಿದು ನೆರಳ ಅರಸಿ ಮರದಡಿಯಲಿ ಮಲಗಿದ್ದ ಎನಗೆ ಆಲೋಚನೆಗಳ ಬಳ್ಳಿ ಮೈ ಸುತ್ತಿದ್ದು ಅರಿವಿಗೆ ಬಾರದೇ ಹೋಯಿತೇ..? ಇರಲಿಕ್ಕಿಲ್ಲ.... ಎಲ್ಲವೂ ನೆನಪಿನಂಗಳದಲ್ಲಿ ಸಸಿಯಾಗಿ ಹೂ ಬಿಟ್ಟಂತಿದೆ. ದುಂಬಿಯಾಗಿ ನೆನಪಿನ ಎಸಳುಗಳ ಮಡಿಲಲ್ಲಿರುವ ಮಕರಂದವ ಹೀರಬೇಕೆನಿಸಿ ಹಾಗೆಯೇ ವಿಹರಿಸತೊಡಗಿದ ಮನದ ಆಳದಲ್ಲೊಂದಿಷ್ಟು ಮತಿ ಗ್ರಹಿಸದ ಪ್ರಶ್ನೆಗಳು...

ನಿನ್ನದೆನ್ನುವುದೆಲ್ಲವೂ ನನ್ನದಾದರೆ ಅದೆಷ್ಟು ಖುಷಿಯಿರಬಹುದು. ಆ ಎಡಗಿವಿಯ ಬದಿಯಲ್ಲಿ ಇಳಿಬಿಟ್ಟ ಕರಿ ಕೇಶ, ಕಿವಿಯಲ್ಲಿ ತೂಗುತ್ತಿದ್ದ ಓಲೆಗೆ ತಾಕಿ ನಯವಾಗಿ ನಲಿಯುತಿದೆ. ಕುಳಿಯಿಕ್ಕಿದ ಕೆನ್ನೆ ಎನ್ನ ತುಟಿಗೆ ಆಹ್ವಾನವಿಟ್ಟಂತಿದೆ. ಆ ನಗುವ ಪರದೆಯಡಿ ಎರಗೆರಗಿ ನೋಡುತಿಹ ಆ ಅಧರಗಳು ಏನೋ ಪಿಸುಗುಟ್ಟಂತಿದ್ದು ಕೇಳಲೆನ್ನ ಕಿವಿಗಳು ನಿಮಿರಿ ನಿಂತಿದೆ. ಕಲ್ಪನೆಯ ತೊಟ್ಟಿಲಲಿ ಮಲಗಿಹ ಮಗು ನಾನಾಗಿಹೆನೇ...?? ಇರಬಹುದು.... ಇಲ್ಲದೆಯೂ ಇರಬಹುದು. ಒಮ್ಮೊಮ್ಮೆ ಕೈ ಹಿಡಿದು ರಸ್ತೆಯುದ್ದಕ್ಕೂ ನಡೆಯಬೇಕೆನಿಸಿ, ಬೆರಳುಗಳ ಮಿಲನದಲಿ ಮೈ ಮನವು ತಣ್ಣಗಿನ ಬಿಸಿ ನೀರಂತೆ ಭಾಸವಾಗುವುದು. ಸಂಜೆಯಾದಂತೆಲ್ಲ ನಿನ್ನ ನೆನಪುಗಳೇ ಮಳೆಯಾಗಿ ಹರಿವುದು. ಇದೆಲ್ಲ ನನಗೇ ಏಕಾಗುತಿದೆ...? ನಿನ್ನ ಕಂಡಾಗಲೇ ಏಕಾಗಬೇಕು...? ಎಲ್ಲವೂ ಪ್ರಶ್ನಾರ್ಥಕ......!!!

ಎದುರು ಕುಳಿತ ನಿನ್ನ ಎಷ್ಟು ನೋಡಿದರೂ ಸಾಕೆನಿಸದು. ಆ ಮುಗ್ದ ನಗು..... ಮುಗಿಯದ ಮಾತು..... ಮುದ್ದಾದ ಮುಖ..... ಮನದುಂಬಿದ ಪ್ರೀತಿ.... ಆಹಾ.... ಹೇಳ ತೀರದ ಪಯಣ. ಆಗಲೇ ಅನಿಸುವುದು.... ಹೆಣ್ಣೇ...... ನೀನೇಕೆ ಅಷ್ಟು ಸುಂದರ...?