ಮಧ್ಯಾಹ್ನ
ತಂಪಾಗಿ ಮೊಸರನ್ನವುಂಡು ಕಛೇರಿ ಕೆಲಸಕ್ಕಾಗಿ ಹೊರಟಿದ್ದೆ.
ನೆತ್ತಿ ಸುಡುವ ಉರಿ ಬಿಸಿಲು.
ಬಿಸಿ ಉಸಿರ ಸೇದುತ್ತಾ ಸ್ನೇಹಿತನ
ಒಡಗೂಡಿ ಬಂಡಿಗಳ ದಂಡಯಾತ್ರೆಯ ನಡುವೆ
ನುಸುಳಿ ನರಳಿ ಪ್ರಯಾಣ ಸಾಗಿತ್ತು.
ಅವನು ಅವನಷ್ಟಕ್ಕೆ ಬಂಡಿ ಓಡಿಸುತ್ತಿದ್ದ. ಹಿಂದೆ
ಕೂತ ನನಗೆ ಸೂರ್ಯನ ಮರೆ
ಮಾಚಿ ಕೂರುವುದ ಬಿಟ್ಟರೆ ಬೇರೇನೂ
ಕೆಲಸವಿಲ್ಲ. ಕಣ್ಣು ತಂಪ ಬಯಸಿ
ತಡಕಾಡುತ್ತಿದ್ದರೆ, ಮನಸ್ಸು ಮಾತ್ರ ಸಾಮಾಜಿಕ
ಸಮಸ್ಯೆಗಳ ಕೆದರಿ ಹಾಕುತ್ತಿತ್ತು. ಈ
ಬಿಸಿಲಿಗೆ ಮಳೆಯಿಲ್ಲದುದೇ ಕಾರಣ. ಮಳೆಯಿಲ್ಲದುದಕ್ಕೆ ಮರಗಳಿಲ್ಲದುದೇ
ಕಾರಣ. ಮರಗಳಿಲ್ಲದುದಕೆ ಮನುಷ್ಯನೇ ಕಾರಣ... ರಸ್ತೆ, ಸಾರಿಗೆ,
ನೀರು, ಬಡತನ, ಹೀಗೆ ಸಮಸ್ಯೆಗಳ
ಸರಪಳಿ ಒಂದಕ್ಕೊಂದು ಕೊಂಡಿ ಹೆಣೆದು ಮನದ
ಮಡಿಲೇರುತಲಿತ್ತು...
ಹಾಗಾದರೆ
ಇದಕ್ಕೆಲ್ಲ ಪರಿಹಾರ....? ಇಲ್ಲ...
ಈ ಸರಕಾರ ಸರಿಯಿಲ್ಲ...
ಮರ ನೆಡುವುದ ಬಿಟ್ಟು ಕಾಂಕ್ರೀಟು
ಕಾಡನ್ನೇ ಬೆಳೆಸಿದೆ. ಮಂಜೂರಿ ಹಣ ಅವರವರ
ಜೇಬಿಗೆ ಜಾರುತ್ತಿದೆ. ಅವರಿಗೆ ತಾವು ಕೂರುವ
ಖುರ್ಚಿ ಗಟ್ಟಿಯಿದ್ದರೆ ಸಾಕು. ಸಂಬಳವಂತೂ ತಿಂಗಳಿಗೆ
ಸರಿಯಾಗಿ ಖಾತೆಗೆ ಸೇರುತ್ತದೆ. ಯಾರಿಗೇನಾದರೆ
ಅವರಿಗೇನು...???
ಈ ದುಡ್ಡಿನಿಂದಲೇ ದೊಡ್ಡವರೆನಿಸಿಕೊಂಡವರೂ ಅಷ್ಟೆ. ತಂಪಾದ ನಾಲ್ಕು
ಗಾಲಿಯ ಗಾಡಿಯಲ್ಲಿ ಓಡಾಡುವುದೇ ಗೊತ್ತು. ಎಂಟಾಣೆಯನ್ನೂ ಬಿಟ್ಟು
ಗೊತ್ತಿಲ್ಲ... ಸಮಾಜಕ್ಕೇನಾದರೆ ಯಾರಿಗೇನು ಎಂಬಂತೆ ಬದುಕುತ್ತಿದ್ದಾರೆ. ಒಟ್ಟಿನಲ್ಲಿ
ಅವರು ಚೆನ್ನಾಗಿದ್ದರೆ ಸಾಕು.
ಹಾಗಾದರೆ
ಈ ಮಧ್ಯಮ ವರ್ಗದ
ಜನ ಸಮಾಜಕ್ಕೇನಾದರೂ ಮಾಡಿಯಾರೇ....?? ಇಲ್ಲ. ಆಗಲಿಕ್ಕಿಲ್ಲ. ಏಕೆಂದರೆ,
ದುಡಿವ ಹಣ ಅವರವರ ಸಂಸಾರಕ್ಕೆ
ಹಾಗೋ ಹೀಗೋ ಸರಿದೂಗುತ್ತದೆ. ಇನ್ನು
ಸಮಾಜದ ಸುಧಾರಣೆ ಹೇಗೆ ಮಾಡಿಯಾರು?
ಸಾಧ್ಯವಿಲ್ಲ ಬಿಡಿ.
ಮತ್ತೇ....
ಈ ಕೂಲಿ ಕಾರ್ಮಿಕರು...??
ಸಮಸ್ಯೆಗಳ ಮಡಿಲಲ್ಲೇ ಆಡಿ ಬೆಳೆದವರು ಇವರು.
ಇಂದು ದುಡಿದರೆ ನಾಳಿನ ಕೂಳು.
ಇಂಥದ್ದರಲ್ಲಿ ಸಮಾಜ ಸುಧಾರಿಸಲು ಹೊರಟರೆ
ಅವರ ಅಸ್ಥಿತ್ವ...? ನಿಜ.... ಇವರಿಂದಲೂ ಕಷ್ಟ
ಸಾಧ್ಯ. ಹಾಗಾದರೆ
ಬೆಕ್ಕಿಗೆ ಗಂಟೆ ಕಟ್ಟುವವರಾರು....!!! ಸುಮಾರು
ಒಂದು ಘಂಟೆ ಇದೇ ಆಲೋಚನೆ
ಮನವ ಕದಡಿತ್ತು. ಇನ್ನೇನು ಕಛೇರಿ ಹತ್ತಿರವಿದೆ
ಎನ್ನುವ ಮೊದಲೇ ಕೆಂಪು ದೀಪವ
ಕಂಡು ಬಂಡಿ ನಿಂತಿತ್ತು. ಬೆಂಗಳೂರಿನ
ಸಂಚಾರೀ ವ್ಯವಸ್ಥೆಯ ಬಗ್ಗೆ ವಿಶೇಷವಾಗಿ ವಿವರಿಸಬೇಕಿಲ್ಲ
ಅಂದುಕೊಳ್ಳುತೇನೆ. ಇರಲಿ...
ಹಾಗೆಯೇ
ಯಾರೋ ಬೆನ್ನು ತಟ್ಟಿದಂತಾಯಿತು. ಯಾರೆಂದು
ತಿರುಗಿದರೆ ಒಬ್ಬ ಪುಟ್ಟ ಮಗು.
ದೇಹ ನೀರ ಕಾಣದೆ ಅದೆಷ್ಟು
ದಿನವಾಗಿತ್ತೋ... ಹಪ್ಪು ಹಪ್ಪು ನಾರುವ
ಅಂಗಿ ತೊಟ್ಟಿದ್ದಳು. ಸರಿಸುಮಾರು ಹನ್ನೊಂದರ ಪ್ರಾಯವಿರಬಹುದು. ಹೆತ್ತವರ ಸುಳಿವಿಲ್ಲ ಎನಿಸಿತು.
ಅಣ್ಣಾ ಎಂದು ಮನದುಂಬಿ ಕರೆದಿದ್ದಳು.
ಮನ ಚುರ್ರ್.... ಎಂದಿತು. ಆಗ ಅವಳ
ರೂಪವಾಗಲಿ, ವೇಷ ಭೂಷಣವಾಗಲಿ ಕಣ್ಣಿಗೆ
ಕಾಣಲೇ ಇಲ್ಲ. ಎನಮ್ಮ ಎಂದೆ.
ಕೈನಲ್ಲಿರುವ ಗಂಟಿಂದ ಎರಡು ಲೇಖನಿಯ
ತೆಗೆದು ಕೈಗಿತ್ತಳು. ''ಬೇಡಮ್ಮ... ನನ್ನಲ್ಲಿ ಆಗಲೇ ಸಾಕಷ್ಟಿದೆ. ಅದನ್ನೇ
ಬಳಸುತ್ತಿಲ್ಲ. ಇದನ್ನು ತೆಗೆದುಕೊಂಡು ನಾನೇನು
ಮಾಡಲಿ'', ಎಂದೆ.... ಆಗ ಆಕೆ, ''ಅಣ್ಣ,
ಹೊಟ್ಟೆ ತುಂಬ ಉಂಡು ಎರಡು
ದಿನವಾಯಿತು. ಒಂದಾದರೂ ತಗೊಳ್ಳಿ ಅಂದಳು.
ಮನಸ್ಸಿಗೆ ದಂಗು ಬಡಿದಂತಾಯಿತು. ಈ
ಹಿಂದೆ ಸಮಾಜದ ಒಳಿತುಗಳ ಚಿಂತಿಸಿದ್ದ
ನನಗೆ ಸಮಾಜದ ಮೇಲಿರುವ ಇತರರ
ಜವಾಬ್ದಾರಿಗಳ ಆಲೋಚಿಸುವ ನಾನು, ನನ್ನದೇನು ಎಂಬ
ಪ್ರಶ್ನೆ ನನ್ನನ್ನೇ ಕಾಡಿತು.
ಅಣ್ಣಾ ಎಂದವಳು ಸ್ವಂತದವಳಾಗಿದ್ದರೆ ನನ್ನ
ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಒಮ್ಮೆ ಆಲೋಚಿಸಿದೆ.
ಆ ಕ್ಷಣಕ್ಕೆ ಅವಳು
ಸ್ವಂತವೆನಿಸಿದ್ದಳು. ಕಿಸೆಯಲ್ಲಿದ್ದ ಹಣ ತೆಗೆದು ಕೊಟ್ಟು,''ಮೊದಲು ಊಟ ಮಾಡು,
ಲೇಖನಿಯ ನೀನೇ ಇಟ್ಟುಕೋ'', ಎಂದೆ.
ಆಕೆ, ಕೊಟ್ಟ ಹಣವ ತಿರುಗಿ
ಕೈಲಿಟ್ಟು, ''ಬೇಡಣ್ಣ.... ಕರುಣೆ ಇಟ್ಟು ಕೊಡುವುದಾದರೆ
ಬೇಡವೇ ಬೇಡ. ಬಳಿಯಿದ್ದ ಬಿಸಿ
ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ.
ಇಲ್ಲದಿದ್ದರೆ ಲೇಖನಿ ಪಡೆದು ಹಣ
ಕೊಡು'', ಎಂದಳು.... ಶಹಬ್ಬಾಸ್
ಎನಿಸಿತ್ತು. ಸ್ವಾಭಿಮಾನ ಮೆರೆದ ಅವಳ ಕಂಡು
ಹೆಮ್ಮೆ ಎನಿಸಿತು. ನಾನವಳ ಅಭಿಮಾನಿಯಾದೆ. ಹಣ
ಕೊಟ್ಟು ಎರಡು ಲೇಖನಿ ಪಡೆದೆ.
ಆಗ ಅವಳ ಮೊಗದಲ್ಲಿನ ನಗು
ಕಂಡು ಮನಸಿಗೆ ಹಿತವೆನಿಸಿತು. ಉತ್ತಮ
ಸಮಾಜ ಕಾಣುವಲ್ಲಿ ಅಳಿಲ ಸೇವೆಗೈದ ಹೆಮ್ಮೆ
ಮತ್ತು ಖುಷಿ ಎರಡೂ ಬೆನ್ನೇರಿ
ಕುಳಿತಿತ್ತು.
ಸ್ನೇಹಿತರೆ,
ನಾವು ಸಮಾಜದ ಏರಿಳಿತಗಳ ಬಗ್ಗೆ
ದೂರುವುದೇನೋ ಸಹಜ, ಜೊತೆಗೆ ನಮ್ಮಿಂದ
ಸಮಾಜಕ್ಕೇನಾದರೂ ಮಾಡೋಣ ಎಂಬ ಸಂಕಲ್ಪ
ಮಾಡೋಣ. ನಿಜ, ಈಗ ನಾನೇನು
ಧರೆ ಕಡಿದು ಗುಡ್ಡೆ ಕಟ್ಟಿರುವುದಲ್ಲ.
ಆದರೆ, ಹಸಿದ ಸ್ವಾಭಿಮಾನಿ ಕಂದನಿಗೆ
ಕೈಲಾದ ನೆರವಿತ್ತೆ ಅಷ್ಟೇ.
ನಿಮ್ಮ ನಿತ್ಯ ಜೀವನದಲ್ಲಿ ಇಂತಹ
ಅದೆಷ್ಟೋ ವ್ಯಕ್ತಿತ್ವಗಳು ಎದುರಾಗಬಹುದು. ಕೆಲವೊಮ್ಮೆ ಅಂತವರು ಮಾರುವ ವಸ್ತುಗಳು
ಅಗತ್ಯವಿಲ್ಲವೆನಿಸಬಹುದು. ಆದರೂ ಕೊಂಡುಕೊಳ್ಳಿ. ನೀವು
ಕೊಡುವ ಹಣ ಒಂದು ಹೊತ್ತಿನ
ತುತ್ತಾದೀತು. ನಾವು ನಮಗಾಗಿ ವ್ಯಯಿಸುವಾಗ
ಇದಾವುದರ ಪರಿವಿರುವುದಿಲ್ಲ. ಕೆಲವೊಂದು ಅಗತ್ಯವೆನಿಸಿಕೊಂಡರೆ, ಕೆಲವೊಮ್ಮೆ ಕೊಳ್ಳುವ ಅಗತ್ಯತೆಯನ್ನು ನಾವೇ
ಹುಟ್ಟು ಹಾಕಿಕೊಳ್ಳುತ್ತೇವೆ. ಹಾಗಿರುವಾಗ, ಅನ್ನವೆಂದು ಕೈಯಿತ್ತವರಿಗೆ ಇಲ್ಲವೆಂದು ನಿರಾಶೆಗೊಳಿಸುವುದು ಬೇಡ.
ಚಿಗುರುವ
ಕನಸಿಗೆ ಹಾಲು ಹರಿಸಿ ದೊಡ್ಡಸ್ತನ
ತೋರಲಾಗದಿದ್ದರೂ, ಗಂಜಿ ಕೊಟ್ಟು ಮಾನವೀಯತೆಯ
ಮೆರೆಯೋಣ. ಸಮಾಜವನ್ನು ಒಬ್ಬನಿಂದ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದೇನೋ ನಿಜ. ಆದರೆ, ಬದಲಾವಣೆಯ
ಹಾದಿ ಹಿಡಿವುದು ಪ್ರತಿಯೊಬ್ಬನಿಂದಲೂ ಸಾಧ್ಯವಿದೆ.
ಬದಲಾವಣೆ
ನಮ್ಮಿಂದಲೇ ಆಗಲಿ.

2 comments:
ಸುಪರ್. ಹಾರ್ಟ್ ಟಚೆಬಲ್
ಜೀವನ ಕಲಿಸುವ ಅನುಭವ, ಅನುಭವ ಕಲಿಸುವ ಪಾಠ ಬಹಳಷ್ಟು ಬಾರಿ ನಮ್ಮ ಆಲೋಚನಾ ದಿಕ್ಕನ್ನು ಬದಲಾಯಿಸುತ್ತದೆ.
ಚಂದದ ಬರಹ!
Post a Comment