Monday, May 25, 2015

ನಾ ಕಂಡಂತೆ ಪ್ರೀತಿ


ಒಂದು ಮುದ್ದಾದ ನಾಯಿ ಮರಿ. ಕುಯ್ ಎಂದು ಗೋಗರೆಯಿತ್ತು. ವಿಪರೀತ ಮಳೆ ಬೇರೆ. ಚಳಿ ತಾಳದೆ ಅಗಲದೆಲೆಯ ಮರದಡಿಯಲ್ಲಿ ಆಸರೆಯ ಪಡೆದಿತ್ತು. ಜೊತೆಗೆ ಹಸಿದ ಹೊಟ್ಟೆ ಕಾಡಿತ್ತು. ನೆನೆದ ಮೈಯ್ಯಲ್ಲಿ ಗೊಣೀ ಚೀಲವ ನೀರಿನಿಂದೆಟ್ಟಂತೆ ತೋರುತ್ತಲಿತ್ತು ಆ ಮರಿ ನಾಯಿ.

ಆ ಮುದ್ದು ಮರಿಯ ಕಂಡಾಗ ಎನ್ನ ತುಂಬಿದ ಹೊಟ್ಟೆಯೂ ಚುರ್ ಎನ್ನುತ್ತಿತ್ತು. ಹತ್ತಿರ ಹೋದರೆ ಮೈಯ್ಯಾಡಿಸಿ ಒಮ್ಮೆ ಗುರ್ ಗುಟ್ಟ ಮರಿ ಕ್ಷಣ ಮಾತ್ರದಲ್ಲಿ ನನ್ನೊಡನೆ ಸ್ನೇಹವ ಬೆಸೆದಿತ್ತು. ಅಲ್ಲೇ ಹತ್ತಿರದಲ್ಲಿದ್ದ ಅಂಗಡಿಯಿಂದ ಬಿಸ್ಕತ್ತು ತಂದು ಕೈತುತ್ತಿಟ್ಟಿದ್ದೆ. ಧನ್ಯತಾ ಭಾವದಿಂದೊಮ್ಮೆ ದಿಟ್ಟಿಸಿ ನನ್ನನ್ನೇ ನೋಡಿದ ಮರಿ ಹತ್ತಿರ ಬಂದು ಕಾಲ್ತುದಿಯನ್ನೊಮ್ಮೆ ನೆಕ್ಕಿತ್ತು. ಇನ್ನೇನು ಹೊರಡೋಣವೆಂದು ಕಾಲ್ತೆಗೆದರೆ ನನ್ನನ್ನೇ ಹಿಂಬಾಲಿಸಿತು. ಯಾಕೋ ಬಿಟ್ಟು ಬರಲು ಮನಸಾಗಿರಲಿಲ್ಲ. ಮನೆಗೆ ಕರೆತಂದು ಅಮ್ಮ ಕರೆದಿಟ್ಟ ಹಾಲನ್ನು ನಾಯಿಯ ಮುಂದಿಟ್ಟಿದ್ದೆ. ಕ್ಷಣಮಾತ್ರದಲ್ಲಿ ತಟ್ಟೆ ಬರಿದಾಗಿತ್ತು. ದಿನ ಕಳೆದಂತೆ ನಮ್ಮಿಬ್ಬರ ನಡುವಿನ ಆತ್ಮೀಯತೆ ಹೆಚ್ಚಿತು. ನಾಯಿಗೆ ನಾನೆಂದರೆ ಅತಿಯಾದ ಪ್ರೀತಿ. ನನಗೂ ಅಷ್ಟೇ. ಹಸಿದಾಗ ಅನ್ನವಿತ್ತವನಿಗೆ ನಿಯತ್ತಿನ ಬಳುವಳಿಯ ಕೊಟ್ಟಿತ್ತು.

ನೋಡಿ ಸ್ನೇಹಿತರೆ. ಪ್ರೀತಿ ಎಂದರೆ ನಂಬಿಕೆ. ನಾವು ಯಾರಲ್ಲಿ ನಂಬಿಕೆ ಇಡುತ್ತೇವೆಯೋ ಅವರನ್ನು ನಮಗರಿವಿಲ್ಲದೆಯೇ ಆತ್ಮೀಯತೆಯಿಂದ ಪ್ರೀತಿಸುತ್ತೇವೆ. ಆದರೆ ಅತೀ ಜ್ಞಾನದಿಂದಲೋ ಅಥವ ಅಜ್ಞಾನದಿಂದಲೋ ಪ್ರೀತಿಯ ವ್ಯಾಖ್ಯಾನ ಅರಿವಲ್ಲಿ ವಿಫಲರಾಗುತ್ತಿದ್ದೇವೆ. ಪ್ರೀತಿ ಎಂದರೆ ಅದು ಹೆಣ್ಣು ಗಂಡಿನಲ್ಲಿ ಮಾತ್ರ ಇರುವ ಅಂಶವೆಂದುಕೊಂಡಿದ್ದೇವೆ. ತಪ್ಪು ತಿಳುವಳಿಕೆ ನಮ್ಮ ನೆಂಟನಾಗಿದ್ದಾನೆ.

ಅಪ್ಪ, ಅಮ್ಮ, ಅಣ್ಣ, ತಮ್ಮ, ನೆಂಟರು, ಇಷ್ಟರು, ಪ್ರಾಣಿ, ಪಕ್ಷಿ, ಮರ, ಗಿಡ, ಗಂಟಿ, ಹೀಗೆ ವಸ್ತು ವ್ಯಕ್ತಿ ಎಲ್ಲರೂ / ಎಲ್ಲವೂ ಪ್ರೀತಿ ಪಾತ್ರರೇ. ಇದನ್ನು ಅರಿವ ಪ್ರಯತ್ನ ನಮ್ಮಿಂದಾಗಬೇಕಿದೆ.

ಸ್ನೇಹಿತರೇ................................
ಪ್ರೇಮಿಗರ ದಿನ ಪ್ರತಿಯೋಬ್ಬರನ್ನು ಪ್ರೀತಿಸುವಂತೆ ಪ್ರತಿಯೋಬ್ಬನನ್ನೂ ಪ್ರೆರೇಪಿಸಲಿ.

ಅಮ್ಮನ ಮಡಿಲು

ಮಗುವಾಗಿ ಮಲಗುವಾಸೆ ಆ ನಿನ್ನ ಮಡಿಲಿನಲಿ.
ತುತ್ತಿಟ್ಟು ಸಲಹೆನ್ನ ಮನದುಂಬಿದ ಪ್ರೀತಿಯಲಿ.

ಕನಸಾಗಿ ಕಾಡುವೆನು
ನನಸಾಗಿ ಬೇಡುವೆನು
ಅಪ್ಪುಗೆಯ ಮೈ ಅರಸಿ
ಹಗಲಿರುಳು ಕಾಯುವೆನು.

ಚುಟುಕೆ ಪ್ರೀತಿಯು ಸಾಕು
ಮುಷ್ಠಿ ನಂಬಿಕೆ ಬೇಕು.
ಕೈ ಅಗಲ ಜೀವನದಿ
ಬೆರಳ ಸ್ನೇಹವು ಬೇಕು.

ಬಾ ಒಲವೆ ಬಳಿ ಒಮ್ಮೆ
ಬಂದು ನೀ ನಗು ಒಮ್ಮೆ
ಮುತ್ತಿಟ್ಟು ಮನ ಕೊಟ್ಪು
ಪ್ರೀತಿ ಸಾಗರದಲಿ ನಲಿ ಒಮ್ಮೆ.

''ಕಾವ್ಯ ಕನ್ನಿಕೆ''


ಕನಸಿನಲಿ ಬಂದವಳು
ಸಂತಸವ ತಂದವಳು
ಭಾವನೆಯ ಬಂಧದಲಿ
ಕಾವ್ಯ ಕನ್ನಿಕೆಯವಳು.

ಬೆರಗಾಗಿ ನಿಂತಿರಲು
ಬಳಿ ಕರೆದು ಪ್ರಾರ್ಥಿಸಲು
ಒಪ್ಪಿ ಅಪ್ಪಿಹಳೆನ್ನ
ಕಾವ್ಯ ಕನ್ನಿಕೆಯವಳು.

ಮುದ್ದಿಸಲು ಮನ ತಣಿಸಿ
ಷ್ರೀತಿಸಲು ಮೈ ಬಳಸಿ
ಕೆಣಕಿದಳು ಮನ ಎನ್ನ
ಬೆಳಗು ಹರಿಯುವ ಮುನ್ನ.

