Saturday, February 21, 2015

ವಿದ್ಯಾ ಪ್ರಸಂಗ

ಅಂದು ಅವಳಿಗೆ ಹದಿನೆಂಟು ತುಂಬಿ ಹತ್ತೊಂಬತ್ತರ ಮೊದಲ ದಿನ. ಹೆಸರು ಕಾವ್ಯ. ಸ್ಫುರದ್ರೂಪಿ ಹೆಣ್ಣು. ಅವಳ ಮುಖ ಕಂಡಲ್ಲಿ ಅದೇನೋ ಆಕರ್ಷಣೆ. ಮನದಲ್ಲೇನೋ ತುಡಿತ. ಹವಳದಂತಹ ಕಣ್ಣುಗಳು. ಇಂಚುದ್ದದ ಹಣೆ ಬೊಟ್ಟು. ಸ್ವಲ್ಪ ಮುಂಗೋಪ. ನೆಚ್ಚಿದವರಲ್ಲಿ ಆತ್ಮೀಯ ಹಾವ ಭಾವ. ಅಂದು ಅವಳಿಗೆ ಹೊಸ ಹುಟ್ಟೋ ಎಂಬಷ್ಟು ಉತ್ಸಾಹ. ಅವಳ ಅಪ್ಪನಾದರೋ ಕೋಟ್ಯಾಧಿಪ. ಮಗಳೆಂದರೆ ಪ್ರಾಣ ಎಂಬ ತಾಯಿ. ಮುದ್ದಿನ ಅಣ್ಣ. ತಲೆ ತಟ್ಟುತ್ತಾ ಕಥೆ ಹೇಳಿ ಮಡಿಲಲ್ಲಿ ಮಲಗಿಸಿಕೊಂಡು ಜೋಗುಳ ಹಾಡುವ ಅಜ್ಜಿ. ಅವಳಿಗೆ ಮನೆಯೇ ಸ್ವರ್ಗವಾಗಿತ್ತು. ಹುಟ್ಟಿಂದಿನಿಂದ ಅವಳಿಗೆ ಕಷ್ಟ ಎಂಬುದರ ಪರಿವೇ ಇರಲಿಲ್ಲ. ಮಗಳ ಹುಟ್ಟಿದ ಹಬ್ಬವನ್ನು ಊರ ಗಣ್ಯರ ಸಮ್ಮುಖದಲ್ಲಿ ನೆರವೇರಿಸಿದ್ದ ಅಪ್ಪ ತುಂಬಾ ಕೋಪಿಷ್ಠ. ದುಡ್ಡಿನಿಂದ ಜಗತ್ತನೇ ಗೆಲ್ಲಬಹುದು /  ಕೊಳ್ಳಬಹುದು ಎಂಬ ಹುಂಬು ಧೈರ್ಯ ಆತನ ಸಂಗಾತಿಯಾಗಿತ್ತು. ತಾಯಿ ಅವನ ತದ್ವಿರುದ್ಧ ಗುಣದವಳು. ಅಪ್ಪ ಅಮ್ಮ ಇಬ್ಬರೂ ಒಂದೇ ನಕ್ಷತ್ರದವರಿರಬೇಕು. ದಿನ ಬೆಳಗಾದರೆ ಜಗಳವಾಡುವ ಸ್ವಭಾವ. ಆದಾಗ್ಯೂ ಮಗಳ ಹತ್ತೊಂಬರ ಹುಟ್ಟಿದ ಹಬ್ಬವನ್ನು ಒಟ್ಟಿಗೇ ಆಚರಿಸಿದ್ದರು.

ಈಗಾಗಲೇ ತಿಳಿಸಿದಂತೆ ಕಾವ್ಯಳದು ಅಪ್ರತಿಮ ಸೌಂದರ್ಯ.  ಅವಳ ಮಾದಕ ನಗೆಗೆ ಎಂಥವರೂ ಕ್ಷಣ ಮಾತ್ರ  ಮೈ ಮರೆತು ತಬ್ಬಿಬ್ಬಾಗುವುದು ಸಹಜ. ಸೌಂದರ್ಯದೊಂದಿಗೆ ತಾನೇನು ಕಮ್ಮಿಯಿಲ್ಲ ಎಂಬಂತೆ ಮೈ ತುಂಬಾ ಜಂಭ. ಇದು ಅಪ್ಪನ ಬಳುವಳಿಯೋ… ಅಮ್ಮನ ಉಡುಗೋರೆಯೋ ಎಂಬುದು ನನಗೂ ತಿಳಿದಿಲ್ಲ.  ಆಕೆಗೆ ಸರಿಯೆನಿಸುವವರಲ್ಲಿ ಅತ್ಯಂತ ಆತ್ಮೀಯವಾಗಿ ಬೆರೆವ ಅವಳು, ಉಳಿದವರಲ್ಲಿ ಅತ್ಯಂತ ಕಠೋರವಾಗಿ ನಡೆದುಕೊಳ್ಳುವಳು. ಅಪ್ಪನ ದುಡ್ಡಿನ ದರ್ಪ ಅವಳನ್ನು ಬಿಟ್ಟಿರಲಿಲ್ಲ. ಅಪ್ಪನಾದರೋ ಅವಳನ್ನು ದುಡ್ಡಿನ ಕೋಟೆಯಲ್ಲಿ ಆಕೆಯನ್ನು ಬೆಳೆಸಿದ್ದ. ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದ. ಓಡಾಡಲು ಕಾರು, ಸ್ಕೂಟಿ….. ಕೈಗೊಂದು ಎಂಬಂತೆ ಜಂಗಮವಾಣಿ, ಏನುಂಟು ಏನಿಲ್ಲ….!!! ತನ್ನ ಘನತೆಗೆ ತಕ್ಕಂತೆ ಮಗಳನ್ನು ಓದಿಸುತ್ತಿದ್ದ ಕೋಟ್ಯಾಧಿಪ ಅಪ್ಪ. ಮಗಳು ಓದಿನಲ್ಲಿ ಸ್ವಲ್ಪ ಹಿಂದು. ಸ್ವಲ್ಪವೇನು…? ತುಂಬಾನೇ ಹಿಂದು. ಮುಂದೆ ಹೋಗುವ ಪ್ರಯತ್ನವನ್ನೇ ಮಾಡಿರಲಿಲ್ಲ ಅವಳು. ಇದ್ಯಾವುದರ ಅರಿವು ಅಪ್ಪನಿಗಾಗಲಿ ಅಮ್ಮನಿಗಾಗಲಿ, ಮುದ್ದಿನ ಅಣ್ಣನಿಗಾಗಲಿ ತಿಳಿಯಲು ಬಿಟ್ಟಿರಲಿಲ್ಲ ಅವಳು. ಅಷ್ಟು ಚೆನ್ನಾಗಿ ನಿಭಾಯಿಸಿದ್ದಳವಳು.  ವಿಶೇಷ ತರಗತಿಯ ಹೆಸರಿನಲ್ಲಿ ಸ್ನೇಹಿತರೊಂದಿಗೆ ಪಬ್ಬು, ಪಾರ್ಟಿ ಅಂತ ಅಲೆಯುತ್ತಿದ್ದಳು. ಅದೆಷ್ಟು ಉದ್ಯಾನವನದ ಪೀಠವನ್ನು ಸವೆಸಿದ್ದಳೋ... ಅವಳಿಗೇ ಗೊತ್ತಿಲ್ಲ. ಮನೆಗೆ ಬರುವಾಗ ಮಾತ್ರ ಸುಳ್ಳಿನ ಸರ ಮಾಲೆಯನ್ನು ಅಪ್ಪ ಅಮ್ಮನಿಗೆ ಉಡುಗೋರೆಯಾಗಿ ತರುತ್ತಿದ್ದಳು.

ಕಾಲೇಜಿನಲ್ಲಿ ಆಕೆಯದೇ ಆದ ಒಂದು ಗುಂಪಿತ್ತು. ಆಕೆ ಆ ಗುಂಪಿನ ಲೀಡ್ ಅಲ್ಲದಿದ್ದರೂ ಸಕ್ರೀಯ ಸದಸ್ಯೆಯಾಗಿದ್ದಳು. ಪಾರ್ಟಿ ಪಬ್ಬುಗಳ ಅಬ್ಯಾಸ ಅವಳಿಗಾದದ್ದು ಅಲ್ಲೇ… ಅವರಿಂದಲೇ. ಸವಿತಾ ಅದೇ ಗುಂಪಿನ ಮತ್ತೊಬ್ಬ ಸದಸ್ಯೆ. ಈಕೆಯೂ ಈ ಗುಂಪಿನಲ್ಲಿ ಒಗ್ಗಿಕೊಂಡಿದ್ದಳು. ಅತ್ಯಂತ ಬಡ ಕುಟುಂಬದ ಮೂಲದವಳಾಗಿದ್ದ ಅವಳು, ಕಾಲೇಜಿಗೆ ಸೇರುವ ಮುಂಚಿನ ಸವಿತಳಾಗಿ ಇರಲಿಲ್ಲ.

ಸವಿತಾಳ ಕಾಲೇಜಿನ ಪೂರ್ವ ಜೀವನ ಹೀಗಿತ್ತು. ಅವಳ ಅಪ್ಪ ಅಪ್ಪಟ ಕೃಷಿಕ. ಮೋಸವೇನೆಂಬುದನರಿಯದ ಜೀವ ಅದು. ತಾಯಿ ಮಹಾ ಸಾದ್ವಿ. ಹೊತ್ತೊತ್ತಿಗೆ ಹೊಟ್ಟೆ ತುಂಬಿಸುವುದರ ಜೊತೆಗೆ ಗಂಡನ ಕೃಷಿ ಜೀವನದಲ್ಲಿ ಭಾಗಿಯಾಗುವುದು ಅವಳ ಕಾಯಕ. ಧಾರ್ಮಿಕ ವಿಷಯದಲ್ಲಿ ಅಪಾರ ನಂಬಿಕೆಯೊಂದಿಗೆ ಆಳವಾದ ಜ್ಞಾನವನ್ನು ಹೊಂದಿದ್ದಳು. ದಿನವಿಡೀ ದುಡಿದರೂ ಒಂದೊತ್ತು ಗಂಜಿಯೇ. ಅಪ್ಪನಿಗೆ ಕೃಷಿ ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಭೂತಾಯಿಯನ್ನೇ ನಂಬಿದ್ದ. ಆದರೆ ಕೆಲವೊಮ್ಮೆ ಭೂತಾಯಿ ಕೈ ಹಿಡಿದರೂ ವಿಧಿ ಕೈ ಕೊಡುತ್ತಿತ್ತು. ಬೆಳೆದ ಬೆಳೆ ಕೈಗೆ ಸಿಕ್ಕರೂ ಪೃಕೃತಿ ವಿಕೋಪದಿಂದ ಬಾಯಿಗೆ ಸಿಗುತ್ತಿರಲಿಲ್ಲ. ಆದರೂ ಮಗಳಿಗೆ ಏನೊಂದೂ ಕೊರತೆ ಮಾಡಿರಲಿಲ್ಲ. ಅವರು ಐಶ್ವರ್ಯದಲ್ಲಿ ಬಡವರಾಗಿದ್ದರೂ, ಅವರು ಕಟ್ಟುವ ಕನಸು ಶ್ರೀಮಂತವಾಗಿತ್ತು. ಮಗಳೇ ಅವರ ಕನಸಿನ ಕೂಸು. ಮಗಳನ್ನು ಒಳ್ಳೆ ಸ್ಥಾನದಲ್ಲಿ ಕಾಣಬೇಕೆಂಬ ಬಯಕೆ ಅವರದು. ಅದರ ನಿಮಿತ್ತ ಹಗಲಿರುಳೂ ದುಡಿಯುತ್ತಿದ್ದರು.

ತಂದೆಯ ಆಸೆಗೆ ಪೂರಕವಾಗಿ ಸವಿತಾಳೂ ಚೆನ್ನಾಗಿಯೇ ಒದುತ್ತಿದ್ದಳು. ತರಗತಿಗೆ ಆಕೆಯೇ ಮೊದಲಿಗಳು. ಎಲ್ಲರನ್ನೂ ಸ್ನೇಹ ಭಾವದಿಂದ ಕಾಣುತ್ತಿದ್ದಳು. ಕೋಪವೇನೆಂಬುದೇ ಗೊತ್ತಿಲ್ಲ ಅವಳಿಗೆ. ನಯವಾದ ಅರ್ಥಗರ್ಭಿತ ಮಾತು ಅವಳದ್ದು. ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದ ಆಕೆ, ಗುರು ಹಿರಿಯರನ್ನು ಗೌರವದಿಂದ ಕಾಣುತ್ತಿದ್ದಳು.

ಹೀಗಿದ್ದ ಆಕೆ ಹೆಚ್ಚಿನ ವ್ಯಾಸಂಗಕ್ಕೆಂದು ಶಹರ ಸೇರಿದ್ದಳು. ಅಪ್ಪನಾದರೋ ಸಾಲ ಶೂಲ ಮಾಡಿ ಮಗಳನ್ನು ಕಳಿಸಿದ್ದ. ಆದರೆ ಆಕೆಗೆ ಅಪ್ಪ ಕೊಡುತ್ತಿದ್ದ ಹಣದ ಮೂಲ ಗೊತ್ತಿರಲಿಲ್ಲ. ಹೊಸ ಊರು, ಹೊಸ ಜನ, ಹೊಸ ಬದುಕು… ಪ್ರಪಂಚವೇ ಹೊಸತರಂತೆ ಭಾಸವಾಗಿತ್ತು. ಪ್ರಾರಂಭದಲ್ಲಿ ಅಪ್ಪನ ಕನಸು ಆಕೆಗೆ ಮಾರ್ಗದರ್ಶಿ. ಹೊಸ ಸ್ನೇಹಿತರ ಸೇರಿ ಕ್ರಮೇಣ ಅವಳದೇ ಆದ ಕನಸನ್ನು ಕಟ್ಟಿಕೊಂಡಿದ್ದಳು. ಮೊದಮೊದಲು ಈಕೆಯ ದಾರಿದ್ರ್ಯ ಅರಿತು ಅಷ್ಟೊಂದು ಹಚ್ಚಿಕೊಳ್ಳದ ಕಾವ್ಯ ತದನಂತರ ಅವಳ ಅಸಹಾಯಕತೆಯ ಅರಿತು ಅವಳ ಅಸ್ತ್ರವಾಗಿಸಿಕೊಂಡಿದ್ದಳು.

ಕಾವ್ಯಳಿಗೆ ಅವಳ ಮೋಜು ಮಸ್ತಿಗೆ ಸವಿತಾಳ ಹಣ ಬೇಕಿರಲಿಲ್ಲ (ಸವಿತಾಳಲ್ಲಿ ಹಣ ಇರಲಿಲ್ಲ ಕೂಡ).  ಕಂಡದ್ದಕ್ಕೆಲ್ಲ ಹೂಂ ಗುಡುವ ಮನವೊಂದು ಬೇಕಿತ್ತು. ಸವಿತಾ ಅವಳ ಆಹಾರವಾಗಿದ್ದಳು. ಈ ಹಿಂದಿನ ಸವಿತಾ ಈಗ ಕಾವ್ಯಳಾಗಿದ್ದಳು. ಓದು ಮೂಲೆ ಸೇರಿತ್ತು. ಕಾವ್ಯಳೊಂದಿಗೆ ಸಿನೀಮಾ, ಪಾರ್ಕ್, ಮೋಜು, ಮಸ್ತಿ ಎಂದು ಹಗಲಿರುಳು ಓಡಾಡ ತೊಡಗಿದ್ದಳು. ಇದಾವುದೂ ಅಪ್ಪ ಅಮ್ಮಂಗೆ ತಿಳಿಯದಂತೆ ನಿಭಾಯಿಸಿದ್ದಳು ಸವಿತಾ.

ಇತ್ತ ಶಿಕ್ಷಣದಲ್ಲಿ ಮೊದಲಿಗಳಾಗಿ ಉಳಿದಿರಲಿಲ್ಲ ಅವಳು. ಓದು ತೀರಾ ಕ್ಷೀಣಿಸುತ್ತಾ ಬಂದಿತ್ತು. ಅಪ್ಪ ಅಮ್ಮನಿಗೆ ಇದಾವುದೂ ಗಮನಕ್ಕೆ ಬಂದಿರಲಿಲ್ಲ. ಅವರಾದರೋ ಊರಿನಲ್ಲಿ ಕೂಲಿ ನಾಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಮಗಳ ಅಭ್ಯಾಸಕ್ಕೆಂದು ತಿಂಗಳು ತಿಂಗಳು ಹಣ ಕಳಿಸುತ್ತಿದ್ದರು. ದಿನ ಕಳೆದಂತೆ ಮಗಳ ಮೇಲಿನ ಕನಸು ಬೆಳೆಯುತ್ತಾ ಹೋಯಿತೇ ಹೊರತು,  ಮಗಳು ಹೇಗಿದ್ದಾಳೆಂದು ತಿಳಿವ ಗೋಜಿಗೆ ಅವರು ಹೋಗಿರಲಿಲ್ಲ. ಅದುವೇ ಅವರು ಮಾಡಿದ ದೊಡ್ಡ ತಪ್ಪು. ಅದೆಲ್ಲ ಅವರಿಗೆ ಆ ಕ್ಷಣದಲ್ಲಿ ಅನವಶ್ಯಕವಾಗಿತ್ತು. ಕಾರಣ, ಮಗಳ ಮೇಲಿನ ಅಪಾರ ನಂಬಿಕೆ / ಹೆಮ್ಮೆ / ಪ್ರೀತಿ. ಆ ಅಪಾರ ಪ್ರೀತಿ ನಂಬಿಕೆಯೇ ಅವರ ಪ್ರಾಣವನ್ನು ಭಿಕ್ಷೆಯಾಗಿ ಪಡೆದಿತ್ತು.

ಆದರೆ ಈ ದಿನಗಳು ಶೀಘ್ರದಲ್ಲೇ ಕೊನೆಗೊಂಡಿದ್ದವು. ಕಾಲೇಜಿನ ಶಿಕ್ಷಕರೊಬ್ಬರು ಪಾಲಕರನ್ನು ಬೇಟಿ ಮಾಡಿ ಸವಿತಾಳ ವಿಷಯವನ್ನು ತಿಳಿಸಿದ್ದರು. ಮಗಳ ವಿಷಯ ತಿಳಿದ ತಂದೆ ತಾಯಿ ತುಂಬಾ ಖೇದಗೊಂಡಿದ್ದರು. ಆ ಹೊತ್ತಿಗೆ ಸವಿತಾಳಿಗೆ ತನ್ನ ತಪ್ಪಿನ ಅರಿವಾಗಿತ್ತು. ಕಾವ್ಯಳ ಸಂಘ ತೊರೆದಿದ್ದಳು. ಕಾವ್ಯಳಿಗಾದರೋ ಅಪ್ಪ ಕೋಟ್ಯಾಧಿಪ. ಏನಾದರೂ ದುಡ್ಡಿನಿಂದ ಮುಚ್ಚುವ ಸಾಮರ್ಥ್ಯವಿತ್ತು.  ಆದರೆ ಸವಿತಾಳ ಅಪ್ಪನಿಗೆ…? ಮರ್ಯಾದಿಯೇ ಆಸ್ತಿ.

ಊರಲ್ಲೆಲ್ಲ ಸವಿತಾಳ ವಿದ್ಯಾ ಪ್ರಸಂಗ ಮನೆ ಮಾತಾಗಿತ್ತು. ಎಲ್ಲರೂ ಇವರ ಕಿವಿಗೆ ಕೇಳುವಂತೆ ಕುಹಕವನ್ನಾಡ ತೊಡಗಿದ್ದರು. ಇದೆಲ್ಲದರಿಂದ ತನ್ನ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ, ಊರಿಗೆ ಮರಳಿದ್ದಳು ಸವಿತಾ. ಊರಿನ ಪೊಕರೀ ಪೋರರಿಗೆ ಆಡಿಕೊಂಬ ವಿಷಯವಾಗಿದ್ದಳು ಸವಿತಾ.

ಮರ್ಯಾದಿಗಂಜಿದ ಅವರು ಒಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡೇ ಬಿಟ್ಟರು. ಬೇರೆ ದಾರಿಯೇ ಕಂಡಿರಲಿಕ್ಕಿಲ್ಲ ಅವರಿಗೆ. ಪ್ರಪಂಚ ಆ ಕ್ಷಣಕ್ಕೆ ಶೂನ್ಯವಾಗಿ ಕಂಡಿರಬೇಕು. ಅಂದು ಸೂರ್ಯನ ಬೆಳಕು ಹರಿವ ಹೊತ್ತಿಗೆ ಅವರ ಜೀವನದ ಬೆಳಕು ಆರಿಯಾಗಿತ್ತು. ಮೂವರೂ ನೇಣಿಗೆ ಶರಣಾಗಿದ್ದರು. ಕಂಡ ಕನಸು ನುಚ್ಚು ನೂರಾಗಿತ್ತು.

ಸ್ನೇಹಿತರೇ ನೋಡಿ. ಪ್ರತಿ ದಿನ, ಪ್ರತಿ ಕ್ಷಣ ಇಂತಹ ಅದೆಷ್ಟೋ ಜೀವಗಳು ಸಾವಿಗೆ ಶರಣಾಗುತ್ತಿದ್ದಾರೆ. ಇಲ್ಲಿ ನಾನು ಹೇಳ ಬಯಸುವುದಿಷ್ಟೇ. ಅದೆಷ್ಟೋ ಕನಸುಗಳ ಹೊತ್ತ ಮನೆಯವರು ನಿಮ್ಮನ್ನು ಪ್ರೀತಿಯಿಂದ ಸಾಕುತ್ತಾರೆ. ತಮ್ಮ ಜೀವನವನ್ನೇ ಸವೆಸುತ್ತಾರೆ. ಸವಿತಾಳಂತಹ ಅದೆಷ್ಟೋ ಜೀವಗಳು ಶಹರ ಸೇರಿ, ಹೊಸತರಲ್ಲಿ ಬೆರೆವ ಕ್ಷಣದಲ್ಲಿ ಯಾವುದು ಸರಿ, ಯಾವುದು ತಪ್ಪು, ಯಾರು ಸರಿ, ಯಾರು ತಪ್ಪು ಎಂಬುದ ಅರಿವಲ್ಲಿ ವಿಫಲರಾಗುತ್ತಿದ್ದಾರೆ. ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳನ್ನೇ ನಂಬಿದ ಪಾಲಕರು, ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ಅರಿವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಕೃಷಿಯೋ ವಾಣಿಜ್ಯವೋ…. ಕಾಯಕ ಯಾವುದಾದರೂ ಇರಲಿ. ಮಕ್ಕಳು ಹೇಗಿದ್ದಾರೆ ಎಂಬುದನ್ನು ಅರಿಯಲಾಗದಷ್ಟು ಕಾರ್ಯ ನಿರತರಾಗುವುದು ತಪ್ಪು.  ವಯಸ್ಸು ಹದಿನೆಂಟಾದರೂ ಅವರನ್ನು ಪ್ರಶ್ನಿಸುವ ಹಕ್ಕು ಪಾಲಕರಾದ ನಿಮಗೆ ಯಾವತ್ತೂ ಇದ್ದೇ ಇದೆ.

ದಿನದ ಕ್ಷಣ ಹೊತ್ತಾದರೂ ಮಕ್ಕಳೊಂದಿಗೆ ಕಾಲ ಕಳೆಯಿರಿ. ಮಕ್ಕಳ ಜೀವನ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯಿರಿ. ಮಕ್ಕಳು ದೂರದ ಊರಿನಲ್ಲಿದ್ದಲ್ಲಿ, ಬಿಡುವು ಮಾಡಿಕೊಂಡು ಭೇಟಿ ಕೊಡಿ. ಅವರ ಕಷ್ಟ ನಷ್ಟಗಳನ್ನು ಪರಿಹರಿಸುವಲ್ಲಿ ಪ್ರಯತ್ನಿಸಿ. ನಿಮ್ಮ ಕಷ್ಟಗಳ ಅರಿವೂ ಅವರಿಗಿರಲಿ. ಅವರು ಅದೆಷ್ಟೇ ದೊಡ್ಡವರಾಗಿದ್ದರೂ ಕೆಲ ಕ್ಷಣದಲ್ಲಿ ಕೆಲ ವಿಷಯಗಳಲ್ಲಿ ನಿಮ್ಮ ಸಲಹೆಯ ಅಗತ್ಯವಿರುತ್ತದೆ. ವಿದ್ಯೆಗಾಗಿ ಹೊರ ನಡೆವ ಮಕ್ಕಳಿಗೆ ಕಾವ್ಯಳಂತಹ ಅನೇಕರು ಸಿಗಬಹುದು. ಅಂಥಹ ಸಂದರ್ಭದಲ್ಲಿ ವಿಚಲಿತರಾಗದಂತೆ ಮುನ್ನೆಚ್ಚರಿಕೆ ವಹಿಸಿ. ಮಕ್ಕಳ ಜೀವನವನ್ನು ನಿರ್ಮಿಸುವಲ್ಲಿ ನೀವೂ ಸಹಕರಿಸಿ. ಸವಿತಾಳ ಜೀವನಗಾಥೆ ನಮಗೆಲ್ಲ ಜೀವನ ಪಾಠವಾಗಿರಲಿ.

ಪಾಲಕರೇ,

               ಮಕ್ಕಳ ಜೀವನ ನಿಮ್ಮದೇ ಕೈಲಿದೆ.
ಮಕ್ಕಳೇ,

                ತಪ್ಪು ಸರಿಗಳ ನಿರ್ಧಾರದ ಹೊಣೆ ನಿಮ್ಮ ಮೇಲಿದೆ.

No comments: