Monday, May 23, 2016

ನಗುವವರು ಬೇಕಾಗಿದ್ದಾರೆ.... ಸಂಪರ್ಕಿಸಿ.....!!!


ಎಂತಹ ಕರ್ಮ ಸ್ವಾಮೀ...?? ಜಗತ್ತು ಹೇಗೆ ಬದಲಾಗಿದೆ ನೋಡಿ. ನಗುವುದಕ್ಕೋ, ಅಳುವುದಕ್ಕೋ, ನಗುವ ಹಂಚಿ ಜನರೊಡನೆ ಬೆರೆಯುವುದಕ್ಕೋ ಜಾಹಿರಾತು ನೀಡುವ ಪ್ರಪಂಚ ಇದಾಗ ಹೊರಟಿದೆ. ಎಷ್ಟು ದುಡಿದರೂ ನೆಮ್ಮದಿಯ ಖರೀದಿಸಲಾರ ಎಂಬ ನೈಜತೆ ಕಣ್ಣೆದುರಿಗಿದ್ದರೂ ಇದ್ದ ಒಂದು ಜನ್ಮವನ್ನು ಹಣಕ್ಕಾಗಿ ಕಳೆಯುತ್ತಿದ್ದೇವೆ. ಜೀವನಕ್ಕೆ ಹಣ ಬೇಕು ನಿಜ. ಆದರೆ ಜೀವನವೇ ಹಣವಲ್ಲ. ಹಣದ ವ್ಯಾಮೋಹದಲ್ಲಿ ದೈನಿಕ ಕೆಲಸ ಕಾರ್ಯಗಳು ಆಧುನೀಕರಣಗೊಳ್ಳುತ್ತಿದೆ. ಹಿಂದೆ ಬೇಜಾರಾದರೆ ನೆರೆಹೊರೆಯವರಲ್ಲಿ ಹರಟುವುದೋ, ವೈಚಾರಿಕ ಚರ್ಚೆ ನಡೆಸುವುದೋ, ಊರ ಬಯಲಲ್ಲಿ ಯಕ್ಷಗಾನ ತಾಳಮದ್ದಲೆಯಂತ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಬೆರೆಯುವುದೋ ಮಾಡುತ್ತಿದ್ದ ಜನ ಇಂದು ಕಂಪ್ಯೂಟರೀಕರಣಗೊಂಡು ಜನರ ಸಂಪರ್ಕವೇ ಇಲ್ಲದೇ ಬದುಕುತ್ತಿದ್ದೇವೆ. ಮಕ್ಕಳು ಅಪ್ಪನ ಮುಖ ಕಾಣದೇ ಅದೆಷ್ಟೋ ದಿನಗಳಾಗುವುದುಂಟು.

ದಿನವಿಡೀ ಕಂಡವರ ಕೈಕೆಳಗೆ ದುಡಿದು ಸೋತು ಸುಣ್ಣವಾಗಿ, ಹಣದ ಗಳಿಕೆಯೇ ಜೀವನ ಶ್ರೇಷ್ಟ ಎಂದು ಭಾವಿಸಿ, ಹೆಂಡತಿ ಮಕ್ಕಳು ನೆಂಟರು ಇಷ್ಟರು, ಸ್ನೇಹಿತರು ಇಷ್ಟೇ ಏಕೆ....? ಕೊನೆಗೆ ತಮ್ಮನ್ನು ತಾವು ಮಾತನಾಡಿಸಿಕೊಳ್ಳಲು ಸಮಯವಿಲ್ಲದ ಸೋ ಕಾಲ್ಡ್ ಪ್ರಗತಿಪರರೆನಿಸಿಕೊಂಡಿದ್ದೇವೆ. ನಮ್ಮವರೊಂದಿಗೆ ಕುಳಿತು ಉಂಡು ಅದೆಷ್ಟು ಕಾಲವಾಗುವುದೋ ಏನೋ... ಅಪ್ಪನಿಗೆ ಉದ್ಯೋಗದ ಕಿರಿಕಿರಿ... ಅಮ್ಮನಿಗೆ ಮನ ಕದಡುವ/ಕಾಡುವ ದಾರಾವಾಹಿಗಳ ಹಾವಳಿ. ಮಕ್ಕಳಿಗಾದರೋ ಸಿನೇಮಾ, ಫೇಸ್'ಬುಕ್, ವಾಟ್ಸ್'ಆಪ್ ಗಳ ಕಿರುಕುಳ. ಒಟ್ಟಿನಲ್ಲಿ ಎಲ್ಲರಿಗೂ ಅವರವರದೇ ಸಮಸ್ಯೆ. ಕೂತು ಉಂಬುವುದು ಬಿಡಿ ಮುಖ ಕಂಡು ಹಾಯ್ ಬಾಯ್ ಹೇಳಲೂ ಪುರುಸೊತ್ತಿಲ್ಲ.

ಭಾವನೆಗಳೆಲ್ಲ ಬತ್ತಿ ನಿಂತು, ಭಾವನಾತ್ಮಕ ಸಂಬಂಧಗಳು ನಶಿಸುತ್ತಿದೆ. ಸಮಸ್ಯೆಗಳೇ ದೊಡ್ಡ ಸಮಸ್ಯೆಯಾಗಿದೆ. ಪ್ರೀತಿ, ವಾತ್ಸಲ್ಯ, ಸ್ನೇಹ, ನಂಬಿಕೆ ಎಲ್ಲವೂ ಸಂತೆಯಲಿಟ್ಟ ಬಾಡಿದ ತರಕಾರಿಯಂತಾಗಿದೆ. ನಲಿವುದನ್ನೇ ಮರೆತಿದ್ದೇವೆ. ನಗು, ನೀರೇ ಇಲ್ಲದ ಬಾವಿಯಂತಾಗಿದೆ.

ಇಲ್ಲದ ನಗುವಿಗಾಗಿ ನಗುವವರು ಬೇಕಾಗಿದ್ದಾರೆ.... ಸಂಪರ್ಕಿಸಿ.....!!!

ಗಳಿಕೆ ಎಷ್ಟು..... ಉಳಿಕೆ ಎಷ್ಟು....!!!


ಸುಬ್ಬಕ್ಕನಿಗೆ ಮೂರು ಮಕ್ಕಳು. ಗಂಡ ಕಳೆದೆರಡು ವರ್ಷಗಳ ಹಿಂದೆ ರಸ್ತೆ ಆಘಾತದಲ್ಲಿ ವಿಧಿವಶನಾಗಿದ್ದ. ಇದರ ನಂತರ ಮಕ್ಕಳ ಹೊಣೆ ಹೊತ್ತ ಸುಬ್ಬಕ್ಕ ಮಕ್ಕಳ ಕನಸುಗಳಿಗೆ ಇಲ್ಲವೆಂದಿರಲಿಲ್ಲ. ಕಡಿದು ಕೂರಿಸುವಷ್ಟು ಆಸ್ತಿ ಪಾಸ್ತಿ ಇಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೇನು ಕಡಿಮೆಯಿರಲಿಲ್ಲ. ಮೂವರೂ ಚೆನ್ನಾಗಿಯೇ ಓದುತ್ತಿದ್ದರು. ಹಿರಿಯವ ವಿಜ್ಞಾನ ಓದಿ ಎಂಜಿನಿಯರ್ ಆದ. ತಿಂಗಳಿಗೆ ಹರಿದು ಹಂಚುವಷ್ಟು ಸಂಬಳ. ಏನಕ್ಕೂ ಕಡಿಮೆಯಿರಲಿಲ್ಲ. ಶಹರದಲ್ಲೇ ಆಸ್ತಿ ಪಾಸ್ತಿ ಎಲ್ಲವನ್ನೂ ಮಾಡಿಕೊಂಡ. ಓದು, ಘನತೆಗೆ ತಕ್ಕ ವಧು ಹುಡುಕಿ ಮದುವೆಯೂ ಆದ. ಇನ್ನು, ಎರಡನೇಯವ. ವಾಣಿಜ್ಞ ಶಾಸ್ತ್ರ ಓದಿ ಶಹರದಲ್ಲಿ ತನ್ನದೇ ಆದ ಪುಟ್ಟ ದಿನಸಿ ಅಂಗಡಿಯನ್ನು ತೆರೆದಿದ್ದ. ವರಮಾನ ಹೇಳಿಕೊಂಬಷ್ಟಿರದಿದ್ದರೂ ಜೀವನಕ್ಕೇನೂ ಕೊರತೆಯಿರಲಿಲ್ಲ. ಅವನಿಗೂ ತಕ್ಕ ವಧುವ ನೋಡಿ ಮದುವೆ ಮುಗಿಸಿದ್ದಳು ಸುಬ್ಬಕ್ಕ. ಮೂರನೆಯವ ಕೃಷಿಯಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿ ಊರಲ್ಲೇ ಕೃಷಿ ಮಾಡಿಕೊಂಡಿದ್ದ. ವೈಜ್ಞಾನಿಕ ವಿಧಿ ವಿಧಾನಗಳನ್ನು ಬಳಸಿ ಇರುವುದರಲ್ಲೇ ಉತ್ತಮ ಇಳುವರಿ ತೆಗೆಯುತ್ತಿದ್ದ. ರಾಜ್ಯಮಟ್ಟದಲ್ಲಿ ಉತ್ತಮ ಕೃಷಿಕ ಎಂಬ ಖ್ಯಾತಿಗೆ ಭಾಜನನಾಗಿದ್ದ.

