ಅಂದು
ರಾತ್ರಿ ಸರಿಸುಮಾರು ಹನ್ನೆರಡರ ಸಮಯ. ಮನೆ ತುಂಬಿದ ಅಮ್ಮನ ಆಕ್ರಂದನ. ಅವಳು ಅದೇಷ್ಟು ವೇದನೆ ಅನುಭವಿಸಿದಳೋ....
ನನಗೆ ಗೊತ್ತಿಲ್ಲ. ಆ ನರಳಾಟ ನೋಡಿ ಕಣ್ಣೀರಿನ ಕೋಡಿಯೇ ಹರಿದಿರಬೇಕು. ಆದರೂ ಅಲ್ಲೊಂದು ಸಂತಸ. ಅವಳ
ಕನಸಿನ ಕೂಸಾಗಿ ನಾನು ಧರೆಗಿಳಿದಿದ್ದೆ. ಆ ಮನೆಗೆ ಎರಡನೇಯ ಕಂದಮ್ಮನಾಗಿ ನಾನು ಬಂದಿದ್ದೆ. ಒಂಬತ್ತು
ತಿಂಗಳು ಅವಳ ಕರುಳ ಬಳ್ಳಿಯಾಗಿ ಬೆಳೆದೆ. ಅವಳು ತಿನ್ನುವ ಆಹಾರದಲ್ಲಿ ನಾನೂ ಒಬ್ಬ ಪಾಲುದಾರನಾದೆ.
ಉರುಳಿದೆ. ಹೊರಳಾಡಿದೆ. ಅವಳ ನಿದಿರೆಗೆ ಭಂಗವಾದೆ. ಅವಳ ಕನಸಿನ ಗೋಪುರಕೆ ಹೊಳೆವ ಕಳಶವಾದೆ. ಅಂದು
ನಾನು ಅದೇಗೆ ವರ್ತಿಸಿದ್ದೆನೋ.. ಹೆತ್ತ ಅಮ್ಮನಿಗೇ ಗೊತ್ತು. ಹಲವಾರು ಬಾರಿ ಅವಳ ಕಣ್ಣೀರಿನ ಕೋಡಿಗೆ
ನಾನೇ ಒಡಲಾಗಿದ್ದೆನೇನೋ ಎಂಬ ಭಾವ ಇಂದು ನನಗಾಗುತ್ತಿದೆ.
ನನ್ನ
ಅಮ್ಮ ನನಗೆ ಆದರ್ಶ. ಅವಳು
ಈ ಹೊಸ ಆಡಂಬರದ
ಪ್ರಪಂಚಕ್ಕೆ ಹೊಂದಿಕೊಂಡವಳಲ್ಲ.
ಇಂದಿಗೂ ಹಣೆಯಲ್ಲಿ ಎದ್ದು ತೋರುವ ಹಣೆ ಬೊಟ್ಟು, ಹೇಳದ ಅಪ್ಪನ ಹೆಸರು, ದೇವ ಸನ್ನಿಧಿ ಕಂಡೊಡನೆ ಕೈಮುಗಿದು
ನಿಲ್ಲುವ ನನ್ನಮ್ಮ, ಧಾರ್ಮಿಕತೆಯ
ಹಾದಿ ಎಂದೂ ಬಿಟ್ಟವಳಲ್ಲ. ಅವಳು ತೋರುವ
ಪ್ರೀತಿ ಬೇರೆಲ್ಲೂ ಕಾಣ ಸಿಗಲ್ಲ. ಅಂದು
ಅಮ್ಮ ಹೇಳಿದ ಸುಳ್ಳಿನ ಅರಿವಾಗುವ
ಹೊತ್ತಿಗೆ “ಅಮ್ಮ ಹೇಳಿದ ಎಂಟು
ಸುಳ್ಳುಗಳು”, ಎಂಬ ಹೊತ್ತಗೆಯೇ ಬಂದು
ಬಿಟ್ಟಿತ್ತು. (ಆ ಸುಳ್ಳುಗಳ ಅಂತರಾರ್ಥ
ಬಯಸಿದವರು ದಯವಿಟ್ಟು ಆ ಹೊತ್ತಗೆಯತ್ತ ಕಣ್ಣು
ಹಾಯಿಸಿ ಒಮ್ಮೆ ಓದಿ.) ಹೊಟ್ಟೆ
ಪಾಡಿಗಾಗಿ ಅಮ್ಮ ಹರಿಸಿದಿ ಬೆವರಿನ
ಬೆಲೆ ತಿಳಿಯದವನಾಗಿದ್ದೆ.
ಅದು
ಕೃಷಿ ಕುಟುಂಬ. ಹರಕಲು ಬಟ್ಟೆಯೇ ಅಂಗಕ್ಕೆ ಶೃಂಗಾರ.
ಹೆಸರಿಗಷ್ಟೇ ಜಮೀಂದಾರ. ಬೆನ್ನಿಗಂಟಿದ ಬೇತಾಳದಂತಹ ಬಡತನ. ಕಿರಿಕಿರಿಯೆನಿಸಿದ ನೆರೆಹೊರೆಯ ಬಂಧುವರ್ಗ.
ಅಪ್ಪ ಹೊಸ ಅಂಗಿ ಹಾಕಿದರೆ ನಾನೂ ಹಾದಿ ಹಿಡಿವ ಆ ಸುಸಂದರ್ಭ. ಕೀಟಲೆಯ ಅಲೆಗೆ ಹೆದರಿ ಕಡಗೋಲು ಕಂಬಕ್ಕೆ
ಕಟ್ಟಿದ ಆ ನನ್ನ ಪುಟ್ಟ ಕಾಲು. ಬಿಟ್ಟರೆ ಓಡು ಹೋಗುವೆನೇನೋ ಎಂಬ ಭಯದಿ ಹಾಕಿದ ಬಾಗಿಲಿನ ಅಡ್ಡ ಹಲಗೆ.
ಅದನ್ನೂ ಲೆಕ್ಕಿಸದೇ ದಾಟಿ ತೋಡಿಗೆ ಬಿದ್ದು ಹಣೆಗಂಟಿದ ಗಾಯದ ಅಚ್ಚು. ಅಮ್ಮ ಮಾಡುವುದ ಕಂಡು, ನಾನು
ಮಾಡುವ ಭರದಲಿ ಕತ್ತಿ ಕೈಗೆತ್ತಿಕೊಂಡು ಕೆತ್ತಿಸಿಕೊಂಡ ಆ ನೋವಿನ ಕ್ಷಣ. ಬರುವ ನೆಂಟರಿಷ್ಟರು ತರುವ
ಪೇಪರ್’ಮೆಂಟ್ಸ್. ಆಸೆಯಿಂದ ಕಾದು ಕುಳಿತು, ಕೊಟ್ಟಾಗ ತನಗರ್ಧ ನಿನಗರ್ಧ ಎಂದು ಹಂಚಿಕೊಂಬ ಅಣ್ಣ. ಹಂಚಿಕೆಯಲ್ಲಿ
ಹೆಚ್ಚು ಕಡಿಮೆ ಅನಿಸಿದಾಗ ನಾನು ಮಾಡಿದ ರಂಪಾಟ. ಅಣ್ಣನೊಂದಿಗೆ ಆಡಿದ ಕುಸ್ತಿ. ಕೆಲವೊಮ್ಮೆ ಅಪ್ಪನ
ಮಾತಿಗೆ ತಿರುಗಾಡಿ ತಿಂದ ಎರಡೇಟು. ತಿಂದ ಏಟಿನ ಉರಿತಕ್ಕೆ ಹತ್ತಿ ಕೂತ ಆ ಆಲದ ಮರ. ಅಪ್ಪನ ಕೋಪ ಇಳಿದು
ತಿಂದ ಏಟಿನ ಬಾಸುಂಡೆಗೆ ಎಣ್ಣೆ ಹಚ್ಚಿದ ಆ ಸಂದರ್ಭ. ಕುತೂಹಲದಿ ಕಳಚಿದ ರೇಡಿಯೋ, ಹಾಳಾಗಿ ನಿಂತಾಗ
ಅಪ್ಪನ ಹೊಡೆತಕ್ಕೆ ಹೆದರಿ ಅಪ್ಪಿದ ಅಮ್ಮನ ಮಡಿಲು. ಬೇಡವೆಂದರೂ ಅಮ್ಮ ಹಾಕಿದ ತೆಂಗಿನ ಎಣ್ಣೆ. ಅದು
ಹಣೆಗಿಳಿದು ನವೆಯಾಗಿ ಹೆಸಿಗೆಯೆನಿಸಿದ ಕ್ಷಣ. ಅಪ್ಪನಲ್ಲಿ ಅಮ್ಮನ ಮೇಲೆನ ದೂರು. ಸವಾಲೊಡ್ಡಿ ನೆರಮನೆಯ
ಅಣ್ಣನಿಂದ ಹೊಡೆಸಿಕೊಂಡು ಸೋಲುಂಡ ಮುಖ. ಕದ್ದು ತಿಂದ ದೊಡ್ಡಪ್ಪನ ಮನೆಯ ಪೇರಲೆ ಹಣ್ಣು, ಬಿದ್ದ ಮಾವಿನ
ಹಣ್ಣು ಪಡೆವಲ್ಲಿ ಮಾಡಿದ ರನ್ನಿಂಗ್ ರೇಸ್, ಕನ್ನಡ ಶಾಲೆಯ ಮೊದಲ ದಿನ, ಪರೀಕ್ಷೆಯ ಫಲಿತಾಂಶದಲ್ಲಿ
ಮೊದಲಿಗನಾಗಿದ್ದಕ್ಕೆ ಊಇರಿಗೇ ಹಂಚಿದ ಚಾಕಲೇಟ್ಸ್, ಆವರಣಕೆ ಸಾರಿಸಿದ ಸಗಣಿ, ಕೊಯ್ದು ತಿಂದ ಅರೆ ಹಣ್ಣಾದ
ಚಿಕ್ಕು, ಅರಿಯದ ಪ್ರೀತಿಗೆ ಆಕೆ ಹಚ್ಚಿದ ದೀಪ, ನೆನೆಸಿ ಕೂತ ಹುಣಸೇ ಮರ...........ಆಹಾ................
