ಅದೆಷ್ಟೋ ನೋವುಗಳ ಅಗುಳು ನುಂಗುತಲಿದ್ದೆ
ಹೊಟ್ಟೆ ತುಂಬಿದ ಬಳಿಕ ಬೇನೆ ಮಾತ್ರ,
ಎದುರು ಬದಿ ಜನರು ಕುಹಕ ಆಡುತಲಿರಲು
ನಗುವ ತೋರುವ ಮೊಗವು ಗಜದ ಗಾತ್ರ.
ನಗನಾಣ್ಯ ಕಂಡೊಡನೆ ಹಲ್ಲು ಕಿರಿವ ಜನ
ಹಸಿವಿದೆ ಎಂದಾಗ ತಿರುಗಿ ಬರರು,
ಜ್ಞಾನ ದೀಕ್ಷೆಗೆ ಇಂದು ಮೌಲ್ಯವೇ ಕಳೆದಿಹುದು
ಹಣ ಗಳಿಕೆಯಲ್ಲೆಲ್ಲ ನಿಸ್ಸೀಮರು.
ಹಣೆಪಟ್ಟಿ ಪದವಿ ಇದೆ, ಓದು ಶೂನ್ಯದ ಹಾದಿ
ಅಂಕ ಗಳಿಸಿದ ಬಳಿಕ ಮೂಲೆ ಗುಂಪು.
ತಂತ್ರಗಾರಿಕೆ ಬಳಸಿ ಸರ್ವವನು ಅರ್ಪಿಸಿಹೆ
ಮತಿಯೊಳಗೆ ಧೀ ಶಕ್ತಿ ಬರಿಯ ಕಂಪು.
ಬಲವಾಗು ನೀ ಜಗಕೆ, ಅಳಿವ ಹೊಸ್ತಿಲಿನಲ್ಲಿ
ಸ್ಪೂರ್ತಿಯಿಂದೆನ್ನೆದೆಯ ಕಾಯ್ವ ರೂಪ.
ನೋವು ನಲಿವಿನ ಕೂಡೆ ಬದುಕಿಹುದು ಅಂಚಿನಲಿ
ಭರವಸೆಯ ಜೀವ ಜಲ ಒಡಲ ದೀಪ.
✍️ಕೃಷ್ಣ ಗುಮ್ಮಾನಿ.
No comments:
Post a Comment