ಸುಬ್ಬಕ್ಕನಿಗೆ
ಮೂರು ಮಕ್ಕಳು. ಗಂಡ ಕಳೆದೆರಡು
ವರ್ಷಗಳ ಹಿಂದೆ ರಸ್ತೆ ಆಘಾತದಲ್ಲಿ
ವಿಧಿವಶನಾಗಿದ್ದ. ಇದರ ನಂತರ ಮಕ್ಕಳ
ಹೊಣೆ ಹೊತ್ತ ಸುಬ್ಬಕ್ಕ ಮಕ್ಕಳ
ಕನಸುಗಳಿಗೆ ಇಲ್ಲವೆಂದಿರಲಿಲ್ಲ. ಕಡಿದು ಕೂರಿಸುವಷ್ಟು ಆಸ್ತಿ
ಪಾಸ್ತಿ ಇಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೇನು ಕಡಿಮೆಯಿರಲಿಲ್ಲ. ಮೂವರೂ ಚೆನ್ನಾಗಿಯೇ ಓದುತ್ತಿದ್ದರು.
ಹಿರಿಯವ ವಿಜ್ಞಾನ ಓದಿ ಎಂಜಿನಿಯರ್
ಆದ. ತಿಂಗಳಿಗೆ ಹರಿದು ಹಂಚುವಷ್ಟು ಸಂಬಳ.
ಏನಕ್ಕೂ ಕಡಿಮೆಯಿರಲಿಲ್ಲ. ಶಹರದಲ್ಲೇ ಆಸ್ತಿ ಪಾಸ್ತಿ ಎಲ್ಲವನ್ನೂ
ಮಾಡಿಕೊಂಡ. ಓದು, ಘನತೆಗೆ ತಕ್ಕ
ವಧು ಹುಡುಕಿ ಮದುವೆಯೂ ಆದ.
ಇನ್ನು, ಎರಡನೇಯವ. ವಾಣಿಜ್ಞ ಶಾಸ್ತ್ರ ಓದಿ
ಶಹರದಲ್ಲಿ ತನ್ನದೇ ಆದ ಪುಟ್ಟ
ದಿನಸಿ ಅಂಗಡಿಯನ್ನು ತೆರೆದಿದ್ದ. ವರಮಾನ ಹೇಳಿಕೊಂಬಷ್ಟಿರದಿದ್ದರೂ ಜೀವನಕ್ಕೇನೂ ಕೊರತೆಯಿರಲಿಲ್ಲ.
ಅವನಿಗೂ ತಕ್ಕ ವಧುವ ನೋಡಿ
ಮದುವೆ ಮುಗಿಸಿದ್ದಳು ಸುಬ್ಬಕ್ಕ. ಮೂರನೆಯವ ಕೃಷಿಯಲ್ಲಿ ಉನ್ನತ
ಶಿಕ್ಷಣವನ್ನು ಮುಗಿಸಿ ಊರಲ್ಲೇ ಕೃಷಿ
ಮಾಡಿಕೊಂಡಿದ್ದ. ವೈಜ್ಞಾನಿಕ ವಿಧಿ ವಿಧಾನಗಳನ್ನು ಬಳಸಿ
ಇರುವುದರಲ್ಲೇ ಉತ್ತಮ ಇಳುವರಿ ತೆಗೆಯುತ್ತಿದ್ದ.
ರಾಜ್ಯಮಟ್ಟದಲ್ಲಿ ಉತ್ತಮ ಕೃಷಿಕ ಎಂಬ
ಖ್ಯಾತಿಗೆ ಭಾಜನನಾಗಿದ್ದ.
ಆಗಲೇ ಹೇಳಿದಂತೆ, ಹಿರಿಯವಗೆ ಗಳಿಕೆಗೇನೂ ಕಡಿಮೆಯಿರಲಿಲ್ಲ. ಲಕ್ಷಗಟ್ಟಲೇ ಬರುತ್ತಿತ್ತು. ಜೀವನವೂ ಅದಕೆ ತಕ್ಕನಾಗಿತ್ತು.
ಹೆಂಡತಿಯೂ ಇವೆಲ್ಲದಕ್ಕೆ ಪೂರಕವಾಗಿದ್ದಳು. ಅವಳೂ ದುಡಿವವಳೇ. ಇಬ್ಬರೂ
ದುಡಿವವರಾದ್ದರಿಂದ ಅಡುಗೆ ಬಟ್ಟ ಅನಿವಾರ್ಯವಾಗಿದ್ದ.
ಮಕ್ಕಳ ನೋಡಿಕೊಂಬಲು ಮನೆಗೆಲಸದವಳು ಅವಶ್ಯವೆನಿಸಿತ್ತು. ವಾರಾಂತ್ಯದ ವ್ಯವಹಾರ ಮುಗಿಲ ಮುಟ್ಟುತ್ತಿತ್ತು.
ಹಾಗೆಂದು ಯಾವುದೇ ಚಟವಿರಲಿಲ್ಲ. ಖರ್ಚು
ಮಾಡುವ ಪದ್ದತಿ ಹಾಗಿತ್ತು ಅಷ್ಟೇ.
ಖರ್ಚು ಅವಶ್ಯಕತೆಯ ಗಡಿ ದಾಟಿದ್ದರಿಂದ ಗಳಿಕೆ
ಅನಿವಾರ್ಯತೆಯ ಹಾದಿ ಕಂಡಿತ್ತು. ಆಯ
ವ್ಯಯ ಲೆಕ್ಕಾಚಾರ ಮಾಡಿದರೆ ತಿಂಗಳ ಕೊನೆಯಲ್ಲಿ
ಅಷ್ಟಕ್ಕಷ್ಟೇ. ಗಳಿಕೆ ನೂರು... ಉಳಿಕೆ
ಮೂರು...!!!
ಎರಡನೇಯವನ
ಜೀವನ ಅವನಿಗಿಂತ ಭಿನ್ನವಾಗಿತ್ತು. ಅಚ್ಚುಕಟ್ಟಾದ ಜೀವನ ನಡಿಸುತ್ತಿದ್ದ. ದುಡಿದು
ತರುವುದ ಗಂಡನ ಕೆಲಸ.ತನ್ನದೇ
ದಿನಸಿ ಅಂಗಡಿ ಇರುವುದರಿಂದ ಖರ್ಚು
ಕಡಿಮೆಯಿರುತಿತ್ತು. ಎಲ್ಲವೂ ಅಸಲು ಬೆಲೆಗೇ
ಸಿಗುತ್ತಿತ್ತು. ದಿನಸಿ ಅಂಗಡಿಯ ಲಾಭದ
ಖರ್ಚು ಇವರಿಗೆ ಉಳಿತಾಯ. (ಮಾರುವವ
ತನ್ನ ಲಾಭವಿಟ್ಟುಕೊಂಡೇ ವ್ಯವಹಾರ ನಡೆಸುವುದು. ಖರೀದಿಸುವವಗೆ
ಅವನ ಲಾಭ ಖರ್ಚಿನ ಸಮಾನ.
ಇಲ್ಲಿ ಈತನೇ ಒಡೆಯನಾದ್ದರಿಂದ ಲಾಭದ
ಖರ್ಚು ಉಳಿತಾಯವಾಗುತಿತ್ತು. ಅವನ ಹೆಂಡತಿಯೂ ಅಷ್ಟೇ.
ಮನೆ ನಿಭಾಯಿಸುವುದು ಆಕೆಯ ಜವಾಬ್ದಾರಿ. ಬರುವುದರಲ್ಲಿ
ಚೆಂದದಿಂದ ಜೀವನ ಕಟ್ಟುತ್ತಿದ್ದಳು. ಅಡುಗೆಯವನಿಗೆಂದೋ,
ಮನೆಗೆಲಸದವಳಿಗೆಂದೋ ಇಲ್ಲ ಮಕ್ಕಳ ಮನೆಪಾಠ
ಹೇಳಿಸಲೆಂದೋ ಜನರ ಇಡುವ ಅಗತ್ಯ
ಇರಲಿಲ್ಲ. ತಾನೇ ಸ್ವತಃ ಹೊಲಿಗೆ
ಮಾಡುತ್ತಿದ್ದರಿಂದ ಬಟ್ಟೆ ಬರೆಗೆಂದು ಹಣ
ಚೆಲ್ಲುತ್ತಿರಲಿಲ್ಲ. ಖರ್ಚೇ ಇಲ್ಲದ ಜೀವನಕ್ಕೆ
ಮೂರರ ಗಳಿಕೆ ಉಳಿಕೆಯೇ ಅಲ್ಲವೇ.....???
ಇನ್ನು ಮೂರನೇಯವ. ಅವನಿಗೂ ಮದುವೆ ಆಗಿತ್ತು.
ಹೆಂಡತಿ ಗಂಡನಿಗೆ ಸಕಲ ಕಾರ್ಯದಲ್ಲಿ
ನೆರವಾಗುತ್ತಿದ್ದಳು. ಅತ್ತೆಯ ಮುದ್ದಿನ ಸೊಸೆಯೆನಿಸಿಕೊಂಡಿದ್ದಳು.
ಆತ ಉತ್ತಮ ಕೃಷಿಕ. ಇಲ್ಲವೆನ್ನುವುದು
ಯಾವುದೂ ಇರಲಿಲ್ಲ. ದೈನಿಕ ಜೀವನಕ್ಕೆ ಬೇಕಾದುದೆಲ್ಲವ
ಸ್ವತಃ ಬೆಳೆಯುತ್ತಿದ್ದ. ಜೀವನಕ್ಕೆ ಸಾಕಾಗಿ ಮಿಕ್ಕುಳಿಯುತ್ತಿದ್ದುದ ಉತ್ತಮ
ಬೆಲೆಗೆ ಮಾರುತ್ತಲಿದ್ದ. ಆತ ಯಾವುದೇ ರಾಸಾಯನಿಕ
ಬಳಸದೇ ಇರುವುದರಿಂದ ಸಂತೆಯಲ್ಲಿ ಆತನ ಬೆಳೆಗೆ ಉತ್ತಮ
ಬೆಲೆ ಸಿಗುತ್ತಿತ್ತು. ಹಾಲಿನ ವ್ಯಾಪಾರವನ್ನೂ ನಡೆಸುತ್ತಿದ್ದ.
ಹಾಗಾಗಿ ಹಾಲು ಮೊಸರು ತುಪ್ಪ
ಬೆಣ್ಣೆ ಹೇಯವಾಗಿರುತಿತ್ತು. ಮನೆಯಲ್ಲಿ ನಾಲ್ಕಾರು ಆಳು ಮಂದಿ ವರ್ಷವಿಡೀ
ಉಣ್ಣುತ್ತಿದ್ದರು. ಹಬ್ಬ ಹರಿದಿನ ಬಂತೆಂದರೆ
ಊರಿಗೂರೆ ಕರೆದು ಸಂಭ್ರಮಿಸುತ್ತಿದ್ದ. ಸಂತೋಷದ
ಜೀವನ ಕಂಡಿದ್ದ.
ನೋಡಿ ಸ್ನೇಹಿತರೆ. ಇದು ನಾವು ಕಾಣ
ಸಿಗುವ ಮೂರು ವಿಧದ ಜೀವನ
ಕ್ರಮಗಳು. ಹಿರಿಯವ ಯಾರದೋ ಕೈಕೆಳಗೆ
ಸಾಕಷ್ಟು ದುಡಿಯುತ್ತಾನೆ. ಅದಕೆ ತಕ್ಕನಾಗಿ ಖರ್ಚು
ಮಾಡುತ್ತಾನೆ. ಕೆಲವು ಅನಿವಾರ್ಯವೆನಿಸಿದರೆ, ಕೆಲವು
ಆಡಂಬರದ ಖರ್ಚು. ಕೆಲವು, ಅವನ
ಜೀವನ ಕ್ರಮಕ್ಕೆ ತಕ್ಕಂತೆ ಅನಿವಾರ್ಯತೆಗಳು ಹುಟ್ಟುಹಾಕಿಕೊಳ್ಳುತ್ತವೆ.
ನೆಂಟರಿಷ್ಟರ ನಂಟಿಲ್ಲ. ವರ್ಷಕ್ಕೊ ಎರಡು ವರ್ಷಕ್ಕೋ ಒಮ್ಮೆ
ಮನೆಗೆ ಬರುತ್ತಿದ್ದ. ಆಯ ವ್ಯಯ ಸಮನಾಗಿ
ತೂಗುತಿತ್ತು. ಇನ್ನು ಎರಡನೇಯವ. ಅವನ
ಗಳಿಕೆ ಕಡಿಮೆಯಿದ್ದರೂ ಅಚ್ಚುಕಟ್ಟಾದ ಜೀವನ ಕ್ರಮದಿಂದ ಉಳಿಕೆ
ಕಾಣುತ್ತಿದ್ದ. ಆಡಂಬರದ ಜೀವನದ ಹಂಗಿಲ್ಲ.
ಆದರೆ ಈತನೂ ನೆಟರಿಷ್ಟರ ನಂಟಿನ
ಅಂಟಿಲ್ಲದೇ ಜೀವಿಸುತ್ತಿದ್ದ. ಎನ್ನವರು ತನ್ನವರು ಎಂದರೆ
ಮಡದಿ ಮಕ್ಕಳು. ಊರ ಕಾಣವುದು
ಯಾವಾಗಲೋ ಒಮ್ಮೆ. ಆದರೆ ಮೂರೆನೇಯವನ
ಗಳಿಕೆ ಮೂರಾಗಿದ್ದರೆ, ಉಳಿಕೆಯೂ ಮೂರೇ. ಕಾರಣ,
ಜೀವನಕ್ಕೆ ಬೇಕಾದುದೆಲ್ಲವ ಆತನೇ ಸ್ವತಃ ದುಡಿಯುತ್ತಿದ್ದ.
ನಾಲ್ಕಾರು ಆಳು ಮಂದಿಗೆ ಒಡೆಯನೆನಿಸಿಕೊಂಡಿದ್ದ.
ಯಾರ ಒತ್ತಡವಿಲ್ಲ, ಆಸ್ತಿ ಅಂತಸ್ತಿನ ಹಂಗಿಲ್ಲ.
ನೆಂಟರಿಷ್ಟರು, ಹಬ್ಬ ಹರಿದಿನ ಎಂದು
ಸುಂದರ ಬಾಳು ಅವನದಾಗಿತ್ತು. ಸುಬ್ಬಕ್ಕನಿಗೆ,
ಮೂರು ಮಕ್ಕಳು ಗಳಿಕೆಯಾದರೆ, ಮೂರನೇಯವ
ಉಳಿಕೆಯಾಗಿದ್ದ.
ಸ್ನೇಹಿತರೇ,
ಜೀವನದಲ್ಲಿ ಗಳಿಸುವುದರಷ್ಟೇ ಮುಖ್ಯ ಉಳಿಸುವುದು ಕೂಡ.
ಬರುವುದರಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿ, ಉಳಿಸಿ
ಅಚ್ಚುಕಟ್ಟಾದ ಜೀವನ ನಡೆಸುವವ ಸಾಧಕ
ಎನಿಸಿಕೊಳ್ಳುತ್ತಾನೆ. ಬಂದುದೆಲ್ಲವ ವ್ಯಯಿಸಿ, ಆಡಂಬರಗಳಿಗೆ ದಾಸನಾದವನು ಸಾಧನೆಯ ಹೆಸರಲ್ಲಿ ಬಾಧಕದ
ಸುಳಿಯಲ್ಲಿ ಸಿಕ್ಕ ಮೀನಾಗುತ್ತಾನೆ. ಜೀವನ
ನಾವು ಕಂಡುಕೊಂಡಂತಿದೆ. ಜೊತೆಗೆ, ನಾವು ಕಟ್ಟಿಕೊಂಡಂತಿದೆ.

No comments:
Post a Comment