ಅದೆಷ್ಟು ಸುಮಧುರ ಕ್ಷಣಗಳು. ನೆನೆಸಿದಷ್ಟೂ ಕಡಿಮೆ. ಅದರ ಆಸ್ವಾದ ಅನುಭವಿಸಿದವಗೇ ಗೊತ್ತು.
ಅಂದು
ಅದೇ ನನ್ನ ಪ್ರಪಂಚವಾಗಿತ್ತು. ನಾ
ಕಂಡ ಮಂಚಕ್ಕೆ ಮೂರೇ ಕಾಲು
ಎಂಬ ಭಂಡ ವಾಗ್ವಾದ ನನ್ನದಾಗಿತ್ತು.
ಅಪ್ಪನ ಮಾತಿಗೆ ಅರ್ಥ ಹುಡುಕುವ
ತಾಳ್ಮೆ ನನ್ನಲ್ಲಿರಲಿಲ್ಲ. ಅಮ್ಮನ ಪ್ರೀತಿ ಅರಿವಲ್ಲಿ ವಿಫಲನಾಗಿದ್ದೆ. ಅಪ್ಪ
ಮುಂಗೋಪಿ, ಬಯ್ಯುವುದು ಬಿಟ್ಟಿ ಬೇರೇನೂ ಗೊತ್ತಿಲ್ಲ
ಎಂಬ ತೀರ್ಮಾನಕ್ಕೆ ನಾನು ಇಳಿದಿದ್ದೆ. ಮುಂದಾಲೋಚನೆಯ
ಅರಿವು ನನ್ನಲ್ಲಿರಲಿಲ್ಲ. ಹಠಕ್ಕೆ ಮಣಿಯದೇ ಕೊಡಿಸದಿಹ
ಹೊಸ ಅಂಗಿಯ ಹಿಂದಿರುವ ಬಡತನದ
ಕಹಿ
ಸತ್ಯ ಅರಿವಲ್ಲಿ ನಾನು ವಿಫಲನಾಗಿದ್ದೆ.
ಆದರೆ
ಇಂದು ಎಲ್ಲವೂ ಬದಲಾಗಿದೆ. ಹೊಸ ಜನಜೀವನ. ಹೊಸ ತರದ ಬದುಕು. ಇಂದು ಈ ಜಗದ ಪರಿವರ್ತನೆ ಅರಿವಲ್ಲಿ ಯಶಸ್ವಿಯಾಗಿದ್ದೇನೆ.
ಜನರೊಂದಿಗೆ ಹೊಂದಿಕೊಂಡಿದ್ದೇನೆ. ಇಂದು ಅಪ್ಪ ಅಮ್ಮನ ಕಂಡು ಹೆಮ್ಮೆಯೆನಿಸುತ್ತಿದೆ. ಅದೆಷ್ಟು ಕಷ್ಟ
ಪಟ್ಟರು ಅವರು. ಅಪ್ಪ ನನಗಾಗಿ ಎಂದೂ ಆಸ್ತಿ ಮಾಡಿಲ್ಲ. ಅರಮನೆ ಕಟ್ಟಿಸಿಲ್ಲ. ನನ್ನನ್ನೇ ಆಸ್ತಿ ಮಾಡಲು
ಹೊರಟ. ಕಷ್ಟದ ಹಾದಿ ತುಳಿದ. ಅಸತ್ಯಕ್ಕೆ ಸೆಡ್ಡು ಹೊಡೆದು ನಿಂತ. ಕೆಲವರ ಕಣ್ಣಿಗೆ ನಿಷ್ಠೂರವಾದಿ
ಎನಿಸಿದ. ತಪ್ಪು ಕಂಡಲ್ಲಿ ಖಂಡಿಸಿದ. ಸತ್ಯಕ್ಕೆ ತಲೆ ಬಾಗಿದ. ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ದುಡಿದ.
ನೊಂದವರಿಗೆ ನೆರವಾದ.
ಇಂದು
ಸಿರಿವಂತರಿಲ್ಲದಿರಬಹುದು.
ಆಡಂಬರದ ಜೀವನ ಇಲ್ಲದಿರಬಹುದು.
ಆದರೆ ಎಂದಿಗೂ ಹೊಟ್ಟೆಗೆ ಹಿಟ್ಟು, ಮಾನ
ಮುಚ್ಚಲು ಬಟ್ಟೆ ಕೊರತೆ ಇಲ್ಲ. ಪ್ರೀತಿ ವಿಶ್ವಾಸದಲ್ಲಿ
ಎಲ್ಲರಿಗಿಂತ ಸಿರಿತನರ ಬಾಳು ನಮ್ಮದು.
ಅಂದು ಅಪ್ಪ ಎನ್ನ ಮೇಲೆ ಸಾಧಿಸಿದ ಹತೋಟಿ ಇಂದು ನಾನು ನಾನಾಗಿ ಬಾಳಲು ಎಡೆ ಮಾಡಿಕೊಟ್ಟಿತು. ಇಂದು
ನನ್ನಿಷ್ಟದಂತೆ ಬಾಳಲು ಅವಕಾಶ ಕೊಟ್ಟ. ಜೊತೆಯಲ್ಲಿ ಒಂದಿಷ್ಟು ಜವಾಬ್ದಾರಿಯನ್ನೂ ಇತ್ತ. ಎಲ್ಲಿ ಹೋದರೂ
ಬದುಕಬಲ್ಲೆ ಎಂಬ ಧೈರ್ಯ ನನ್ನದಾಗುವಂತೆ ಮಾಡಿದಾತ ನನ್ನ ಅಪ್ಪ.
ಅಪ್ಪ/ಅಮ್ಮ..........
ನಾನಿಷ್ಟನ್ನೇ
ಹೇಳ ಬಲ್ಲೆ. ಹೆಮ್ಮೆಯ ಜೀವನ ಕಾಣಲು ಸಹಕರಿಸಿದ ನಿಮಗೆಂದೂ ನಾನು ಚಿರಋಣಿ. ನಿಮಗೆ ಐಶ್ವರ್ಯ ತುಂಬಿದ
ಜೀವನ ಕೊಡ್ತೀನೋ ಇಲ್ವೋ... ನೆಮ್ಮದಿಯ ದಿನಗಳನ್ನಂತೂ ಖಂಡಿತಾ ಕೊಡ್ತೀನಿ. ಕೀರುತಿ ತರ್ತೀನೋ ಇಲ್ವೋ...
ಇರೋ ಮರ್ಯಾದಿ ಹರಾಜು ಹಾಕಲ್ಲ. ಸಾಧನೆ ಮಾಡ್ತೀನೋ ಇಲ್ವೋ... ಛೀ ಥೂ ಎನ್ನಿಸಿಕೊಂಬ ಬಾಳು ಬಾಳಲ್ಲ.
ಇನ್ನೊಬ್ಬರಿಗೆ ಒಳ್ಳೇದು ಮಾಡ್ತೀನೋ ಇಲ್ವೋ... ಕೆಟ್ಟದ್ದು ಖಂಡಿತಾ ಮಾಡಲ್ಲ. ನನ್ನೀ ಅರಿವಿನ ಬೇರಾದ
ನಿಮಗೆ ನಾ ಚಿರಋಣಿ.
ಅಂತೆಯೇ
ನಾನು ಈ ಮಟ್ಟಕ್ಕೆ ಬರಲು ಸಹಕರಿಸಿದ ಹಾಗೂ ನನ್ನ ಜೀವನಕ್ಕೆ ಒಂದು ಅರ್ಥ ಕೊಟ್ಟ ಎಲ್ಲ ಸಹೃದಯ ಬಂಧುಗಳಿಗೆ,
ನ್ನನ್ನನ್ನು ಸಹಿಸಿದ ನೆರೆಹೊರೆಯ ಮಹನೀಯರಿಗೆ, ಸ್ನೇಹಿತ ಪ್ರಪಂಚಕ್ಕೆ, ಜ್ಞಾನವಿತ್ತ ಗುರು ವೃಂದಕ್ಕೆ,
ಅನ್ನವಿತ್ತ ದಾತರಿಗೆ, ಬೆಂಗಾವಲಾಗಿ ನಿಂತ ಸಹೋದರನಿಗೆ, ಅನಂತಾನಂತ ಧನ್ಯವಾದಗಳು.
!!ಹರಿಃ ಓಂ!!

No comments:
Post a Comment