ಆಗಲೇ ಹೇಳಿದಂತೆ, ಹಿರಿಯವಗೆ ಗಳಿಕೆಗೇನೂ ಕಡಿಮೆಯಿರಲಿಲ್ಲ. ಲಕ್ಷಗಟ್ಟಲೇ ಬರುತ್ತಿತ್ತು. ಜೀವನವೂ ಅದಕೆ ತಕ್ಕನಾಗಿತ್ತು. ಹೆಂಡತಿಯೂ ಇವೆಲ್ಲದಕ್ಕೆ ಪೂರಕವಾಗಿದ್ದಳು. ಅವಳೂ ದುಡಿವವಳೇ. ಇಬ್ಬರೂ ದುಡಿವವರಾದ್ದರಿಂದ ಅಡುಗೆ ಬಟ್ಟ ಅನಿವಾರ್ಯವಾಗಿದ್ದ. ಮಕ್ಕಳ ನೋಡಿಕೊಂಬಲು ಮನೆಗೆಲಸದವಳು ಅವಶ್ಯವೆನಿಸಿತ್ತು. ವಾರಾಂತ್ಯದ ವ್ಯವಹಾರ ಮುಗಿಲ ಮುಟ್ಟುತ್ತಿತ್ತು. ಹಾಗೆಂದು ಯಾವುದೇ ಚಟವಿರಲಿಲ್ಲ. ಖರ್ಚು ಮಾಡುವ ಪದ್ದತಿ ಹಾಗಿತ್ತು ಅಷ್ಟೇ. ಖರ್ಚು ಅವಶ್ಯಕತೆಯ ಗಡಿ ದಾಟಿದ್ದರಿಂದ ಗಳಿಕೆ ಅನಿವಾರ್ಯತೆಯ ಹಾದಿ ಕಂಡಿತ್ತು. ಆಯ ವ್ಯಯ ಲೆಕ್ಕಾಚಾರ ಮಾಡಿದರೆ ತಿಂಗಳ ಕೊನೆಯಲ್ಲಿ ಅಷ್ಟಕ್ಕಷ್ಟೇ. ಗಳಿಕೆ ನೂರು... ಉಳಿಕೆ ಮೂರು...!!!

ಎರಡನೇಯವನ ಜೀವನ ಅವನಿಗಿಂತ ಭಿನ್ನವಾಗಿತ್ತು. ಅಚ್ಚುಕಟ್ಟಾದ ಜೀವನ ನಡಿಸುತ್ತಿದ್ದ. ದುಡಿದು ತರುವುದ ಗಂಡನ ಕೆಲಸ.ತನ್ನದೇ ದಿನಸಿ ಅಂಗಡಿ ಇರುವುದರಿಂದ ಖರ್ಚು ಕಡಿಮೆಯಿರುತಿತ್ತು. ಎಲ್ಲವೂ ಅಸಲು ಬೆಲೆಗೇ ಸಿಗುತ್ತಿತ್ತು. ದಿನಸಿ ಅಂಗಡಿಯ ಲಾಭದ ಖರ್ಚು ಇವರಿಗೆ ಉಳಿತಾಯ. (ಮಾರುವವ ತನ್ನ ಲಾಭವಿಟ್ಟುಕೊಂಡೇ ವ್ಯವಹಾರ ನಡೆಸುವುದು. ಖರೀದಿಸುವವಗೆ ಅವನ ಲಾಭ ಖರ್ಚಿನ ಸಮಾನ. ಇಲ್ಲಿ ಈತನೇ ಒಡೆಯನಾದ್ದರಿಂದ ಲಾಭದ ಖರ್ಚು ಉಳಿತಾಯವಾಗುತಿತ್ತು. ಅವನ ಹೆಂಡತಿಯೂ ಅಷ್ಟೇ. ಮನೆ ನಿಭಾಯಿಸುವುದು ಆಕೆಯ ಜವಾಬ್ದಾರಿ. ಬರುವುದರಲ್ಲಿ ಚೆಂದದಿಂದ ಜೀವನ ಕಟ್ಟುತ್ತಿದ್ದಳು. ಅಡುಗೆಯವನಿಗೆಂದೋ, ಮನೆಗೆಲಸದವಳಿಗೆಂದೋ ಇಲ್ಲ ಮಕ್ಕಳ ಮನೆಪಾಠ ಹೇಳಿಸಲೆಂದೋ ಜನರ ಇಡುವ ಅಗತ್ಯ ಇರಲಿಲ್ಲ. ತಾನೇ ಸ್ವತಃ ಹೊಲಿಗೆ ಮಾಡುತ್ತಿದ್ದರಿಂದ ಬಟ್ಟೆ ಬರೆಗೆಂದು ಹಣ ಚೆಲ್ಲುತ್ತಿರಲಿಲ್ಲ. ಖರ್ಚೇ ಇಲ್ಲದ ಜೀವನಕ್ಕೆ ಮೂರರ ಗಳಿಕೆ ಉಳಿಕೆಯೇ ಅಲ್ಲವೇ.....???

ಇನ್ನು ಮೂರನೇಯವ. ಅವನಿಗೂ ಮದುವೆ ಆಗಿತ್ತು. ಹೆಂಡತಿ ಗಂಡನಿಗೆ ಸಕಲ ಕಾರ್ಯದಲ್ಲಿ ನೆರವಾಗುತ್ತಿದ್ದಳು. ಅತ್ತೆಯ ಮುದ್ದಿನ ಸೊಸೆಯೆನಿಸಿಕೊಂಡಿದ್ದಳು. ಆತ ಉತ್ತಮ ಕೃಷಿಕ. ಇಲ್ಲವೆನ್ನುವುದು ಯಾವುದೂ ಇರಲಿಲ್ಲ. ದೈನಿಕ ಜೀವನಕ್ಕೆ ಬೇಕಾದುದೆಲ್ಲವ ಸ್ವತಃ ಬೆಳೆಯುತ್ತಿದ್ದ. ಜೀವನಕ್ಕೆ ಸಾಕಾಗಿ ಮಿಕ್ಕುಳಿಯುತ್ತಿದ್ದುದ ಉತ್ತಮ ಬೆಲೆಗೆ ಮಾರುತ್ತಲಿದ್ದ. ಆತ ಯಾವುದೇ ರಾಸಾಯನಿಕ ಬಳಸದೇ ಇರುವುದರಿಂದ ಸಂತೆಯಲ್ಲಿ ಆತನ ಬೆಳೆಗೆ ಉತ್ತಮ ಬೆಲೆ ಸಿಗುತ್ತಿತ್ತು. ಹಾಲಿನ ವ್ಯಾಪಾರವನ್ನೂ ನಡೆಸುತ್ತಿದ್ದ. ಹಾಗಾಗಿ ಹಾಲು ಮೊಸರು ತುಪ್ಪ ಬೆಣ್ಣೆ ಹೇಯವಾಗಿರುತಿತ್ತು. ಮನೆಯಲ್ಲಿ ನಾಲ್ಕಾರು ಆಳು ಮಂದಿ ವರ್ಷವಿಡೀ ಉಣ್ಣುತ್ತಿದ್ದರು. ಹಬ್ಬ ಹರಿದಿನ ಬಂತೆಂದರೆ ಊರಿಗೂರೆ ಕರೆದು ಸಂಭ್ರಮಿಸುತ್ತಿದ್ದ. ಸಂತೋಷದ ಜೀವನ ಕಂಡಿದ್ದ.

ನೋಡಿ ಸ್ನೇಹಿತರೆ. ಇದು ನಾವು ಕಾಣ ಸಿಗುವ ಮೂರು ವಿಧದ ಜೀವನ ಕ್ರಮಗಳು. ಹಿರಿಯವ ಯಾರದೋ ಕೈಕೆಳಗೆ ಸಾಕಷ್ಟು ದುಡಿಯುತ್ತಾನೆ. ಅದಕೆ ತಕ್ಕನಾಗಿ ಖರ್ಚು ಮಾಡುತ್ತಾನೆ. ಕೆಲವು ಅನಿವಾರ್ಯವೆನಿಸಿದರೆ, ಕೆಲವು ಆಡಂಬರದ ಖರ್ಚು. ಕೆಲವು, ಅವನ ಜೀವನ ಕ್ರಮಕ್ಕೆ ತಕ್ಕಂತೆ ಅನಿವಾರ್ಯತೆಗಳು ಹುಟ್ಟುಹಾಕಿಕೊಳ್ಳುತ್ತವೆ. ನೆಂಟರಿಷ್ಟರ ನಂಟಿಲ್ಲ. ವರ್ಷಕ್ಕೊ ಎರಡು ವರ್ಷಕ್ಕೋ ಒಮ್ಮೆ ಮನೆಗೆ ಬರುತ್ತಿದ್ದ. ಆಯ ವ್ಯಯ ಸಮನಾಗಿ ತೂಗುತಿತ್ತು. ಇನ್ನು ಎರಡನೇಯವ. ಅವನ ಗಳಿಕೆ ಕಡಿಮೆಯಿದ್ದರೂ ಅಚ್ಚುಕಟ್ಟಾದ ಜೀವನ ಕ್ರಮದಿಂದ ಉಳಿಕೆ ಕಾಣುತ್ತಿದ್ದ. ಆಡಂಬರದ ಜೀವನದ ಹಂಗಿಲ್ಲ. ಆದರೆ ಈತನೂ ನೆಟರಿಷ್ಟರ ನಂಟಿನ ಅಂಟಿಲ್ಲದೇ ಜೀವಿಸುತ್ತಿದ್ದ. ಎನ್ನವರು ತನ್ನವರು ಎಂದರೆ ಮಡದಿ ಮಕ್ಕಳು. ಊರ ಕಾಣವುದು ಯಾವಾಗಲೋ ಒಮ್ಮೆ. ಆದರೆ ಮೂರೆನೇಯವನ ಗಳಿಕೆ ಮೂರಾಗಿದ್ದರೆ, ಉಳಿಕೆಯೂ ಮೂರೇ. ಕಾರಣ, ಜೀವನಕ್ಕೆ ಬೇಕಾದುದೆಲ್ಲವ ಆತನೇ ಸ್ವತಃ ದುಡಿಯುತ್ತಿದ್ದ. ನಾಲ್ಕಾರು ಆಳು ಮಂದಿಗೆ ಒಡೆಯನೆನಿಸಿಕೊಂಡಿದ್ದ. ಯಾರ ಒತ್ತಡವಿಲ್ಲ, ಆಸ್ತಿ ಅಂತಸ್ತಿನ ಹಂಗಿಲ್ಲ. ನೆಂಟರಿಷ್ಟರು, ಹಬ್ಬ ಹರಿದಿನ ಎಂದು ಸುಂದರ ಬಾಳು ಅವನದಾಗಿತ್ತು. ಸುಬ್ಬಕ್ಕನಿಗೆ, ಮೂರು ಮಕ್ಕಳು ಗಳಿಕೆಯಾದರೆ, ಮೂರನೇಯವ ಉಳಿಕೆಯಾಗಿದ್ದ.

ಸ್ನೇಹಿತರೇ, ಜೀವನದಲ್ಲಿ ಗಳಿಸುವುದರಷ್ಟೇ ಮುಖ್ಯ ಉಳಿಸುವುದು ಕೂಡ. ಬರುವುದರಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿ, ಉಳಿಸಿ ಅಚ್ಚುಕಟ್ಟಾದ ಜೀವನ ನಡೆಸುವವ ಸಾಧಕ ಎನಿಸಿಕೊಳ್ಳುತ್ತಾನೆ. ಬಂದುದೆಲ್ಲವ ವ್ಯಯಿಸಿ, ಆಡಂಬರಗಳಿಗೆ ದಾಸನಾದವನು ಸಾಧನೆಯ ಹೆಸರಲ್ಲಿ ಬಾಧಕದ ಸುಳಿಯಲ್ಲಿ ಸಿಕ್ಕ ಮೀನಾಗುತ್ತಾನೆ. ಜೀವನ ನಾವು ಕಂಡುಕೊಂಡಂತಿದೆ. ಜೊತೆಗೆ, ನಾವು ಕಟ್ಟಿಕೊಂಡಂತಿದೆ.

“ಮರ ಮತ್ತು ಮನಸು"


ಮನದ ಮಾತು:

ಹಸಿವ ಹೊತ್ತು ಬಹಳ ಬೆವೆತು
ಹೊರಟೆ ದೂರದೂರಿಗೆ
ಕನಸ ಕಂಡು ಮನದಿ ನೊಂದು
ಬರೆದೆ ಕವನ ನೋವಿಗೆ.

ಬಹಳ ಬಿಸಿಲು ಇಲ್ಲ ಹಸಿರು
ಊರ ದಾರಿಯಂಚಲಿ.
ಕಡಿದರವರು ದಾರಿಗೆಂದು
ಮರವ ಕೊಡಲಿಯಂಚಲಿ.

ಬೇಡವೆಂತು ಮೂಕ ಮರವು
ಕಡಿವ ನೋವ ತಾಳದೆ.
ಉಸಿರು ಕಟ್ಟಿ ಕೊಡಲಿಯಿಟ್ಟ
ಮರದ ನೋವ ಕೇಳದೆ.

ಕಡಿದು ಸವರಿ ಮರದ ಮೈಯ್ಯ
ಮನೆಗೆ ಹೊದಿಕೆ ಮಾಡಿಹ
ಬಿಸಿಲ ಝಳಕೆ ಬೆವೆತು ಇಂದು
ಮರದ ಬುಡವ ಹುಡುಕಿಹ.

ಗಾಳಿಯಿಲ್ಲ ಉದಕವಿಲ್ಲ
ಕೊರೆದ ಭೂಮಿಯ ಬುಡದಲಿ.
ತನ್ನ ತನವ ಬಿಟ್ಟು ಜಗಕೆ
ಜಗವ ಕಟ್ಟ ಹೊರಟಿಹ.

ಮರದ ಮಾತು :

ಬೆಳೆಸು ಎನ್ನ ಬಳಸಬೇಡ
ತಾಯಿಯಂತೆ ಸಲಹುವೆ.
ಕಡಿಯಬೇಡ ಕಂದ ನನ್ನ
ಕರವ ಹಿಡಿದು ನಡೆಸುವೆ.

ಮನೆಯ ಮೇಲೆ ಮನೆಯ ಕಟ್ಟಿ
ಮರಕೆ ಕುತ್ತು ತಂದಿಹೆ.
ನೆಟ್ಟು ಸಸಿಯ ಬೆಳೆಸು ಒಮ್ಮೆ
ನಿನ್ನ ಮನೆಯ ಕಾಯುವೆ.

ನೀರನುಣಿಸು ಫಲವ ಕೊಡುವೆ
ನೆರಳು ಫಲದ ಜೊತೆಯಲಿ.
ಕಾಗೆ ಗೂಗೆ ಗಿಳಿ ಗುಬ್ಬಿಗೆ
ಪೊಟರೆ ಗೂಡು ಮರದಲಿ.

ಅಣ್ಣಾ ಎಂದಳು. ಅವಳ ಅಭಿಮಾನಿಯಾದೆ....!!!


