ಅದು ಒಂದು ಪುಟ್ಟ ಹಳ್ಳಿ. ಬೆರಳೆಣಿಕೆಗೆ ಸಿಕ್ಕುವ ಮನೆಗಳು. ಲೆಕ್ಕ ಹಾಕ ಹೊರಟರೆ ಜನಸಂಖ್ಯೆ ಐವತ್ತು ದಾಟಿರಲಿಕ್ಕಿಲ್ಲ. ಶ್ರೀಮಂತಿಕೆಯ ಸೊಗಡು ಕೆಲವೇ ಮನೆಗಳಿಗೆ ಬಡಿದಿತ್ತು. ವೈಜ್ಞಾನಿಕತೆಯಲ್ಲಿ ಹಿಂದುಳಿದವರು ಎಂದರೆ ತಪ್ಪಾಗಲಾರದು. ತಿನ್ನುವುದು ಗಂಜಿಯಾದರೂ ದುಡಿದೇ ತಿನ್ನಬೇಕು ಎಂಬ ಸ್ವಾಭಿಮಾನಿಗಳ ದಂಡು ಅದಾಗಿತ್ತು. ಯುವ ಜನಾಂಗ ಶಿಕ್ಷಣ, ಉದ್ಯೋಗ ಎಂದು ಪಟ್ಟಣದತ್ತ ಹೆಜ್ಜೆ ಇಟ್ಟಿದ್ದರು. ಆದರೆ ಆ ಊರಿನ ಒಂದು ಕುಟುಂಬ ಮಾತ್ರ ಎಲ್ಲರಲ್ಲೂ ವೈರುಧ್ಯ ಕಟ್ಟಿಕೊಂಡವರಾಗಿದ್ದರು. ಎಲ್ಲದೂ ತನ್ನದೇ ಅನ್ನುವ ಸರ್ವಾಧಿಕಾರದ ಭಾವನೆ ಅವರದಾಗಿತ್ತು. ಮಾನ ಮರ್ಯಾದಿಗೆ ಅಂಜುವ ಜಾಯಮಾನ ಅವರದಾಗಿರಲ್ಲಿಲ್ಲ. ಕಾರಣ ಊರಿನವರೆಲ್ಲರೂ ಅವರನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಹಚ್ಚಿಕೊಳ್ಳುತ್ತಿದ್ದರು.
ಆ ಊರಿನ ಅಂಚಿನಲ್ಲೊಂದು ಬಸವನ ಗುಡಿಯಿತ್ತು. ತುಂಡು ಇಟ್ಟಿಗೆಗಳೆಲ್ಲ ಸೇರಿ ಬಸವನ ಮೂರ್ತಿಗೆ ಸುಭದ್ರ ಕೋಟೆ ಎನಿಸಿದ್ದವು. ಹೆಂಚಿನ ಮಾಡು. ಅಲ್ಲಲ್ಲಿ ಸೋರುತ್ತಿತ್ತು. ಮಳೆಗಾಲದಲ್ಲಿ ತೊಟ್ಟಿಕ್ಕುವ ಸೂರು ಬಸವ ಮೂರ್ತಿಗೆ ಸದಾ ಅಭಿಶೇಕ ಮಾಡುತ್ತಲಿತ್ತು. ಸುತ್ತಲಿನ ಹತ್ತಾರು ಊರಿನ ಜನ ಆ ದೇವಳಕ್ಕೆ ನಡೆದುಕೊಳ್ಳುತ್ತಿದ್ದರು. ಕಳೆದ ಎರಡು ಮೂರು ತಲೆಮಾರಿನಿಂದ ಬಸವ ದೇವರನ್ನೇ ಮುಖ್ಯ ದೇವರನ್ನಾಗಿ ಸ್ಥಾಪಿಸಿ ವಾರಪೂಜೆ, ವಾರ್ಷಿಕ ವಿಷೇಶ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದರು. ಅಲ್ಲೇ ಅನತಿ ದೂರದಲ್ಲೊಂದು ಶಿವನಲಿಂಗವಿತ್ತು. ಹೆಸರು ರಾಮಲಿಂಗ. ಬೆಟ್ಟದ ಮಧ್ಯದಲ್ಲಿರುವ ಆ ರಾಮ ಲಿಂಗಕ್ಕೆ ಸುತ್ತಲಿರುವ ಪೊದೆಗಳೇ ಗೋಡೆ. ಬೆಳೆದು ನಿಂತ ಸಾಲು ಮರಗಳೇ ಸೂರು. ವರುಷಕ್ಕೊಂದು ಪೂಜೆ. ಹಣ್ಣು ಕಾಯಿಯೊಡಗೂಡಿದ ನೈವೇದ್ಯ. ಎಷ್ಟೊಂದು ವಿಪರ್ಯಾಸ ಅಲ್ವ? ಒಡೆಯನಾದ ಶಿವನಿಗೆ ವರ್ಷಕ್ಕೊಂದು ಪೂಜೆ ಪುನಸ್ಕಾರ, ನೈವೇದ್ಯ, ನೇಮ ಎಲ್ಲ. ಆದರೆ ಶಿವನ ವಾಹನ ನಂದಿಗೆ(ಬಸವ)..........? ಇಲ್ಲಿ ಎಲ್ಲವೂ ವಿರುದ್ಧವಾಗಿತ್ತು. ಈ ವಿಷಯದ ಬಗ್ಗೆ ಆಗಾಗ ಗುಂಪಿನಲ್ಲಿ ಚರ್ಚೆ ಆಗಿತ್ತೇ ವಿನಃ ಯಾರೊಬ್ಬರೂ ಇದರ ಹಿಂದಿರುವ ಕಾರಣವನ್ನು ತಿಳಿಯುವ ಗೋಜಿಗೆ ಹೋಗಿರಲ್ಲಿಲ್ಲ. ಇಂದಿನ ಪರಿಸ್ಥಿತಿಯ ನೋಡಿದರೆ ಹಿಂದಿನದ್ದೇ ಮುಂದುವರಿಸಿಕೊಂಡು ಬಂದಿದ್ದರೆ ಸಾಕಿತ್ತೇನೋ ಎಂದೆನಿಸುತ್ತದೆ.
ಇದೆಲ್ಲದ್ದಕ್ಕೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಮಳೆಗಾಲ ಶುರುವಾಗಿತ್ತು. ವಿಪರೀತ ಗಾಳಿ, ಧಂಗೆಬ್ಬಿಸುವ ಗುಡುಗು, ಬೆಚ್ಚಿ ಬೀಳಿಸುವ ಸಿಡಿಲು. ನಡು ರಾತ್ರಿಯಲ್ಲಿ ಬೆಳಕು ಹರಿಯಿತೋ ಎಂದು ಭಾಸವಾಗುವಂತಹ ಮಿಂಚು. ಮಲೆನಾಡ ಮಳೆಗಾಲದ ಚಂದವ ಅನುಭವಿಸಿದರೇನೆ ಗೊತ್ತಾಗೋದು. ಗೂಡಿನೊಳಗೊಕ್ಕ ಗುಬ್ಬಚ್ಚಿಯಂತೆ ಊರಿಗೂರೆ ಬೆಚ್ಚಗೆ ಕಂಬಳಿಯ ಹೊದ್ದು ಮಲಗಿತ್ತು. ಗಾಡ ನಿದ್ರೆಗೆ ಶರಣಾದ ಜನ ಬೆಳಕು ಹರಿದಾಗಲೇ ವಾಸ್ತವ ಜಗತ್ತಿಗೆ ಮರಳಿದ್ದು.
ಬೆಳಗಾಗೆದ್ದ ಜನ ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ರಾತ್ರಿ ಸೋರುತ್ತಿದ್ದ ಜಾಗದಲ್ಲಿ ಇಟ್ಟಿದ್ದ ಪಾತ್ರೆಗಳನ್ನು ತೆಗೆಯುವುದು, ಸೋರುವ ಸೂರಿಗೆ ಏನಾದರೊಂದನ್ನು ಸಿಕ್ಕಿಸಿ ಮನೆಯ ಹೆಂಗಳೆಯರ ಗುಣುಗುಣು ಮಾತಿಗೆ ಪೂರ್ಣವಿರಾಮವಿಡುವುದು, ದನಕರುಗಳ ಚಾಕರಿ ಚಾಚೂ ತಪ್ಪದೇ ಮಾಡುವುದು, ದಿನವೊಂದಕ್ಕೆ ಸಾಲುವಷ್ಟು ಹುಲ್ಲು ಕೊಯ್ದು ಹಟ್ಟಿಯ ಅಟ್ಟಕ್ಕೇರಿಸುವುದು, ರಾತ್ರಿ ಮಳೆಯ ರಭಸಕ್ಕೆ ನೆಲಕ್ಕಪ್ಪಿದ ತೆಂಗಿನ ಕಾಯಿ ಹೆಕ್ಕಿ ತರುವುದು, ತೋಟದ ಇಕ್ಕೆಲಗಳಲ್ಲಿ ಬಿದ್ದ ಸೋಗೆ ಹೆಕ್ಕಿ ಅಟ್ಟಕ್ಕೇರಿಸುವುದು, ಇದೆಲ್ಲ ಮಳೆಗಾಲದ ದಿನಗಳ ದೈನಂದಿನ ಕಾರ್ಯಗಳ ಪಟ್ಟಿಯಲ್ಲಿ ಬರುವಂತಹ ಕೆಲಸಗಳು.
ಆರಂಭಿಕ ದಿನದ ಮಳೆಗಾಲದ ದಿನವೇ ಊರಿಗೂರೇ ದಿಗ್ಭ್ರಮೆಗೊಳ್ಳುವಂತಹ ಕಾರ್ಯವೊಂದು ನಡೆದಿತ್ತು. ಊರಿನಾಚೆ ಇರುವ ರಾಮ ಲಿಂಗದಡಿಯಲ್ಲಿ ನಿಧಿ ಶೋಧ ನಡೆದಿತ್ತು. ಆಳೆತ್ತರದ ಗುಂಡಿ ತೋಡಿದ್ದ ಆ ಪುಣ್ಯಾತ್ಮ ಕಣ್ಮರೆಯಾಗಿದ್ದ. ಯಾರೋ ಒಬ್ಬ ಬೆಟ್ಟ ಸುತ್ತುವ ನೆಪದಲ್ಲಿ ಹೊದಾತ, ಈ ವಿಷಯವನ್ನು ಊರಿನ ಹಿರಿಯರ ಗಮನಕ್ಕೆ ತಂದಿದ್ದ. ಗುಂಡಿ ತೋಡಿದಾತ ಯಾರೆಂಬುದು ಯಾರಿಗೂ ಗೊತ್ತಿಲ್ಲ. ಆತನಿಗೆ ನಿಧಿ ಸಿಕ್ಕಿತೋ ಇಲ್ಲವೋ ಎಂಬುದು ಗೊತ್ತಿಲ್ಲ. ಅಂದಿನಿಂದ ಸಣ್ಣ ಕಿಡಿಯೊಂದು ಹೊತ್ತಿಕೊಂಡಿತ್ತು. ಯಾರೋ ಮುಟ್ಟಿ ದೇವಳದ ಅಶೌಚವಾಗಿದೆ. ಈ ನಿಟ್ಟಿನಲ್ಲಿಯೇ ದೊಡ್ಡ ವಿಧ್ವಾಂಸರ ಕೇಳಿ ಆ ಲಿಂಗದ ಹಿಂದಿರುವ ಸತ್ಯಾಸತ್ಯತೆಯ ತಿಳಿದು, ಬಸವನ ಗುಡಿಯಲ್ಲಿಯೇ ಸ್ಥಾಪಿಸಿ, ಬಸವನಿಗಿರುವ ಎಲ್ಲ ಪೂಜೆ ಪುನಸ್ಕಾರ ರಾಮಲಿಂಗಕ್ಕೂ ಧಕ್ಕುವಂತೆ ಮಾಡಬೇಕು ಎಂದು. ಅದರ ನಿಮಿತ್ತ ಊರಿನ ಹಿರಿಯರು ತಮ್ಮ ಪ್ರಯತ್ನ ಪಟ್ಟಿದ್ದರು ಕೂಡ. ಆದರೆ ಕೆಲವೊಂದು ಕಾರಣಗಳಿಂದ ಆ ಕೆಲಸ ಹಾಗೆಯೇ ನೆನೆಗುದಿಗೆ ಬಿದ್ದಿತ್ತು. ಇದೆಲ್ಲ ಆಗಿ ಆರೆಂಟು ವರ್ಷಗಳೇ ಕಳೆದಿರಬೇಕು.
ಈ ನಡುವೆ ಬಸವನ ಗುಡಿ ಜೀರ್ಣಾವಸ್ಥೆಗೆ ಬಂದಿತ್ತು. ಊರಿನ ಜನ ಒಪ್ಪೊತ್ತಿನ ಶ್ರಮವಹಿಸಿದರೆ ಬಸವನಿಗೊಂದು ಗುಡಿ ರೆಡಿಯಾಗುತ್ತಿತ್ತು. ಆದರೆ ಈ ವಿಷಯದಲ್ಲಿ ಊರಿನ ಜನರಲ್ಲಿ ಮನಸ್ತಾಪ ಉದ್ಭವಿಸಿತ್ತು. ಈ ಆರೆಂಟು ವರುಷದ ಹಿಂದಿನ ಘಟನೆಗೆ ಇತ್ಯರ್ಥವನ್ನು ಸೂಚಿಸಲು ಹೊರಟಿದ್ದು ನೆರೆ ಊರಿನ ಹಿರಿಯನೊಬ್ಬ. ಕಟ್ಟುವುದು ಕಟ್ಟುತ್ತೇವೆ, ಆಧುನಿಕ ರೀತಿಯಲ್ಲಿ ದೊಡ್ಡ ದೇವಾಲಯವನ್ನೇ ಕಟ್ಟಿದರಾಯಿತು ಎಂದು. . ಆದರೆ ಈ ದಿನಗಳಲ್ಲಿ ಅದು ಹೇಳಿದಷ್ಟು ಸುಲಭವಾಗಿರಲಿಲ್ಲ.
ಆತ ಪರ ಊರಿನವನಾದರೂ, ದೇವಳಕ್ಕೆ ನಡೆದುಕೊಂಬವರಲ್ಲಿ ಒಬ್ಬನಾಗಿದ್ದ. ಆಗರ್ಭ ಸಿರಿವಂತನೂ ಆಗಿದ್ದ. ಆಗ ಆತನ ಮಾತಿಗೊಂದು ಗೌರವವಿತ್ತು. ಅವನ ಮಾತಿಗೆ ಊರಿನ ಕೆಲವರು ದನಿಗೂಡಿಸಿದರು.
ಆಗಲೇ ದೇವ ಕಾರ್ಯ ಪ್ರಾರಂಭವಾಯಿತು. ಕೇರಳದ ಪ್ರಸಿದ್ಧ ಪುರೋಹಿತರನ್ನು ಕರೆಸಿ ಅಷ್ಟಮಂಗಲವೆಂಬ ಪ್ರಶ್ನೆಯನ್ನು ಕೇಳಿಸಿದ್ದಾಯಿತು. ಅವರು ಹೇಳುವ ಪ್ರಕಾರ ಹಿಂದೊಮ್ಮೆ ಈ ದೆವರ ಸನ್ನಿಧಿಯಲ್ಲಿ ರಾಜರ ಕೊಲೆಯಾಗಿದೆ. ಕೊಲೆಯಾದ ಹೆಣವನ್ನು ಬಳಿಯಿರುವ ತೊರೆಯಲ್ಲಿ ಹಾಕಲಾಗಿದೆ. ಹಾಗೆಯೇ ಹಿಂದೆ ಈ ಕ್ಷೇತ್ರದಲ್ಲಿ ಶಿವನಿಗೇ ಪ್ರಧಾನ ಪೂಜೆ ಪುನಸ್ಕಾರ ನಡೆಯುತ್ತಲಿತ್ತು. ಆದರೆ ರಾಜರ ಆಳ್ವಿಕೆಯ ಸಂದರ್ಭದಲ್ಲಿ ದಂಡೆತ್ತಿ ಬಂದವರ ಕಣ್ಣಿನಿಂದ ಶಿವಲಿಂಗವನ್ನು ರಕ್ಷಿಸುವುದಕ್ಕಾಗಿ ಗುಡಿಯಿಂದ ಅನತಿ ದೂರದಲ್ಲಿ ಪೊದೆಗಳ ಮದ್ಯೆ ಅಡಗಿಸಿ ಇಡಲಾಗಿತ್ತು. ಅಲ್ಲಿಂದಲೇ ನಮ್ಮ ಪೂರ್ವಿಜರು ಈ ರೀತಿಯ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಅಂದಿನಿಂದಲೇ ಬಸವನಿಗೆ ಪ್ರಧಾನ ಪೂಜೆ ಪ್ರಾರಂಭವಾದದ್ದು ಎಂಬುದಾಗಿ. ಇದೆಲ್ಲದರ ಪರಿಹಾರಕ್ಕೆ ಮಾಡತಕ್ಕ ದೊಡ್ಡ ಕಾರ್ಯಕ್ರಮಗಳ ಪಟ್ಟಿಯನ್ನೇ ಪುರೋಹಿತರು ಕೊಟ್ಟಿದ್ದರು.
ಅವರವರದೇ ಒಂದು ಕಮೀಟಿಯನ್ನು ರಚಿಸಿ, ರಾಮಲಿಂಗೇಶ್ವರ ಎಂಬ ಹೆಸರಿನಲ್ಲಿ
ಒಂದು ಟ್ರಸ್ಟ್ ಉದ್ಭವಗೊಂಡಿತ್ತು. ಆರಂಭದಲ್ಲಿ ಎಲ್ಲವೂ ಚೆನಾಗಿತ್ತು. ದೇವ ಆಲಯಕ್ಕೆ ಹಲವೆಡೆಯಿಂದ ನಿಧಿ ಸಂಗ್ರಗೊಂಡಿತ್ತು. ತಾವೇ ಪ್ರೇರೇಪಣೆಗೊಂಡು ಕೊಟ್ಟವರೊಂದಿಷ್ಟಾದರೆ, ಪ್ರಯತ್ನಿಸಿ ಪಡೆದದ್ದೊಂದಿಷ್ಟು. ಒಟ್ಟಿನಲ್ಲಿ ದೇವನ ಹೆಸರಿನಲ್ಲಿ ಬ್ರಹತ್ ಮೊತ್ತ ಕೂಡಿತ್ತು. ಹಣ ಕಂಡಲ್ಲಿ ಹೆಣವೂ ಬಾಯ್ಬಿಟ್ಟಿತ್ತಂತೆ ಅಂಥಹದ್ದರಲ್ಲಿ ಜನ ಸುಮ್ಮನೆ ಬಿಟ್ಟಾರೇ? ಟ್ರಸ್ಟ್ ನಲ್ಲಿ ಗುಂಪೆರಡಾಯಿತು. ದೇವರ ಹಣ ರಕ್ಷಿಸುವುದಕ್ಕೊಂದಾದರೆ, ಭಕ್ಷಿಸುವುದಕ್ಕಾಗಿ ಇನ್ನೊಂದು ಗುಂಪು. ಅವರವರಲ್ಲಿಯೇ ಹುಳುಕು, ದಿನ ಬೆಳಗಾದರೆ ಜಗಳ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗುತ್ತಿರಲಿಲ್ಲ. ಎದುರು ಬಂದರೆ ಅಪಶಕುನವೆಂಬಂತೆ ನಿಂತು ಹೋಗುವವರು ಕೆಲವಾದರೆ, ಕಂಡೊಡನೆ ದರಿದ್ರ ಮುಸುಡಿ ಕಾಣುವುದು ಅಸಹ್ಯ ಎಂದೆಣಿಸಿ ದೂರದಿಂದಲೇ ತಮ್ಮ ಪಥವನ್ನೇ ಬದಲಾಯಿಸುವವರು ಹಲವರು. ಕೊರಳು ಪಟ್ಟಿಯ ಹಿಡಿದು ಹೊಡೆದಾಡುವಷ್ಟು ಕೀಳ ಮಟ್ಟಕ್ಕೆ ಇಳಿದಿದ್ದರು.
ದೇವಾಲಯವ ಕಟ್ಟಿ ಇಡೀ ಊರಿಗೆ ಒಳ್ಳೆಯದನ್ನು ಮಾಡಲು ಹೊರಟವರ ಮನದಾಲಯ ಕೆಟ್ಟ ಯೋಚನೆಗಳ ಕೊಚ್ಚೆಯ ಬೀಡಾಗಿತ್ತು. ಕಂಡವರು ಆಡಿಕೊಂಡು ತಿರುಗಲಾರಂಭಿಸಿದ್ದರು. ಇದೆಲ್ಲವ ಕಂಡು ನನಗನಿಸಿದ್ದು, ದೇವಾಲಯ ಅನ್ನೋದು ನಂಬಿಕೆಯ ಬೀಡಾಗಿರಬೇಕೇ ಹೊರತು ಕೆಟ್ಟ ಯೋಚನೆಗಳ ಬಿಡಾರವಾಗಬಾರದು. ನೆಮ್ಮದಿಯ ತಾಣವಾಗಿರಬೇಕು ನೆಮ್ಮದಿಗೆಟ್ಟ ಅಂಕಣವಾಗಬಾರದು. ಇಲ್ಲದ್ದನ್ನು ಬೇಡಿಕೊಂಬ ಕೇಂದ್ರವಾಗಬೇಕು, ಬಡಿದು ತಿನ್ನುವ ಬಂಡಾಯವಾಗಬಾರದು.
ಸೂರು ಸೋರುತ್ತಿದ್ದರೂ ಬಸವ ನೆಮ್ಮದಿಯಿಂದಿದ್ದ, ರಾಮ ವರುಷಕ್ಕೊಂದು ಪೂಜೆಯಲ್ಲೇ ಆನಂದದಿಂದಿದ್ದ. ಜನರು ಸುಖೀ ಜೀವನ ನಡೆಸುತ್ತಿದ್ದರು. ಆದರೆ ಈಗ ದೇವಾಲಯವ ಕಟ್ಟಲು ಹೊರಟ ಜನರ ದೇಹ ಕೊಚ್ಚೆಯ ಬೀಡಾಗಿ, ಲಜ್ಜೆಯಿಲ್ಲದ ಜೀವನಕ್ಕೆ ಶರಣಾಗಿರುವಂಥದ್ದು ಶೋಚನೀಯ.
.jpg)
No comments:
Post a Comment