ಹಸಿದ ಹೊಟ್ಟೆ ಹೇಳಿಕೊಟ್ಟ ಪಾಠವಿದು ನೋಡಿರಿ,
ಪಠ್ಯದಲ್ಲಿ ಸಿಗದು ನಿಮಗೆ, ಗಮನವಿಟ್ಟು ಕೇಳಿರಿ.
ಜಾತಿ ಮತ ಪಂಥ ನೋಡಿ ನೋವು ಬರದು ಎಂದಿಗೂ
ಸಿರಿ, ಬಡವ ಎಂದು ಅಳೆದು ಸುಖವು ಸಿಗದು ಯಾರಿಗೂ.
ಬದುಕು ಒಂದು ಜ್ಞಾನ ಯಜ್ಞ ಎಂದು ತಿಳಿದು ನಡೆದರೆ,
ಸ್ವರ್ಗ ಸುಖವು ಇಲ್ಲೇ ಇಹುದು ಕೇಳಿರಣ್ಣ ಒಮ್ಮೆಲೆ.
ಕಷ್ಟವಿರದೆ ಗೆಲುವು ಸಿಗದು, ನಷ್ಟ ಎದುರು ಬರುತಿರೆ,
ಕತ್ತಲಾಚೆ ಬೆಳಕ ಹೊನಲು, ನೀನು ಬಿಡದೆ ನಡೆದಿರೆ.
ಬಂಧು ಬಳಗ ಎಲ್ಲ ಸೊಗಸು ಗೆಲುವು ನಿನ್ನ ಜೊತೆಗಿರೆ,
ಬದುಕು ಒಂದು ಡೊಂಬರಾಟ ಯಶದ ಫಲವು ಸಿಗದಿರೆ.
ಜಗದ ನಿಯಮ ಬದಿಗೆ ಒತ್ತಿ ನಡೆಯಲಾರೆ ಎಂದಿಗೂ
ಪ್ರೀತ ಭಾವ ಮನದಲಿರಲು ಬದುಕು ಸೊಗಸು ಇಂದಿಗೂ.
ಎಲ್ಲೆ ಮೀರಿ ಹಾರಲಾರೆ ರೆಕ್ಕೆ ಬಲಿತ ಮರು ಕ್ಷಣ.
ಪಕ್ವವಾಗು ಯತ್ನದೊಡನೆ ಇರಲಿ ಕನಸು ಅನುದಿನ.
✍️ಕೃಷ್ಣ ಗುಮ್ಮಾನಿ.







