ಗಣರಾಜ್ಯ ಉತ್ಸವದ ಶುಭಾಷಯಗಳ ಸಂದೇಶಗಳನ್ನು ನೋಡಿ ಹೀಗೊಂದು ವಿಚಾರವನ್ನು ನಿಮ್ಮ ಮುಂದಿಡಬೇಕೆನಿಸಿತು.
ಬರೀ ಸಂದೇಶಗಳನ್ನು ಕಳಿಸೋದ್ರಿಂದ ದೇಶದ ಮೇಲಿನ ಪ್ರೇಮ ಹೆಚ್ಚಾಗೊಲ್ಲ. ಅದರಿಂದ ದೇಶದ ಉದ್ಧಾರವೂ ಆಗಲ್ಲ. ಇಷ್ಟಕ್ಕೇ ನಮ್ಮ ಜವಾಬ್ದಾರಿ ಮುಗಿಯಲ್ಲ. ಮೋದಿಯೋರ್ವನಿಂದ ಈ ದೇಶ ಖಂಡಿತಾ ಬೆಳೆಯೊಲ್ಲ. ಆರಿಸಿ ಕಳಿಸಿದ ಅಧಿಕಾರಿಗಳೇ ನಮ್ಮ ಮನೆಯ ಬಚ್ಚಲನ್ನೂ ಸ್ವಚ್ಛಗೊಳಿಸಬೇಕೆಂದರೆ ಹೇಗೆ ? ಬರೀ ಮತದಾನ ಮಾಡಿದಾಕ್ಷಣ ನಮ್ಮ ಕರ್ತವ್ಯ ಪೂರ್ಣಗೊಳ್ಳಲ್ಲ. ನಮ್ಮ ವೈಯಕ್ತಿಕ ತ್ಯಾಗವೂ ಅವಶ್ಯಕ.
ಒಂದು ಕೆಲಸ ಮಾಡೋಣ ಸ್ನೇಹಿತರೆ. ದೇಶ ಉದ್ಧಾರ ಆಗೋದು ಹಾಗಿರಲಿ. ಮೊದಲು ಹಾಳಾಗುತ್ತಿರುವುದನ್ನು ತಡೆಯೋಣ. ದೇಶ ನಮಗೇನು ಕೊಟ್ಟಿದೆ / ಕೊಡುತ್ತಿದೆ ಎಂಬುದನ್ನು ಯೋಚಿಸುವುದನ್ನು ಬಿಟ್ಟು ನಾವು ದೇಶಕ್ಕೇನು ಕೊಟ್ಟಿದ್ದೇವೆ / ಕೊಡುತ್ತಿದ್ದೇವೆ ಎಂಬುದನ್ನು ಯೋಚಿಸೋಣ.
ದೇಶ ಹಾಳಾಗುತ್ತಿರುವುದನ್ನು ಮೊದಲು ತಡೆಯಬೇಕು. ಈ ನಿಟ್ಟಿನಲ್ಲಿ ಕಂಕಣ ಬದ್ಧರಾಗಿ ಕಾರ್ಯೋನ್ಮುಖರಾಗಬೇಕು. ಇದಕ್ಕೆ ನೀವು ದೊಡ್ಡದೇನನ್ನೂ ಕಳೆದುಕೊಳ್ಳಬೇಕಾಗಿಲ್ಲ. ರಾಷ್ಟ್ರ ಮಟ್ಟದಲ್ಲೇನೂ ಮಾಡಬೇಕಿಲ್ಲ. ಈ ಕಾರ್ಯ ತುಂಬಾ ಸಿಂಪಲ್. ಮೊದಲು ನಾವು ಒಳ್ಳೆಯವರಾಗೋಣ. ನಮ್ಮ ಮನೆಯಂಗಳವನ್ನು ಶುಚಿಯಾಗಿಡೋಣ. ಸಾಮಾಜದಲ್ಲಿ ನಮ್ಮಿಂದಾಗುತ್ತಿರುವಂತಹ ಲೋಫವನ್ನು ಗುರುತಿಸಿ, ನಮ್ಮಿಂದ ಸಮಾಜಕ್ಕೆ ಕೆಟ್ಟದಾಗದಂತೆ ನೋಡಿಕೊಳ್ಳೋಣ. ದೇಶ ತನ್ನಿಂತಾನೇ ಒಳ್ಳೆಯದಾಗುತ್ತೆ.
ಈ ಹಿಂದೆ ಸ್ವಾತಂತ್ರ್ಯೋತ್ಸವದ ದಿನ ನಾನೊಂದು ದೃಢ ಸಂಕಲ್ಪವನ್ನು ಮಾಡಿದ್ದೆ. ಕಸಗಳನ್ನು ಕಂಡಕಂಡಲ್ಲಿ ಎಸೆಯುವುದಿಲ್ಲವೆಂದು. ಇಂದಿಗೂ ಅದನ್ನು ಶಿರಸಾವಹಿಸಿ ಪಾಲಿಸುತ್ತಿದ್ದೇನೆ. ಇದು ದೇಶವನ್ನು ಸುಭೀಕ್ಷಗೊಳಿಸಿಲ್ಲ ನಿಜ. ಆದರೆ ನನ್ನಿಂದ ದೇಶ ಕೆಟ್ಟದಾಗಿಲ್ಲ ಎಂಬ ಹೆಮ್ಮೆ ಇದೆ.
ಇಂದೂ ಸಹ ಇಂಥದ್ದೇ ಒಂದು ಸಂಕಲ್ಪವನ್ನು ಮಾಡಲಿದ್ದೇನೆ. ಅದೇನೆಂಬುದನ್ನು ಮುಂದೊಂದು ದಿನ ಸಾಧಿಸಿ ನಿಮ್ಮ ಮುಂದಿಡುತ್ತೇನೆ.
ಸ್ನೇಹಿತರೇ ಬನ್ನಿ. ಕೈ ಜೋಡಿಸಿ. ಕಂಕಣಬದ್ಧರಾಗೋಣ. ದೇಶವನ್ನು ನಮ್ಮದೇ ಹಾದಿಯಲ್ಲಿ ಕಟ್ಟೋಣ.
“ಸಾಗಲಿ ಈ ನಮ್ಮ ಚಿತ್ತ, ಅಭಿವೃದ್ಧಿ ಪಥದತ್ತ”, ಎಂಬ ಧ್ಯೇಯ ವಾಕ್ಯ ಎಲ್ಲೆಡೆ ಪಸರಿಸಲಿ.
ಬರಹದಲ್ಲೊಂದಿಷ್ಟು ತಿರುಳಿದೆ ಎಂದೆನಿಸಿದಲ್ಲಿ ಎಲ್ಲರನ್ನೂ ತಲಪುವಂತೆ ಮಾಡಿ.

No comments:
Post a Comment