Wednesday, December 31, 2014

ಕನಸಿನ ಕೂಸು: ಕನಸಿನ ಕೂಸು: ಸಂಬಂಧಗಳ ಕೊಂಡಿ.

ಕನಸಿನ ಕೂಸು: ಕನಸಿನ ಕೂಸು: ಸಂಬಂಧಗಳ ಕೊಂಡಿ.: ಕನಸಿನ ಕೂಸು: ಸಂಬಂಧಗಳ ಕೊಂಡಿ. : ಕಿರುಬೆರಳುಗಳು ಸೇರಿ ಬೆಸೆದ ಈ ಜೀವಗಳು , ಜೀವನದ ಸಾಗರದಲಿ ತುಸು ದೂರ ಸಾಗಿವೆ ಕೇಳು . ಸುತ್ತಮುತ್ತಲಿನ ಜಗಕೆ ಆದರ್ಶ...

ಹೊಸ ವರುಷ



!!!...ಲೋಕೇ ಭಿನ್ನಾಭಿರುಚಿಃ...!!!


ಇಲ್ಲಿ ನನ್ನ ಅಭಿರುಚಿಗೆ ತಕ್ಕಂತೆ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದೇನೆ.

ಹೊಸತನ ಅನ್ನೋದು ನಾವು ಕಂಡಲ್ಲಿ, ನಾವು ಕಂಡ ಹಾಗಿದೆ. ಇದೆಯೆಂದರೆ ಇದೆ. ಇಲ್ಲವೆಂದರೆ ಇಲ್ಲ. ಹೊಸ ವರುಷವನ್ನು ಭಾವಿಸಿದರೆ ದಿನಂಪ್ರತಿ ಕಾಣಬಹುದು. ಬಯಸಿದರೆ ಪ್ರತಿ ಕ್ಷಣ ಅನುಭವಿಸಬಹುದು. ವರುಷಕೊಮ್ಮೆ ಬದಲಾಗುವ ಇಸವಿಗೆ ಜನ ಇಷ್ಟೊಂದು ಹರುಷ ವ್ಯಕ್ತಪಡಿಸುವಾಗ, ಇಪ್ಪತ್ನಾಲ್ಕು ಗಂಟೆಗಳಿಗೊಮ್ಮೆ ಬದಲಾಗುವ ದಿನಕ್ಕೆ ಅದೆಷ್ಟು ಹರ್ಷಿಸಬೇಡ?
ಅಷ್ಟಕ್ಕೂ, ಆಚರಣೆಯ ವಿಧಿವಿಧಾನ ನೋಡಿದರೆ ಸಾರ್ವಜನಿಕವಾಗಿ ಚಟ ತೀರಿಸಿಕೊಳ್ಳಲು ಸಿಕ್ಕ ಅವಕಾಶ ಎನ್ನಬಹುದೇನೋ...!!!

ಹೊಸತು ಕಾಣುವ ಮನವಿದ್ದಲ್ಲಿ ಪ್ರತಿ ಕ್ಷಣ, ಪ್ರತಿ ಕಣ, ಪ್ರತೀ ವ್ಯಕ್ತಿ, ಪ್ರತೀ ವಸ್ತುವಿನಲ್ಲಿ ಹೊಸತನ್ನು ಕಾಣಬಹುದು, ಆನಂದಿಸಬಹುದು.

ಹಾಗೆಂದು ಆಚರಿಸುವುದೇ ತಪ್ಪು ಎನ್ನುವುದಲ್ಲ ಎನ್ನ ಭಾವ. ಆಚರಿಸುವ ವಿಧಿವಿಧಾನ ಬದಲಾಗಬೇಕಷ್ಟೇ. ಎಲ್ಲದರಲ್ಲೂ, ಎಲ್ಲ ಸಮಯದಲ್ಲೂ ಹೊಸತು ಕಾಣುವ ಮನ ನಮ್ಮದಾಗಬೇಕು. ಹೊಸವರುಷವೆಂದು ಕುಣಿದು, ಕುಡಿದು, ಕುಪ್ಪಳಿಸಿ, ಬಳಿಕ ಮತ್ತದೇ ಹಳೆಯ ಮನೋಭಾವ ಕಾಣುವ ಬದುಕುವುದನ್ನು ಬಿಡಬೇಕು. ಹೊಸತರಲ್ಲಿ ಕಾಣುವ ಹುಮ್ಮಸ್ಸು ಪ್ರತಿ ದಿನ ಪ್ರತಿ ಕ್ಷಣ ಪ್ರತಿಯೊಬ್ಬರಲ್ಲಿರಬೇಕು.

ಭಾವಿಸಿದರೆ, "ಪ್ರತಿ ದಿನವೂ ಹೊಸ ವರುಷ, ಪ್ರತಿ ಕ್ಷಣವೂ ಹೊಸ ಹುಟ್ಟು".

Tuesday, December 23, 2014

ದೇವಾಲಯವ ಕಟ್ಟಲು ಹೊರಟು ದೇಹವೇ ಕೊಚ್ಚೆಯ ಬೀಡಾಯಿತು.



ಅದು ಒಂದು ಪುಟ್ಟ ಹಳ್ಳಿ. ಬೆರಳೆಣಿಕೆಗೆ ಸಿಕ್ಕುವ ಮನೆಗಳು. ಲೆಕ್ಕ ಹಾಕ ಹೊರಟರೆ ಜನಸಂಖ್ಯೆ ಐವತ್ತು ದಾಟಿರಲಿಕ್ಕಿಲ್ಲ. ಶ್ರೀಮಂತಿಕೆಯ  ಸೊಗಡು ಕೆಲವೇ ಮನೆಗಳಿಗೆ ಬಡಿದಿತ್ತು. ವೈಜ್ಞಾನಿಕತೆಯಲ್ಲಿ ಹಿಂದುಳಿದವರು ಎಂದರೆ ತಪ್ಪಾಗಲಾರದು. ತಿನ್ನುವುದು ಗಂಜಿಯಾದರೂ ದುಡಿದೇ ತಿನ್ನಬೇಕು ಎಂಬ ಸ್ವಾಭಿಮಾನಿಗಳ ದಂಡು ಅದಾಗಿತ್ತು. ಯುವ ಜನಾಂಗ ಶಿಕ್ಷಣ, ಉದ್ಯೋಗ ಎಂದು ಪಟ್ಟಣದತ್ತ ಹೆಜ್ಜೆ ಇಟ್ಟಿದ್ದರು. ಆದರೆ ಆ ಊರಿನ ಒಂದು ಕುಟುಂಬ ಮಾತ್ರ ಎಲ್ಲರಲ್ಲೂ ವೈರುಧ್ಯ ಕಟ್ಟಿಕೊಂಡವರಾಗಿದ್ದರು. ಎಲ್ಲದೂ ತನ್ನದೇ ಅನ್ನುವ ಸರ್ವಾಧಿಕಾರದ ಭಾವನೆ ಅವರದಾಗಿತ್ತು. ಮಾನ ಮರ್ಯಾದಿಗೆ ಅಂಜುವ ಜಾಯಮಾನ ಅವರದಾಗಿರಲ್ಲಿಲ್ಲ. ಕಾರಣ ಊರಿನವರೆಲ್ಲರೂ ಅವರನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಹಚ್ಚಿಕೊಳ್ಳುತ್ತಿದ್ದರು. 

ಆ ಊರಿನ ಅಂಚಿನಲ್ಲೊಂದು ಬಸವನ ಗುಡಿಯಿತ್ತು. ತುಂಡು ಇಟ್ಟಿಗೆಗಳೆಲ್ಲ ಸೇರಿ ಬಸವನ ಮೂರ್ತಿಗೆ ಸುಭದ್ರ ಕೋಟೆ ಎನಿಸಿದ್ದವು. ಹೆಂಚಿನ ಮಾಡು. ಅಲ್ಲಲ್ಲಿ ಸೋರುತ್ತಿತ್ತು. ಮಳೆಗಾಲದಲ್ಲಿ ತೊಟ್ಟಿಕ್ಕುವ ಸೂರು ಬಸವ ಮೂರ್ತಿಗೆ ಸದಾ ಅಭಿಶೇಕ ಮಾಡುತ್ತಲಿತ್ತು.  ಸುತ್ತಲಿನ ಹತ್ತಾರು ಊರಿನ ಜನ ಆ ದೇವಳಕ್ಕೆ ನಡೆದುಕೊಳ್ಳುತ್ತಿದ್ದರು. ಕಳೆದ ಎರಡು ಮೂರು ತಲೆಮಾರಿನಿಂದ ಬಸವ ದೇವರನ್ನೇ ಮುಖ್ಯ ದೇವರನ್ನಾಗಿ ಸ್ಥಾಪಿಸಿ ವಾರಪೂಜೆ, ವಾರ್ಷಿಕ ವಿಷೇಶ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದರು. ಅಲ್ಲೇ ಅನತಿ ದೂರದಲ್ಲೊಂದು ಶಿವನಲಿಂಗವಿತ್ತು. ಹೆಸರು ರಾಮಲಿಂಗ. ಬೆಟ್ಟದ ಮಧ್ಯದಲ್ಲಿರುವ ಆ ರಾಮ ಲಿಂಗಕ್ಕೆ ಸುತ್ತಲಿರುವ ಪೊದೆಗಳೇ ಗೋಡೆ. ಬೆಳೆದು ನಿಂತ ಸಾಲು ಮರಗಳೇ ಸೂರು. ವರುಷಕ್ಕೊಂದು ಪೂಜೆ. ಹಣ್ಣು ಕಾಯಿಯೊಡಗೂಡಿದ ನೈವೇದ್ಯ. ಎಷ್ಟೊಂದು ವಿಪರ್ಯಾಸ ಅಲ್ವ? ಒಡೆಯನಾದ ಶಿವನಿಗೆ ವರ್ಷಕ್ಕೊಂದು ಪೂಜೆ ಪುನಸ್ಕಾರ, ನೈವೇದ್ಯ, ನೇಮ ಎಲ್ಲ. ಆದರೆ ಶಿವನ ವಾಹನ ನಂದಿಗೆ(ಬಸವ)..........? ಇಲ್ಲಿ ಎಲ್ಲವೂ ವಿರುದ್ಧವಾಗಿತ್ತು. ಈ ವಿಷಯದ ಬಗ್ಗೆ ಆಗಾಗ ಗುಂಪಿನಲ್ಲಿ ಚರ್ಚೆ ಆಗಿತ್ತೇ ವಿನಃ ಯಾರೊಬ್ಬರೂ ಇದರ ಹಿಂದಿರುವ ಕಾರಣವನ್ನು ತಿಳಿಯುವ ಗೋಜಿಗೆ ಹೋಗಿರಲ್ಲಿಲ್ಲ. ಇಂದಿನ ಪರಿಸ್ಥಿತಿಯ ನೋಡಿದರೆ ಹಿಂದಿನದ್ದೇ ಮುಂದುವರಿಸಿಕೊಂಡು ಬಂದಿದ್ದರೆ ಸಾಕಿತ್ತೇನೋ ಎಂದೆನಿಸುತ್ತದೆ.

ಇದೆಲ್ಲದ್ದಕ್ಕೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಮಳೆಗಾಲ ಶುರುವಾಗಿತ್ತು. ವಿಪರೀತ ಗಾಳಿ, ಧಂಗೆಬ್ಬಿಸುವ ಗುಡುಗು, ಬೆಚ್ಚಿ ಬೀಳಿಸುವ ಸಿಡಿಲು. ನಡು ರಾತ್ರಿಯಲ್ಲಿ ಬೆಳಕು ಹರಿಯಿತೋ ಎಂದು ಭಾಸವಾಗುವಂತಹ ಮಿಂಚು. ಮಲೆನಾಡ ಮಳೆಗಾಲದ ಚಂದವ ಅನುಭವಿಸಿದರೇನೆ ಗೊತ್ತಾಗೋದು. ಗೂಡಿನೊಳಗೊಕ್ಕ ಗುಬ್ಬಚ್ಚಿಯಂತೆ ಊರಿಗೂರೆ ಬೆಚ್ಚಗೆ ಕಂಬಳಿಯ ಹೊದ್ದು ಮಲಗಿತ್ತು. ಗಾಡ ನಿದ್ರೆಗೆ ಶರಣಾದ ಜನ ಬೆಳಕು ಹರಿದಾಗಲೇ ವಾಸ್ತವ ಜಗತ್ತಿಗೆ ಮರಳಿದ್ದು.

ಬೆಳಗಾಗೆದ್ದ ಜನ ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ರಾತ್ರಿ ಸೋರುತ್ತಿದ್ದ ಜಾಗದಲ್ಲಿ ಇಟ್ಟಿದ್ದ ಪಾತ್ರೆಗಳನ್ನು ತೆಗೆಯುವುದು, ಸೋರುವ ಸೂರಿಗೆ ಏನಾದರೊಂದನ್ನು ಸಿಕ್ಕಿಸಿ ಮನೆಯ ಹೆಂಗಳೆಯರ ಗುಣುಗುಣು ಮಾತಿಗೆ ಪೂರ್ಣವಿರಾಮವಿಡುವುದು, ದನಕರುಗಳ ಚಾಕರಿ ಚಾಚೂ ತಪ್ಪದೇ ಮಾಡುವುದು, ದಿನವೊಂದಕ್ಕೆ ಸಾಲುವಷ್ಟು ಹುಲ್ಲು ಕೊಯ್ದು ಹಟ್ಟಿಯ ಅಟ್ಟಕ್ಕೇರಿಸುವುದು, ರಾತ್ರಿ ಮಳೆಯ ರಭಸಕ್ಕೆ ನೆಲಕ್ಕಪ್ಪಿದ ತೆಂಗಿನ ಕಾಯಿ ಹೆಕ್ಕಿ ತರುವುದು, ತೋಟದ ಇಕ್ಕೆಲಗಳಲ್ಲಿ ಬಿದ್ದ ಸೋಗೆ ಹೆಕ್ಕಿ ಅಟ್ಟಕ್ಕೇರಿಸುವುದು, ಇದೆಲ್ಲ ಮಳೆಗಾಲದ ದಿನಗಳ ದೈನಂದಿನ ಕಾರ್ಯಗಳ ಪಟ್ಟಿಯಲ್ಲಿ ಬರುವಂತಹ ಕೆಲಸಗಳು.

ಆರಂಭಿಕ ದಿನದ ಮಳೆಗಾಲದ ದಿನವೇ ಊರಿಗೂರೇ ದಿಗ್ಭ್ರಮೆಗೊಳ್ಳುವಂತಹ ಕಾರ್ಯವೊಂದು ನಡೆದಿತ್ತು. ಊರಿನಾಚೆ ಇರುವ ರಾಮ ಲಿಂಗದಡಿಯಲ್ಲಿ ನಿಧಿ ಶೋಧ ನಡೆದಿತ್ತು. ಆಳೆತ್ತರದ ಗುಂಡಿ ತೋಡಿದ್ದ ಆ ಪುಣ್ಯಾತ್ಮ ಕಣ್ಮರೆಯಾಗಿದ್ದ. ಯಾರೋ ಒಬ್ಬ ಬೆಟ್ಟ ಸುತ್ತುವ ನೆಪದಲ್ಲಿ ಹೊದಾತ, ಈ ವಿಷಯವನ್ನು ಊರಿನ ಹಿರಿಯರ ಗಮನಕ್ಕೆ ತಂದಿದ್ದ. ಗುಂಡಿ ತೋಡಿದಾತ ಯಾರೆಂಬುದು ಯಾರಿಗೂ ಗೊತ್ತಿಲ್ಲ. ಆತನಿಗೆ ನಿಧಿ ಸಿಕ್ಕಿತೋ ಇಲ್ಲವೋ ಎಂಬುದು ಗೊತ್ತಿಲ್ಲ. ಅಂದಿನಿಂದ ಸಣ್ಣ ಕಿಡಿಯೊಂದು ಹೊತ್ತಿಕೊಂಡಿತ್ತು. ಯಾರೋ ಮುಟ್ಟಿ ದೇವಳದ ಅಶೌಚವಾಗಿದೆ. ಈ ನಿಟ್ಟಿನಲ್ಲಿಯೇ ದೊಡ್ಡ ವಿಧ್ವಾಂಸರ ಕೇಳಿ ಆ ಲಿಂಗದ ಹಿಂದಿರುವ ಸತ್ಯಾಸತ್ಯತೆಯ ತಿಳಿದು, ಬಸವನ ಗುಡಿಯಲ್ಲಿಯೇ ಸ್ಥಾಪಿಸಿ, ಬಸವನಿಗಿರುವ ಎಲ್ಲ ಪೂಜೆ ಪುನಸ್ಕಾರ ರಾಮಲಿಂಗಕ್ಕೂ ಧಕ್ಕುವಂತೆ ಮಾಡಬೇಕು ಎಂದು. ಅದರ ನಿಮಿತ್ತ ಊರಿನ ಹಿರಿಯರು ತಮ್ಮ ಪ್ರಯತ್ನ ಪಟ್ಟಿದ್ದರು ಕೂಡ. ಆದರೆ ಕೆಲವೊಂದು ಕಾರಣಗಳಿಂದ ಆ ಕೆಲಸ ಹಾಗೆಯೇ ನೆನೆಗುದಿಗೆ ಬಿದ್ದಿತ್ತು. ಇದೆಲ್ಲ ಆಗಿ ಆರೆಂಟು ವರ್ಷಗಳೇ ಕಳೆದಿರಬೇಕು.

ಈ ನಡುವೆ ಬಸವನ ಗುಡಿ ಜೀರ್ಣಾವಸ್ಥೆಗೆ ಬಂದಿತ್ತು. ಊರಿನ ಜನ ಒಪ್ಪೊತ್ತಿನ ಶ್ರಮವಹಿಸಿದರೆ ಬಸವನಿಗೊಂದು ಗುಡಿ ರೆಡಿಯಾಗುತ್ತಿತ್ತು. ಆದರೆ ಈ ವಿಷಯದಲ್ಲಿ ಊರಿನ ಜನರಲ್ಲಿ ಮನಸ್ತಾಪ ಉದ್ಭವಿಸಿತ್ತು. ಈ ಆರೆಂಟು ವರುಷದ ಹಿಂದಿನ ಘಟನೆಗೆ ಇತ್ಯರ್ಥವನ್ನು ಸೂಚಿಸಲು ಹೊರಟಿದ್ದು ನೆರೆ ಊರಿನ ಹಿರಿಯನೊಬ್ಬ. ಕಟ್ಟುವುದು ಕಟ್ಟುತ್ತೇವೆ, ಆಧುನಿಕ ರೀತಿಯಲ್ಲಿ ದೊಡ್ಡ ದೇವಾಲಯವನ್ನೇ ಕಟ್ಟಿದರಾಯಿತು ಎಂದು. . ಆದರೆ ಈ ದಿನಗಳಲ್ಲಿ ಅದು ಹೇಳಿದಷ್ಟು ಸುಲಭವಾಗಿರಲಿಲ್ಲ.

ಆತ ಪರ ಊರಿನವನಾದರೂ, ದೇವಳಕ್ಕೆ ನಡೆದುಕೊಂಬವರಲ್ಲಿ ಒಬ್ಬನಾಗಿದ್ದ. ಆಗರ್ಭ ಸಿರಿವಂತನೂ ಆಗಿದ್ದ. ಆಗ ಆತನ ಮಾತಿಗೊಂದು ಗೌರವವಿತ್ತು. ಅವನ ಮಾತಿಗೆ ಊರಿನ ಕೆಲವರು ದನಿಗೂಡಿಸಿದರು.

ಆಗಲೇ ದೇವ ಕಾರ್ಯ ಪ್ರಾರಂಭವಾಯಿತು. ಕೇರಳದ ಪ್ರಸಿದ್ಧ ಪುರೋಹಿತರನ್ನು ಕರೆಸಿ ಅಷ್ಟಮಂಗಲವೆಂಬ ಪ್ರಶ್ನೆಯನ್ನು ಕೇಳಿಸಿದ್ದಾಯಿತು. ಅವರು ಹೇಳುವ ಪ್ರಕಾರ ಹಿಂದೊಮ್ಮೆ ಈ ದೆವರ ಸನ್ನಿಧಿಯಲ್ಲಿ ರಾಜರ ಕೊಲೆಯಾಗಿದೆ. ಕೊಲೆಯಾದ ಹೆಣವನ್ನು ಬಳಿಯಿರುವ ತೊರೆಯಲ್ಲಿ ಹಾಕಲಾಗಿದೆ. ಹಾಗೆಯೇ ಹಿಂದೆ ಈ ಕ್ಷೇತ್ರದಲ್ಲಿ ಶಿವನಿಗೇ ಪ್ರಧಾನ ಪೂಜೆ ಪುನಸ್ಕಾರ ನಡೆಯುತ್ತಲಿತ್ತು. ಆದರೆ ರಾಜರ ಆಳ್ವಿಕೆಯ ಸಂದರ್ಭದಲ್ಲಿ ದಂಡೆತ್ತಿ ಬಂದವರ ಕಣ್ಣಿನಿಂದ ಶಿವಲಿಂಗವನ್ನು ರಕ್ಷಿಸುವುದಕ್ಕಾಗಿ ಗುಡಿಯಿಂದ ಅನತಿ ದೂರದಲ್ಲಿ ಪೊದೆಗಳ ಮದ್ಯೆ ಅಡಗಿಸಿ ಇಡಲಾಗಿತ್ತು. ಅಲ್ಲಿಂದಲೇ ನಮ್ಮ ಪೂರ್ವಿಜರು ಈ ರೀತಿಯ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಅಂದಿನಿಂದಲೇ ಬಸವನಿಗೆ ಪ್ರಧಾನ ಪೂಜೆ ಪ್ರಾರಂಭವಾದದ್ದು ಎಂಬುದಾಗಿ. ಇದೆಲ್ಲದರ ಪರಿಹಾರಕ್ಕೆ ಮಾಡತಕ್ಕ ದೊಡ್ಡ ಕಾರ್ಯಕ್ರಮಗಳ ಪಟ್ಟಿಯನ್ನೇ ಪುರೋಹಿತರು ಕೊಟ್ಟಿದ್ದರು.

ಅವರವರದೇ ಒಂದು ಕಮೀಟಿಯನ್ನು ರಚಿಸಿ, ರಾಮಲಿಂಗೇಶ್ವರ ಎಂಬ ಹೆಸರಿನಲ್ಲಿ
ಒಂದು ಟ್ರಸ್ಟ್ ಉದ್ಭವಗೊಂಡಿತ್ತು. ಆರಂಭದಲ್ಲಿ ಎಲ್ಲವೂ ಚೆನಾಗಿತ್ತು. ದೇವ ಆಲಯಕ್ಕೆ ಹಲವೆಡೆಯಿಂದ ನಿಧಿ ಸಂಗ್ರಗೊಂಡಿತ್ತು. ತಾವೇ ಪ್ರೇರೇಪಣೆಗೊಂಡು ಕೊಟ್ಟವರೊಂದಿಷ್ಟಾದರೆ, ಪ್ರಯತ್ನಿಸಿ ಪಡೆದದ್ದೊಂದಿಷ್ಟು. ಒಟ್ಟಿನಲ್ಲಿ ದೇವನ ಹೆಸರಿನಲ್ಲಿ ಬ್ರಹತ್ ಮೊತ್ತ ಕೂಡಿತ್ತು. ಹಣ ಕಂಡಲ್ಲಿ ಹೆಣವೂ ಬಾಯ್ಬಿಟ್ಟಿತ್ತಂತೆ ಅಂಥಹದ್ದರಲ್ಲಿ ಜನ ಸುಮ್ಮನೆ ಬಿಟ್ಟಾರೇ? ಟ್ರಸ್ಟ್ ನಲ್ಲಿ ಗುಂಪೆರಡಾಯಿತು. ದೇವರ ಹಣ ರಕ್ಷಿಸುವುದಕ್ಕೊಂದಾದರೆ, ಭಕ್ಷಿಸುವುದಕ್ಕಾಗಿ ಇನ್ನೊಂದು ಗುಂಪು. ಅವರವರಲ್ಲಿಯೇ ಹುಳುಕು, ದಿನ ಬೆಳಗಾದರೆ ಜಗಳ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗುತ್ತಿರಲಿಲ್ಲ. ಎದುರು ಬಂದರೆ ಅಪಶಕುನವೆಂಬಂತೆ ನಿಂತು ಹೋಗುವವರು ಕೆಲವಾದರೆ, ಕಂಡೊಡನೆ  ದರಿದ್ರ ಮುಸುಡಿ ಕಾಣುವುದು ಅಸಹ್ಯ ಎಂದೆಣಿಸಿ ದೂರದಿಂದಲೇ ತಮ್ಮ ಪಥವನ್ನೇ ಬದಲಾಯಿಸುವವರು ಹಲವರು. ಕೊರಳು ಪಟ್ಟಿಯ ಹಿಡಿದು ಹೊಡೆದಾಡುವಷ್ಟು ಕೀಳ ಮಟ್ಟಕ್ಕೆ ಇಳಿದಿದ್ದರು.

ದೇವಾಲಯವ ಕಟ್ಟಿ ಇಡೀ ಊರಿಗೆ ಒಳ್ಳೆಯದನ್ನು ಮಾಡಲು ಹೊರಟವರ ಮನದಾಲಯ ಕೆಟ್ಟ ಯೋಚನೆಗಳ ಕೊಚ್ಚೆಯ ಬೀಡಾಗಿತ್ತು. ಕಂಡವರು ಆಡಿಕೊಂಡು ತಿರುಗಲಾರಂಭಿಸಿದ್ದರು. ಇದೆಲ್ಲವ ಕಂಡು ನನಗನಿಸಿದ್ದು, ದೇವಾಲಯ ಅನ್ನೋದು ನಂಬಿಕೆಯ ಬೀಡಾಗಿರಬೇಕೇ ಹೊರತು ಕೆಟ್ಟ ಯೋಚನೆಗಳ ಬಿಡಾರವಾಗಬಾರದು. ನೆಮ್ಮದಿಯ ತಾಣವಾಗಿರಬೇಕು ನೆಮ್ಮದಿಗೆಟ್ಟ ಅಂಕಣವಾಗಬಾರದು. ಇಲ್ಲದ್ದನ್ನು ಬೇಡಿಕೊಂಬ ಕೇಂದ್ರವಾಗಬೇಕು, ಬಡಿದು ತಿನ್ನುವ ಬಂಡಾಯವಾಗಬಾರದು.

ಸೂರು ಸೋರುತ್ತಿದ್ದರೂ ಬಸವ ನೆಮ್ಮದಿಯಿಂದಿದ್ದ, ರಾಮ ವರುಷಕ್ಕೊಂದು ಪೂಜೆಯಲ್ಲೇ ಆನಂದದಿಂದಿದ್ದ. ಜನರು ಸುಖೀ ಜೀವನ ನಡೆಸುತ್ತಿದ್ದರು. ಆದರೆ ಈಗ ದೇವಾಲಯವ ಕಟ್ಟಲು ಹೊರಟ ಜನರ ದೇಹ ಕೊಚ್ಚೆಯ ಬೀಡಾಗಿ, ಲಜ್ಜೆಯಿಲ್ಲದ ಜೀವನಕ್ಕೆ ಶರಣಾಗಿರುವಂಥದ್ದು ಶೋಚನೀಯ.

Monday, December 22, 2014

ಕನಸಿನ ಕೂಸು: ಸಂಬಂಧಗಳ ಕೊಂಡಿ.

ಕನಸಿನ ಕೂಸು: ಸಂಬಂಧಗಳ ಕೊಂಡಿ.: ಕಿರುಬೆರಳುಗಳು ಸೇರಿ ಬೆಸೆದ ಈ ಜೀವಗಳು , ಜೀವನದ ಸಾಗರದಲಿ ತುಸು ದೂರ ಸಾಗಿವೆ ಕೇಳು . ಸುತ್ತಮುತ್ತಲಿನ ಜಗಕೆ ಆದರ್ಶವೆನಿಸಿಹರಿವರು , ಹೊಸ ...

ಕನಸಿನ ಕೂಸು: ಮುಖ ಪುಸ್ತಕ

ಕನಸಿನ ಕೂಸು: ಮುಖ ಪುಸ್ತಕ: ಕೆ ಲವು ದಿನಗಳ ಹಿಂದೆ, ಹೀಗನಿಸಿತು,” ಇಂದು ಏನಾದರೊಂದು ಒಳ್ಳೆಯ ಕೆಲಸ ಮಾಡಬೇಕು. ಅದರಿಂದ ನನ್ನ ಭವಿಷ್ಯಕ್ಕೆ ಒಳಿತಾಗಬೇಕು”, ಎಂಬುದಾಗಿ. ತಕ್ಷಣ ಹೊಳೆದದ್ದು, ಫ...

ಕನಸಿನ ಕೂಸು: ಪ್ರೇಮ ಪುರಾಣ:

ಕನಸಿನ ಕೂಸು: ಪ್ರೇಮ ಪುರಾಣ:: ಪ್ರೀತಿ ಎಂದಾಕ್ಷಣ ಅದು ಬರೀ ಪ್ರೇಮಿಗಳಿಗೆ ಮಾತ್ರ ಮೀಸಲಿರುವಂಥದ್ದು ಎಂದು ಭಾವಿಸಿದರೆ , ಅದು ಮೂರ್ಖತನದ ಪರಮಾವಧಿಯೇ ಸರಿ . ಆದರೆ , ಈ ವರ್ತಮಾನದಲ್ಲಿ ...

ಕನಸಿನ ಕೂಸು: ನಂಬಿಕೆ:

ಕನಸಿನ ಕೂಸು: ನಂಬಿಕೆ:: ನಂಬಿಕೆ ಎನ್ನೊದು ಹುಟ್ಟಿನೊಂದಿಗೆ ಬಂದದ್ದಲ್ಲ . ನಮ್ಮೋರು ಅಂತಾ ಯಾರು ನಮ್ಮನ್ನು ನಂಬೊಲ್ಲ . ನಮ್ಮ ನಡವಳಿಕೆ ಮತ್ತು   ಆದರ್ಶಗಳ ಆಚರಣೆಯಿಂದ ನಂಬಿಕೆ ಅನ...

ಕನಸಿನ ಕೂಸು: ಮೌನ ಮಾತಾದಾಗ.:-

ಕನಸಿನ ಕೂಸು: ಮೌನ ಮಾತಾದಾಗ.:-:   ನಾವು ಮೌನವಾಗಿದ್ದಾಗ ಮನಸ್ಸು ಮಾತಾಡುತ್ತೆ . ಆ ಮನಸಿನ ದನಿಯ ಆಲಿಸುವುದು ಆಹ್ಲಾದಕರವಾದಂತಹ ಮುದ ನೀಡುತ್ತೆ . ಕೆಲವೊಮ್ಮೆ ಮನಸಿನ ಮಾತಿಗೆ ನಮಗೆ ...

ಕನಸಿನ ಕೂಸು: ತಾರ ತಮ್ಯದ ಜೀವನ:-

ಕನಸಿನ ಕೂಸು: ತಾರ ತಮ್ಯದ ಜೀವನ:-: ದೊಡ್ಡೋರು ಚಿಕ್ಕೋರು , ಬಡವರು ಬಲ್ಲಿಗರು , ಅಂತೋರು ಇಂತೋರು , ಅನ್ನೋ ತಾರತಮ್ಯ ಈ ಇಂದಿನ ಜಗತ್ತಿನಲ್ಲಿ ಸರ್ವೇ ಸಾಮಾನ್ಯ . ಚಿಕ್ಕೋರಿಲ್ಲದೇ ದೊಡ್ಡತನಕ್...

ಕನಸಿನ ಕೂಸು: ಹೆಣ್ಣು

ಕನಸಿನ ಕೂಸು: ಹೆಣ್ಣು: " ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ ", ಎಂಬ ಮಾತಿನಂತೆ   ಎಲ್ಲಿ ಸ್ತ್ರೀಯು ಪೂಜಿಸಲ್ಪಡುತಾಳೋ ( ಗೌರವಿಸಲ್ಪಡುತ್ತಾಳೋ ) ...

ಕನಸಿನ ಕೂಸು: ಮೋದಿಗೊಂದು ಪತ್ರ.:

ಕನಸಿನ ಕೂಸು: ಮೋದಿಗೊಂದು ಪತ್ರ.:: ಭವ್ಯ ಭಾರತದ ಕನಸುಗಾರ 17- ಮೇ-2014 ನರೇಂದ್ರ ಮೋದಿ ಪ್ರಧಾನ ಮಂತ್ರಿ ಭಾರತ ವಿಷಯ: ನಿನ್ನ ಕೈನಲ್ಲಿತ್ತ ನನ್ನ ಕನಸಿನ ಭಾರತ. ಡಿಯರ್ ಮೋ...

ಕನಸಿನ ಕೂಸು: ನನ್ನ ಜೀವನದ ಸುತ್ತ.

ಕನಸಿನ ಕೂಸು: ನನ್ನ ಜೀವನದ ಸುತ್ತ.: ಅಂದು ರಾತ್ರಿ ಸರಿಸುಮಾರು ಹನ್ನೆರಡರ ಸಮಯ. ಮನೆ ತುಂಬಿದ ಅಮ್ಮನ ಆಕ್ರಂದನ. ಅವಳು ಅದೇಷ್ಟು ವೇದನೆ ಅನುಭವಿಸಿದಳೋ.... ನನಗೆ ಗೊತ್ತಿಲ್ಲ. ಆ ನರಳಾಟ ನೋಡಿ ಕಣ್ಣೀರಿನ...

ಕನಸಿನ ಕೂಸು: ಅತಿಯಾದ ಅತ್ಯಾಚಾರ..!!!

ಕನಸಿನ ಕೂಸು: ಅತಿಯಾದ ಅತ್ಯಾಚಾರ..!!!: ದೇಶದಲ್ಲಿ ನಡಿತಾ ಇರೋ ಅತ್ಯಾಚಾರಕ್ಕೆ ಕಾರಣ .: ·          ಮೊಡರ್ನೈಸೇಶನ್ ಹೆಸರಿನಲ್ಲಿ ಆಗುತ್ತಿರುವ ಬದಲಾವಣೆಗಳು . ·          ಶಿಕ್ಷಣದ ಹ...

ಕನಸಿನ ಕೂಸು: ಪ್ರೀತಿಯ ಪ್ರಸ್ತಾಪ

ಕನಸಿನ ಕೂಸು: ಪ್ರೀತಿಯ ಪ್ರಸ್ತಾಪ: ಅದು ಸರಿಸುಮಾರು ಮಧ್ಯಾಹ್ನ ಎರಡರ ಸಮಯ. ಕೊತಕೊ ತನೇ ಕುದಿಯುತಿಹ ಸುಡು ಬಿಸಿಲು. ಕೆಲಸ ಮುಗಿಸಿ ಮನೆಗೆ ಬಂದು ಉಂಡು ಮಲಗಿದ್ದೆ. ಸುಯ್ಯನೆ ಬೀಸುತಿಹ ಪ್ಯಾನ್ ಗಾಳಿ...

ಕನಸಿನ ಕೂಸು: ಸಂಬಂಧಗಳ ಕೊಂಡಿ.

ಕನಸಿನ ಕೂಸು: ಸಂಬಂಧಗಳ ಕೊಂಡಿ.: ಕಿರುಬೆರಳುಗಳು ಸೇರಿ ಬೆಸೆದ ಈ ಜೀವಗಳು , ಜೀವನದ ಸಾಗರದಲಿ ತುಸು ದೂರ ಸಾಗಿವೆ ಕೇಳು . ಸುತ್ತಮುತ್ತಲಿನ ಜಗಕೆ ಆದರ್ಶವೆನಿಸಿಹರಿವರು , ಹೊಸ ...

ಕನಸಿನ ಕೂಸು: ಮುಖ ಪುಸ್ತಕ

ಕನಸಿನ ಕೂಸು: ಮುಖ ಪುಸ್ತಕ: ಕೆ ಲವು ದಿನಗಳ ಹಿಂದೆ, ಹೀಗನಿಸಿತು,” ಇಂದು ಏನಾದರೊಂದು ಒಳ್ಳೆಯ ಕೆಲಸ ಮಾಡಬೇಕು. ಅದರಿಂದ ನನ್ನ ಭವಿಷ್ಯಕ್ಕೆ ಒಳಿತಾಗಬೇಕು”, ಎಂಬುದಾಗಿ. ತಕ್ಷಣ ಹೊಳೆದದ್ದು, ಫ...

ಮುಖ ಪುಸ್ತಕ


ಕೆಲವು ದಿನಗಳ ಹಿಂದೆ, ಹೀಗನಿಸಿತು,” ಇಂದು ಏನಾದರೊಂದು ಒಳ್ಳೆಯ ಕೆಲಸ ಮಾಡಬೇಕು. ಅದರಿಂದ ನನ್ನ ಭವಿಷ್ಯಕ್ಕೆ ಒಳಿತಾಗಬೇಕು”, ಎಂಬುದಾಗಿ. ತಕ್ಷಣ ಹೊಳೆದದ್ದು, ಫೇಸ್ ಬುಕ್ ನ್ನು ತೀರಾ ಉಪಯೋಗಿಸುತ್ತಿದ್ದ ಎನಗೆ ಇದರಿಂದ ನನ್ನ ಸಮಯ ವ್ಯರ್ಥವಾಗುತ್ತಿದೆಯೋ ಎಂದು ಅನಿಸಿತ್ತು. ಕಾರಣ ಅಂದು ಬೆಳ್ಳಂಬೆಳಿಗ್ಗೆ ಫೇಸ್ ಬುಕ್ ನ್ನು ಸ್ಥಗಿತಗೊಳಿಸಿದ್ದೆ. ಮನದಲ್ಲೇನೋ ಸಂತಸ. ಏನೋ ಸಾಧಿಸಿದ್ದೇನೆ ಎಂಬ ಹೆಮ್ಮೆ. ದಿನದ ಸಮಯವನ್ನೆಲ್ಲ ನನ್ನದೇ ಜಗತ್ತಿನಲ್ಲಿ ಕಳೆದಿದ್ದೆ. ಆದರೆ ಸಂಜೆಯಾಗುತ್ತಿದ್ದಂತೆ ಮನದಾಳದಲ್ಲಿ ಏನೋ ದುಗುಡ. ಯಾಕೆ ಏನು ಎಂಬುದು ಮೊದಲು ಅರಿವಾಗಲಿಲ್ಲ. ತೀರಾ ಯೋಚಿಸಿದ ಮೇಲೆ ತಿಳಿಯಿತು. ದಿನದಾರಂಭದಲ್ಲಿ ಒಳ್ಳೆದೆಂದು ಮಾಡಿದ ಕಾರ್ಯ ಸಂಜೆಯಾಗುತ್ತಿದ್ದಂತೆ ಮನವನ್ನು ಕೊರೆಯಲಾರಂಭಿಸಿತ್ತು. ಅದೆಷ್ಟು ಸ್ನೇಹಿತರು ಸಂದೇಶಗಳನ್ನು ಕಳುಸಿದ್ದಾರೋ… ಅದೆಷ್ಟು ಜನ ಛಾಯಾಚಿತ್ರಗಲನ್ನು ನನ್ನ ಮುಖಪುಸ್ತಕದ ಮುಖಪುಟಕ್ಕೆ ಲಗತ್ತಿಸಿದ್ದಾರೋ.. … ಹೀಗೇ, ಒಳಗೊಳಗೇ ಕಳವಳ. ದಿನದಂತ್ಯದಲ್ಲಿ ಮತ್ತೆ ಏನಾದರೊಂದು ಹೊಸತು ಮಾಡಬೇಕೆಂದೆನಿಸಿತು. ಏನು ಮಾಡುವುದು ? ಹೇಗೆ ಮಾಡುವುದು ? ಏನಾದರೊಂದು ಮಾಡಿದಲ್ಲಿ ಒಂದಿನಿತಾದರೂ ಪ್ರಯೋಜನ ಇದೆಯೇ… ಇತರರು ಏನು ತಿಳಿದಾರು? ಹೀಗೆಯೇ ಮನದಾಳದಲ್ಲಿ ಯೋಚನೆಗಳದೇ ಹೊಳೆಯು ಎಡೆಬಿದದೆ ಹರಿಯುತ್ತಲಿತ್ತು. ಕೊನೆಗೆ ಒಂದು ನಿರ್ಧಾರಕ್ಕೆ ಬಂದಿದ್ದೆ. ಸ್ಥಗಿತಗೊಳಿಸಿದ್ದ ಫೇಸ್ ಬುಕ್ ಗೆ ಮತ್ತೆ ಚಾಲನೆ ನೀಡುವುದೂ ಎಂದು. ತತ್’ಕ್ಷಣ ಮನಸಿನ ಇಂಗಿತವನ್ನು ಕಾರ್ಯರೂಪಕ್ಕೆ ತಂದಿದ್ದೆ.

ಮುಂದೆ ‘ಫ಼ೇಸ್ ಬುಕ್’ ಖಾತೆಯನ್ನು  ಸ್ಥಗಿತಗೊಳಿಸಬೇಕು ಎಂದುಕೊಂಡಾಗೆಲೆಲ್ಲ ಒಬ್ಬರಲ್ಲ ಒಬ್ಬರು ಫ಼್ರೆಂಡ್ ರಿಕ್ವೆಸ್ಟ್ ಕಳಿಸುತ್ತಾನೇ ಇರುತ್ತಾರೆ.  ಕೆಲವೊಮ್ಮೆ ನಮಗೆ ನಮ್ಮ ಹಳೇಯ ಸ್ನೇಹಿತನೋ ಸ್ನೇಹಿತೆಯೋ ಕಂಡು ನಾವೂ ಸಹ ರಿಕ್ವೆಸ್ಟ್ ಕಳುಹಿಸುತ್ತೇವೆ. ಇದು ನಮ್ಮ ಹಾಗೂ ಫ಼ೇಸ್’ಬುಕ್ ಜಗತ್ತಿನ ನಡುವಿನ ಸಂಬಂಧ ಸಾಯದೇ ಹಾಗೇ ಉಳಿಯಲು ಕಾರಣೀಭೂತವಾಗಿದೆ. ಮುಂದುವರಿದ ಇಂದಿನ ಜಗದಲ್ಲಿ ಒಬ್ಬರನ್ನೊಬ್ಬರು ಮುಖಾಮುಖಿ ಕಾಣುವುದು ಅಪರೂಪವಾಗಿದ್ದು, ಜನರ ಸಂಪರ್ಕ ಸಾಧನವಾಗಿ ಬೆಳೆದು ನಿಂತಿದೆ ಈ ಫೇಸ್ ಬುಕ್. ಅಂತೆಯೇ ಇಲ್ಲಿ ಸಾಹಿತ್ಯ, ಶಿಕ್ಷಣ ಹೀಗೆ ಹಲವಾರು ವಿಷಯಗಳು ಮತ್ತದರ ಬಗ್ಗೆ ವ್ಯಕ್ತಿಗತ ಅಭಿಪ್ರಾಯ ಮಂಡನೆ ಎಲ್ಲವೂ ಕಾಣ ಸಿಗುವುದು. ನನ್ನ ಪ್ರಕಾರ ಪ್ರತಿಯೊಂದರಲ್ಲಿ ಒಳ್ಳೆಯದು, ಕೆಟ್ಟದ್ದೂ ಇದ್ದೇ ಇದೆ. ಅದನ್ನು ನಾವು ಯಾವ ರೀತಿ ಸ್ವೀಕರಿಸುತ್ತೇವೆ ಅಥವಾ ಯಾವ ದೃಷ್ಠಿಯಿಂದ ಕಾಣುತ್ತೇವೆ ಅನ್ನೋದರಲ್ಲಿ ಅದರ ಉಪಯೋಗ ಅಡಗಿದೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ, ಜೀವನದಲ್ಲಿ ಒಳ್ಳೆಯದೂ, ಮತ್ತು ಕೆಟ್ಟದ್ದು, ಎರಡರ ಪರಿಚಯವೂ ಇರಬೇಕು. ಒಳ್ಳೆಯದು ನಾವು ಏನು ಮಾಡಬೇಕು ಎಂಬುದನ್ನು ತಿಳಿಸಿದರೆ, ಕೆಟ್ಟದ್ದು ನಾವು ಏನು ಮಾಡಬಾರದು ಎಂಬುದನ್ನು ತಿಳಿಸುತ್ತೆ. ಈ ಫೇಸ್ ಬುಕ್ ಪ್ರಪಂಚವೂ ಹಾಗೆಯೇ…….


ಆದರೆ ಈ ಮುಖಪುಸ್ತಕದ ಜಗತ್ತಿನಲ್ಲಿ ಒಂದು ಮಾತ್ರ ಅರ್ಥವಾಗುತ್ತಿಲ್ಲ. ನಮಗೆ ಪರಿಚಯದವರು ಹಾಗೂ ಪರಿಯವಿರದವರೂ ರಿಕ್ವೆಸ್ಟ್ ಕಳುಹಿಸುವುದು ಸರ್ವೇ ಸಾಮಾನ್ಯ. ಆದರೆ ರಿಕ್ವೆಸ್ಟ್ ಒಪ್ಪಿಕೊಂಡು, ಅವರ ಪರಿಚಯ ಕೇಳಿದರೆ ಅದನ್ನು ಹೇಳಲು ಮಾತ್ರ ಹಿಂಜರಿಯುತ್ತಾರೆ. ಅದೇಕೆಂದು ಅರ್ಥವಾಗುತ್ತಿಲ್ಲ. ತಮ್ಮ ಪರಿಚಯ ಬಹಿರಂಗಪಡಿಸಲು ಗುರುಗುಡುವವರು ಕೆಲವರಾದರೆ, ಇನ್ನು ಕೆಲವರು ತಮ್ಮ ನಾಮಧೆಯವನ್ನು ಹೇಳಿ ತಣ್ಣಗಾಗುತ್ತಾರೆ. ಕೇವಲ ನಾಮಧೆಯಕ್ಕೆ ಪರಿಚಯ ಆಗಬಹುದೇ? ಸರಿ ಬಿಡಿ, ಹಾಗಾದರೆ ಆ ಹೆಸರನ್ನು ಹೇಳುವದು ಯಾವ ಪುರುಷಾರ್ಥಕ್ಕೆ? ನಿಮ್ಮ ಹೆಸರು ಪ್ರೋಫ಼ೈಲ್ ಗೆ ನೇತು ಹಾಕಿದ್ದನ್ನು ಓದಿಯೇ ಒಪ್ಪಿಕೊಂಡಿರುತ್ತೇವೆ. ಇನ್ನೂ ಕೆಲವರಿದ್ದಾರೆ. ವಾರಕ್ಕೊಮ್ಮೆ ಕುಶಲೋಪರಿ ವಿಚಾರಿಸಿದರೂ, ಎನೋ ಕದ್ದು ಒಯ್ಯುತ್ತೇವೇನೋ ಎಂಬಂತೆ ನಮ್ಮನ್ನು ಕಾಣುತ್ತಾರೆ. ಅದರಲ್ಲೂ ಒಬ್ಬ ಯುವಕ ಯುವತಿಗೆ ಸಂದೇಶ ಕಳುಹಿಸಿದರೆ ಈ ಥರದ ಅನುಭವ ಹೆಚ್ಚು. ಶುಭೋದಯ ಹೇಗಿದ್ದೀರಾ ಎಂದು ಕೇಳಿದರೆ, ಅದಕ್ಕೆ ಉತ್ತರಿಸಲೂ ಆಗದ ಸೋಮಾರಿಗಳೇ? ಅಥವಾ ಉತ್ತರಿಸಿದಲ್ಲಿ ತಮ್ಮ ತಿಂದು ತೇಗಿಯಾರು ಎಂಬ ಯೋಚನೆಯೇ? ಅಥವಾ ಉತ್ತರಿಸಿದರೆ ತಮ್ಮ ಅಸ್ಥಿತ್ವವೆಲ್ಲಿ ಕೆಳಗಿಳಿಯುವುದೋ ಎಂಬ ಭಾವನೆಯೇ? ಫ಼ೇಸ್’ಬುಕ್ ಪುಟ ಆರಂಭದ ದಿನಗಳಲ್ಲಿ ಎಲ್ಲರಿಗೂ ಚಟವೋ ಎಂದು ಭಾಸವಾಗುವಂತೆ ಹವ್ಯಾಸವಿರುವುದು ಸಾಮಾನ್ಯ. ಪರಿಚಯವಿರದವರಿಗೂ ರಿಕ್ವೆಸ್ಟ್ ಕಳಿಸಿ ನಮ್ಮ ಫ಼್ರೆಂಡ್ಸ್ ಸಂಖ್ಯೆಯನ್ನು ಹೆಚ್ಚಿಸುವುದು. ಮೊದ ಮೊದಲು ನಾನು ಹಾಗೆಯೇ ಮಾಡಿದ್ದೇನೆ. ಆದರೆ ಈ ತರದ ಹುಚ್ಚು ಕೇವಲ ತಿಂಗಳೋ ಎರಡು ತಿಂಗಳೋ ಅಷ್ಟೆ. ಮುಂದೆ ಆಗುವ ಪರಿಚಯವೆಲ್ಲದಕ್ಕೆ ಒಂದಲ್ಲ ಒಂದು ಕಾರಣವಿರುತ್ತದೆ. ಮುಖಪುಸ್ತಕದ ಬಾವಚಿತ್ರ ನೋಡಿ ರಿಕ್ವೆಸ್ಟ್ ಕಳಿಸುವವರೊಂದಿಷ್ಟಾದರೆ, ನಿಮ್ಮ ಬರಹಗಳ ಭಾರ ನೋಡಿ ಕಳುಹಿಸುವವರೊಂದಿಷ್ಟು. ಇನ್ನು ಕೆಲವರು ತಮ್ಮ ಊರಿನವರೆಂದೂ, ಸಂತೆ ಪೇಟೆಯಲ್ಲು ಕಂಡ ಮುಖವೆಂದೂ, ಪ್ರೆಂಡ್ ನ ಅಣ್ಣ ತಮ್ಮಂದಿರೆಂದೂ, ಸಮಾನ ವಯಸ್ಕರೆಂದು/ ಮನಸ್ಕರೆಂದು , ಇನ್ನೂ ಕೆಲವರು ಅದೇನೋ ಅಂತಾರಲ್ಲ "ಪ್ರಥಮ ನೋಟದ ಪ್ರೇಮ", ಎಂದೂ ರಿಕ್ವೆಸ್ಟ್ ಕಳುಹಿಸುತ್ತಾರೆ. ರಿಕ್ವೆಸ್ಟ್ ನ ಕಾರಣಗಳು ಅವರವರ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಕೆಲವರು ತಮ್ಮ ಕಾರಣಕ್ಕೆ ಅನುವಾಗುವಂತೆ ವ್ಯವಹರಿಸುವರು ಕೂಡ. ಹಾಗೆಂದು ಎಲ್ಲರನ್ನೂ ಆ ದೃಷ್ಠಿಯಿಂದ ಕಾಣುವುದು / ಕಂಡ ಕಪ್ಪೆಲ್ಲ ಕೆಟ್ಟದ್ದು ಎಂಬ ಭಾವನೆ  ತಪ್ಪಾಗುವುದು.


ಕಾರಣ ಎಲ್ಲ ಮುಖಪುಸ್ತಕದ ಸಹೃದಯ ಸದಸ್ಯರುಗಳಲ್ಲಿ ನನ್ನ ಕಳಕಳಿಯ ವಿನಂತಿ. ಜನರನ್ನು ನೀವು ಕಂಡ ಹಾಗೆ ನಿರ್ಧರಿಸುವುದನ್ನು ಬಿಟ್ಟು, ಅವರವರ ಗುಣಗಳಿಗನುಸಾರವಾಗಿ / ವ್ಯಕ್ತಿತ್ವಕ್ಕನುಗುಣವಾಗಿ  ತಾಳೆ ಹಾಕಿ ಒಳ್ಳೆಯವರೋ ಕೆಟ್ಟವರೋ ಎಂಬುದನ್ನು ನಿರ್ಧರಿಸಿ. ಪುಸ್ತಕದ ಮುಖ ಪುಟವ ಕಂಡು, ಒಳಗೇನಿದೆ ಎಂಬುದನ್ನು ನಿರ್ಧರಿಸದಿರಿ ಎಂಬ ಅಭಿಪ್ರಾಯ ಬರವಣಿಗೆಯ ಮೂಲ ಉದ್ದೇಶ.



Sunday, December 21, 2014

ಸಂಬಂಧಗಳ ಕೊಂಡಿ.



ಕಿರುಬೆರಳುಗಳು ಸೇರಿ ಬೆಸೆದ ಈ ಜೀವಗಳು,
ಜೀವನದ ಸಾಗರದಲಿ ತುಸು ದೂರ ಸಾಗಿವೆ ಕೇಳು.
ಸುತ್ತಮುತ್ತಲಿನ ಜಗಕೆ ಆದರ್ಶವೆನಿಸಿಹರಿವರು,
ಹೊಸ ಜೀವ ಸಂಕುಲಕೆ ನಾಂದಿ ಹಾಡಿಹರು.

ಸಪ್ತಪದಿ ತುಳಿಯುವ ಮುನ್ನ, ಅವನಾರೋ..... ಇವಳಾರೋ...!!!
ಕಂಡಿಲ್ಲ. ಮಾತನಾಡಿಲ್ಲ. ಕೊನೆಪಕ್ಷ ಮುಖಪುಟದಲ್ಲಿ ಯಾರದೋ ಮುಖದ ಹಿಂದೆ ಕೂತು ಸಂದೇಶಗಳನ್ನೂ ಕಳಿಸಿಕೊಂಡಿಲ್ಲ...!!!

ಹಿರಿಯರ ಒತ್ತಾಯವೇನಲ್ಲ. ಸ್ನೇಹಿತರ ಸಲಹೆಯೂ ಅಲ್ಲ. ಮೂರನೆಯವರ ಭಯವಂತೂ ಇಲ್ಲವೇ ಇಲ್ಲ.
ಮನದಲ್ಲೇ ಅರಳಿದ ತಾವರೆಗೆ ಇಬ್ಬರೂ ಸಲಿಲವಾಗಿಹರು.

ಹಿರಿಯರ ಅಶೀರ್ವಾದವೇ ಇವರಿಗೆ ರಕ್ಷಾಕವಚವು.
ಬಂಧುಗಳ ಶುಭಹಾರೈಕೆ ತಲೆಗಿಟ್ಟ ಮಂತ್ರಾಕ್ಷತೆಯು.
ಕೊಟ್ಟ ಉಡುಗೋರೆ……… ಆತ್ಮಾಭಿಮಾನಕ್ಕೋ, ಕೊಟ್ಟವರ ಹೆಗ್ಗಳಿಕೆಗೋ… ನಾ ಅರಿಯೆ…
ಕೀರುತಿಗೊಂದು ಮಗುವ ಹೆತ್ತು ಸುಖ ಕ್ಷಣಗಳ ಹೊತ್ತು

ಅವರದೇ ಜಗದಲ್ಲಿ ವಿಹರಿಸುತಿಹರು…. ಬೆಳೆವಾಗ ಬೆಂಬಲಿಸಿದವರ ಸಂಬಂಧಗಳ  ಮರೆತು…!!!

Friday, July 18, 2014

ಅತಿಯಾದ ಅತ್ಯಾಚಾರ..!!!


ದೇಶದಲ್ಲಿ ನಡಿತಾ ಇರೋ ಅತ್ಯಾಚಾರಕ್ಕೆ ಕಾರಣ.:

  • ·         ಮೊಡರ್ನೈಸೇಶನ್ ಹೆಸರಿನಲ್ಲಿ ಆಗುತ್ತಿರುವ ಬದಲಾವಣೆಗಳು.
  • ·         ಶಿಕ್ಷಣದ ಹೆಸರಿನಲ್ಲಿ ಮನೆ ಬಿಟ್ಟು ಹೊರಗಿರುವ ಮಕ್ಕಳು.
  • ·         ಉದ್ಯೋಗದ ನಿಮಿತ್ತ ಮಕ್ಕಳ ಆಗು ಹೋಗುಗಳ ಬಗ್ಗೆ ಗಮನ ಹರಿಸಿದ ಅಪ್ಪ ಅಮ್ಮಂದಿರು.
  • ·         ಪ್ರತಿಷ್ಟೆಯ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಮರೆತ ಮನೆಯ ಹಿರಿಯರು.
  • ·         ತಿದ್ದಿ ಪಾಠ ಹೇಳುವ ಶಿಕ್ಷಕರೇ ತಮ್ಮ ಕಾಯಕಕ್ಕೆ ಕಳ್ಳ ಬೀಳುತ್ತಿರುವುದು.
  • ·         ಇತರರ ಹಂಗು ತೋರೆದು ಸ್ವತಂತ್ರವಾಗಿ ಬಾಳುತ್ತೇನೆ ಎಂಬ ಹುಂಬತನದ ಹೆಣ್ಣು.
  • ·         ತಾನೇ ಹೆಚ್ಚು, ತಾನು ಬಯಸಿದ್ದೆಲ್ಲ ತನಗೆ ದಕ್ಕಲೇ ಬೇಕು ಎಂದು ಬಯಸುವ ಭಂಡ ಬುದ್ದಿಯ ಗಂಡು.
  • ·         ಕೈಚೆಲ್ಲಿ ಕುಳಿತಿಹ ಸರಕಾರ.
  • ·         ತನ್ನದಲ್ಲ ಎಂದು ತಿರುಗಿ ಕುಂತ ನೆರೆಹೊರೆಯವರು.
  • ·         ಹದ ತಪ್ಪಿ ತೋರಿಸಿ ಹುಚ್ಚುಗೊಳಿಸುವ ಚಲನಚಿತ್ರಗಳು.
  • ·         ತಮ್ಮ ಕರ್ತವ್ಯ ಮರೆತು ನಿಂತ  ಸಮಾಜ. 

     
     ಒಟ್ಟಿನಲ್ಲಿ ಹೇಳಬೇಕೆಂದರೆ ಸಮಾಜದ ಪ್ರತೀ ಮನುಜನು ಇದಕ್ಕೆ ಕಾರಣನು. ಸಮಾಜಿಕ ಜಾಲ ತಾಣದಲ್ಲಿ ಒಂದು ಇನ್ಸಿಡೆಂಟ್ ಹಿಡ್ಕೊಂಡು ಗಂಡು ಹೆಣ್ಣಿನದೇ ತಪ್ಪು, ಹೆಣ್ಣು ಗಂಡಿನದೇ ತಪ್ಪು ಎಂದು ಹೇಳಿಕೊಂಡರೆ, ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಹಾಗೆಂದು ಬ್ಯಾನರ್ ಹಿಡಿದು ರೋಡಿಗಿಳಿದರೂ ಸಮಸ್ಯೆ ಪರಿಹಾರವಾಗಲಾರದು.  ದೇಶಮಟ್ಟದಲ್ಲಿ ಪೋಲೀಸರು ಕಾಪಾಡುವುದು ಸಾಧ್ಯವಲ್ಲದ ಕೆಲಸ. ಜ್ಞಾನ ವೃದ್ದರ ಕರೆಸಿ ನಾಲ್ಕಾರು ಚಾನೆಲ್’ಗಳಲ್ಲಿ ಚರ್ಚಿಸಿದರು ಉಪಯೋಗವಿಲ್ಲ.

ಇದಕ್ಕೆಲ್ಲ ಪರಿಹಾರ ನನ್ನ ಯೋಚನೆಯ ಪ್ರಕಾರ ಹೀಗಿದೆ.:

ನಮ್ಮದೆಲ್ಲ ಕುದಿವ ರಕುತವಾಗಿರಬಹುದು. ಆದರೆ ಎಲ್ಲರಿಗೂ ಅವರವರದೇ ಆದ ಜೀವನವಿದೆ. ಕಾರಣ ಇಂದು ಬೀದಿಗಿಳಿದು ಬೆಂಬಲಿಸಿದ ಜನ ನಾಳೆಯೂ ನಮ್ಮೊಂದಿಗೆ ಇರುತ್ತಾರೆ/ ಇರಬೇಕು ಎಂದುಕೊಳ್ಳುವುದು ಸಾಧ್ಯವಿಲ್ಲ. ಇರಬೇಕು ಅಂದುಕೊಳ್ಳುವುದು ತಪ್ಪು ಕೂಡ. ಅಕಸ್ಮಾತ್ ಇರಬೇಕು ಎಂದುಕೊಂಡಲ್ಲಿ, ನಾವು ಎಷ್ಟರ ಮಟ್ಟಕ್ಕೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿದ್ದೇವೆ ಎಂಬುದು ಪರಿಗಣನೆಗೆ ತೆಗೆದುಕೊಳ್ಳಬೇಕಾದದ್ದೂ ಅನಿವಾರ್ಯವೇ ಸರಿ. ಇದೆಲ್ಲವ ಬಿಟ್ಟು ತಮ್ಮ ತಮ್ಮ ಮನೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ. ಇತರರಿಹೇಳುವ ಮೊದಲು ನಾವು ನಮ್ಮ ಕರ್ತವ್ಯವನ್ನು ಮಾಡೋಣ. ನಮ್ಮ ಮನೆಯ ಮಗ/ ಮಗಳು ಹಾದಿ ತಪ್ಪದಂತೆ ಎಚ್ಚರವಹಿಸೋಣ. ಸಮಾಜದಲ್ಲಿ ಇಂತಹ ಕುಕೃತ್ಯಗಳು ಕಡಿಮೆಯಾಗಬೇಕೆಂದಿದ್ದರೆ ಮನೆಯ ಮಗಳು ಹೊರ ನಡೆವ ಸಮಯದಲ್ಲಿ , ಸಮಾಜದಲ್ಲಿ ಯಾವ ರೀತಿ ತನ್ನನ್ನು ತಾನು ತೋರ್ಪಡಿಸಿಕ್ಕೊಳ್ಳುವುದು ಉತ್ತಮ ಎಂದು ತಿಳಿಹೇಳಬೇಕು. ಮಗನ ಚಲನವಲನದ ಮೇಲೆ ಗಮನ ಇರಲಿ. ಶಾಲಾ ಕಾಲೇಜಿನಲ್ಲಿ ಇತರರನ್ನು ಅನುಸರಿಸುವ ಸಂದರ್ಭದಲ್ಲಿ ತಾನು ಹಾದಿ ತಪ್ಪುತ್ತಿದ್ದೇನೆಯೇ ಎಂಬುದರ ಅರಿವು ತನಗೆ ಬಾರದೇ ಇದ್ದಲ್ಲಿ ಇಂತಹದೆಲ್ಲ ಆಗುವುದು ಸಹಜ. ಆದರ್ಶಗಳನ್ನು ಪಾಲಿಸೋಣ, ಆತುರಕ್ಕೆ ಆಡಂಬರದ ಜೀವನ ಬೇಡ. ಹಣವಿದೆ ಎಂದು ಮಕ್ಕಳಿಗೆ ಶ್ರೀಮಂತ ಜೀವನ ಒದಗಿಸದಿರಿ. ಮಕ್ಕಳಿಗಾಗಿ ದುಡಿದದ್ದು ಅವರೂ ಅನುಭವಿಸದಿರೆ ಎಂದೆನಿಸಬಹುದು. ಆದರೆ ಇಂದಿನ ಜನಾಂಗ ಹಾದಿ ತಪ್ಪಲು ಇದೂ ಒಂದು ಕಾರಣ. ಮಕ್ಕಳಿಗೆ ಸ್ವತಂತ್ರದ ಜೊತೆಗೆ ಸ್ವಲ್ಪ ಜವಾಬ್ದಾರಿಯನ್ನೂ ವಹಿಸಿ. ಆಗಲೇ ಅವರು ಅವರವರ ಕರ್ತವ್ಯವನ್ನು ಅರಿಯಬಲ್ಲರು. ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಅರಿಯಬಲ್ಲರು.

ಮೊದಲು ನಾವು ಒಳ್ಳೆಯವರಾಗೋಣ. ನಾವು ಸರಿಯಾಗಿದ್ದರೆ, ನಮ್ಮವರೂ, ನಮ್ಮ ಊರು, ನಮ್ಮ ರಾಜ್ಯ ಹೀಗೇ ಇಡೀ ದೇಶ ಒಳ್ಳೆಯ ನಡತೆ ಕಲಿತು ಸಮಾಜ ಸುಂದರಗೊಳ್ಳುವುದರಲ್ಲಿ ಸಂಶಯವಿಲ್ಲ.

            !!!...ಬದಲಾವಣೆ ನಮ್ಮಿಂದಲೇ ಆಗಲಿ..!!!


Saturday, May 31, 2014

ಪ್ರೀತಿಯ ಪ್ರಸ್ತಾಪ


ಅದು ಸರಿಸುಮಾರು ಮಧ್ಯಾಹ್ನ ಎರಡರ ಸಮಯ. ಕೊತಕೊತನೇ ಕುದಿಯುತಿಹ ಸುಡು ಬಿಸಿಲು. ಕೆಲಸ ಮುಗಿಸಿ ಮನೆಗೆ ಬಂದು ಉಂಡು ಮಲಗಿದ್ದೆ. ಸುಯ್ಯನೆ ಬೀಸುತಿಹ ಪ್ಯಾನ್ ಗಾಳಿ, ತೆರೆದ ಕಿಟಕಿ, ಏನನ್ನೋ ಬಯಸಿ ಚಿಂತಿಸುತಿರುವ ಮನ. ಮನದಲ್ಲೇನೋ ತಳಮಳ, ಕಳವಳ. ಬಾರದ ನಿದ್ರೆಗೆ ಬಾ ಎಂದು ಕರೆವ ಬಳಲಿದ ದೇಹ. ಹೀಗೇ ಸಾಗುತ್ತಲಿತ್ತು ಆ ಸಮಯ.
ಇದ್ದಕ್ಕಿದ್ದಂತೆ ಯಾರೋ ಕಿಟಕಿಯ ಹಾದು ಹೋದಂತೆ ಭಾಸವಾಯಿತು. ಯಾರೂ ... ಅಂದೆ. ನಿಶ್ಶಬ್ಧ. ಭ್ರಮೆಯೆನಿಸಿ ಮಗ್ಗಲು ತಿರುಗಿಸಿ ಮತ್ತೆ ಮಲಗಿದೆ. ಕ್ಷಣ ಹೊತ್ತು ಕಳೆಯಿತು. ಇನ್ನೇನು ನಿದ್ರಾದೇವತೆ ನನ್ನನ್ನಾವರಿಸುವಳು ಎಂಬುದರಲ್ಲಿ ಮತ್ತದೇ ಭಾವನೆ. ಯಾರೋ ಮನದ ಬಾಗಿಲ ತಟ್ಟಿದಂತಿತ್ತು. ಕನಸೋ ಎಂಬ ಭ್ರಾಂತಿ ಮೂಡಿತ್ತು. ಇಲ್ಲ ಏನೋ ಬದಲಾವಣೆ ಕಂಡಂತಿದೆ. ವಾಸ್ತವಕ್ಕೆ ಜಾರಿದಾಗ ಅರಿವಾಯಿತು, ತಟ್ಟಿದ್ದು ಮನದ ಬಾಗಿಲಲ್ಲ. ಮನೆಯ ಬಾಗಿಲೂ ಎಂದು. ಅದೇ ಮಬ್ಬುಗಣ್ಣಿನಲ್ಲಿ  ಎದ್ದು ಮನೆಯ ಬಾಗಿಲತ್ತ ನಡೆದೆ.
ಅಂದು ನಮ್ಮ ಬಂಧು ವರ್ಗದಲ್ಲಿ ಶುಭ ಕಾರ್ಯ ಇರುವ ಕಾರಣ ಮನೆಯವರೆಲ್ಲ ಅಲ್ಲಿ ಹೋಗಿದ್ದರು. ಕೆಲಸ ಕಾರ್ಯದ ನಿಮಿತ್ತ, ನಾನೊಬ್ಬನೇ ಮನೆಯಲ್ಲಿ ಉಳಿದುಕೊಂಡಿದ್ದೆ. ಹೇಗೋ ಬಂದ ಅಡುಗೆ ಮಾಡಿ ಉದರ ಪೂಜೆ ಮಾಡಿದ್ದೆ. ಬೆಳಿಗ್ಗೆ ಅಮ್ಮ ಅಡುಗೆ ಮಾಡಿಟ್ಟಿರುತ್ತೇನೆ ಎಂದರೂ ಈ ಹಾಳಾದ ಸ್ವಾಭಿಮಾನ, ಅವಳನ್ನು ತಡೆದಿತ್ತು. ನಾವೇ ಅಡುಗೆ ಮಾಡಿ ಉಂಬ ಕಷ್ಟ ಉದರ ಪೂಜೆಯ ಸಂದರ್ಭದಲ್ಲಿ ಅರಿವಾಗಿತ್ತು. ಆ ಕ್ಷಣಕ್ಕೆ ಅಮ್ಮನಿಗೊಂದು ಚಂದದ ಸೊಸೆಯಿದ್ದರೆ ಚೆನ್ನಾಗಿರುತ್ತಿತ್ತೇನೋ  ಎಂದೆನಿಸಿತ್ತು.
ಓಲಾಡುತ್ತಾ ನಡೆದು ಬಾಗಿಲು ತೆರೆದೆ. ಕ್ಷಣ ಹೊತ್ತು ಎನೂ ಅರಿಯದವನಾಗಿ ಹಾಗೆಯೇ ನಿಂತುಬಿಟ್ಟಿದ್ದೆ. ಸೌಂದರ್ಯ ರಾಶಿ ಹೊತ್ತ ಅಪ್ಸರೆಯೇ ನಮ್ಮ ಮನೆಯ ಬಾಗಿಲಲ್ಲಿ ನಿಂತಂತಿತ್ತು, ನನ್ನ ಮನದ ಬಾಗಿಲ ತಟ್ಟಿದಂತಿತ್ತು. ನಿಂತ ಸ್ಥಿತಿಯಲ್ಲೆ ಅವಳನ್ನು ಕೇಳಿದ್ದೆ, ಯಾರೂ ಎಂದು. ಅವಳು ಮಾರುದ್ದ ಸಂಬಂಧದ ಸರಪಳಿಯನ್ನು ನನ್ನ ಮುಂದಿಟ್ಟಿದ್ದಳು. ನಿಜವಾಗಿಯೂ ಆ ಸಮಯದಲ್ಲಿ ಏನೂ ಅರಿಯದವನಾಗಿದ್ದೆ. ಅವಳ ಬರುವಿಕೆ ಮೊದಲೇ ನಿಗಧಿಯಾಗಿದ್ದು ನನಗೆ ಕೊನೆಯಲ್ಲಿ ತಿಳಿದಿತ್ತು. ಅಮ್ಮ ನನಗೆ ಹೇಳಲು ಮರೆತಿದ್ದಳು ಅನಿಸುತ್ತೆ. ಇರಲಿ.
ಅವಳ ಹೆಸರು ಭವ್ಯ. ಚಂದಿರಗೆ ಹೋಲುವ ಮುಖ, ಸೂರ್ಯನ ಕಾಂತಿ, ಅರಳಿದ ಕಣ್ಗಮಲಗಳು, ಏನನ್ನೋ ಹೇಳಲು ತವಕಿಸುತ್ತಿರುವ ಕೆಂದುಟಿ, ಶಂಖದಾಕೃತಿಯ ಕಿವಿ, ಆಲದೆಲೆಗೆ ಹೋಲುವ ಕೆನ್ನೆ, ಆಡುವ ಮಾತಿನಲ್ಲಿ ಅದೇನೋ ಮಾಧುರ್ಯ, ಹಸಿರುಸಿರು ತುಂಬಿದ ಹಾವ, ಭಾವ..... .........ಒಟ್ಟಿನಲ್ಲಿ ಹೆಸರಿಗೆ ತಕ್ಕ ಸೌಂದರ್ಯ.  ಗುಣದಲ್ಲಿ ಅಮ್ಮನಿಗೂ ಒಂದು ಕೈ ಮೇಲೆಂದರೆ ತಪ್ಪಿಲ್ಲ. ಉಡುಗೆ ತೊಡುಗೆಯಲ್ಲಿಯೂ ಅಷ್ಟೆ. ಸುಸಂಸ್ಕೃತ ಮನೆತನದವಳು. ನನಗೆಂದೇ ಹುಟ್ಟಿದವಳೋ ಎಂದೆನಿಸಿತ್ತು. ನಾನು ಮೌನಕ್ಕೆ ಶರಣಾಗಿದ್ದೆ. ಸ್ತಬ್ಧ ಚಿತ್ರದಂತೆ ನಿಂತಿದ್ದೆ.
ಇದೆಲ್ಲ ನಡೆದದ್ದು ಮನೆಯ ಹೊಸ್ತಿಲಲ್ಲಿ. ಒಳಗೆ ಬನ್ನಿ, ಕೂತುಕೊಳ್ಳಿ, ಬಾಯಾರಿಕೆಗೆ ಏನು ಕೊಡಲಿ ಎಂದು ಕೇಳುವ ಸೌಜನ್ಯವನ್ನೂ ಮರೆತು ನಿಂತಿದ್ದೆ. ಒಳಗೆ ಬರಬಹುದೇ ಎಂದು ಕೇಳಿ ಅವಳೇ ಇದಕ್ಕೆಲ್ಲ ಪೂರ್ಣಬಿಂಧುವನ್ನಿಟ್ಟಿದ್ದಳು.
ವಾಸ್ತವಕ್ಕೆ ತಿರುಗಿದ ನಾನು ಅತಿಥಿ ಸತ್ಕಾರಕ್ಕೆ ಅಣಿಯಾಗಿದ್ದೆ. ಹೀಗೇ ಕುಷಲೋಪರಿ ಮಾತನಾಡುವುದರಲ್ಲಿ ಸಂಜೆಯಾಗಿತ್ತು.
ಮನೆಯವರೆಲ್ಲರೂ ಶುಭಕಾರ್ಯ ಮುಗಿಸಿ ಹಿಂತಿರುಗಿದ್ದರು. ಅಮ್ಮ ಬಂದೊಡನೆ ಅವಳಲ್ಲಿ ಇವಳ ಪೂರ್ತಿ ಬಯೋ-ಡೆಟಾ ತೆಗೆದುಕೊಂಡಿದ್ದೆ. ಅವಳಲ್ಲಿ ಮನಸೋತ ವಿಷಯವನ್ನೂ ಅಮ್ಮನಲ್ಲಿ ಅರುಹಿದ್ದೆ. ಮನೆಗೆ ಬಂದವರನ್ನು ಆ ದೃಷ್ಠಿಯಲ್ಲಿ ನೋಡಕೂಡದು ಎಂಬ ಅಮ್ಮನ ಕಟ್ಟಪ್ಪಣೆಯಾಗಿತ್ತು. ಆದರೂ ಹುಚ್ಚು ಮನಸ್ಸು. ನನ್ನ ಮಾತೇ ಕೇಳಲ್ಲ. ಅಮ್ಮನ ಮಾತನ್ನೂ ಕೇಳಬೇಕು ಅಂದರೆ....????
 ಅವಳು ನಮ್ಮ ಮಾವನವರ ಹೆಂಡತಿಯ ತಂಗಿಯಂತೆ. ಊರು, ದೂರದ ಯಲ್ಲಾಪುರವಂತೆ. ಮದ್ಯಮ ವರ್ಗದ ಕುಟುಂಬವಂತೆ. ನಮಗೆ ತಕ್ಕ ನೆಂಟಸ್ತರೇ. ಕೇಳಿದರೆ ಇಲ್ಲ ಎಂದಾರು ಎಂಬ ಭಯವಿಲ್ಲ. ಕೆಳಲು ಕಳವಳವಿದೆಯಷ್ಟೇ. ಅವಳು ಇದೇ ಊರಿನಲ್ಲಿ ಎಮ್.ಬಿ.ಎ ಮಾಡಲು ಬಂದಿದ್ದಳು. ಹಾಸ್ಟೇಲ್ ವ್ಯವಸ್ಥೆಯಾಗುವವರೆಗೆ ನಮ್ಮ ಮನೆಯಲ್ಲೇ ಉಳಿದುಕೊಳ್ಳುವುದು ಎಂಬುದಾಗಿ ಹಿರಿಯರ ಮಾತಾಗಿತ್ತು.
ನನಗೇನೋ ಎಲ್ಲಿಲ್ಲದ ಸಂತಸ. ನಾನು ಅವಳನ್ನು ಮೆಚ್ಚಿದ್ದೇನೋ ಆಯಿತು. ಈಗ ಅವಳು ಎನ್ನ ಮೆಚ್ಚಬೇಕು. ಅಂಥದ್ದೇನಾದರೂ ಮಾಡಬೇಕು ಎಂಬ ಹುಮ್ಮಸ್ಸು. ದಿನವೂ ಸೂರ್ಯ ನೆತ್ತಿಗೆ ಬರಲು ಕಾಯುತ್ತಿದ್ದ ನಾನು ಈ ದಿನಗಳಲ್ಲಿ ಬೆಳಕು ಹರಿವುದರೊಳಗೇ ಎದ್ದು ನನ್ನ ದೈನಂದಿನ ಕಾರ್ಯಗಳ ಮುಗಿಸಿ ಅಮ್ಮನಿಗೆ ನೆರವಾಗುತ್ತಿದ್ದೆ. ಅಪ್ಪನ ಮುಂದೆ ಜವಾಬ್ದಾರಿ ಹೊತ್ತವನಂತೆ ಎದೆಯೆತ್ತಿ ನಿಲ್ಲುತ್ತಿದ್ದೆ. ಕೆಲಸ ಮುಗಿಯುವುದೇ ತಡ ಮನೆಯಲ್ಲಿ ಹಾಜರ್. ಮಾತಿನಲ್ಲಿ ಗಾಂಭೀರ್ಯ ಬಂದಾಗಿತ್ತು. ಮುಖದಲ್ಲೇನೋ ಹೊಸ ಕಳೆ ತುಂಬಿತ್ತು. ನವ ಚೈತನ್ಯ ಉಸಿರು ಮನದಾಳದಲ್ಲಿ ನಾಟಿದಂತಿತ್ತು. ಅವಳಿಗೆ ಒಳ್ಳೆಯ ಗೆಳೆಯನಾಗಿದ್ದೆ. ಸಮಯ ನೋಡಿ ಅವಳನ್ನೇ ನೇರವಾಗಿ ಕೇಳುವ ಪ್ಲಾನ್ ಮಾಡಿದ್ದೆ.
ಕೊನೆಗೊಂದು ದಿನ ಆ ಸಮಯ ಬಂದೇ ಬಿಟ್ಟಿತು. ಮತ್ತದೇ ಶುಭಕಾರ್ಯ. ಮನೆಯವರೆಲ್ಲರೂ ಹೊರಟು ನಿಂತಿದ್ದರು. ನನ್ನನ್ನೂ ಬಾ ಎಂದಿದ್ದರು. ಅನಾರೋಗ್ಯದ ಕುಂಟು ನೆಪವೊಡ್ಡಿ ಮನೆಯಲ್ಲೇ ಕೂತಿದ್ದೆ. ಯಾವುದೇ ಕಾರಣಕ್ಕೆ ಅವಳು ಹೋಗುವುದಿಲ್ಲವೆಂಬುದ ಮೊದಲೇ ಖಚಿತಪಡಿಸಿಕೊಂಡವನಾಗಿದ್ದೆ. ಈ ಚಾಕಚಕ್ಯತೆ ನನ್ನ ಕೆಲಸದಲ್ಲಿ ತೋರಿದ್ದರೆ ಇಷ್ಟೊತ್ತಿಗಾಗಲೇ ಎರಡು ಪ್ರಮೋಶನ್ ಬಂದಿರೋದು. ಹ್ಹುಂ..! ಆ ವಿಷಯ ಬಿಡಿ. ಮುಂದೆ ನಡೆದದ್ದನ್ನು ಕೇಳಿ.
ನನ್ನ ಮನಸನ್ನು ಬಲಪಡಿಸಿಕೊಂಡು ಭವ್ಯ ಎಂದು ಜೋರಾಗಿ ಕೂಗಿದ್ದೆ. ಅವಳೂ ರೂಮಿನಿಂದಲೇ ಓ ಎಂದಿದ್ದಳು. ತುಂಬಾ ಬೋರ್ ಎನ್ನಿಸುತ್ತಿದೆ. ಹೊರಗಡೆ ಸುತ್ತಾಡಿಕೊಂಡು ಬರೋಣವೇ ಎಂದೆ. ಆಕೆ ಕಾಶ್ಯುವಲ್ ಆಗಿ. ಹ್ಹಂ. ಓಕೆ ಎಂದಿದ್ದಳು. ಮನೆಯ ಸನಿಹವಿರುವ ಪಾರ್ಕ್ ನತ್ತ ಮಾತನಾಡುತ್ತಾ ನಡೆದಿದ್ದೆವು. ಹೇಗೆ ಕೇಳುವುದು ಎಂದು ಮನದೊಳಗೇ ತವಕ. ಅವಳಿಗಾದರೋ ಇದಾವುದರ ಅರಿವಿಲ್ಲ. ನನ್ನನ್ನು ಒಳ್ಳೆಯ ಮಿತ್ರನಂತೆ ಕಂಡಿದ್ದಳು. ಕೊನೆಗೂ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ. ನಿನಗೆ ಅಭ್ಯಂತರವಿಲ್ಲದಿದ್ದರೆ,“ನ್ನನ್ನ ಮನದ ದೀಪಕೆ ಬತ್ತಿಯ ರೂಪದಲ್ಲಿ ನಿನ್ನ ಕಾಣುವ ಆಸೆ, ನಿನ್ನ ಕೂಸನ್ನು ನಮ್ಮ ಮನೆಯ ತೊಟ್ಟಿಲಲ್ಲಿ ಕಾಣುವ ಆಸೆ, ನನ್ನಮ್ಮಗೆ ಸೊಸೆಯಾಗಿ, ತಮ್ಮನಿಗೆ ಅತ್ತಿಗೆಯಾಗಿ, ನನ್ನಗೆ ಪ್ರೀತಿಯ ಮಡದಿಯಾಗಿ ಮನೆಗೆ ಬೆಳಕಾಗಿ ಬರುವೆಯಾ ಎಂದು”.

 ಆಹಾ..! ಎಂತಹ ಪ್ರೋಪೋಸಲ್... ನನ್ನ ಮೇಲೆ ನನಗೇ ಹೆಮ್ಮೆ ಎನಿಸಿತ್ತು. ಗರ್ವ ಪಟ್ಟುಕೊಂಡಿದ್ದೆ. ಆದರೆ ಮರು ಕ್ಷಣದ ಅವರಳ ತೀರ್ಪು ಬರುವುದರಲ್ಲಿಯೇ ಭಯದಿ ಬೆಂಡಾಗಿದ್ದೆ. ಹಾಗೆಂದು ನಾನೇನು ಮಹಾಪರಾಧ ಎಸಗಿದ್ದೆನೇ? ಇಲ್ಲ. ಖಂಡಿತಾ ಇಲ್ಲ. ಮನಸಿಗನಿಸಿದ್ದನ್ನು ಅವಳಲ್ಲಿ ಹೇಳಿಕೋಂಡವನಾಗಿದ್ದೆ. ಅಷ್ಟೇ. ಆದರೂ ಕಳವಳ. ಎಲ್ಲಿ ಇಲ್ಲವೆನ್ನುವಳೋ, ನಾನವಳಿಗೆ ತಕ್ಕವನಲ್ಲವೆಂಬಳೋ ಎಂದು. ಅಷ್ಟರಲ್ಲಿಯೇ ಯಾರೋ ಹಿಂದಿನಿಂದ ಮೈ ತಟ್ಟಿದಂತಾಯಿತು. ಎನೂ ಎತ್ತ ಎಂದು ತಿಳಿಯದವನಾಗಿದ್ದೆ. ಬೆವರು ಇಳಿದಿತ್ತು. ಬೆಳಕು ಹರಿದಿತ್ತು. ವಾಸ್ತವ ಜಗತ್ತಿಗೆ ನಾನಾಗಲೇ ಬಂದಿದ್ದೆ. ಅಮ್ಮ ಎಳಪ್ಪ ಬೆಳಗಾಯಿತು ಎಂದು ಮುಸುಕು ಎಳೆದಿದ್ದಳು. ಎಲ್ಲದರ ಅರಿವಾಯಿತು. ಇಷ್ಟೊತ್ತು ಕಂಡದ್ದೆಲ್ಲ ಕನಸು ಎಂದು ಅರಿತಾಗ, ಇದು ನನಸಾದರೆ ಎಷ್ಟು ಚೆನ್ನಾಗಿತ್ತೋ ಎಂದು ಮನದಲ್ಲೇ ಅಂದುಕೊಂಡಿದ್ದೆ. ಮತ್ತೆ ಆ ಕನಸು ನಾಳೆಯ ದಿನ ಬೀಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ ಹಾಸಿಗೆಯಲ್ಲೇ ಎದ್ದು ಕೂತಿದ್ದೆ.

Sunday, May 25, 2014

ನನ್ನ ಜೀವನದ ಸುತ್ತ.


ಅಂದು ರಾತ್ರಿ ಸರಿಸುಮಾರು ಹನ್ನೆರಡರ ಸಮಯ. ಮನೆ ತುಂಬಿದ ಅಮ್ಮನ ಆಕ್ರಂದನ. ಅವಳು ಅದೇಷ್ಟು ವೇದನೆ ಅನುಭವಿಸಿದಳೋ.... ನನಗೆ ಗೊತ್ತಿಲ್ಲ. ಆ ನರಳಾಟ ನೋಡಿ ಕಣ್ಣೀರಿನ ಕೋಡಿಯೇ ಹರಿದಿರಬೇಕು. ಆದರೂ ಅಲ್ಲೊಂದು ಸಂತಸ. ಅವಳ ಕನಸಿನ ಕೂಸಾಗಿ ನಾನು ಧರೆಗಿಳಿದಿದ್ದೆ. ಆ ಮನೆಗೆ ಎರಡನೇಯ ಕಂದಮ್ಮನಾಗಿ ನಾನು ಬಂದಿದ್ದೆ. ಒಂಬತ್ತು ತಿಂಗಳು ಅವಳ ಕರುಳ ಬಳ್ಳಿಯಾಗಿ ಬೆಳೆದೆ. ಅವಳು ತಿನ್ನುವ ಆಹಾರದಲ್ಲಿ ನಾನೂ ಒಬ್ಬ ಪಾಲುದಾರನಾದೆ. ಉರುಳಿದೆ. ಹೊರಳಾಡಿದೆ. ಅವಳ ನಿದಿರೆಗೆ ಭಂಗವಾದೆ. ಅವಳ ಕನಸಿನ ಗೋಪುರಕೆ ಹೊಳೆವ ಕಳಶವಾದೆ. ಅಂದು ನಾನು ಅದೇಗೆ ವರ್ತಿಸಿದ್ದೆನೋ.. ಹೆತ್ತ ಅಮ್ಮನಿಗೇ ಗೊತ್ತು. ಹಲವಾರು ಬಾರಿ ಅವಳ ಕಣ್ಣೀರಿನ ಕೋಡಿಗೆ ನಾನೇ ಒಡಲಾಗಿದ್ದೆನೇನೋ ಎಂಬ ಭಾವ ಇಂದು ನನಗಾಗುತ್ತಿದೆ.
ನನ್ನ ಅಮ್ಮ ನನಗೆ ಆದರ್ಶ. ಅವಳು ಈ ಹೊಸ ಆಡಂಬರದ ಪ್ರಪಂಚಕ್ಕೆ ಹೊಂದಿಕೊಂಡವಳಲ್ಲ. ಇಂದಿಗೂ ಹಣೆಯಲ್ಲಿ ಎದ್ದು ತೋರುವ ಹಣೆ ಬೊಟ್ಟು, ಹೇಳದ ಅಪ್ಪನ ಹೆಸರು, ದೇವ ಸನ್ನಿಧಿ ಕಂಡೊಡನೆ ಕೈಮುಗಿದು ನಿಲ್ಲುವ ನನ್ನಮ್ಮ, ಧಾರ್ಮಿಕತೆಯ ಹಾದಿ ಎಂದೂ ಬಿಟ್ಟವಳಲ್ಲ.  ಅವಳು ತೋರುವ ಪ್ರೀತಿ ಬೇರೆಲ್ಲೂ ಕಾಣ ಸಿಗಲ್ಲ. ಅಂದು ಅಮ್ಮ ಹೇಳಿದ ಸುಳ್ಳಿನ ಅರಿವಾಗುವ ಹೊತ್ತಿಗೆ “ಅಮ್ಮ ಹೇಳಿದ ಎಂಟು ಸುಳ್ಳುಗಳು”, ಎಂಬ ಹೊತ್ತಗೆಯೇ ಬಂದು ಬಿಟ್ಟಿತ್ತು. (ಆ ಸುಳ್ಳುಗಳ ಅಂತರಾರ್ಥ ಬಯಸಿದವರು ದಯವಿಟ್ಟು ಆ ಹೊತ್ತಗೆಯತ್ತ ಕಣ್ಣು ಹಾಯಿಸಿ ಒಮ್ಮೆ ಓದಿ.) ಹೊಟ್ಟೆ ಪಾಡಿಗಾಗಿ ಅಮ್ಮ ಹರಿಸಿದಿ ಬೆವರಿನ ಬೆಲೆ ತಿಳಿಯದವನಾಗಿದ್ದೆ.
 ಅದು ಕೃಷಿ ಕುಟುಂಬ. ಹರಕಲು ಬಟ್ಟೆಯೇ  ಅಂಗಕ್ಕೆ ಶೃಂಗಾರ. ಹೆಸರಿಗಷ್ಟೇ ಜಮೀಂದಾರ. ಬೆನ್ನಿಗಂಟಿದ ಬೇತಾಳದಂತಹ ಬಡತನ. ಕಿರಿಕಿರಿಯೆನಿಸಿದ ನೆರೆಹೊರೆಯ ಬಂಧುವರ್ಗ. ಅಪ್ಪ ಹೊಸ ಅಂಗಿ ಹಾಕಿದರೆ ನಾನೂ ಹಾದಿ ಹಿಡಿವ ಆ ಸುಸಂದರ್ಭ. ಕೀಟಲೆಯ ಅಲೆಗೆ ಹೆದರಿ ಕಡಗೋಲು ಕಂಬಕ್ಕೆ ಕಟ್ಟಿದ ಆ ನನ್ನ ಪುಟ್ಟ ಕಾಲು. ಬಿಟ್ಟರೆ ಓಡು ಹೋಗುವೆನೇನೋ ಎಂಬ ಭಯದಿ ಹಾಕಿದ ಬಾಗಿಲಿನ ಅಡ್ಡ ಹಲಗೆ. ಅದನ್ನೂ ಲೆಕ್ಕಿಸದೇ ದಾಟಿ ತೋಡಿಗೆ ಬಿದ್ದು ಹಣೆಗಂಟಿದ ಗಾಯದ ಅಚ್ಚು. ಅಮ್ಮ ಮಾಡುವುದ ಕಂಡು, ನಾನು ಮಾಡುವ ಭರದಲಿ ಕತ್ತಿ ಕೈಗೆತ್ತಿಕೊಂಡು ಕೆತ್ತಿಸಿಕೊಂಡ ಆ ನೋವಿನ ಕ್ಷಣ. ಬರುವ ನೆಂಟರಿಷ್ಟರು ತರುವ ಪೇಪರ್’ಮೆಂಟ್ಸ್. ಆಸೆಯಿಂದ ಕಾದು ಕುಳಿತು, ಕೊಟ್ಟಾಗ ತನಗರ್ಧ ನಿನಗರ್ಧ ಎಂದು ಹಂಚಿಕೊಂಬ ಅಣ್ಣ. ಹಂಚಿಕೆಯಲ್ಲಿ ಹೆಚ್ಚು ಕಡಿಮೆ ಅನಿಸಿದಾಗ ನಾನು ಮಾಡಿದ ರಂಪಾಟ. ಅಣ್ಣನೊಂದಿಗೆ ಆಡಿದ ಕುಸ್ತಿ. ಕೆಲವೊಮ್ಮೆ ಅಪ್ಪನ ಮಾತಿಗೆ ತಿರುಗಾಡಿ ತಿಂದ ಎರಡೇಟು. ತಿಂದ ಏಟಿನ ಉರಿತಕ್ಕೆ ಹತ್ತಿ ಕೂತ ಆ ಆಲದ ಮರ. ಅಪ್ಪನ ಕೋಪ ಇಳಿದು ತಿಂದ ಏಟಿನ ಬಾಸುಂಡೆಗೆ ಎಣ್ಣೆ ಹಚ್ಚಿದ ಆ ಸಂದರ್ಭ. ಕುತೂಹಲದಿ ಕಳಚಿದ ರೇಡಿಯೋ, ಹಾಳಾಗಿ ನಿಂತಾಗ ಅಪ್ಪನ ಹೊಡೆತಕ್ಕೆ ಹೆದರಿ ಅಪ್ಪಿದ ಅಮ್ಮನ ಮಡಿಲು. ಬೇಡವೆಂದರೂ ಅಮ್ಮ ಹಾಕಿದ ತೆಂಗಿನ ಎಣ್ಣೆ. ಅದು ಹಣೆಗಿಳಿದು ನವೆಯಾಗಿ ಹೆಸಿಗೆಯೆನಿಸಿದ ಕ್ಷಣ. ಅಪ್ಪನಲ್ಲಿ ಅಮ್ಮನ ಮೇಲೆನ ದೂರು. ಸವಾಲೊಡ್ಡಿ ನೆರಮನೆಯ ಅಣ್ಣನಿಂದ ಹೊಡೆಸಿಕೊಂಡು ಸೋಲುಂಡ ಮುಖ. ಕದ್ದು ತಿಂದ ದೊಡ್ಡಪ್ಪನ ಮನೆಯ ಪೇರಲೆ ಹಣ್ಣು, ಬಿದ್ದ ಮಾವಿನ ಹಣ್ಣು ಪಡೆವಲ್ಲಿ ಮಾಡಿದ ರನ್ನಿಂಗ್ ರೇಸ್, ಕನ್ನಡ ಶಾಲೆಯ ಮೊದಲ ದಿನ, ಪರೀಕ್ಷೆಯ ಫಲಿತಾಂಶದಲ್ಲಿ ಮೊದಲಿಗನಾಗಿದ್ದಕ್ಕೆ ಊಇರಿಗೇ ಹಂಚಿದ ಚಾಕಲೇಟ್ಸ್, ಆವರಣಕೆ ಸಾರಿಸಿದ ಸಗಣಿ, ಕೊಯ್ದು ತಿಂದ ಅರೆ ಹಣ್ಣಾದ ಚಿಕ್ಕು, ಅರಿಯದ ಪ್ರೀತಿಗೆ ಆಕೆ ಹಚ್ಚಿದ ದೀಪ, ನೆನೆಸಿ ಕೂತ ಹುಣಸೇ ಮರ...........ಆಹಾ................ ಅದೆಷ್ಟು ಸುಮಧುರ ಕ್ಷಣಗಳು. ನೆನೆಸಿದಷ್ಟೂ ಕಡಿಮೆ. ಅದರ ಆಸ್ವಾದ ಅನುಭವಿಸಿದವಗೇ ಗೊತ್ತು.
ಅಂದು ಅದೇ ನನ್ನ ಪ್ರಪಂಚವಾಗಿತ್ತು. ನಾ ಕಂಡ ಮಂಚಕ್ಕೆ ಮೂರೇ ಕಾಲು ಎಂಬ ಭಂಡ ವಾಗ್ವಾದ ನನ್ನದಾಗಿತ್ತು. ಅಪ್ಪನ ಮಾತಿಗೆ ಅರ್ಥ ಹುಡುಕುವ ತಾಳ್ಮೆ ನನ್ನಲ್ಲಿರಲಿಲ್ಲ. ಅಮ್ಮನ ಪ್ರೀತಿ ಅರಿವಲ್ಲಿ ವಿಫಲನಾಗಿದ್ದೆ. ಅಪ್ಪ ಮುಂಗೋಪಿ, ಬಯ್ಯುವುದು ಬಿಟ್ಟಿ ಬೇರೇನೂ ಗೊತ್ತಿಲ್ಲ ಎಂಬ ತೀರ್ಮಾನಕ್ಕೆ ನಾನು ಇಳಿದಿದ್ದೆ. ಮುಂದಾಲೋಚನೆಯ ಅರಿವು ನನ್ನಲ್ಲಿರಲಿಲ್ಲ. ಹಠಕ್ಕೆ ಮಣಿಯದೇ ಕೊಡಿಸದಿಹ ಹೊಸ ಅಂಗಿಯ ಹಿಂದಿರುವ ಬಡತನದ  ಕಹಿ ಸತ್ಯ ಅರಿವಲ್ಲಿ ನಾನು ವಿಫಲನಾಗಿದ್ದೆ.
ಆದರೆ ಇಂದು ಎಲ್ಲವೂ ಬದಲಾಗಿದೆ. ಹೊಸ ಜನಜೀವನ. ಹೊಸ ತರದ ಬದುಕು. ಇಂದು ಈ ಜಗದ ಪರಿವರ್ತನೆ ಅರಿವಲ್ಲಿ ಯಶಸ್ವಿಯಾಗಿದ್ದೇನೆ. ಜನರೊಂದಿಗೆ ಹೊಂದಿಕೊಂಡಿದ್ದೇನೆ. ಇಂದು ಅಪ್ಪ ಅಮ್ಮನ ಕಂಡು ಹೆಮ್ಮೆಯೆನಿಸುತ್ತಿದೆ. ಅದೆಷ್ಟು ಕಷ್ಟ ಪಟ್ಟರು ಅವರು. ಅಪ್ಪ ನನಗಾಗಿ ಎಂದೂ ಆಸ್ತಿ ಮಾಡಿಲ್ಲ. ಅರಮನೆ ಕಟ್ಟಿಸಿಲ್ಲ. ನನ್ನನ್ನೇ ಆಸ್ತಿ ಮಾಡಲು ಹೊರಟ. ಕಷ್ಟದ ಹಾದಿ ತುಳಿದ. ಅಸತ್ಯಕ್ಕೆ ಸೆಡ್ಡು ಹೊಡೆದು ನಿಂತ. ಕೆಲವರ ಕಣ್ಣಿಗೆ ನಿಷ್ಠೂರವಾದಿ ಎನಿಸಿದ. ತಪ್ಪು ಕಂಡಲ್ಲಿ ಖಂಡಿಸಿದ. ಸತ್ಯಕ್ಕೆ ತಲೆ ಬಾಗಿದ. ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ದುಡಿದ. ನೊಂದವರಿಗೆ ನೆರವಾದ.
ಇಂದು  ಸಿರಿವಂತರಿಲ್ಲದಿರಬಹುದು. ಆಡಂಬರದ ಜೀವನ ಇಲ್ಲದಿರಬಹುದು. ಆದರೆ ಎಂದಿಗೂ ಹೊಟ್ಟೆಗೆ ಹಿಟ್ಟು, ಮಾನ ಮುಚ್ಚಲು ಬಟ್ಟೆ ಕೊರತೆ ಇಲ್ಲ. ಪ್ರೀತಿ ವಿಶ್ವಾಸದಲ್ಲಿ ಎಲ್ಲರಿಗಿಂತ ಸಿರಿತನರ ಬಾಳು ನಮ್ಮದು. ಅಂದು ಅಪ್ಪ ಎನ್ನ ಮೇಲೆ ಸಾಧಿಸಿದ ಹತೋಟಿ ಇಂದು ನಾನು ನಾನಾಗಿ ಬಾಳಲು ಎಡೆ ಮಾಡಿಕೊಟ್ಟಿತು. ಇಂದು ನನ್ನಿಷ್ಟದಂತೆ ಬಾಳಲು ಅವಕಾಶ ಕೊಟ್ಟ. ಜೊತೆಯಲ್ಲಿ ಒಂದಿಷ್ಟು ಜವಾಬ್ದಾರಿಯನ್ನೂ ಇತ್ತ. ಎಲ್ಲಿ ಹೋದರೂ ಬದುಕಬಲ್ಲೆ ಎಂಬ ಧೈರ್ಯ ನನ್ನದಾಗುವಂತೆ ಮಾಡಿದಾತ ನನ್ನ ಅಪ್ಪ.

ಅಪ್ಪ/ಅಮ್ಮ..........
ನಾನಿಷ್ಟನ್ನೇ ಹೇಳ ಬಲ್ಲೆ. ಹೆಮ್ಮೆಯ ಜೀವನ ಕಾಣಲು ಸಹಕರಿಸಿದ ನಿಮಗೆಂದೂ ನಾನು ಚಿರಋಣಿ. ನಿಮಗೆ ಐಶ್ವರ್ಯ ತುಂಬಿದ ಜೀವನ ಕೊಡ್ತೀನೋ ಇಲ್ವೋ... ನೆಮ್ಮದಿಯ ದಿನಗಳನ್ನಂತೂ ಖಂಡಿತಾ ಕೊಡ್ತೀನಿ. ಕೀರುತಿ ತರ್ತೀನೋ ಇಲ್ವೋ... ಇರೋ ಮರ್ಯಾದಿ ಹರಾಜು ಹಾಕಲ್ಲ. ಸಾಧನೆ ಮಾಡ್ತೀನೋ ಇಲ್ವೋ... ಛೀ ಥೂ ಎನ್ನಿಸಿಕೊಂಬ ಬಾಳು ಬಾಳಲ್ಲ. ಇನ್ನೊಬ್ಬರಿಗೆ ಒಳ್ಳೇದು ಮಾಡ್ತೀನೋ ಇಲ್ವೋ... ಕೆಟ್ಟದ್ದು ಖಂಡಿತಾ ಮಾಡಲ್ಲ. ನನ್ನೀ ಅರಿವಿನ ಬೇರಾದ ನಿಮಗೆ ನಾ ಚಿರಋಣಿ.
ಅಂತೆಯೇ ನಾನು ಈ ಮಟ್ಟಕ್ಕೆ ಬರಲು ಸಹಕರಿಸಿದ ಹಾಗೂ ನನ್ನ ಜೀವನಕ್ಕೆ ಒಂದು ಅರ್ಥ ಕೊಟ್ಟ ಎಲ್ಲ ಸಹೃದಯ ಬಂಧುಗಳಿಗೆ, ನ್ನನ್ನನ್ನು ಸಹಿಸಿದ ನೆರೆಹೊರೆಯ ಮಹನೀಯರಿಗೆ, ಸ್ನೇಹಿತ ಪ್ರಪಂಚಕ್ಕೆ, ಜ್ಞಾನವಿತ್ತ ಗುರು ವೃಂದಕ್ಕೆ, ಅನ್ನವಿತ್ತ ದಾತರಿಗೆ, ಬೆಂಗಾವಲಾಗಿ ನಿಂತ ಸಹೋದರನಿಗೆ, ಅನಂತಾನಂತ ಧನ್ಯವಾದಗಳು.



!!ಹರಿಃ ಓಂ!!

Saturday, May 17, 2014

ಮೋದಿಗೊಂದು ಪತ್ರ.:



ಭವ್ಯ ಭಾರತದ ಕನಸುಗಾರ

17-ಮೇ-2014
ನರೇಂದ್ರ ಮೋದಿ
ಪ್ರಧಾನ ಮಂತ್ರಿ
ಭಾರತ

ವಿಷಯ: ನಿನ್ನ ಕೈನಲ್ಲಿತ್ತ ನನ್ನ ಕನಸಿನ ಭಾರತ.
ಡಿಯರ್ ಮೋದಿ ಜಿ,
                            ನಾನು ಈ ದೇಶದ ಪ್ರಜೆ. ಈ ಮೂಲಕ ತಿಳಿಸುವುದೇನೆಂದರೆ, ನನ್ನ ಮನದಲ್ಲಿ ಹೊಸ ಸಂಚಲನ ಮೂಡಿಸಿದ ನಿನಗೆ ನನ್ನ ಮನದಾಳದ ಅಭಿನಂದನೆಗಳು. ನನ್ನ ದೇಶವನ್ನು ನಿನ್ನ ಕೈಗೆ ಕೊಡುತ್ತಿದ್ದೇನೆ.  ಈ ಹಿಂದೆ ಕಂಡ ಸರ್ಕಾರ ನನಗೆ ಬೇಡ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ವ್ಯಕ್ತಿಯ ನಿರೀಕ್ಷೆಯಲ್ಲಿದ್ದೆ. ನಿನ್ನ ಕಂಡ ದಿನವೇ ಅದು ನನಸಾಗುವ ಹಂಬಲ ನನ್ನಲ್ಲಿ ಮೊಳಕೆಯೊಡೆಯಿತು. ನಾನೆಂದೂ ನಿನಗಾಗಿ ಶ್ರಮಿಸಿಲ್ಲ. ಅಭಿಮಾನವೊಂದೇ ನಾ ನಿನಗಾಗಿ ಕೊಟ್ಟ ಕಾಣಿಕೆ. ನಿನ್ನ ಬೆಂಬಲಿಗರಲ್ಲಿ ನಾನು ಒಬ್ಬ. ಆದರೆ ಒಮ್ಮೆಯೂ ನಿನ್ನನ್ನು ಬೇಂಬಲಿಸಲು ಯಾವುದೇ  ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ನಿನಗೇ ಓಟು ನೀಡಿ ಎಂದು ಯಾರನ್ನೂ ಪ್ರೇರೇಪಿಸಿಲ್ಲ. ನನ್ನ ಕಾಯಕ ನಿನಗಾಗಿ ನನ್ನದೊಂದು ಓಟು ನೀಡಿ, ನಿನ್ನ ಗೆಲ್ಲಿಸಲು ಪ್ರಚಾರದಲ್ಲಿ ಪಾಲ್ಗೊಳ್ಳುವುದಷ್ಟೇ ಅಲ್ಲ ಅನ್ನೋ ಭಾವನೆ ನನ್ನ ಈ ವರ್ತನೆಗೆ ಕಾರಣ. ನನ್ನ ಕನಸಿನ ಭಾರತ ರೂಪುಗೊಳ್ಳಲು ನಿನ್ನಂಥಹ ಒಬ್ಬ ಪ್ರಭಾವೀ ನಾಯಕನ ಅವಶ್ಯಕತೆಯಿತ್ತು. ಅವಶ್ಯಕತೆ ಪೂರೈಸಲು ನನಗೊಂದು ಅವಕಾಶವಿತ್ತು. ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡವನಾಗಿದ್ದೇನೆ. ಈಗ ನಿನ್ನಗೆ ಈ ದೇಶದ ಸಂಪೂರ್ಣ ಜವಾಬ್ದಾರಿಯನ್ನು ವಹಿಸುತ್ತಿದ್ದೇನೆ. ಹಾಗೆಂದು, ನಾನು ಕೈ ಕಟ್ಟಿ ಕೂರುವುದಿಲ್ಲ. ಈ ನನ್ನ ಕನಸಿನ ಭಾರತವನ್ನು ರೂಪುಗೊಳಿಸಲು ನಿನ್ನೊಬ್ಬನಿಂದ ಕಂಡಿತಾ ಸಾಧ್ಯವಿಲ್ಲ. ಇಲ್ಲಿ ನಿನ್ನ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ನನ್ನ ಕರ್ಥವ್ಯ ಕೂಡ ಇದೆ. ಅದನ್ನು ನಾನು ಅರಿತವನಾಗಿದ್ದೇನೆ.
      ದೇಶಕ್ಕೆ ಮೋದಿ ಬೇಕು, ಆದರೆ ನಾನು ಮಾತ್ರ ಮೊದಲಿನಂತೆಯೇ ಇರುತ್ತೇನೆ ಎಂದರೆ ಈ ಹಿಂದಿನ ದಿನಗಳು ಮರುಕಳಿಸುವುದರಲ್ಲಿ ಸಂಶಯವಿಲ್ಲ. ಅದನ್ನರಿತ ನಾನು, ನನ್ನಲ್ಲಿ ನಿನ್ನನ್ನು ಕಾಣ ಬಯಸುತ್ತೇನೆ. ಅಂದರೆ ನಾನೂ ಒಬ್ಬ ಮೋದಿಯಾಗ ಬಯಸುತ್ತೇನೆ.
ಉಳಿದವರು ಹೇಗೋ ನನಗೆ ಗೊತ್ತಿಲ್ಲ, ಆದರೆ ನಾನು ಮಾತ್ರ ದೇಶ ಕಟ್ಟುವಲ್ಲಿ ನನ್ನ ಕೈಲಾದಷ್ಟು ಪರಿಶ್ರಮ ಪಡುತ್ತೇನೆ. ಈ ನಿಟ್ಟಿನಲ್ಲಿ ಬದುಕುತ್ತೇನೆ. ಉಳಿದವರಿಗಾಗಿ ಒಳ್ಳೆಯದನ್ನು ಮಾಡಲಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಯಾರಿಗೂ ಕೇಡು ಬಯಸಲ್ಲ. ಈ ಯೋಚನೆ ಪ್ರತಿಯೊಬ್ಬ ಭಾರತೀಯನಲ್ಲೂ ಬಂತೂ ಎಂದರೆ,  ನನ್ನ ಕನಸಿನ ಭಾರತವನ್ನು ರೂಪಿಸುವಲ್ಲಿ ಏನೂ ಕಷ್ಟ ಬಾರದು.
ಹಾಗೆಯೇ, ನಿನ್ನೊಂದಿಗೆ ಕೈಗೂಡಿಸಿರುವ ಹಲವು ಜನಪ್ರತಿನಿಧಿಗಳು ನಿನ್ನ ಪ್ರಭಾವದಿಂದ ಗೆದ್ದು ಬಂದಿರುವರು ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ನಿಜ ಹೇಳ ಬೇಕೆಂದಿದ್ದರೆ ನೀನು ಬಿಜೆಪಿಯ ಮುಂದಾಳತ್ವ ವಹಿಸದೇ ಇದ್ದಲ್ಲಿ ಈಗ ಕಾಂಗ್ರೆಸ್ಸ್ ಗೆ ಬಂದಂತಹ ದುಃಸ್ಥಿತಿ ಬಿಜೆಪಿಯ ಪಾಲಾಗುತ್ತಿತ್ತು. ನಿನ್ನ ಪ್ರಭಾವದ ಅಲೆಯೇ ಕೆಲವರು ಗದ್ದುಗೆಗೇರಲು ಕಾರಣ. ಅವರೆಲ್ಲರುಗಳು ಈ ಹಿಂದಿನ ತಪ್ಪು ತಿದ್ದಿಕೊಂಡು ಮುಂದಿನ ದಿನಗಳಲ್ಲಿ ತಮ್ಮ  ಸ್ವಶಕ್ತಿಯಿಂದ ಜನರನ್ನು / ಜನರ ಮನವನ್ನು ಗೆಲ್ಲುವ ಪ್ರಯತ್ನ ಮಾಡುವಂತಾಗಲಿ ಎಂದು ಬಯಸುತ್ತೇನೆ.
ನೀನು ಈ ಹಿಂದೆ ಆಡಿದ ಮಾತುಗಳನ್ನು ಮಾಡಿ ತೋರಿಸುವ ಸಮಯ ಒದಗಿ ಬಂದಿದೆ. ಭ್ರಷ್ಟಮುಕ್ತ ಸರಕಾರ, ದೇಶದ ಸರ್ವತೋಮುಖ ಅಭಿವೃದ್ಧಿ, ಕಪ್ಪು ಹಣ ದೇಶಕ್ಕೆ ತರುವುದು, ಉದ್ಯೋಗ ಸೃಷ್ಠಿ ಹೀಗೆ ಹಲವಾರು ಯೋಜನೆಗಳು ನನ್ನ ಕನಸಿನ ಭಾರತಕ್ಕಾಗಿ ನೀನು ಹಮ್ಮಿಕೊಂಡ ಕೆಲಸಗಳು ಎಂಬುದನ್ನು  ಈ ಸಂದರ್ಭದಲ್ಲಿ ನೆನಪಿಸಲು ಬಯಸುತ್ತೇನೆ.
ನೀನು ಈ ದೇಶ ಕಂಡ ಮತ್ತೊಬ್ಬ ವಿವೇಕಾನಂದ ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. ಅಭಿವೃದ್ಧಿಯ ಜೊತೆಗೆ ನಮ್ಮೆಲ್ಲರ ಅಭಿಮಾನವನ್ನು ಕಾಯ್ದುಕೊಳ್ಳುವ ಅತ್ಯಂತ ದೊಡ್ಡ ಹೊಣೆ ನಿನ್ನ ಮೇಲಿದೆ. ನೀನು ನಮ್ಮೆಲ್ಲರ ಆಶಾ ಕಿರಣ. ನಮ್ಮ ನಿರೀಕ್ಷೆ ಹುಸಿಗೊಳಿಸದಿರು. ಒದಗಿಸುವ ಸವಲತ್ತುಗಳು ಇಂದು ನಮ್ಮ ಜನರನ್ನು ಆಲಸಿಗಳ್ಳನಾಗಿ ಮಾಡುತ್ತಿದೆ ಎನ್ನುವುದು ಕಟು ಸತ್ಯ. ನೀನು ತರುವಂತಹ ಯೋಜನೆಗಳು ಯಾವುದೇ ಒಂದು ಜಾತಿಗಾಗಲಿ, ಅಥವಾ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗದಿರಲಿ. ಅವರವರ ಸಾಮರ್ಥ್ಯದಿಂದ ಜನರು ಮೇಲೇಳುವಂತಾಗಲಿ. ಕೊಡುವ ಸವಲತ್ತುಗಳು ಜನರ ಅಭಿಮಾನ ಗಳಿಸುವ ನಿಟ್ಟಿನಲ್ಲಿ ಅವರನ್ನು ಅಯೋಗ್ಯರನ್ನಾಗಿಸುದು ಬೇಡ. ಜನರು ಸ್ವಾವಲಂಬಿಗಳಾಗಿ ಬದುಕುವಂತಾಗಲಿ. ಮೀಸಲಾತಿ ಬೇಡವೇ ಬೇಡ. ಪಡಿತರ ಚೀಟಿ ರದ್ದಾಗಲಿ. ಮುಕ್ತ ಮಾರುಕಟ್ಟೆಯಲ್ಲಿ ಎಲ್ಲರಿಗೂ ಎಲ್ಲವೂ ಅತೀ ಕಡಿಮೆ ಬೆಲೆಗೆ ಸಿಗುವಂತಾಗಲಿ. ಜನರೆಲ್ಲ ದುಡಿದು ತಿನ್ನುವಂತಾಗಲಿ.
ಕೊನೆಯಲ್ಲಿ ಇನ್ನೊಂದು ಮಾತು, ನಿನ್ನ ಬೆನ್ನೆಲುಬಾಗಿ ನಿಂತ ಎಲ್ಲ ಸಹೃದಯಿಗಳನ್ನು ಸದಾ ನೆನೆಸುತ್ತಲೇ ಇರು. ಹಿರಿಯರಲ್ಲಿ ಗೌರವವಿರಲಿ. ಗೌರವ ಎಂದರೆ ಆಡುವ ಮಾತಲ್ಲಲ್ಲ. ಮಾಡುವ ಕೃತಿಯಲ್ಲಿರಲಿ. ನಿನಗನಿಸಿರಬಹುದು... ಈತ ತನ್ನನ್ನು 'ನೀನು' ಎಂದು ಸಂಬೋಧಿಸಿ ಇತರರಲ್ಲಿ ಗೌರವ ತೋರು ಅಂತಿರುವನಲ್ಲ ಎಂದು. ಈಗಾಗಲೇ ಹೇಳಿರುವಂತೆ ನನ್ನಲ್ಲಿ ಒಬ್ಬ ಮೋದಿಯನ್ನು ಕಾಣ ಬಯಸಿದ್ದೇನೆ. ಅಂದರೆ ನನಗೆ ನಾನೇ ಗೌರವ ಕೊಟ್ಟುಕೊಂಬುದರಲ್ಲಿ ಅರ್ಥವೆಲ್ಲಿದೆ..... ಅಲ್ಲವೇ...?

ಕಾರಣ ನಿನ್ನಲ್ಲಿ ಕೇಳಿಕೊಂಬುದಿಷ್ಟೆ..... ನೀ ನಂಬಿದ ಜನ ನಿನ್ನ ಕೈ ಹಿಡಿದಿದ್ದಾರೆ.  ಈಗ ನಿನ್ನ ಸರದಿ. ನಿನ್ನ ನಂಬಿದ ಜನರ ಕೈ ನೀ ಬಿಡದಿರು.
ಜೈ ಮೆರಾ ಭಾರತ್

ನನ್ನ ಕನಸಿನ ನಿರೀಕ್ಷೆಯಲ್ಲಿ....
(ದೇಶದ ಪ್ರಜೆ).