Monday, December 22, 2014

ಮುಖ ಪುಸ್ತಕ


ಕೆಲವು ದಿನಗಳ ಹಿಂದೆ, ಹೀಗನಿಸಿತು,” ಇಂದು ಏನಾದರೊಂದು ಒಳ್ಳೆಯ ಕೆಲಸ ಮಾಡಬೇಕು. ಅದರಿಂದ ನನ್ನ ಭವಿಷ್ಯಕ್ಕೆ ಒಳಿತಾಗಬೇಕು”, ಎಂಬುದಾಗಿ. ತಕ್ಷಣ ಹೊಳೆದದ್ದು, ಫೇಸ್ ಬುಕ್ ನ್ನು ತೀರಾ ಉಪಯೋಗಿಸುತ್ತಿದ್ದ ಎನಗೆ ಇದರಿಂದ ನನ್ನ ಸಮಯ ವ್ಯರ್ಥವಾಗುತ್ತಿದೆಯೋ ಎಂದು ಅನಿಸಿತ್ತು. ಕಾರಣ ಅಂದು ಬೆಳ್ಳಂಬೆಳಿಗ್ಗೆ ಫೇಸ್ ಬುಕ್ ನ್ನು ಸ್ಥಗಿತಗೊಳಿಸಿದ್ದೆ. ಮನದಲ್ಲೇನೋ ಸಂತಸ. ಏನೋ ಸಾಧಿಸಿದ್ದೇನೆ ಎಂಬ ಹೆಮ್ಮೆ. ದಿನದ ಸಮಯವನ್ನೆಲ್ಲ ನನ್ನದೇ ಜಗತ್ತಿನಲ್ಲಿ ಕಳೆದಿದ್ದೆ. ಆದರೆ ಸಂಜೆಯಾಗುತ್ತಿದ್ದಂತೆ ಮನದಾಳದಲ್ಲಿ ಏನೋ ದುಗುಡ. ಯಾಕೆ ಏನು ಎಂಬುದು ಮೊದಲು ಅರಿವಾಗಲಿಲ್ಲ. ತೀರಾ ಯೋಚಿಸಿದ ಮೇಲೆ ತಿಳಿಯಿತು. ದಿನದಾರಂಭದಲ್ಲಿ ಒಳ್ಳೆದೆಂದು ಮಾಡಿದ ಕಾರ್ಯ ಸಂಜೆಯಾಗುತ್ತಿದ್ದಂತೆ ಮನವನ್ನು ಕೊರೆಯಲಾರಂಭಿಸಿತ್ತು. ಅದೆಷ್ಟು ಸ್ನೇಹಿತರು ಸಂದೇಶಗಳನ್ನು ಕಳುಸಿದ್ದಾರೋ… ಅದೆಷ್ಟು ಜನ ಛಾಯಾಚಿತ್ರಗಲನ್ನು ನನ್ನ ಮುಖಪುಸ್ತಕದ ಮುಖಪುಟಕ್ಕೆ ಲಗತ್ತಿಸಿದ್ದಾರೋ.. … ಹೀಗೇ, ಒಳಗೊಳಗೇ ಕಳವಳ. ದಿನದಂತ್ಯದಲ್ಲಿ ಮತ್ತೆ ಏನಾದರೊಂದು ಹೊಸತು ಮಾಡಬೇಕೆಂದೆನಿಸಿತು. ಏನು ಮಾಡುವುದು ? ಹೇಗೆ ಮಾಡುವುದು ? ಏನಾದರೊಂದು ಮಾಡಿದಲ್ಲಿ ಒಂದಿನಿತಾದರೂ ಪ್ರಯೋಜನ ಇದೆಯೇ… ಇತರರು ಏನು ತಿಳಿದಾರು? ಹೀಗೆಯೇ ಮನದಾಳದಲ್ಲಿ ಯೋಚನೆಗಳದೇ ಹೊಳೆಯು ಎಡೆಬಿದದೆ ಹರಿಯುತ್ತಲಿತ್ತು. ಕೊನೆಗೆ ಒಂದು ನಿರ್ಧಾರಕ್ಕೆ ಬಂದಿದ್ದೆ. ಸ್ಥಗಿತಗೊಳಿಸಿದ್ದ ಫೇಸ್ ಬುಕ್ ಗೆ ಮತ್ತೆ ಚಾಲನೆ ನೀಡುವುದೂ ಎಂದು. ತತ್’ಕ್ಷಣ ಮನಸಿನ ಇಂಗಿತವನ್ನು ಕಾರ್ಯರೂಪಕ್ಕೆ ತಂದಿದ್ದೆ.

ಮುಂದೆ ‘ಫ಼ೇಸ್ ಬುಕ್’ ಖಾತೆಯನ್ನು  ಸ್ಥಗಿತಗೊಳಿಸಬೇಕು ಎಂದುಕೊಂಡಾಗೆಲೆಲ್ಲ ಒಬ್ಬರಲ್ಲ ಒಬ್ಬರು ಫ಼್ರೆಂಡ್ ರಿಕ್ವೆಸ್ಟ್ ಕಳಿಸುತ್ತಾನೇ ಇರುತ್ತಾರೆ.  ಕೆಲವೊಮ್ಮೆ ನಮಗೆ ನಮ್ಮ ಹಳೇಯ ಸ್ನೇಹಿತನೋ ಸ್ನೇಹಿತೆಯೋ ಕಂಡು ನಾವೂ ಸಹ ರಿಕ್ವೆಸ್ಟ್ ಕಳುಹಿಸುತ್ತೇವೆ. ಇದು ನಮ್ಮ ಹಾಗೂ ಫ಼ೇಸ್’ಬುಕ್ ಜಗತ್ತಿನ ನಡುವಿನ ಸಂಬಂಧ ಸಾಯದೇ ಹಾಗೇ ಉಳಿಯಲು ಕಾರಣೀಭೂತವಾಗಿದೆ. ಮುಂದುವರಿದ ಇಂದಿನ ಜಗದಲ್ಲಿ ಒಬ್ಬರನ್ನೊಬ್ಬರು ಮುಖಾಮುಖಿ ಕಾಣುವುದು ಅಪರೂಪವಾಗಿದ್ದು, ಜನರ ಸಂಪರ್ಕ ಸಾಧನವಾಗಿ ಬೆಳೆದು ನಿಂತಿದೆ ಈ ಫೇಸ್ ಬುಕ್. ಅಂತೆಯೇ ಇಲ್ಲಿ ಸಾಹಿತ್ಯ, ಶಿಕ್ಷಣ ಹೀಗೆ ಹಲವಾರು ವಿಷಯಗಳು ಮತ್ತದರ ಬಗ್ಗೆ ವ್ಯಕ್ತಿಗತ ಅಭಿಪ್ರಾಯ ಮಂಡನೆ ಎಲ್ಲವೂ ಕಾಣ ಸಿಗುವುದು. ನನ್ನ ಪ್ರಕಾರ ಪ್ರತಿಯೊಂದರಲ್ಲಿ ಒಳ್ಳೆಯದು, ಕೆಟ್ಟದ್ದೂ ಇದ್ದೇ ಇದೆ. ಅದನ್ನು ನಾವು ಯಾವ ರೀತಿ ಸ್ವೀಕರಿಸುತ್ತೇವೆ ಅಥವಾ ಯಾವ ದೃಷ್ಠಿಯಿಂದ ಕಾಣುತ್ತೇವೆ ಅನ್ನೋದರಲ್ಲಿ ಅದರ ಉಪಯೋಗ ಅಡಗಿದೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ, ಜೀವನದಲ್ಲಿ ಒಳ್ಳೆಯದೂ, ಮತ್ತು ಕೆಟ್ಟದ್ದು, ಎರಡರ ಪರಿಚಯವೂ ಇರಬೇಕು. ಒಳ್ಳೆಯದು ನಾವು ಏನು ಮಾಡಬೇಕು ಎಂಬುದನ್ನು ತಿಳಿಸಿದರೆ, ಕೆಟ್ಟದ್ದು ನಾವು ಏನು ಮಾಡಬಾರದು ಎಂಬುದನ್ನು ತಿಳಿಸುತ್ತೆ. ಈ ಫೇಸ್ ಬುಕ್ ಪ್ರಪಂಚವೂ ಹಾಗೆಯೇ…….


ಆದರೆ ಈ ಮುಖಪುಸ್ತಕದ ಜಗತ್ತಿನಲ್ಲಿ ಒಂದು ಮಾತ್ರ ಅರ್ಥವಾಗುತ್ತಿಲ್ಲ. ನಮಗೆ ಪರಿಚಯದವರು ಹಾಗೂ ಪರಿಯವಿರದವರೂ ರಿಕ್ವೆಸ್ಟ್ ಕಳುಹಿಸುವುದು ಸರ್ವೇ ಸಾಮಾನ್ಯ. ಆದರೆ ರಿಕ್ವೆಸ್ಟ್ ಒಪ್ಪಿಕೊಂಡು, ಅವರ ಪರಿಚಯ ಕೇಳಿದರೆ ಅದನ್ನು ಹೇಳಲು ಮಾತ್ರ ಹಿಂಜರಿಯುತ್ತಾರೆ. ಅದೇಕೆಂದು ಅರ್ಥವಾಗುತ್ತಿಲ್ಲ. ತಮ್ಮ ಪರಿಚಯ ಬಹಿರಂಗಪಡಿಸಲು ಗುರುಗುಡುವವರು ಕೆಲವರಾದರೆ, ಇನ್ನು ಕೆಲವರು ತಮ್ಮ ನಾಮಧೆಯವನ್ನು ಹೇಳಿ ತಣ್ಣಗಾಗುತ್ತಾರೆ. ಕೇವಲ ನಾಮಧೆಯಕ್ಕೆ ಪರಿಚಯ ಆಗಬಹುದೇ? ಸರಿ ಬಿಡಿ, ಹಾಗಾದರೆ ಆ ಹೆಸರನ್ನು ಹೇಳುವದು ಯಾವ ಪುರುಷಾರ್ಥಕ್ಕೆ? ನಿಮ್ಮ ಹೆಸರು ಪ್ರೋಫ಼ೈಲ್ ಗೆ ನೇತು ಹಾಕಿದ್ದನ್ನು ಓದಿಯೇ ಒಪ್ಪಿಕೊಂಡಿರುತ್ತೇವೆ. ಇನ್ನೂ ಕೆಲವರಿದ್ದಾರೆ. ವಾರಕ್ಕೊಮ್ಮೆ ಕುಶಲೋಪರಿ ವಿಚಾರಿಸಿದರೂ, ಎನೋ ಕದ್ದು ಒಯ್ಯುತ್ತೇವೇನೋ ಎಂಬಂತೆ ನಮ್ಮನ್ನು ಕಾಣುತ್ತಾರೆ. ಅದರಲ್ಲೂ ಒಬ್ಬ ಯುವಕ ಯುವತಿಗೆ ಸಂದೇಶ ಕಳುಹಿಸಿದರೆ ಈ ಥರದ ಅನುಭವ ಹೆಚ್ಚು. ಶುಭೋದಯ ಹೇಗಿದ್ದೀರಾ ಎಂದು ಕೇಳಿದರೆ, ಅದಕ್ಕೆ ಉತ್ತರಿಸಲೂ ಆಗದ ಸೋಮಾರಿಗಳೇ? ಅಥವಾ ಉತ್ತರಿಸಿದಲ್ಲಿ ತಮ್ಮ ತಿಂದು ತೇಗಿಯಾರು ಎಂಬ ಯೋಚನೆಯೇ? ಅಥವಾ ಉತ್ತರಿಸಿದರೆ ತಮ್ಮ ಅಸ್ಥಿತ್ವವೆಲ್ಲಿ ಕೆಳಗಿಳಿಯುವುದೋ ಎಂಬ ಭಾವನೆಯೇ? ಫ಼ೇಸ್’ಬುಕ್ ಪುಟ ಆರಂಭದ ದಿನಗಳಲ್ಲಿ ಎಲ್ಲರಿಗೂ ಚಟವೋ ಎಂದು ಭಾಸವಾಗುವಂತೆ ಹವ್ಯಾಸವಿರುವುದು ಸಾಮಾನ್ಯ. ಪರಿಚಯವಿರದವರಿಗೂ ರಿಕ್ವೆಸ್ಟ್ ಕಳಿಸಿ ನಮ್ಮ ಫ಼್ರೆಂಡ್ಸ್ ಸಂಖ್ಯೆಯನ್ನು ಹೆಚ್ಚಿಸುವುದು. ಮೊದ ಮೊದಲು ನಾನು ಹಾಗೆಯೇ ಮಾಡಿದ್ದೇನೆ. ಆದರೆ ಈ ತರದ ಹುಚ್ಚು ಕೇವಲ ತಿಂಗಳೋ ಎರಡು ತಿಂಗಳೋ ಅಷ್ಟೆ. ಮುಂದೆ ಆಗುವ ಪರಿಚಯವೆಲ್ಲದಕ್ಕೆ ಒಂದಲ್ಲ ಒಂದು ಕಾರಣವಿರುತ್ತದೆ. ಮುಖಪುಸ್ತಕದ ಬಾವಚಿತ್ರ ನೋಡಿ ರಿಕ್ವೆಸ್ಟ್ ಕಳಿಸುವವರೊಂದಿಷ್ಟಾದರೆ, ನಿಮ್ಮ ಬರಹಗಳ ಭಾರ ನೋಡಿ ಕಳುಹಿಸುವವರೊಂದಿಷ್ಟು. ಇನ್ನು ಕೆಲವರು ತಮ್ಮ ಊರಿನವರೆಂದೂ, ಸಂತೆ ಪೇಟೆಯಲ್ಲು ಕಂಡ ಮುಖವೆಂದೂ, ಪ್ರೆಂಡ್ ನ ಅಣ್ಣ ತಮ್ಮಂದಿರೆಂದೂ, ಸಮಾನ ವಯಸ್ಕರೆಂದು/ ಮನಸ್ಕರೆಂದು , ಇನ್ನೂ ಕೆಲವರು ಅದೇನೋ ಅಂತಾರಲ್ಲ "ಪ್ರಥಮ ನೋಟದ ಪ್ರೇಮ", ಎಂದೂ ರಿಕ್ವೆಸ್ಟ್ ಕಳುಹಿಸುತ್ತಾರೆ. ರಿಕ್ವೆಸ್ಟ್ ನ ಕಾರಣಗಳು ಅವರವರ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಕೆಲವರು ತಮ್ಮ ಕಾರಣಕ್ಕೆ ಅನುವಾಗುವಂತೆ ವ್ಯವಹರಿಸುವರು ಕೂಡ. ಹಾಗೆಂದು ಎಲ್ಲರನ್ನೂ ಆ ದೃಷ್ಠಿಯಿಂದ ಕಾಣುವುದು / ಕಂಡ ಕಪ್ಪೆಲ್ಲ ಕೆಟ್ಟದ್ದು ಎಂಬ ಭಾವನೆ  ತಪ್ಪಾಗುವುದು.


ಕಾರಣ ಎಲ್ಲ ಮುಖಪುಸ್ತಕದ ಸಹೃದಯ ಸದಸ್ಯರುಗಳಲ್ಲಿ ನನ್ನ ಕಳಕಳಿಯ ವಿನಂತಿ. ಜನರನ್ನು ನೀವು ಕಂಡ ಹಾಗೆ ನಿರ್ಧರಿಸುವುದನ್ನು ಬಿಟ್ಟು, ಅವರವರ ಗುಣಗಳಿಗನುಸಾರವಾಗಿ / ವ್ಯಕ್ತಿತ್ವಕ್ಕನುಗುಣವಾಗಿ  ತಾಳೆ ಹಾಕಿ ಒಳ್ಳೆಯವರೋ ಕೆಟ್ಟವರೋ ಎಂಬುದನ್ನು ನಿರ್ಧರಿಸಿ. ಪುಸ್ತಕದ ಮುಖ ಪುಟವ ಕಂಡು, ಒಳಗೇನಿದೆ ಎಂಬುದನ್ನು ನಿರ್ಧರಿಸದಿರಿ ಎಂಬ ಅಭಿಪ್ರಾಯ ಬರವಣಿಗೆಯ ಮೂಲ ಉದ್ದೇಶ.



No comments: