ಜೀವನದಲ್ಲೊಂದು
ಪುಟ್ಟ ಪ್ರೀತಿ ಇರ್ಬೇಕು ಕಣ್ರೀ.
ನೋಟ ನಗೆಯಾಗಿ, ನಗುವು ಅರಿವಾಗಿ, ಅರಿವು
ಪರಿಚಯವಾಗಿ, ಆ ಪರಿಚಯ ಸ್ನೇಹವಾಗಿ,
ಸ್ನೇಹ ಕವಲೊಡೆದು ಪ್ರೀತಿಯಾಗಿ.... ಆಹಾ...!!! ಅದರ ಅನುಭೂತಿಯೇ ಬೇರೆ.
ಮುದ್ದಾದ
ಗೆಳತಿ ಮತಿ ಮರೆಸುವಂತೆ ಮಾತಾಡುತ್ತಾ
ಪ್ರೀತಿಯ ಗೊಂಚಲನ್ನೇ ತೆರೆದಿಡಬೇಕು. ಪಿಸುಗುಡುವ ಮಾತಿನಲಿ ಬೆಟ್ಟದೆತ್ತರದ ಪ್ರೀತಿ
ಪೂರೈಸುತ, ಕೈ ಬೆರಳುಗಳ ಬೇಲಿ
ಹೆಣೆದು ದೂರದೂರದ ತೀರದಲಿ ಚಂದ್ರ
ಕಾಣುವ ಹೊತ್ತಲ್ಲಿ ನಡೆಯಬೇಕು.
ಪುಟ್ಟ ಪುಟ್ಟ ಕನಸುಗಳ ಹೊತ್ತು
ಒಬ್ಬರನ್ನೊಬ್ಬರ ಪ್ರೀತಿಸುತ, ಗೌರವಿಸುತ, ಬಾಳ ಬಂಧನದ ಛಾಯೆಗೆ
ಎದೆಯೊಡ್ಡಿ ನಿಲ್ಲಬೇಕು. ಚಿಕ್ಕ ಚಿಕ್ಕ ಕನಸುಗಳ
ಮನ ಕಂಪಿಸುವಂತೆ ಹಂಚಿ, ಭುವಿಯ ಸ್ವರ್ಗದೊಳು
ಬಾಳಬೇಕು. ಆಗಾಗ ಮುನಿಸು, ಕೋಪ,
ನಿಂತ ಮಾತು, ಮತ್ತೆ ಮೆಚ್ಚಿಸಲು
ನಡೆವ ಪ್ರಯತ್ನ, ಆಪ್ತರಿಂದ ಓಲೈಕೆ, ಕೊನೆಗೆ ಒಬ್ಬರನ್ನೊಬ್ಬರ
ಕ್ಷಮಿಸುತ್ತ ಒಂದಾಗಬೇಕು. ಅದಿಕ್ಕೇ ಹೇಳಿದ್ದು... ಜೀವನದಲ್ಲೊಂದು
ಪ್ರೀತಿ ಇರಬೇಕು.
ತಲೆ ಸಿಡಿದು ಮನ ಕದಡಿ
ಮೈಗೆ ಬಿಸಿ ಜ್ವರವೇರಿದಾಗ ತಲೆಗೆ
ಒದ್ದೆ ಬಟ್ಟೆಯನಿಟ್ಟು ಉಸಿರ ಶಾಖವ ಕೊಡುವ
ಪ್ರೀತಿ ದೇವತೆ ಇರಬೇಕು. ಅಪ್ಪ
ಅಮ್ಮನ ಬಿಟ್ಟು ದೂರದೂರಿನಲಿ ಇದ್ದ
ಆಕೆಗೆ ಜವಾಬ್ದಾರಿ ಹೊರುವ ಅಪ್ಪನಾಗಿಯೂ, ಪ್ರೀತಿ
ಮಮತೆ ತೋರ್ಪ ಅಮ್ಮನಾಗಿಯೂ ಸ್ಥಾನ
ಗಿಟ್ಟಿಸಬೇಕು.
ಕೈಹಿಡಿದೆಳೆದು,
ಕೆನ್ನೆಯಿಂದಿಳಿಬಿಟ್ಟ ಕೇಶ ರಾಶಿಯ ಕೈಬೆರಳ
ತುದಿಯಲ್ಲಿ ಕರ್ಣ ಸಂಧಿಯಲಿ ಬಂಧಿಸಿದ
ಕೋಮಲ ಕೈಗಳ ಹಿಡಿದು ಬಿಕ್ಕಿ
ಬಿಕ್ಕಿ ಅಳಬೇಕು. ಮನದ ಕಷ್ಟಗಳ
ಅವಳ ಮುಷ್ಠಿಯಲಿಟ್ಟು ಹಂಚಿ ಬೆರೆಯಬೇಕು. ಒಟ್ಟಿನಲಿ
ಜೀವನಕೊಂದು ಪುಟ್ಟ ಪ್ರೀತಿ ಇರಬೇಕು.
ಅವಳ ಕಷ್ಟಗಳ ಅರಿತು ಬಯಕೆಗಳಿಗೆ
ಬೆಂಬಲವಾಗಿ, ಅವಳ ಕನಸುಗಳ ಗೋಪುರಕೆ
ಕಳಶ ನಾನಾಗಬೇಕು. ಏಳಿರಲಿ ಬೀಳಿರಲಿ ಕಷ್ಟಗಳ
ಮಳೆಯಿರಲಿ ಭರವಸೆಯೆ ಬದುಕಾಗಿ ನೆಮ್ಮದಿಯ
ಮರದಡಿ ಮನೆ ಮಾಡಿ ಬದುಕಬೇಕು.
ಭೊಗಸೆ ಅನ್ನವ ಹಂಚಿ ತುತ್ತನುಣಿಸುತ್ತ
ಮಡಿಲಲ್ಲಿ ತಲೆಯಿಟ್ಟು ಮತ್ತೆ ಮಗುವಾಗಬೇಕು. ಚಿಕ್ಕ
ಪುಟ್ಟ ಸಂತಸಗಳನೂ ಬೆಟ್ಟದೆತ್ತರಕೆ ಸಂಭ್ರಮಿಸಿ, ಶಿಖರದೆತ್ತರದ ಕಷ್ಟಗಳ ಸಾಸಿವೆಯಷ್ಟೇ ಭಾವಿಸಿ,
ಕನಸುಗಳ ಹೆಣೆಯುತ್ತ, ಮನಸಿನಲಿ ಬೆರೆಯುತ್ತ ಬಾಳಬೇಕು.
ಇದೆಲ್ಲಕೊಂದು ಪುಟ್ಟ ಪ್ರೀತಿಯು ಬೇಕು.
ಕೃಷ್ಣ ಗುಮ್ಮಾನಿ.

No comments:
Post a Comment