Wednesday, May 14, 2014

ತಾರ ತಮ್ಯದ ಜೀವನ:-

ದೊಡ್ಡೋರು ಚಿಕ್ಕೋರು, ಬಡವರು ಬಲ್ಲಿಗರು, ಅಂತೋರು ಇಂತೋರು, ಅನ್ನೋ ತಾರತಮ್ಯ ಈ ಇಂದಿನ ಜಗತ್ತಿನಲ್ಲಿ ಸರ್ವೇ ಸಾಮಾನ್ಯ. ಚಿಕ್ಕೋರಿಲ್ಲದೇ ದೊಡ್ಡತನಕ್ಕೆ ಅರ್ಥವಿಲ್ಲ, ಬಡವರಿಲ್ಲದೇ  ಬಲ್ಲವರ ಬೇಳೆ ಬೆಯ್ಯೊಲ್ಲ, ಅಂತೋರಿಲ್ಲದೇ ಇಂತವರಿಗೆ ಕೆಲಸವಿಲ್ಲ ಎನ್ನೋದರ ಮರ್ಮ ಅರಿತವನು ಈ ತಾರತಮ್ಯಕ್ಕೆ ಸೆಡ್ಡು ಹೊಡೆದು ಜೀವನ ನಡೆಸುತ್ತಾನೆ. ಜೀವನದಲ್ಲೊಂದು ಸೊಗಡಿದೆ. ಅಕ್ಷರ ಮೂರೇ ಇರಬಹುದು. ಆದರೆ ಅದಕ್ಕಿರುವ ಅರ್ಥ ಮಾತ್ರ ಗಜ ಗಾತ್ರದ್ದು. ಜೀವನ ದಲ್ಲಿನ ಜೀ ತೆಗೆದರೆ ಉಳಿಯೋದು ವನ.  ‘ಜಿ’ ಎಂದರೆ ಜಿಗುಪ್ಸೆ ಎಂದಿಟ್ಟುಕೊಳ್ಳಿ. ನಮ್ಮ ಜೀವನದಲ್ಲಿ ಜಿಗುಪ್ಸೆ ಎಂಬ ಶತ್ರುವಿಗೆ ಅವಕಾಶ ಕೊಡದೇ ಇದ್ದಲ್ಲಿ ವನದಂತೆ ಹಚ್ಚ ಹಸುರಿನ ಬಾಳು ನಮ್ಮದಾಗುವುದು. ಹಾಗೆಯೇ  ಜೀವನದಲ್ಲಿನ ‘ನ’ ತೆಗೆದರೆ.....? ಉಳಿಯೋದು ಜೀವ ಮಾತ್ರ. ಈ ಜೀವ ನಶ್ವರ ಎಂಬುದನ್ನು ಜೀವನದಲ್ಲಿನ ‘ನ’ ಎಂಬ ಪದವು ಸೂಚಿಸುತ್ತದೆ. ಬದುಕಿರುವ ನಾಲ್ಕು ದಿನಗಳಲ್ಲಿ ಅಸೂಯೆ, ಕೇಡು, ಮದ, ಮತ್ಸರದಲ್ಲಿಯೇ ಕಾಲ ಕಳೆದರೆ ಎಂತು.? ಕಾರಣ ನಶ್ವರವಾದ ಈ ಜೀವನಕ್ಕೊಂದು ಅರ್ಥ ಬರಬೇಕೆಂದಿದ್ದರೆ ಈ ತಾರತಮ್ಯಗಳ ನಡುವೆ ಸಹಬಾಳ್ವೆಯ ಪ್ರೀತಿ ಹುಟ್ಟಬೇಕು. ಸಂತೋಷ ಭರಿತ ಜೀವನ ನಮ್ಮದಾಗಬೇಕು.

!!ಸರ್ವೇ ಜನಾಃ ಸುಖಿನೋ ಭವಂತು!!

No comments: