Friday, January 30, 2015

ದೇಶ ಪ್ರೇಮ


 ಗಣರಾಜ್ಯ ಉತ್ಸವದ ಶುಭಾಷಯಗಳ ಸಂದೇಶಗಳನ್ನು ನೋಡಿ ಹೀಗೊಂದು ವಿಚಾರವನ್ನು ನಿಮ್ಮ ಮುಂದಿಡಬೇಕೆನಿಸಿತು.
ಬರೀ ಸಂದೇಶಗಳನ್ನು ಕಳಿಸೋದ್ರಿಂದ ದೇಶದ ಮೇಲಿನ ಪ್ರೇಮ ಹೆಚ್ಚಾಗೊಲ್ಲ. ಅದರಿಂದ ದೇಶದ ಉದ್ಧಾರವೂ ಆಗಲ್ಲ. ಇಷ್ಟಕ್ಕೇ ನಮ್ಮ ಜವಾಬ್ದಾರಿ ಮುಗಿಯಲ್ಲ. ಮೋದಿಯೋರ್ವನಿಂದ ಈ ದೇಶ ಖಂಡಿತಾ ಬೆಳೆಯೊಲ್ಲ. ಆರಿಸಿ ಕಳಿಸಿದ ಅಧಿಕಾರಿಗಳೇ ನಮ್ಮ ಮನೆಯ ಬಚ್ಚಲನ್ನೂ ಸ್ವಚ್ಛಗೊಳಿಸಬೇಕೆಂದರೆ ಹೇಗೆ ? ಬರೀ ಮತದಾನ ಮಾಡಿದಾಕ್ಷಣ ನಮ್ಮ ಕರ್ತವ್ಯ ಪೂರ್ಣಗೊಳ್ಳಲ್ಲ. ನಮ್ಮ ವೈಯಕ್ತಿಕ ತ್ಯಾಗವೂ ಅವಶ್ಯಕ.

ಒಂದು ಕೆಲಸ ಮಾಡೋಣ ಸ್ನೇಹಿತರೆ. ದೇಶ ಉದ್ಧಾರ ಆಗೋದು ಹಾಗಿರಲಿ. ಮೊದಲು ಹಾಳಾಗುತ್ತಿರುವುದನ್ನು ತಡೆಯೋಣ. ದೇಶ ನಮಗೇನು ಕೊಟ್ಟಿದೆ / ಕೊಡುತ್ತಿದೆ ಎಂಬುದನ್ನು ಯೋಚಿಸುವುದನ್ನು ಬಿಟ್ಟು ನಾವು ದೇಶಕ್ಕೇನು ಕೊಟ್ಟಿದ್ದೇವೆ / ಕೊಡುತ್ತಿದ್ದೇವೆ ಎಂಬುದನ್ನು ಯೋಚಿಸೋಣ.

ದೇಶ ಹಾಳಾಗುತ್ತಿರುವುದನ್ನು ಮೊದಲು ತಡೆಯಬೇಕು. ಈ ನಿಟ್ಟಿನಲ್ಲಿ ಕಂಕಣ ಬದ್ಧರಾಗಿ ಕಾರ್ಯೋನ್ಮುಖರಾಗಬೇಕು. ಇದಕ್ಕೆ ನೀವು ದೊಡ್ಡದೇನನ್ನೂ ಕಳೆದುಕೊಳ್ಳಬೇಕಾಗಿಲ್ಲ. ರಾಷ್ಟ್ರ ಮಟ್ಟದಲ್ಲೇನೂ ಮಾಡಬೇಕಿಲ್ಲ. ಈ ಕಾರ್ಯ ತುಂಬಾ ಸಿಂಪಲ್. ಮೊದಲು ನಾವು ಒಳ್ಳೆಯವರಾಗೋಣ. ನಮ್ಮ ಮನೆಯಂಗಳವನ್ನು ಶುಚಿಯಾಗಿಡೋಣ. ಸಾಮಾಜದಲ್ಲಿ ನಮ್ಮಿಂದಾಗುತ್ತಿರುವಂತಹ ಲೋಫವನ್ನು ಗುರುತಿಸಿ, ನಮ್ಮಿಂದ ಸಮಾಜಕ್ಕೆ ಕೆಟ್ಟದಾಗದಂತೆ ನೋಡಿಕೊಳ್ಳೋಣ. ದೇಶ ತನ್ನಿಂತಾನೇ ಒಳ್ಳೆಯದಾಗುತ್ತೆ.

ಈ ಹಿಂದೆ ಸ್ವಾತಂತ್ರ್ಯೋತ್ಸವದ ದಿನ ನಾನೊಂದು ದೃಢ ಸಂಕಲ್ಪವನ್ನು ಮಾಡಿದ್ದೆ. ಕಸಗಳನ್ನು ಕಂಡಕಂಡಲ್ಲಿ ಎಸೆಯುವುದಿಲ್ಲವೆಂದು. ಇಂದಿಗೂ ಅದನ್ನು ಶಿರಸಾವಹಿಸಿ ಪಾಲಿಸುತ್ತಿದ್ದೇನೆ. ಇದು ದೇಶವನ್ನು ಸುಭೀಕ್ಷಗೊಳಿಸಿಲ್ಲ ನಿಜ. ಆದರೆ ನನ್ನಿಂದ ದೇಶ ಕೆಟ್ಟದಾಗಿಲ್ಲ ಎಂಬ ಹೆಮ್ಮೆ ಇದೆ.

ಇಂದೂ ಸಹ ಇಂಥದ್ದೇ ಒಂದು ಸಂಕಲ್ಪವನ್ನು ಮಾಡಲಿದ್ದೇನೆ. ಅದೇನೆಂಬುದನ್ನು ಮುಂದೊಂದು ದಿನ ಸಾಧಿಸಿ ನಿಮ್ಮ ಮುಂದಿಡುತ್ತೇನೆ.

ಸ್ನೇಹಿತರೇ ಬನ್ನಿ. ಕೈ ಜೋಡಿಸಿ. ಕಂಕಣಬದ್ಧರಾಗೋಣ. ದೇಶವನ್ನು ನಮ್ಮದೇ ಹಾದಿಯಲ್ಲಿ ಕಟ್ಟೋಣ.
“ಸಾಗಲಿ ಈ ನಮ್ಮ ಚಿತ್ತ, ಅಭಿವೃದ್ಧಿ ಪಥದತ್ತ”, ಎಂಬ ಧ್ಯೇಯ ವಾಕ್ಯ ಎಲ್ಲೆಡೆ ಪಸರಿಸಲಿ.


ಬರಹದಲ್ಲೊಂದಿಷ್ಟು ತಿರುಳಿದೆ ಎಂದೆನಿಸಿದಲ್ಲಿ ಎಲ್ಲರನ್ನೂ ತಲಪುವಂತೆ ಮಾಡಿ.

ಲವ್ ಲೆಟ್ಟರ್


ನಾನು
ನಮ್ಮೂರಿನ ಹುಡುಗ.

ಇಂದು/ಇದೇ ತೀಂಗಳು/ಇದೇ ವರ್ಷ.

ನೀವು.
ನಿಮ್ಮೂರ ಹುಡುಗಿ.

ವಿಷಯ: ಪ್ರೇಮ ಪತ್ರವಿದು. ಅರ್ಜಿ ಅಲ್ಲ.

ಮಾನ್ಯರೇ,


ಈ ಮೂಲಕ ನಾನು ನಿಮ್ಮಲ್ಲಿ ಹೇಳೀಕೊಂಬುದೇನೆಂದರೆ, ಅಂದು ನೀವು ಹೂ ಕೊಯ್ಯಲು ಅಂಗಳಕ್ಕಿಳಿದಾಗ ಕಂಡಿದ್ದು, ಪುಸ್ಸುಕ್ಕೆಂದು ಲವ್ವಾಗಿದೆ. ಈ ಪ್ರೇಮ ನಿವೇದನೆಗೆ ಹರಸಾಹಸ ಪಟ್ಟಿರುತ್ತೇನೆ. ಇಲ್ಲದ ಧೈರ್ಯವ ಹುಡುಕಲು ಸ್ನೇಹಿತರು ಸಹಕರಿಸಿದ್ದು, ಬದಲಾಗಿ ನಿಮ್ಮ ಅಕ್ಕ ತಂಗಿಯರನ್ನು ಪಟಾಯಿಸಲು ಸಹಾಯವನ್ನು ಬಯಸಿದ್ದಾರೆ. ಅವರು ಮಾಡಿದ ಸಹಾಯಕ್ಕೆ ಆಭಾರಿಯಾಗಿದ್ದು, ಕೈಲಾದ ಸಹಾಯ ಮಾಡುತ್ತೇನೆ ಎಂಬುದಾಗಿ ಒಪ್ಪಿಕೊಂಡಿದ್ದೇನೆ.

ಹಿಂದೊಂದು ದಿನ ಇದೇ ಕಾರ್ಯದ ನಿಮಿತ್ತ ನಿಮ್ಮ ಮನೆಯ ಕಾಲಿಂಗ್ ಬೆಲ್ ಒತ್ತಿದ್ದು, ನಿಮ್ಮ ಅಪ್ಪನ ಮುಖ ಕಂಡು ಬೆವರಿಳಿಸಿ ಬೆಂಡಾಗಿರುತ್ತೇನೆ.
ಹಾಗೆಂದ ಮಾತ್ರಕ್ಕೆ ಹೆದರಿದ್ದೇನೆ ಎಂಬರ್ಥ ಬೇಡ. ನನ್ನಲ್ಲಿ ಎಂಟಂತಸ್ತಿನ ಮಹಡಿಯಿಲ್ಲದಿದ್ದರೂ, ಎರಡು ಕೋಣೆಯ ಗುಡಿಸಲಿದೆ (ಟಾಕ್ಸ ಕಟ್ಟುತ್ತಿಲ್ಲ). ನಾಲ್ಕು ಚಕ್ರದ ಬಂಡಿಯಿಲ್ಲದಿದ್ದರೂ, ಚಕ್ರ ಎರಡರ ಸೈಕಲ್ಲಿದೆ. ಕುತ್ತಿಗೆಯಲ್ಲಿ ಕಾಸಿನ ಸರವಿಲ್ಲದಿದ್ದರೂ, ಕಾಶೀ ದಾರವಿದೆ. ಕಿಸೆಯಲ್ಲಿ ಕಾಗದದ ನೋಟಿಲ್ಲದಿದ್ದರೂ, ಕೆ.ಜಿ ತೂಕದ ನಾಣ್ಯಗಳಿದೆ. ಇದು ನನ್ನ ಆಸ್ತಿ ವಿವರ.

ನಿಮ್ಮ ಆಸ್ತಿ ವಿವರ ನನಗೆ ಬೇಕಿಲ್ಲ. ಆದರೆ ನಿಮ್ಮ ಆಸೆಯ ವಿವರದ ಅಗತ್ಯವಿದೆ. ಪತ್ರ ತಲುಪಿದಲ್ಲಿ ಉತ್ತರಿಸಿ.
ನಿಮ್ಮ ಧನಾತ್ಮಕ ಉತ್ತರಕ್ಕಾಗಿ ಕಾಯುತ್ತಲೀರುತ್ತೇನೆ.

ಇಂತಿ ತಮ್ಮ ವಿಶ್ವಾಸಿ,
ನಾನು.
ನಮ್ಮೂರ ಹುಡುಗ.

ಮಂತ್ ಎಂಡ್



ಬದುಕು ಬೆಂಡಾಗಿದೆ. ಮನಸು ಬರಡಾಗಿದೆ. ಒಳಗೊಳಗೇ ಅದೇನೋ ಭಾವ. ನಿದ್ದೆ ಹತ್ತುತ್ತಿಲ್ಲ. ಕನಸು ಬೀಳುತ್ತಿಲ್ಲ. ಕಣ್ಣೆಲ್ಲ ಮಂಜು ಮಂಜು. ಎಷ್ಟು ತಿಂದರೂ ಹಸಿವೇ ಆಗದ ದಿನ. ಆಗದು..... ಇದಕ್ಕೊಂದು ಪರಿಹಾರ ಹುಡುಕಲೇಬೇಕು. ಪರಿಹಾರಕ್ಕೂ ಮೊದಲು ಸಂಕಟಕ್ಕೆ ಕಾರಣ ಬೇಕಲ್ವ..? ಹುಡುಕುತ್ತಾ ಹೊರಟೆ............... ........
..
..
..
..
..
..
..
..
..
..
..
..
..
..
..
..
..
..
..
..
..
. .
..
..
.. ವಿಷಯ ಇಷ್ಟೇ..... ಅಂದು ಅದು ಮೂವತ್ತರ ಮಧ್ಯರಾತ್ರಿ. ಬ್ಯಾಂಕಲ್ಲಿ ಕಾಸಿಲ್ಲ. ಜೇಬಲ್ಲಿ ದುಡ್ಡಿಲ್ಲ. ಇಷ್ಟೇ ಅಲ್ಲ....... ಇಂಟರ್’ನೆಟ್ ಪ್ಯಾಕ್ ಕೂಡ ಇಲ್ಲ.
ಸಾಲ ಮಾಡೋಣವೆಂದರೆ....... ಹಾಳಾದ್ದು, ಸಾಲ ಕೊಡುವವಗೂ ಮಂತ್ ಎಂಡ್.....!!!


ನೀತಿ: ಸ್ಯಾಲರಿ ಸಾವಿರದಲ್ಲಿರಲಿ ಅಥವಾ ಲಕ್ಷದಲ್ಲಿರಲಿ, ಮಂತ್ ಎಂಡ್ ಎಲ್ಲರಿಗೂ ಬರುತ್ತೆ..