ಬಳಿ ಬಂದು ಮುತ್ತಿಟ್ಟು
ಮುದ ಅವಳ ಮೈಕಟ್ಟು
ಕನಸಿನಲೇ ಕಂಡೆ ನಾ
ಕಾವ್ಯ ಕನ್ನಿಕೆಯವಳು.

ಹೇಳ ತೀರದು ಇಂದು
ಕೇಳಬಾರದು ಬಂಧು
ಕನಸಿನಲಿ ಬಂದವಳು
ಕಾವ್ಯ ಕನ್ನಿಕೆಯವಳು.

''ಒಡಲ ಹಸಿವು''


ಕರಿ ಮೊಗದ ಕಣ್ಣಲ್ಲಿ ಇಳಿದಿತ್ತು ಹನಿಯೊಂದು.
ಒಡೆದಿತ್ತು ಒಡಲಸಿವು ಬಿಸಿಲ ಬೇಗೆಯಲಿ ಬೆಂದು.
ಕರೆದಿತ್ತು ಕೈ ಒಂದು ತುತ್ತನೀಯುತ ಮುಂದು.
ಬರೆದಿತ್ತು ಹಣೆಯಲ್ಲಿ ಅರೆ ಹೊಟ್ಟೆ ಅದಕಂದು.

ನಾ ಬೇಡುವುದು ತಪ್ಪಲ್ಲ.
ನೀ ಬೇಡಿದೊಡೆ ಒಪ್ಪಲ್ಲ
ಬೇಡಿ ಬದುಕನು ಕಂಡ
ಆ ಮಗುವು ನನದಲ್ಲ...

ಈ ಪರಿಯ ಮನಸಿನೊಳು
ನಾ ಕಂಡ ಕನಸಿನೊಳು
ಭಾರತ ಭಾರತವಲ್ಲ
ಬಿಗುಮಾನ ನನಗಿಲ್ಲ.

ಓ ಮನವೆ ಕೇಳೊಮ್ಮೆ
ಕೊಡು ನೀನು ಜಗಕೊಮ್ಮೆ
ಕೈಲಿರುವ ತುತ್ತೊಂದ
ಬದುಕಲಾ ಕಂದ.

“ದೇಶದ ಪ್ರಗತಿಯಲ್ಲಿ ನಮ್ಮ ದೇಹದ ಪಾತ್ರ”


“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬಂತೆ ಈ ತಾಯ್ನಾಡಲ್ಲಿ ಜನಿಸಿದ ನಮಗೆಲ್ಲ ಈ ದೇಶ ಸ್ವರ್ಗದಂತೆ ಭಾಸವಾಗುವುದು. ಹೆತ್ತ ತಾಯಿ ದೇವತೆಯಂತೆ ತೋರುವಳು. ಹೆತ್ತ ತಾಯಿಯಂತೆ ಹೊತ್ತ ಈ ನಾಡು ಸ್ವರ್ಗಕ್ಕಿಂತಲೂ ಮಿಗಿಲೆನಿಸುವುದು. ಈ ತಾಯ್ನಾಡ ರಕ್ಷಣೆಗೆ ಅದೆಷ್ಟೋ ಜೀವಗಳು ನೆತ್ತರು ಹರಿಸಿ ಹುತಾತ್ಮರೆನಿಸಿಕೊಂಡಿದ್ದಾರೆ. ತಮ್ಮ ಕುಟುಂಬ ಕಳೆದು ಕೊಂಡವರೊಂದಿಷ್ಟಾದರೆ, ಕುಟುಂಬವನ್ನು ಹಾದಿ ಮಧ್ಯ ಬಿಟ್ಟವರೊಂದಿಷ್ಟು. ಇದಾವುದೂ ಅವರವರ ಸ್ವಾರ್ಥಕ್ಕಾಗಿ ಅಲ್ಲ. ದೇಶ ಕಟ್ಟುವಲ್ಲಿ, ಕಟ್ಟಿದುದ ಉಳಿಸುವಲ್ಲಿ ನಿಸ್ವಾರ್ಥ ಸೇವೆ ಅವರದಾಗಿತ್ತು. ಇಷ್ಟೆಲ್ಲ ಕಷ್ಟಪಟ್ಟು ಪಡೆದ ಈ ಸ್ವತಂತ್ರ ದೇಶವನ್ನು ಉಳಿಸಿಕೊಂಬಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ.

ಏಳ್ಗೆಯ ಪಥದಲ್ಲಿ ಸಾಗಬೇಕಿದ್ದ ನಾವು ಅದರ ವಿರುದ್ಧ ಮುಖ ಮಾಡಿ ನಿಂತಿರುವುದು ವಿಷಾದನೀಯ. ಈಗಿರುವುದು ಹಿರಿಯರು ತಂದುಕೊಟ್ಟ ಸ್ವತಂತ್ರ ದೇಶವೇನೋ ಸರಿ. ಆದರೆ ಅದನ್ನು ಉಳಿಸಿಕೊಂಬಲ್ಲಿ ನಮ್ಮ ಕೊಡುಗೆ ಏನಿದೆ ಎಂಬುದನ್ನು ಪ್ರಮಾಣಿಸಿ ನೋಡಬೇಕಿದೆ. ಸುವ್ಯವಸ್ಥಿತ ಆಡಳಿತಕ್ಕಾಗಿ ನಮ್ಮವರಲ್ಲೇ ಒಬ್ಬರನ್ನು ಜನ ನಾಯಕನನ್ನಾಗಿಸಿ ಚುನಾಯಿಸಿ ಮಂತ್ರಿಯಾಗಿಸಿಕೊಂಡಿದ್ದೇವೆ. ಹಾಗೆಂದ ಮಾತ್ರಕ್ಕೆ ಮಂತ್ರಿ ಸ್ಥಾನದಲ್ಲಿ ಕುಳಿತವನೇ ನಮ್ಮ ಮನೆಯ ಕಸವನ್ನೂ ಗುಡಿಸಬೇಕೆಂದು ಬಯಸುವುದು ಎಷ್ಟರ ಮಟ್ಟಿಗೆ ಸರಿ…?

ಮನುಷ್ಯ ಸಂಘ ಜೀವಿಯೇನೋ ನಿಜ.ಇತರರ ಸಹಾಯ ಸಹಕಾರ ಇಲ್ಲದೆ ಜೀವಿಸುವುದು ಕಷ್ಟ ಸಾಧ್ಯ. ಹಾಗೆಂದ ಮಾತ್ರಕ್ಕೆ ಇನ್ನೊಬ್ಬನ ಸಹಾಯವನ್ನೇ ಅರಸಿ ಕೂರುವುದು ಸರಿಯಲ್ಲ. ನಾವು ನಮ್ಮ ಜೀವನಕ್ಕೆ ಎಲ್ಲರ ಸಹಕಾರ ಬಯಸುತ್ತೇವೆ. ಜೀವನದಲ್ಲಿ ಸ್ವಲ್ಪ ಕಷ್ಟ ಕಂಡರೂ ಇನ್ನೊಬ್ಬರ ಸಹಾಯ ಬೇಡುತ್ತೇವೆ. ನಮ್ಮ ಪ್ರಕಾರ ಇತರರು ನಮ್ಮ ಸಹಾಯಕ್ಕಾಗಿಯೇ ಹುಟ್ಟಿದವರು, ನಮಗಾಗಿಯೇ ಬದುಕುತ್ತಿದ್ದಾರೆ, ನಾವು ಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಅವರ ಕರ್ತವ್ಯ ಎಂದು ಭಾವಿಸುತ್ತೇವೆ. ದಿನ ಬೆಳಗಾದರೆ ಸರಕಾರ ನಮಗಾಗಿ ಏನು ಘೋಷಿಸಿದೆ, ಏನೆಲ್ಲ ಸರಕಾರದಿಂದ ಲಾಭ ಪಡೆಯಬಹುದು ಎಂದು ಕಾಯುತ್ತಲಿರುತ್ತೇವೆ. ಆದರೆ ನಾವು ಮಾತ್ರ ಯಾರಿಗೂ ಕಣದಷ್ಟೂ ಸಹಾಯ ಮಾಡುತ್ತಿಲ್ಲ.
ಹೀಗೊದು ಅನುಭವವನ್ನು ಹಂಚಿಕೊಳ್ಳುತ್ತೇನೆ ಸ್ನೇಹಿತರೆ……

ಒಂದು ಪುಟ್ಟ ಹಳ್ಳಿ. ಹತ್ತಾರು ಮನೆಗಳು. ನೂರಾರು ಜನರು. ಹಳ್ಳಿಯಾದ್ದರಿಂದ ಅಭಿವೃದ್ಧಿಯ ಹಾದಿ ಕಾಣದ ಪ್ರದೇಶ ಅದು. ಆ ಊರಿನಲ್ಲೊಬ್ಬ ಪುಟ್ಟ ಬಾಲಕ. ಓದು ಬರಹದಲ್ಲಿ ಬಲು ಚುರುಕು. ತನ್ನ ಹತ್ತನೇ ತರಗತಿಯವರೆಗಿನ ಶಿಕ್ಷಣವನ್ನು ಅದೇ ಊರಿನಲ್ಲಿ ಸರಕಾರಿ ಶಾಲೆಯಲ್ಲಿ ಮುಗಿಸಿದ್ದ. ಸರಕಾರಿ ಶಾಲೆಯಾದ್ದರಿಂದ ಅಷೊಂದು ಖರ್ಚು ಕಂಡಿರಲಿಲ್ಲ. ಆದರೆ ಹೆಚ್ಚಿನ ವಿದ್ಯಾಭ್ಯಾಸ ಪರ ಊರಿಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೇನು ಮಾಡುವುದು ? ಮನೆಯಲ್ಲಿ ಕಿತ್ತು ತಿನ್ನುವ ಬಡತನ. ನೆಂಟರ ಮೇಲಿನ ಒಲವಿದ್ದರೂ, ಅಕ್ಕಿ ಮೇಲಿನ ಪ್ರೀತಿ. ಹಸಿವಾಗಿದ್ದು ಒಂದು ತುತ್ತು ಹೆಚ್ಚು ತಿಂದರೆ ನಾಳೆಗೇನು ಎಂಬುದು ಪ್ರಶ್ನಾರ್ಥಕವಾಗಿ ಕಾಡುತ್ತಿತ್ತು. ಇಂಥಹ ಪರಿಸ್ಥಿತಿಯಲ್ಲಿ ಆ ಬಾಲನ ಉನ್ನತ ವ್ಯಾಸಂಗ ಇವನ ಸಂಘವ ತೊರೆಯುವ ಹಂತದಲ್ಲಿತ್ತು. ಆದರೆ, ಹುಟ್ಟಿಸಿದ ದೇವ ಹುಲ್ಲು ಮೇಯಿಸಿಯಾನೇ... ಎಂಬಂತೆ ಆತನ ಬೆನ್ನೆಲುಬಾಗಿ ಒಂದು ಸಂಸ್ಥೆ ನಿಂತಿತ್ತು. ಅವನ ವಿದ್ಯೆಯ ಸಂಪೂರ್ಣ ಜವಾಬ್ಧಾರಿಯನ್ನು ಹೊತ್ತ ಸಂಸ್ಥೆ ಅವನಿಗೆ ಒಂದು ಒಳ್ಳೆಯ ಉದ್ಯೋಗ ಸಿಗುವ ತನಕ ಎಲ್ಲ ರೀತಿಯ ಸಹಕಾರ ನೀಡಿತ್ತು.

ನೋಡಿ ಸ್ನೇಹಿತರೆ, ರಸ್ತೆ ಬದಿಯಲ್ಲಿ ನಿಂತು ಬೇಡುವ ಜನರಿಗೆ ಎಂಟಾಣೆ ಹಾಕಲು ಹಿಂದು ಮುಂದು ನೋಡುವ ಜನರೇ ತುಂಬಿರುವಾಗ ಈತನಿಗೆ ಆ ಸಂಸ್ಥೆ ಏನೆಲ್ಲ ಮಾಡಿತ್ತು. ಋಣ ಮುಕ್ತನಾಗಲು ಅದೆಷ್ಟು ಜನ್ಮವೆತ್ತರೂ ಕಡಿಮೆಯೇ. ಆದರೆ ಆತ ಉದ್ಯೋಗ ದೊರೆತೊಡನೆ ಈ ಸಂಸ್ಥೆಯನ್ನು ನೆನೆಸಿಕೊಳ್ಳಲೂ ಇಲ್ಲ. ಎಂತಹ ಕೃತಘ್ನ ಜೀವಿ ಇರಬೇಡ ಆತ. ಹಸಿದಾಗ ಅನ್ನವಿತ್ತವರ ನೆನೆಯದವ ಅದಾವ ನರಕ ಕಂಡಾನೋ.....?

