ಏನು
ಪೇಳಲಿ ನೊಂದು,
ಬಿಡದೆ
ಮದುವೆ ಮಾಡಿದರೆನಗೆ.
ಕಳೆದುಕೊಂಡೆನು
ದೇಹ ಅವಸರದಿ ಬೆವೆತು.
ಬದುಕ
ಕಂಡೆನು ಭಯದಿ
ಬೆರೆತು
ನೊಂದೆನು ಮನದಿ.
ಉಸಿರ
ಕಚ್ಚಿದೆ ದೇಹ
ನಿನ್ನ
ಬಯಕೆಯಾಟದಲಿ.
ಅತ್ತರೂ
ಬಿಡಲೊಲ್ಲೆ
ಕತ್ತಲೆಯ
ಬೆಂಕಿಯಲಿ.
ಬೆತ್ತಲಾಯಿತು
ಬದುಕು
ಬರಿದಾದ
ಬತ್ತಳಿಕೆಯಂತೆ.
ಕಾಮದಾಟವು
ನಿನಗೆ
ಮದುವೆ
ಬರೀ ನಾಟಕವು.
ಇಲ್ಲ
ಪ್ರೀತಿಯು ಮನದಿ
ಬಯಕೆ
ತೀರಿದ ಬಳಿಕ.
ಸನಿಹವಾದರೆ
ಸಂಜೆ
ಭಯದ
ವಾತಾ'ವರುಣ.
ಹುಡುಕುತ್ತ
ಕುಳಿತಿಹೆನು
ಇಲ್ಲದಿಹ
ಕರುಣೆ.
ಅಲ್ಲ
ಕಾಮದಾಹಕೆ ಯಂತ್ರ.
ದಾಸಿಯೂ
ನಾ ಅಲ್ಲ.
ಬೆತ್ತಲಾಗೆನು
ನೀನು
ಬೇಕು
ಬೇಡವೆಂದೊಡನೆ.
ಹೊತ್ತೆ
ನಾ ಹೆತ್ತೆ ನಾ
ಬತ್ತಿ
ಬಯಲಾದೆ ನಾ.
ಮೊಲೆಯುಣಿಸಿ
ತುತ್ತಿಟ್ಟು
ಮುತ್ತಿಟ್ಟು
ಬೆಳೆಸಿದೆ ನಾ.
ಚೀರಾಟ
ಕೊನೆಯಲ್ಲಿ
ನರಳಾಟ
ಬಳಿಯಲ್ಲಿ
ಬಸಿರ
ತುಂಬಿಸಿ ಮೆರೆದೆ
ಗಂಡು
ತಾನೆಂದು.
ನನಗೂ
ಒಂದು ಮನಸು ಇದೆ.
ಅದಕೂ
ಕೆಲವು ಆಸೆಗಳಿದೆ.
ಅರಿತು
ಸಾಗಿಸು ಗೆಳೆಯ
ಈ ಜೀವ ಬಂಧನವ.

No comments:
Post a Comment