ಮಧ್ಯಾಹ್ನ ತಂಪಾಗಿ ಮೊಸರನ್ನವುಂಡು ಕಛೇರಿ ಕೆಲಸಕ್ಕಾಗಿ ಹೊರಟಿದ್ದೆ. ನೆತ್ತಿ ಸುಡುವ ಉರಿ ಬಿಸಿಲು. ಬಿಸಿ ಉಸಿರ ಸೇದುತ್ತಾ ಸ್ನೇಹಿತನ ಒಡಗೂಡಿ ಬಂಡಿಗಳ ದಂಡಯಾತ್ರೆಯ ನಡುವೆ ನುಸುಳಿ ನರಳಿ ಪ್ರಯಾಣ ಸಾಗಿತ್ತು. ಅವನು ಅವನಷ್ಟಕ್ಕೆ ಬಂಡಿ ಓಡಿಸುತ್ತಿದ್ದ. ಹಿಂದೆ ಕೂತ ನನಗೆ ಸೂರ್ಯನ ಮರೆ ಮಾಚಿ ಕೂರುವುದ ಬಿಟ್ಟರೆ ಬೇರೇನೂ ಕೆಲಸವಿಲ್ಲ. ಕಣ್ಣು ತಂಪ ಬಯಸಿ ತಡಕಾಡುತ್ತಿದ್ದರೆ, ಮನಸ್ಸು ಮಾತ್ರ ಸಾಮಾಜಿಕ ಸಮಸ್ಯೆಗಳ ಕೆದರಿ ಹಾಕುತ್ತಿತ್ತು. ಈ ಬಿಸಿಲಿಗೆ ಮಳೆಯಿಲ್ಲದುದೇ ಕಾರಣ. ಮಳೆಯಿಲ್ಲದುದಕ್ಕೆ ಮರಗಳಿಲ್ಲದುದೇ ಕಾರಣ. ಮರಗಳಿಲ್ಲದುದಕೆ ಮನುಷ್ಯನೇ ಕಾರಣ... ರಸ್ತೆ, ಸಾರಿಗೆ, ನೀರು, ಬಡತನ, ಹೀಗೆ ಸಮಸ್ಯೆಗಳ ಸರಪಳಿ ಒಂದಕ್ಕೊಂದು ಕೊಂಡಿ ಹೆಣೆದು ಮನದ ಮಡಿಲೇರುತಲಿತ್ತು...

ಹಾಗಾದರೆ ಇದಕ್ಕೆಲ್ಲ ಪರಿಹಾರ....?   ಇಲ್ಲ... ಈ ಸರಕಾರ ಸರಿಯಿಲ್ಲ... ಮರ ನೆಡುವುದ ಬಿಟ್ಟು ಕಾಂಕ್ರೀಟು ಕಾಡನ್ನೇ ಬೆಳೆಸಿದೆ. ಮಂಜೂರಿ ಹಣ ಅವರವರ ಜೇಬಿಗೆ ಜಾರುತ್ತಿದೆ. ಅವರಿಗೆ ತಾವು ಕೂರುವ ಖುರ್ಚಿ ಗಟ್ಟಿಯಿದ್ದರೆ ಸಾಕು. ಸಂಬಳವಂತೂ ತಿಂಗಳಿಗೆ ಸರಿಯಾಗಿ ಖಾತೆಗೆ ಸೇರುತ್ತದೆ. ಯಾರಿಗೇನಾದರೆ ಅವರಿಗೇನು...???

ಈ ದುಡ್ಡಿನಿಂದಲೇ ದೊಡ್ಡವರೆನಿಸಿಕೊಂಡವರೂ ಅಷ್ಟೆ. ತಂಪಾದ ನಾಲ್ಕು ಗಾಲಿಯ ಗಾಡಿಯಲ್ಲಿ ಓಡಾಡುವುದೇ ಗೊತ್ತು. ಎಂಟಾಣೆಯನ್ನೂ ಬಿಟ್ಟು ಗೊತ್ತಿಲ್ಲ... ಸಮಾಜಕ್ಕೇನಾದರೆ ಯಾರಿಗೇನು ಎಂಬಂತೆ ಬದುಕುತ್ತಿದ್ದಾರೆ. ಒಟ್ಟಿನಲ್ಲಿ ಅವರು ಚೆನ್ನಾಗಿದ್ದರೆ ಸಾಕು.

ಹಾಗಾದರೆ ಈ ಮಧ್ಯಮ ವರ್ಗದ ಜನ ಸಮಾಜಕ್ಕೇನಾದರೂ ಮಾಡಿಯಾರೇ....?? ಇಲ್ಲ. ಆಗಲಿಕ್ಕಿಲ್ಲ. ಏಕೆಂದರೆ, ದುಡಿವ ಹಣ ಅವರವರ ಸಂಸಾರಕ್ಕೆ ಹಾಗೋ ಹೀಗೋ ಸರಿದೂಗುತ್ತದೆ. ಇನ್ನು ಸಮಾಜದ ಸುಧಾರಣೆ ಹೇಗೆ ಮಾಡಿಯಾರು? ಸಾಧ್ಯವಿಲ್ಲ ಬಿಡಿ.

ಮತ್ತೇ.... ಈ ಕೂಲಿ ಕಾರ್ಮಿಕರು...?? ಸಮಸ್ಯೆಗಳ ಮಡಿಲಲ್ಲೇ ಆಡಿ ಬೆಳೆದವರು ಇವರು. ಇಂದು ದುಡಿದರೆ ನಾಳಿನ ಕೂಳು. ಇಂಥದ್ದರಲ್ಲಿ ಸಮಾಜ ಸುಧಾರಿಸಲು ಹೊರಟರೆ ಅವರ ಅಸ್ಥಿತ್ವ...? ನಿಜ.... ಇವರಿಂದಲೂ ಕಷ್ಟ ಸಾಧ್ಯ. ಹಾಗಾದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು....!!! ಸುಮಾರು ಒಂದು ಘಂಟೆ ಇದೇ ಆಲೋಚನೆ ಮನವ ಕದಡಿತ್ತು. ಇನ್ನೇನು ಕಛೇರಿ ಹತ್ತಿರವಿದೆ ಎನ್ನುವ ಮೊದಲೇ ಕೆಂಪು ದೀಪವ ಕಂಡು ಬಂಡಿ ನಿಂತಿತ್ತು. ಬೆಂಗಳೂರಿನ ಸಂಚಾರೀ ವ್ಯವಸ್ಥೆಯ ಬಗ್ಗೆ ವಿಶೇಷವಾಗಿ ವಿವರಿಸಬೇಕಿಲ್ಲ ಅಂದುಕೊಳ್ಳುತೇನೆ. ಇರಲಿ...

ಹಾಗೆಯೇ ಯಾರೋ ಬೆನ್ನು ತಟ್ಟಿದಂತಾಯಿತು. ಯಾರೆಂದು ತಿರುಗಿದರೆ ಒಬ್ಬ ಪುಟ್ಟ ಮಗು. ದೇಹ ನೀರ ಕಾಣದೆ ಅದೆಷ್ಟು ದಿನವಾಗಿತ್ತೋ... ಹಪ್ಪು ಹಪ್ಪು ನಾರುವ ಅಂಗಿ ತೊಟ್ಟಿದ್ದಳು. ಸರಿಸುಮಾರು ಹನ್ನೊಂದರ ಪ್ರಾಯವಿರಬಹುದು. ಹೆತ್ತವರ ಸುಳಿವಿಲ್ಲ ಎನಿಸಿತು. ಅಣ್ಣಾ ಎಂದು ಮನದುಂಬಿ ಕರೆದಿದ್ದಳು. ಮನ ಚುರ್ರ್.... ಎಂದಿತು. ಆಗ ಅವಳ ರೂಪವಾಗಲಿ, ವೇಷ ಭೂಷಣವಾಗಲಿ ಕಣ್ಣಿಗೆ ಕಾಣಲೇ ಇಲ್ಲ. ಎನಮ್ಮ ಎಂದೆ. ಕೈನಲ್ಲಿರುವ ಗಂಟಿಂದ ಎರಡು ಲೇಖನಿಯ ತೆಗೆದು ಕೈಗಿತ್ತಳು. ''ಬೇಡಮ್ಮ... ನನ್ನಲ್ಲಿ ಆಗಲೇ ಸಾಕಷ್ಟಿದೆ. ಅದನ್ನೇ ಬಳಸುತ್ತಿಲ್ಲ. ಇದನ್ನು ತೆಗೆದುಕೊಂಡು ನಾನೇನು ಮಾಡಲಿ'', ಎಂದೆ.... ಆಗ ಆಕೆ, ''ಅಣ್ಣ, ಹೊಟ್ಟೆ ತುಂಬ ಉಂಡು ಎರಡು ದಿನವಾಯಿತು. ಒಂದಾದರೂ ತಗೊಳ್ಳಿ ಅಂದಳು. ಮನಸ್ಸಿಗೆ ದಂಗು ಬಡಿದಂತಾಯಿತು. ಈ ಹಿಂದೆ ಸಮಾಜದ ಒಳಿತುಗಳ ಚಿಂತಿಸಿದ್ದ ನನಗೆ ಸಮಾಜದ ಮೇಲಿರುವ ಇತರರ ಜವಾಬ್ದಾರಿಗಳ ಆಲೋಚಿಸುವ ನಾನು, ನನ್ನದೇನು ಎಂಬ ಪ್ರಶ್ನೆ ನನ್ನನ್ನೇ ಕಾಡಿತು.

ಅಣ್ಣಾ ಎಂದವಳು ಸ್ವಂತದವಳಾಗಿದ್ದರೆ ನನ್ನ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಒಮ್ಮೆ ಆಲೋಚಿಸಿದೆ. ಆ ಕ್ಷಣಕ್ಕೆ ಅವಳು ಸ್ವಂತವೆನಿಸಿದ್ದಳು. ಕಿಸೆಯಲ್ಲಿದ್ದ ಹಣ ತೆಗೆದು ಕೊಟ್ಟು,''ಮೊದಲು ಊಟ ಮಾಡು, ಲೇಖನಿಯ ನೀನೇ ಇಟ್ಟುಕೋ'', ಎಂದೆ. ಆಕೆ, ಕೊಟ್ಟ ಹಣವ ತಿರುಗಿ ಕೈಲಿಟ್ಟು, ''ಬೇಡಣ್ಣ.... ಕರುಣೆ ಇಟ್ಟು ಕೊಡುವುದಾದರೆ ಬೇಡವೇ ಬೇಡ. ಬಳಿಯಿದ್ದ ಬಿಸಿ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ. ಇಲ್ಲದಿದ್ದರೆ ಲೇಖನಿ ಪಡೆದು ಹಣ ಕೊಡು'', ಎಂದಳು....   ಶಹಬ್ಬಾಸ್ ಎನಿಸಿತ್ತು. ಸ್ವಾಭಿಮಾನ ಮೆರೆದ ಅವಳ ಕಂಡು ಹೆಮ್ಮೆ ಎನಿಸಿತು. ನಾನವಳ ಅಭಿಮಾನಿಯಾದೆ. ಹಣ ಕೊಟ್ಟು ಎರಡು ಲೇಖನಿ ಪಡೆದೆ. ಆಗ ಅವಳ ಮೊಗದಲ್ಲಿನ ನಗು ಕಂಡು ಮನಸಿಗೆ ಹಿತವೆನಿಸಿತು. ಉತ್ತಮ ಸಮಾಜ ಕಾಣುವಲ್ಲಿ ಅಳಿಲ ಸೇವೆಗೈದ ಹೆಮ್ಮೆ ಮತ್ತು ಖುಷಿ ಎರಡೂ ಬೆನ್ನೇರಿ ಕುಳಿತಿತ್ತು.

ಸ್ನೇಹಿತರೆ, ನಾವು ಸಮಾಜದ ಏರಿಳಿತಗಳ ಬಗ್ಗೆ ದೂರುವುದೇನೋ ಸಹಜ, ಜೊತೆಗೆ ನಮ್ಮಿಂದ ಸಮಾಜಕ್ಕೇನಾದರೂ ಮಾಡೋಣ ಎಂಬ ಸಂಕಲ್ಪ ಮಾಡೋಣ. ನಿಜ, ಈಗ ನಾನೇನು ಧರೆ ಕಡಿದು ಗುಡ್ಡೆ ಕಟ್ಟಿರುವುದಲ್ಲ. ಆದರೆ, ಹಸಿದ ಸ್ವಾಭಿಮಾನಿ ಕಂದನಿಗೆ ಕೈಲಾದ ನೆರವಿತ್ತೆ ಅಷ್ಟೇ.

ನಿಮ್ಮ ನಿತ್ಯ ಜೀವನದಲ್ಲಿ ಇಂತಹ ಅದೆಷ್ಟೋ ವ್ಯಕ್ತಿತ್ವಗಳು ಎದುರಾಗಬಹುದು. ಕೆಲವೊಮ್ಮೆ ಅಂತವರು ಮಾರುವ ವಸ್ತುಗಳು ಅಗತ್ಯವಿಲ್ಲವೆನಿಸಬಹುದು. ಆದರೂ ಕೊಂಡುಕೊಳ್ಳಿ. ನೀವು ಕೊಡುವ ಹಣ ಒಂದು ಹೊತ್ತಿನ ತುತ್ತಾದೀತು. ನಾವು ನಮಗಾಗಿ ವ್ಯಯಿಸುವಾಗ ಇದಾವುದರ ಪರಿವಿರುವುದಿಲ್ಲ. ಕೆಲವೊಂದು ಅಗತ್ಯವೆನಿಸಿಕೊಂಡರೆ, ಕೆಲವೊಮ್ಮೆ ಕೊಳ್ಳುವ ಅಗತ್ಯತೆಯನ್ನು ನಾವೇ ಹುಟ್ಟು ಹಾಕಿಕೊಳ್ಳುತ್ತೇವೆ. ಹಾಗಿರುವಾಗ, ಅನ್ನವೆಂದು ಕೈಯಿತ್ತವರಿಗೆ ಇಲ್ಲವೆಂದು ನಿರಾಶೆಗೊಳಿಸುವುದು ಬೇಡ.
ಚಿಗುರುವ ಕನಸಿಗೆ ಹಾಲು ಹರಿಸಿ ದೊಡ್ಡಸ್ತನ ತೋರಲಾಗದಿದ್ದರೂ, ಗಂಜಿ ಕೊಟ್ಟು ಮಾನವೀಯತೆಯ ಮೆರೆಯೋಣ. ಸಮಾಜವನ್ನು ಒಬ್ಬನಿಂದ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದೇನೋ ನಿಜ. ಆದರೆ, ಬದಲಾವಣೆಯ ಹಾದಿ ಹಿಡಿವುದು ಪ್ರತಿಯೊಬ್ಬನಿಂದಲೂ ಸಾಧ್ಯವಿದೆ.

ಬದಲಾವಣೆ ನಮ್ಮಿಂದಲೇ ಆಗಲಿ.