ಇದು ಇಂದಿನ ಭಾರತದ ಒಂದು ಮಗ್ಗಲು. ಜನ ತಮಗೆ ಏನು ಸಿಕ್ಕುವುದು ಎಂದು ಯೋಚಿಸುವರೋ ಹೊರತು ನಮ್ಮಿಂದ ಏನು ಆಗಬೇಕು ಎಂಬುದನ್ನು ಅರಿಯರು. ದೇಶ ತನಗೇನು ಕೊಟ್ಟಿದೆ / ಕೊಡುತ್ತೆ ಎಂದು ಅರಸುತ್ತಾ ಕೂರುತ್ತಾರೋ ಹೊರತು ದೇಶಕ್ಕೆ ನಮ್ಮಿಂದ ಏನು ಕೊಡುಗೆ ನೀಡಬೇಕು ಎಂಬುದನ್ನು ಯೋಚಿಸುವುದಿಲ್ಲ. ಇದೇ ಇಂದಿನ ಈ ಭಾರತಕ್ಕೆ ಕಾರಣ.
ಬಂಧುಗಳೇ... ಈ ದೇಹವನ್ನೇ ದೇಶ ಎಂದಿಟ್ಟುಕೊಳ್ಳಿ. ದೇಹ ಶುಚಿ ಕಾರ್ಯ ಮೊದಲಾಗಲಿ. ದೇಹಕ್ಕೆ ಮಾಡುವ ಊಟೋಪಚಾರಗಳು ದೇಶಕ್ಕೂ ಆಗಲಿ. ಜೀವನ ಕಟ್ಟುವಲ್ಲಿ ಸಹಕರಿಸಿದವನ್ನು ನೆನೆಸಿ ನಮ್ಮಿಂದಾದ ಪ್ರತಿ ಉಪಕಾರ ಮಾಡೋಣ. ಎಲ್ಲವನ್ನೂ ಇತರರಿಂದ ಬಯಸುವ ಬದಲು, ನಮ್ಮಿಂದಾದದ್ದನ್ನು ದೇಶಕ್ಕಾಗಿ ಕೊಡೋಣ. ಜೊತೆಗೆ ನಮ್ಮನಮ್ಮ ಕರ್ತವ್ಯ ಮಾಡೋಣ. ಮೊದಲು ನಾನು ಒಳ್ಳೆಯವನಾಗಬೇಕು. ದೇಶಕ್ಕೆ ನನ್ನಿಂದಾಗುತ್ತಿರುವ ಕೆಟ್ಟದ್ದನ್ನು ನಿಲ್ಲಿಸಬೇಕು. ಎಲ್ಲರೂ ಇದೇ ನಿಟ್ಟಿನಲ್ಲಿ ಜೀವಿಸ ತೊಡಗಿದರೆ ದೇಶಕ್ಕೆ ಒಳ್ಳೆಯದನ್ನು ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ಕೆಟ್ಟದ್ದನ್ನು ನಿಲ್ಲಿಸಿದರೆ ಅದೇ ದೇಶಕ್ಕೆ ನಾವು ಕೊಡುವ ಮೊದಲ ಕೊಡುಗೆ. ನಾನು ಒಳ್ಳೆಯವನಾದರೆ ದೇಶ ತನ್ನಿಂತಾನೆ ಒಳ್ಳೆಯದಾಗುತ್ತೆ.

ಬನ್ನಿ ಸ್ನೇಹಿತರೇ, ಕೈ ಜೋಡಿಸಿ. ನಮ್ಮದೇ ಹಾದಿಯಲ್ಲಿ ದೇಶವನ್ನು ಕಟ್ಟೋಣ. ದೇಶದ ಪ್ರಗತಿಯಲ್ಲಿ ನಮ್ಮ ದೇಹದ ಪಾತ್ರವೂ ಇರಲಿ. ಕೃತಜ್ಞತೆಯ ಬಾಳು ನಮ್ಮ ನಿಮ್ಮೆಲ್ಲರದಾಗಲಿ.
ಬದಲಾವಣೆ ನಮ್ಮಿಂದಲೇ ಆಗಲಿ.

ವಿರಹ ಗೀತೆ.


ಪ್ರೀತಿಯೆಂಬುದು ಆಟವಲ್ಲ.
ನೀ ಕೋಡುವ ಕಾಟವೋ ಎಂಬುದು ನನಗೆ ಗೊತ್ತಿಲ್ಲ.
ನಾ ಬೇಡುವ ಹುಡುಗನಾದದ್ದೇನೋ ನಿಜ,
ಹಾಗೆಂದ ಮಾತ್ರಕ್ಕೆ ನೀ ಕಾಡುವ ಹುಡುಗಿಯಾಗಲೇಬೇಕೆಂದೇನಿಲ್ಲ.
ಒಪ್ಪಿಗೆಯಿದ್ದಲ್ಲಿ ಹುಂ ಎನ್ನು....
ಉಹುಹುಂ ಎಂದು ಗೋಡೆಯ ಮೇಲಿನ ದೀಪವಾಗದಿರು ಗೆಳತೀ.

ಆಯ್ಕೆಗಿರಬಹುದು ಬಹುಜನರು ನಿನಗಾಗಿ,
ಆದರೆ ನನಗೆ ನೀನೇ ಆಯ್ಕೆ.
ಮಾತಿಲ್ಲದ ದಿನಗಳು ಮರುಕಳಿಸುತಿದೆ ಮತ್ತೆ
ಆ ಹಿಂದಿನ ಕರಾಳ ದಿನಗಳಂತೆ.

ಪ್ರೀತಿಯೆಂಬುದು ನೀ ಆಡ ಬಯಸುವ ಆಟವಲ್ಲ.
ಗೆದ್ದರೆ ನನಗೆ ಇಲ್ಲದಿರೆ ಗೆಲುವೇ ನಿನಗೆ ಎನ್ನಲು,
ಪಂದ್ಯಕ್ಕಿಟ್ಟ ದ್ರೌಪದಿ ನೀನಲ್ಲ.
ಕಾಡದಿರು ಗೆಳತೀ....ಓ ನನ್ನ ಮನದೊಡತಿ.

ಅಮ್ಮ ಯೂ ಆರ್ ಗ್ರೇಟ್


ಅಂದು ಹಸಿವಿಲ್ಲ / ಇಷ್ಟವೇ ಇಲ್ಲ ಎಂಬ ಅಮ್ಮನ ಮಾತಿನ ಅಂತರಂಗ ಇಂದು ಅರಿವಾಗುತಿದೆ. ನಮ್ಮ ಹೊಟ್ಟೆ ತುಂಬುವ ಇಚ್ಛೆಯಲಿ ಆಕೆಗೆ ಹಸಿವಾಗುವುದೇ ನಿಂತಿತ್ತು. ನಾವೇನೋ ಹೊರಗೆ ದುಡಿದು ತರುವವರು ಎಂಬ ಹಣೆಪಟ್ಟಿ ಕಟ್ಟಿ ಕೊಂಡಿದ್ದೇವೆ. ಒಮ್ಮೆ ಯೋಚಿಸಿ ಗೆಳೆಯರೇ.... ನಮಗೆ ಎಂಟಕ್ಕೆ ಮೂಡುವ ಸೂರ್ಯ ಆಕೆಗೆ ಐದಕ್ಕೇ ಮೂಡುವನು. ಎದ್ದಾಗಲಿನಿಂದ ನಿಸ್ವಾರ್ಥ ಸೇವೆ ಅವಳದು. ಆರೋಗ್ಯ ಕೆಟ್ಟರು ನಮ್ಮ ಚಾಕರಿ ತಪ್ಪದು. ನಮ್ಮ ಹೊಟ್ಟೆ ಹಸಿದರೂ ತುಂಬಿಸುವುದು ಆಕೆಯ ಕೆಲಸ. ಮೇಲಿಂದ ಬೈಗುಳದ ಮಂತ್ರಾಕ್ಷತೆ ಬೇರೆ. ಯಾರಾದರೂ ಅಮ್ಮನ ವಿಚಾರಿಸಿದರೆ ಕೃತಘ್ನತೆಯ ಕುಷಲೋಪರಿ. ನಿಜವೆಂದರೆ ನಮ್ಮೆಲ್ಲರ ಕ್ಷೇಮ, ಯಶಸ್ಸು, ಜ್ಞಾನ, ಐಶ್ವರ್ಯಕ್ಕೆ ನಮಗಿಂತ ಆಕೆಯದು ಸಿಂಹಪಾಲಿನ ಕೊಡುಗೆ.
ನನ್ನ ಏಳ್ಗೆಗೆ ಅವಳ ಜೀವ(ನ)ವ ಮುಡಿಪಾಗಿಟ್ಟ ಅಮ್ಮನಿಗೆ ನನ್ನದೊಂದು ಸಲಾಮ್.