Friday, June 3, 2016

ಹೆಣ್ಣೇ...... ನೀನೇಕೆ ಅಷ್ಟು ಸುಂದರ...?


ಬಿಸಿಲ ಬೇಗೆಗೆ ಬಸವಳಿದು ನೆರಳ ಅರಸಿ ಮರದಡಿಯಲಿ ಮಲಗಿದ್ದ ಎನಗೆ ಆಲೋಚನೆಗಳ ಬಳ್ಳಿ ಮೈ ಸುತ್ತಿದ್ದು ಅರಿವಿಗೆ ಬಾರದೇ ಹೋಯಿತೇ..? ಇರಲಿಕ್ಕಿಲ್ಲ.... ಎಲ್ಲವೂ ನೆನಪಿನಂಗಳದಲ್ಲಿ ಸಸಿಯಾಗಿ ಹೂ ಬಿಟ್ಟಂತಿದೆ. ದುಂಬಿಯಾಗಿ ನೆನಪಿನ ಎಸಳುಗಳ ಮಡಿಲಲ್ಲಿರುವ ಮಕರಂದವ ಹೀರಬೇಕೆನಿಸಿ ಹಾಗೆಯೇ ವಿಹರಿಸತೊಡಗಿದ ಮನದ ಆಳದಲ್ಲೊಂದಿಷ್ಟು ಮತಿ ಗ್ರಹಿಸದ ಪ್ರಶ್ನೆಗಳು...

ನಿನ್ನದೆನ್ನುವುದೆಲ್ಲವೂ ನನ್ನದಾದರೆ ಅದೆಷ್ಟು ಖುಷಿಯಿರಬಹುದು. ಆ ಎಡಗಿವಿಯ ಬದಿಯಲ್ಲಿ ಇಳಿಬಿಟ್ಟ ಕರಿ ಕೇಶ, ಕಿವಿಯಲ್ಲಿ ತೂಗುತ್ತಿದ್ದ ಓಲೆಗೆ ತಾಕಿ ನಯವಾಗಿ ನಲಿಯುತಿದೆ. ಕುಳಿಯಿಕ್ಕಿದ ಕೆನ್ನೆ ಎನ್ನ ತುಟಿಗೆ ಆಹ್ವಾನವಿಟ್ಟಂತಿದೆ. ಆ ನಗುವ ಪರದೆಯಡಿ ಎರಗೆರಗಿ ನೋಡುತಿಹ ಆ ಅಧರಗಳು ಏನೋ ಪಿಸುಗುಟ್ಟಂತಿದ್ದು ಕೇಳಲೆನ್ನ ಕಿವಿಗಳು ನಿಮಿರಿ ನಿಂತಿದೆ. ಕಲ್ಪನೆಯ ತೊಟ್ಟಿಲಲಿ ಮಲಗಿಹ ಮಗು ನಾನಾಗಿಹೆನೇ...?? ಇರಬಹುದು.... ಇಲ್ಲದೆಯೂ ಇರಬಹುದು. ಒಮ್ಮೊಮ್ಮೆ ಕೈ ಹಿಡಿದು ರಸ್ತೆಯುದ್ದಕ್ಕೂ ನಡೆಯಬೇಕೆನಿಸಿ, ಬೆರಳುಗಳ ಮಿಲನದಲಿ ಮೈ ಮನವು ತಣ್ಣಗಿನ ಬಿಸಿ ನೀರಂತೆ ಭಾಸವಾಗುವುದು. ಸಂಜೆಯಾದಂತೆಲ್ಲ ನಿನ್ನ ನೆನಪುಗಳೇ ಮಳೆಯಾಗಿ ಹರಿವುದು. ಇದೆಲ್ಲ ನನಗೇ ಏಕಾಗುತಿದೆ...? ನಿನ್ನ ಕಂಡಾಗಲೇ ಏಕಾಗಬೇಕು...? ಎಲ್ಲವೂ ಪ್ರಶ್ನಾರ್ಥಕ......!!!

ಎದುರು ಕುಳಿತ ನಿನ್ನ ಎಷ್ಟು ನೋಡಿದರೂ ಸಾಕೆನಿಸದು. ಆ ಮುಗ್ದ ನಗು..... ಮುಗಿಯದ ಮಾತು..... ಮುದ್ದಾದ ಮುಖ..... ಮನದುಂಬಿದ ಪ್ರೀತಿ.... ಆಹಾ.... ಹೇಳ ತೀರದ ಪಯಣ. ಆಗಲೇ ಅನಿಸುವುದು.... ಹೆಣ್ಣೇ...... ನೀನೇಕೆ ಅಷ್ಟು ಸುಂದರ...?

1 comment:

Unknown said...

Kaviya kalpaneyalli Hennu innu sundara