Friday, June 3, 2016

ಭೂತಾಯಿಯ ಮಡಿಲು


ಅಂದು :-

ತಾಯಿಯಾದೆ ತಾಳ್ಮೆಯಿಂದ
ಜನರ ಪ್ರೀತಿ ಮಡಿಲಲಿ.
ಹಸಿರ ಬೀಜ ಬಿತ್ತಿ ಅವರು
ತಾಯಿ ಮಮತೆ ಒಡಲಲಿ.

ಹೆಂಟೆ ಒಡೆದು ಕಟ್ಟೆ ಕಟ್ಟಿ
ಕನಸ ತುಂಬಿ ಬಸಿರಲಿ.
ಬಸಿರು ತುಂಬಿ ಹಸಿರು ಬೆಳೆಯೆ
ಕಣ್ಣು ತಂಪು ಸಸಿಯಲಿ.

ಪೂಜೆಗೈದು ಫಸಲು ಕಂಡು
ಕುಣಿದರಂದು ಖುಷಿಯಲಿ.
ನೀರನುಣಿಸಿ ಮನದಿ ನಮಿಸಿ
ಶೃಮದ ಫಲವು ಭುವಿಯಲಿ.

ಇಂದು :-

ಅದು ಎನ್ನದು ಇದು ಎನ್ನದು
ಎಂದು ಬಗೆದು ಒಡೆದರು.
ಮನೆಯ ಮೇಲೆ ಮನೆಯ ಕಟ್ಟಿ
ಮುಡಿಯ ಸವರಿ ನಿಂತರು.

ಕಸದ ರಸವ ಮೇಲೆ ಎರಚಿ
ತಾವು ಶುಚಿಯ ಕಂಡರು.
ಹಸಿರ ಹರಿದು ಪೆಸರ ಬರೆದು
ಸಿರಿತನವನು ಉಂಡರು.

ಚಿನ್ನಕಾಗಿ ಉದರ ಅಗೆದು
ಎನ್ನ ಉಸಿರು ಕಟ್ಟಿರೆ.
ನೀರಿಲ್ಲದೆ ದಾಹವಾಗಿ
ಬಸಿರು ಬಿರುಕ ಬಿಟ್ಟಿದೆ.

ಊಳುವವಗೆ ಉಳಿವೆ ಇಲ್ಲ
ಎಲ್ಲ ಉಗುಳುವವರಿಗೆ.
ರೈತ ಎನಗೆ ಮುದ್ದು ಕಂದ

ಮರಳಿ ಬಾ ತವರಿಗೆ.

No comments: