Saturday, September 19, 2015

"ನಾನು ಮತ್ತು ಅವಳು"


ಸಂಜೆ ಹೊತ್ತಿನ ಸಮಯದಲಿ ಅವಳ ಸಾಂಗತ್ಯ ಬಯಸಿ ನಿಂತಿದೆ ಈ ಮನವು.
ಕುಳಿತಲ್ಲೇ ಕನಹುಗಳ ನರ್ತನ. ಎದುರಲ್ಲೇ ಎದುರಾದಂತೆ ಭಾಸ.
ಕಿರುಬೆರಳಲ್ಲೇ ಹಿಡಿದೆಳೆದು ಮೈಗಪ್ಪಿದ ಭಾವ. ಅವಳ ನಯನದಾಳದಲಿ ನನ್ನದೇ ಪ್ರತಿಬಿಂಬ. ಬಿಸಿಯುಸಿರು ಮೈ ತಾಗಿ ಬೆವೆತ ಕ್ಷಣವದು ಅತಿ ಮಧುರ.

ಕೆನ್ನೆಯಿಂದಿಳಿಬಿಟ್ಟ ಸುರುಳಿಗಟ್ಟಿದ ಕೇಶ.
ಅಸೂಯೆಯಾಗುತಿದೆ ಅದ ಕಂಡು. ಹಗಲಿರುಳೂ ಮುತ್ತಿಕ್ಕುವುದೇ ಅದರ ಕಾರ್ಯ.
ಎಂತಹ ಭಾಗ್ಯವಯ್ಯ...? ನನಗೆಂದು ಸಿದ್ಧಿಸಿತೋ ಎಂಬ ವ್ಯಥೆಯ ಪರಿತಾಪ.

ಬಿಡು ಎಂದರೂ ಒಲ್ಲೆ ಎಂಬ ಅವಳ ಪಿಸು ಮಾತು.
ದನಿಯ ಇಂಪಿಗೆ ಮರುಳಾಗಿ ಕಂಪಿಸಿದೆ ತುಟಿಯಂಚಿನ ರಸಬಿಂಧು.
ಕ್ಷಣ ಕಳೆದು ದಿನವಾಗಿ, ದಿನ ಕಳೆದು ಮಾಸವಾಗಿ, ಮಾಸದಂಚಿನ ದಿನಕೆ ವರುಷ ಮೂರು. ಒಲವಿನಾಟದಲಿ ಕಳೆದ ಹೊತ್ತಿಗೆ ಲೆಕ್ಕವೇ ಇಲ್ಲ.

ಮಿಂದೆದ್ದ ಬರಿ ಮೈಗೆ ಅವಳ ಅಪ್ಪುಗೆಯೇ ಮಾನ ಮುಚ್ಚುವ ಅರಿವೆ.
ಹಣೆಗೊತ್ತಿದ ಚುಂಬನವು ನಾನಿಟ್ಟ ಸಿಂಧೂರ.
ತುಟಿಯದರಗಳ ಸ್ಪರ್ಶಿಸಲು ಎದೆಯಾಳದಲಿ ಝಲ್ಲೆಂಬ ಸಿಡಿಲು.
ಮೈಲಿಗೆಯ ಭಾವವಿಲ್ಲ. ದೇವ ನಾಮಕೆ ನಾಮವೇ ಗತಿ ಅವಳ ಉಪಸ್ಥಿತಿಯಲ್ಲಿ.
ಅನುಪಸ್ಥಿತಿಯಲ್ಲಿ ಅವಳ ನಾಮವೇ ದೇವ ಸ್ವರೂಪಿ.

ಇರುಳಲ್ಲೂ ದೇಹ ಸಿರಿಯ ಸ್ಪಷ್ಟ ದರುಶನವೆನಗೆ.
ಕಗ್ಗತ್ತಲೆಯಲೂ ಬೆಳದಿಂಗಳ ಬಯಲು, ಬರಿದಾದ ಅವಳ ಬೆನ್ನು.
ಅದೆಷ್ಟು ಕೋಮಲಳೋ ಅವಳು....? ಬಣ್ಣಸಲು ಬತ್ತಳಿಕೆಯಲಿ ಪದಗಳ ಕ್ಷಾಮ.

ಹಸಿವು ಹತ್ತಿರ ಬಾರ. ನಿದಿರೆ ಬಲು ದೂರ.
ಅವಳ ಸಾಂಗತ್ಯದಲಿ ಎಲ್ಲವೂ ಮಾಯೆಯ ಸ್ವರೂಪ.
ಕಿವಿಯಲ್ಲೇನೋ ಗುನುಗುತಿಹಳು. ಸಾಕೆಂದಳೋ ಬೇಕೆಂದಳೋ ಮತಿ ಗ್ರಹಿಸದು.
ಎದೆಯ ಮೆಲೆ ತಲೆಯಿಟ್ಟು ನಿಟ್ಟುಸಿರ ಬಿಡುತಿಹಳು.

ಆಯಾಸವೋ ಆಸರೆಯೋ ಆರಂಭವೋ ಅಂತ್ಯವೋ ಇದಾವುದರ ಪರಿಗಣನೆಯಿಲ್ಲ. ಸಂವತ್ಸರವೇ ಉರುಳೀತು ಇರುಳ ಕಳೆವುದರೊಳಗೆ.
ಕಳೆದ ವರುಷಗಳು ಬಳಿ ಸುಳಿದ ನಿಮಿಷಗಳಂತೆ ಅವಳ ಎದೆಯಾಳದಲಿ ಮಿಂದೆದ್ದಾಗ. ಜನುಮ ಜನುಮಗಳೂ ಸಾಕಾಗದು, ಜಿನುಗುವ ಸಂತಸದ ಹನಿ ಮಳೆಯ ಅನುಭವಿಸಲು.

"ಕನವರಿಕೆ"


ಅವಳ ಕಂಡಾಗಲೆಲ್ಲ ಅನಿಸುವುದು........,

ತುದಿ ಬೆರಳ ಕಾಲುಂಗುರ ನಾನಾಗಬಾರದೇ ಎಂದು. 
ಆ ಪುಟ್ಟ ಪುಟ್ಟ ಹೆಜ್ಜೆ ಗುರುತಾಗಿ ನಾ ನಲಿಯಬಹುದಿತ್ತು.
ಇಲ್ಲವೇ, ಝೇಂಕರಿಸುವ ಕಾಲ್ಗೆಜ್ಜೆಯ ಮಣಿ ಮಂಟಪದ ಸಾಲಿನಲಿ ನನಗೊಂದು ಸ್ಥಾನ ಸಿಗಬಾರದೇ...?? 
ಆ ಕೋಮಲ ಕಾಲುಗಳ ಸ್ನೇಹದಲಿ ನಲಿದು, ಕಾಲ್ಗೆಜ್ಜೆಯ ಪಿಸುಮಾತಿಗೆ ಸಾಕ್ಷಿಯಾಗುತ್ತಿದ್ದೆ.
ಇಲ್ಲವಾದರೆ, ನಡುಪಟ್ಟಿಯ ಸ್ಥಾನವಾದರೂ ಸಾಕಿತ್ತು. 
ವೈಯ್ಯಾರದ ನಡುಗೆಯ ಬಿಂಕದ ಚೆಲುವೆಯ ಚೆಲುವ ಚನ್ನಿಗರಾಯನಾಗಿ ಮೆರೆಯುತ್ತಲಿದ್ದೆ.

ಕೊರಳ ಸುತ್ತ ನಲಿವ ಕರಿಯ ಮಣಿಸರವಾದರೂ ಕ್ಷೇಮವೇ.
ಉಸಿರ ಉಸಿರಾಗಿ, ಬಸಿರಿಗೆ ಹಸಿರಾಗಿ ಜೀವನವಿಡಿ ಅವಳ ನಡೆಗೆ ಬೆಂಗಾವಲಾಗಿರುತಿದ್ದೆ.
ಇಲ್ಲ, ಕಿವಿಯಂಚಲಿ ಕುಣಿದು ನಲಿವ ಓಲೆಯಾದರೂ ಅಲ್ಲಗಳೆಯುವಂತಿಲ್ಲ.
ಅವಳ ಕೆನ್ನೆಯಂಚಲಿ ಮುತ್ತಿಟ್ಟು ಸಂಭ್ರಮಿಸುವ ಸುಮವು ನಾನಾಗಿರುತಿದ್ದೆ.

ಕೈಯಲ್ಲಿ ಮಿಂಚುವ ಬಳೆಯಾದರೂ ಸಾರ್ಥಕ್ಯ ಈ ಎನ್ನ ಜೀವನ.
ಬಳೆ ಸದ್ದಿನಲೇ ಹರ್ಷ ವ್ಯಕ್ತಪಡಿಸುತ್ತಲಿದ್ದೆ.
ಇಳಿ ಬಿಟ್ಟ ನೀಳ ಜಡೆಯಾದರೂ ವಿರೋಧವಿರಲಿಲ್ಲ.
ಹಣಿಗೆಯ ಬೆರಳಂಚಲಿ ಸಿಲುಕಿ ನಲುಗೇಳುತಲಿದ್ದೆ.
ವಿಶಾಲ ಬೆನ್ನಿಗೊರಗಿ ಬಾನಲಿ ಹಾರುವ ಸ್ವತಂತ್ರ ಪಕ್ಕಿ ನಾನಾಗುತಲಿದ್ದೆ.

ತುಟಿಯಂಚಿನ ಬಿಂದು ನೀರಾದರೂ ಕ್ಷಣ ಮಾತ್ರ ಸ್ವರ್ಗ ದರುಶನ ಪಡೆಯುತಲಿದ್ದೆ, ಅದರಗಳ ಕಂಪನಕೆ ಮಣಿದು.
ಕೊನೆಪಕ್ಷ, ಹಣೆಗೊತ್ತುವ ಬೊಟ್ಟಾದರೂ ಪರವಾಗಿಲ್ಲ
ದಿನಂಪ್ರತಿ ಚುಂಬಿಸುವ ಅವಕಾಶಕ್ಕಾದರೂ ಆ ದೇವನಿಗೆ ಆಭಾರಿಯಾಗಿರುತಿದ್ದೆ.

"ಜಯ ಭಾರತ"


ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ.
ಸ್ವಾತಂತ್ರ್ಯದ ಸುಖವು ಸಿಕ್ಕು ನಲಿಯುತಿಹುದು ಭಾರತ.

ಸರ್ವ ಜಾತಿ ಮತ ಪಂಥಗಳಲಿ ಮಿಂದೆದ್ದಿದೆ ಭಾರತ.
ಬಣ್ಣ ಮೂರು ಚಕ್ರ ಒಂದು ಅದುವೆ ನಮ್ಮ ಬಾವುಟ.

ಜನ ಮನ ಧನ ಕನಕ ನೂರು ಸಿರಿವಂತದ ಭಾರತ
ಕೇಸರಿ ಬಿಳಿ ಹಸಿರು ಮಧ್ಯ ಚಕ್ರವಿರುವ ಬಾವುಟ.

ಹಸಿರ ಬಸಿರು ನಮ್ಮ ಉಸಿರು ನೋಡು ಇದುವೆ ಭಾರತ
ಕಾಡು ನಾಡು ಹಳೆ ಬೀಡು ಸುಸಂಮೃದ್ಧ ಭಾರತ.

ರಕ್ತ ಹರಿಸಿ ಬೆವರ ಇಳಿಸಿ ಸ್ವಾತಂತ್ರ್ಯವ ಗಳಿಸಿದೆ.
ನೋಡು ಒಮ್ಮೆ ಮನದುಂಬಿ ದೇಶ ಎಷ್ಟು ಸೊಗಸಿದೆ.

''ರಕ್ಷಾ ಬಂಧನ''



ರಕ್ಷಾ ಬಂಧನ ಅನ್ನೋದು ಬರೀ ದಾರದ ಹಬ್ಬ ಅಂದುಕೊಳ್ಳೋರು ಅದೆಷ್ಟೋ.....!!! ಆದರೆ ಅದು ಅಷ್ಟೇ ಅಲ್ಲ. ವಿಶಾಲ ಅರ್ಥವಿದೆ.

ಹೆಣ್ಣಾದವಳು ತನ್ನ ಒಡಹುಟ್ಟಿದವರಿಗೆ ತನ್ನ ಬಾಳಿನ ರಕ್ಷಣೆ ನಿನ್ನದು ಎಂಬರ್ಥದಲ್ಲಿ ಕಟ್ಟುವ ಪವಿತ್ರ ಬಂಧನವೇ ರಕ್ಷಾ ಬಂಧನ. ಅಣ್ಣನಾದವನು ನಿನ್ನ ರಕ್ಷಣೆ ತನ್ನ ಹೊಣೆ ಎಂಬ ಭಾವದಿಂದ ಕಟ್ಟಿಸಿಕೊಳ್ಳುವುದು ಈ ಹಿಂದಿನ ಸಂಸ್ಕೃತಿ. ಆದರೆ ಒಡಹುಟ್ಟಿದವರಿಲ್ಲದಿದ್ದಲ್ಲಿ ಆತ್ಮೀಯರಾದವರಲ್ಲಿ ಈ ಸಂಬಂಧವನ್ನು ಹಂಚಿಕೊಂಡು ಬಂದಿರುವುದು ನಡೆದು ಬಂದ ಪರಂಪರೆ.

ರಕ್ಷಣೆ ಎಂದರೆ ಬರೇ ಕಷ್ಟದಲ್ಲಿ ಕಾಪಾಡುವುದು ಎಂಬರ್ಥವಲ್ಲ. ಸಂತೋಷವನ್ನು ಹಂಚಿಕೊಂಬುದು ಇದಾಗಿದೆ. ಒಡಹುಟ್ಟಿದವರೇ ಆಗಬೇಕೆಂದಿಲ್ಲ. ಒಡನಾಟದವರೂ ಆಗಬಹುದು. ರಾಖಿ ಕಟ್ಟಿದರೊಂದೇ ರಕ್ಷಣೆಗೆ ಹೊಣೆಯಲ್ಲ. ಕಟ್ಟಿದಾಕ್ಷಣ ಸಹೋದರನಾಗಬೇಕೆಂದೇನಿಲ್ಲ. ಕಟ್ಟಿ ಸಹೋದರರ ಸಾಲಿಗೆ ಸೇರಿಸಿಕೊಂಬ ಹುಂಭತನವೂ ಬೇಡ.

ಇದು ಕೇವಲ ಅಕ್ಕ ತಮ್ಮ / ಅಣ್ಣ ತಂಗಿಗೆ ಮಾತ್ರ ಸೀಮಿತವಾದುದಲ್ಲ. ಇಡೀ ಮನುಕುಲಕ್ಕೇ ಸಂ'ಬಂಧಿ'ಸಿದ್ದು. ರಕ್ಷಾ ಬಂಧನ ಎಂದರೆ ಆತ್ಮೀಯರನ್ನು ಅರ್ಥೆಸಿಕೊಳ್ಳುವುದು ಎಂಬರ್ಥ. ಅರ್ಥೈಸಿಕೊಂಡರೆ ಸಾಕೇ....?? ಇಲ್ಲ. ಅರ್ಥೈಸಿಕೊಂಡವರನ್ನು ಗೌರವಿಸುವುದೂ ನಮ್ಮೆಲ್ಲರ ಹೊಣೆ. ಹೆಣ್ಣಿನ ರಕ್ಷಣೆಯ ಜೊತೆಗೆ, ಗೌರವಿಸುವುದು ಅಷ್ಟೇ ಮುಖ್ಯ.

ರಕ್ಷಾ ಬಂಧನದಿಂದ ಭಾವ ಬಂಧನವಾಗಲಿ. ಬದುಕು ಹಸನಾಗಲಿ.

''ಗುರುವು ತಾನೊಲಿದರೆ ಕೊರಡು ಕೊನರುವುದು ಬರಡು ಕರೆಯುವುದು''



ಶಿಕ್ಷಕ ಎಂದರೆ ಯಾರು..??

ಎಲ್ಲರೂ ಹೇಳುವ ಉತ್ತರವಿಷ್ಟೇ. ಶಾಲೆಯಲ್ಲಿ ಕಲಿಸುವವ ಶಿಕ್ಷಕ. ಸರಿ!!! ತಪ್ಪೇನಲ್ಲ!!!

ನನ್ನ ಭಾವಾ ನೋಟದಲ್ಲಿ ಶಿಕ್ಷಕನೆಂದರೆ ಬರಿಯ ಶಾಲೆಯಲ್ಲಿ ಕಲಿಸುವವ ಮಾತ್ರವಲ್ಲ. ಹೊಸ ವಿಷಯ ಪ್ರಪಂಚದ ಪರಿಚಯಸ್ಥರೆಲ್ಲ ಶಿಕ್ಷಕರೆನಿಸಿಕೊಳ್ಳುತ್ತಾರೆ. ನಾವು ಜೀವನದ ಪ್ರತಿ ಕ್ಷಣ ಕ್ಷಣದಲ್ಲೂ ಹೊಸ ವಿಷಯಗಳನ್ನು ಕಲಿಯುತ್ತಿರುತ್ತೇವೆ. ಅದು ದೊಡ್ಡದಿರಬಹುದು ಅಥವಾ ಚಿಕ್ಕದೂ ಆಗಿರಬಹುದು. ಶಿಕ್ಷಕ ಎಂದರೆ ಬರೇ ವಯಸ್ಸಿನಲ್ಲಿ ದೊಡ್ಡವರು ಎಂದರ್ಥವಲ್ಲ. ಜ್ಞಾನ ವೃದ್ಧರೂ ಶಿಕ್ಷಕನಾಗಬಹುದು.

ಬಯಸಿದವ ಕಲಿಕೆಯ ಹೊಸ ಮೆಟ್ಟಿಲನ್ನು ಪ್ರತೀ ಕ್ಷಣದಲ್ಲೂ ಪ್ರತೀ ಕಣದಲ್ಲೂ ಕಾಣುತ್ತಾನೆ. ಮರೆತ ವಿಷಯವ ಜ್ಞಾಪಿಸುವವನೂ ಶಿಕ್ಷಕನೇ. ''ಮನೆಯೆ ಮೊದಲ ಪಾಠ ಶಾಲೆ ತಾಯಿ ತಾನೆ ಮೊದಲ ಗುರುವು'', ಎಂಬಂತೆ ಜನನ ಕೊಟ್ಟ ತಾಯಿ ಜೀವನ ಶಿಕ್ಷಣವನ್ನು ಹೇಳಿಕೊಡುತ್ತಾಳೆ. ಉಣ್ಣುವುದು ತಿನ್ನುವುದು ನಡೆ ನುಡಿ ಹೀಗೆ ತಿದ್ದಿ ತೀಡಿ ಏನೇನೆಲ್ಲ ಕಲಿಸಿ ತಾಯಿಯೇ ಮೊದಲ ಗುರು ಎನಿಸಿಕೊಳ್ಳುತ್ತಾಳೆ. ಕೆಲವೊಮ್ಮೆ ಅವರಾಗಿ ಕಲಿಸಿ ಪ್ರತ್ಯಕ್ಷ ಗುರುಗಳಾದರೆ ಇನ್ನು ಕೆಲವೊಮ್ಮೆ ನಾವಾಗಿ ಕಲಿತು ಪರೋಕ್ಷ ಶಿಕ್ಷಕರಾಗಿಸಿಕೊಳ್ಳುತ್ತೇವೆ.

ಅನ್ನವುಣ್ಣಲು ಕಲಿಸಿದ ತಾಯಿ, ಕೈ ಹಿಡಿದು ನಡೆ ನುಡಿಯ ಕಲಿಸಿದ ಅಪ್ಪ, ಹಂಚಿತಿನ್ನುವುದ ಕಲಿಸಿದ ಅಣ್ಣ/ಅಕ್ಕ, ಕಥೆ ಹೇಳಿ ನೀತಿ ಕಲಿಸಿದ ಅಜ್ಜ, ಶಾಸ್ತ್ರ/ ಸಂಸ್ಕೃತಿಯ ಪರಿಚಯಿಸಿದ ಅಜ್ಜಿ, ಹೊಂದಿ ಬಾಳುವುದ ಕಲಿಸಿದ ನೆರೆ ಹೊರೆಯ ಮಂದಿ, ಕಷ್ಟದಲ್ಲಿ ಬೆರೆತು ಎದೆಗುಂದದೇ ಎದುರಿಸಿ ನಡೆವುದ ಕಲಿಸಿದ ಸ್ನೇಹಿತ, ಸುತ್ತಲಿನ ಸಮಾಜ, ಮರೆತ ನಗುವ ಮತ್ತೆ ಕಲಿಸಿದ ಮುಗ್ದ ಮುಖದ ಮುದ್ದು ಕಂದ, ಹೀಗೇ ಜೀವನದ ಪ್ರತೀ ಹಂತದಲ್ಲೂ ಶಿಕ್ಷಕ ಕಾಣಿಸಿಕೊಳ್ಳುತ್ತಾನೆ.

ವೈಯಕ್ತಿಕ ವಿಚಾರಕ್ಕೆ ಬಂದರೆ, ನನ್ನ ಜೀವನದ ಪ್ರತೀ ಹಂತದಲ್ಲೂ ಪ್ರತಿಯೊಬ್ಬನಿಂದಲೂ ಕಲಿತು ಬಂದಿದ್ದೇನೆ. ನನಗೆ ನಾನೇ ಶಿಕ್ಷಕನಾದ ಹಲವು ನಿದರ್ಶನಗಳಿವೆ. ಪ್ರತಿಯೊಂದು ವ್ಯಕ್ತಿ, ವಸ್ತು, ಪ್ರಾಣಿ, ಪಕ್ಷಿಗಳಲ್ಲಿ ಕಲಿಯಲು ಏನಾದರೊಂದು ಇರುತ್ತದೆ. ಕಲಿಕೆಗೆ ಕಾರಣವಾದವರೆಲ್ಲ ಶಿಕ್ಷಕರೇ....!!!

ಹೊಸ ಜ್ಞಾನಕ್ಕೆ/ಹೊಸತನಕ್ಕೆ ಮಾದರಿ ಅಥವಾ ಮಾರ್ಗಕ್ಕೆ ಕಾರಣೀಕರ್ತರಾದ ಎಲ್ಲ ಸಹೃದಯ ಬಂಧುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು.

''ಭರವಸೆಯ ಬದುಕು''



ಅದು ತಾಯಿ ಮಗನ ಪುಟ್ಟ ಕುಟುಂಬ. ಗಂಡ ಮದುವೆಯಾದ ವರುಷದೊಳಗೆ ಮಡಿಲಿಗೆ ಕರುಳ ಕುಡಿಯೊಂದನ್ನ ಕರುಣಿಸಿ ಕಾಲನ ಆರ್ಭಟಕ್ಕೆ ತಲೆಯೊಡ್ಡಿದ್ದ. ಜೀವದ ಭರವಸೆಯ ಬೆಳಕ ಹೊತ್ತ ಆಕೆ ಹಗಲಿರುಳೂ ದುಡಿದು ಮಗನ ಬೆಳೆಸಿದ್ದಳು. ಬಡತನ ಬೆನ್ನ ಹತ್ತಿದರೂ ಮಗನ ಆರೈಕೆಗೆ ಪ್ರಯತ್ನವ ಕ್ಷೀಣಿಸಿರಲಿಲ್ಲ.

ವರುಷಗಳುರುಳಿದವು. ಬದಲಾಯಿತು ಬದುಕು, ಬದುಕು ಬದಲಾದಂತೆ. ಆಕೆಗೆ ಅದು ಅರವತ್ತರ ಮಜಲು. ಚರ್ಮ ಸುಕ್ಕುಗಟ್ಟಿದಂತಿದೆ. ಕಣ್ಣು ಮಂಜಾಗಿದೆ. ಕ್ಷೀರ ಅಭಿಷೇಕವಾಗಿದೆಯೋ ಎಂಬಂತಿಹ ಶ್ವೇತ ವರ್ಣ ವೇಣಿ. ಇವೆಲ್ಲ ದೈಹಿಕ ವೃದ್ಧಾಪ್ಯಕ್ಕೆ ಪೂರಕವಾದವುಗಳು. ಆದರೆ ಕಣ್ಣಲ್ಲೇನೋ ಕಾಂತಿ ಜಿನುಗುತ್ತಿದೆ. ಮುಖದಲ್ಲಿ ಉಕ್ಕಿ ಹರಿಯುತಿಹ ಮಂದಹಾಸ. ನರ ನಾಡಿಗಳಲ್ಲಿ ಚೈತನ್ಯದ ಹರಿದಾಟ. ಆಶಾದಾಯಕ ಭಾವುಕತೆ. ಇದು ಮಾನಸಿಕ ಯೌವ್ವನಕ್ಕೆ ಪೂರಕವಾದವುಗಳು.

ಮಗನಾದರೋ, ಮಾನಸಿಕವಾಗಿ ಇಪ್ಪತ್ತರ ಮುದುಕ. ಮೈಕೈ ತುಂಬಿಕೊಂಡಿದೆ. ಬಲಾಡ್ಯ ದೇಹ. ಚಿಗುರು ಮೀಸೆ. ಈಡೇರಿಸಲಾಗದಷ್ಟು ಆಸೆ. ಪ್ರಯತ್ನ ಮಾತ್ರ ಶೂನ್ಯ. ಭವಿಷ್ಯದ ಹಂಗೇ ಇಲ್ಲ. ಆ ಮುದಿ ಜೀವದ ದುಡಿಮೆಯಲ್ಲೇ ದೇಹ ಸವೆಸುತ್ತಿಹ ಆಲಸಿ. ದಿನವಿಡೀ ಸುಕ್ಕುಗಟ್ಟಿದ ಮನಸ್ಸು. ಮಾತೆತ್ತಿದರೆ ಕಲುಷಿತ ನುಡಿಗಳು. ನಿರಾಶಾ ಭಾವನೆ. ಬದುಕು ಕಟ್ಟುವ ಆಲೋಚನೆ ಮೈಲುಗಟ್ಟಲೆ ದೂರ.

ಆದರೆ ಆ ಮುದಿ ತಾಯಿಗೆ ಮಗನಿಲ್ಲದೇ ಏನೂ ಇಲ್ಲ. ತನ್ನೆಲ್ಲ ಕನಸುಗಳಲ್ಲಿ ಮಗನ ಏಳ್ಗೆಯ ಕಾಣುವವಳವಳು. ಮನಸ್ಸು ಪೂರ್ತಿ ಆತನಲ್ಲೇ ನೆಲೆಯಾಗಿದೆ. ಒಂದಲ್ಲಾ ಒಂದು ದಿನ ಮಗ ಸಾರ್ಥಕ ಬದಕ ಸಾಗಿಸಿಯಾನು ಎಂಬ ಹೆಬ್ಬಯಕೆ. ಆದರೆ ಈ ಕನಸು ಅವಳ ಕಣ್ಣಿನಲ್ಲಿ ಸೆರೆಯಾಳಾಗಿ ಪರಿತಪಿಸುತ್ತಿತ್ತು.

ಒಂದು ದಿನ ಇದ್ದಕ್ಕಿದ್ದಂತೆ ಮಗ ಇಲ್ಲವಾದಂತಾದ. ಎಲ್ಲಿ ಹೋದನೆಂಬ ಸುಳಿವೇ ಇಲ್ಲ. ತಾಯಿಗೆ ಒಳಗೊಳಗೇ ಆತಂಕ. ದಿನವುರುಳಿ ವಾರ ಕಳೆಯಿತು. ಮಾಸ ಕಳೆದು ವರುಷ ಅಂತ್ಯವಾಯಿತು. ಆದರೂ ಮಗನ ಪತ್ತೆಯೇ ಇಲ್ಲ. ಮಗನಿಗಾಗಿ ಕಾದು ಕಾದು ಪರಿತಪಿಸಿ ನೊಂದಿದ್ದಳು. ತಾಯಿಗೆ ಆಸರೆಯಾಗಬೇಕಿದ್ದ ಮಗ, ಕಹಿಯಾದ ವಿರಹದ ವೇದನೆಯನ್ನು ತಾಯಿಗೆ ಉಡುಗೋರೆಯಿತ್ತಿದ್ದ. ತಾಯಿಯ ಮನದಾಳದಾಸೆಯೇನೆಂಬುದ ಅರಿಯಲು ವಿಫಲನಾಗಿದ್ದ. ನಿಶೆಯಲ್ಲಿ ಆಕೆಗೆ ಆತನೇ ಕನಸ್ಸು. ಅತನ ಭವಿಷ್ಯದ ಬೆಳಕೊಂದನ್ನು ಆಕೆ ಬಯಸಿದ್ದಳು.

ಆಕೆಗೆ ಐಶ್ವರ್ಯದ ಆಸೆ ಇರಲಿಲ್ಲ. ಅವಳ ಭವಿಷ್ಯದ ಹಂಗೂ ಇರಲಿಲ್ಲ. ಇನ್ನೇನು ಉರುಳಿ ಬೀಳುವ ಮುದಿ ಮರ ಅವಳು. ಮಗ ದುಡಿದು ಬಂಗಾರ ಕೊಡಿಸಲೆಂದೋ, ಮಹಡಿ ಮನೆ ಕಟ್ಟಿಸಲೆಂದೋ ಬಯಸಿರಲಿಲ್ಲ. ಅವಳಿಗೆ ಮಗನೇ ಭವಿಷ್ಯ. ಒಲವಿನ ಕಿರಣವ ಬೀರಿ ಒಳಗಿರುವ ಭಾವದ ಬಣ್ಣವ ಹರಿಸಲೆಂಬ ಬಯಕೆ ತಾಯಿಯದು. ಒಣಗಿ ಒರಟಾಗಿರುವ ಅವಳ ಎದೆ ನೆಲದಲ್ಲಿ ಆತನ ಉಜ್ವಲ ಭವಿಷ್ಯದ ಭರವಸೆಯ ಜೀವ ಹರಿಸಲೆಂದು ಬಯಸಿದ್ದಳು.

ಮಾನಸಿಕವಾಗಿ ಸೆರೆಯಾಗಿದ್ದ ಅವಳ, ಬಂಧನ ಮುಕ್ತಗೊಳಿಸಲೆಂದು ಮನದಲ್ಲೇ ಪರಿತಪಿಸಿದ್ದಳು. ಬದುಕಿದ್ದರೂ ಜೀವಂತ ಹೆಣವಾಗಿದ್ದ ಆಕೆ ಮಗನಿಂದ ಮರು ಜನ್ಮವ ಬಯಸಿದ್ದಳು. ಮಗ ತನ್ನ ಕಾಲ ಮೇಲೆ ನಿಂತು ಜೀವನ ಸುದಾರಿಸಿಕೊಂಡಲ್ಲಿ ತಾನು ಹೋಸ ಲೋಕವನ್ನೇ ಕಾಣುವನೆಂಬ ಹತಾಶೆಯ ತನ್ನೊಳಗೇ ವ್ಯಕ್ತಪಡಿಸಿದ್ದಳು.
ಸ್ನೇಹಿತರೇ, ಈ ಜಗದಲ್ಲಿ ಇಂತಹ ಅನೇಕಾನೇಕ ಕುಟುಂಬಗಳಿವೆ. ಹೆತ್ತ ಕುಡಿಯ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ದುಡಿದು, ತನ್ನ ಕನಸುಗಳಿಗೆ ತುಳಸಿ ನೀರನ್ನರ್ಪಿಸಿ ಮಕ್ಕಳ ಕನಸುಗಳನ್ನೇ ತಮ್ಮ ಕನುಸುಗಳೆಂದು ಭಾವಿಸಿ ಬದುಕುವ ಜೀವಗಳೆದೆಷ್ಟೋ.

ಹೆತ್ತ ತಪ್ಪಿಗೆ ಜೀವನದುದ್ದಕ್ಕೂ ಹೊತ್ತು ಸಲಹುವುದೂ ಅವರ ಜವಾಬ್ದಾರಿ ಎಂಬ ಭಾವ ಬೇಡ. ಭೌತಿಕ ಸುಖದ ಬಲೆಗೆ ಬಿದ್ದು ನಮ್ಮ ಕರ್ತವ್ಯ ಮರೆವ ಕಾರ್ಯ ನಮ್ಮಿಂದಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಅವರ ಆಸೆಗಳ ಗೋಪುರಕೆ ಕಳಶ ಆಗಲಾರದಾದರೂ, ಗೋಪುರದ ಬುಡದ ಇಟ್ಟಿಗೆಯಾದರೂ ನಾವಾಗೋಣ. ಅವರ ಭರವಸೆಯ ಬದುಕಾಗಿ ಬಾಳೋಣ.